ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ನೆಲೆ – ಹಿನ್ನಲೆ – ಪುಸ್ತಕ ಬಿಡುಗಡೆ
ಡಾ|| ಟಿ. ಆರ್. ಅನಂತರಾಮು ರವರು ಸಂಪಾದಿಸಿರುವ “ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು” ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ “ಹರಿವು ಬುಕ್ಸ್” ವತಿಯಿಂದ ಸೆಪ್ಟೆಂಬರ್ 3 ರ ಭಾನುವಾರದಂದು ಜಯನಗರದಲ್ಲಿರುವ ಜಯರಾಮ ಸೇವಾ ಮಂಡಳಿ ಯಲ್ಲಿ ಬೆಳಿಗ್ಗೆ 9:30 ಕ್ಕೆ ನೆರವೇರಲಿದೆ.
ಕರ್ನಾಟಕದಲ್ಲಿ ನೆಲೆಸಿರುವ ಸ್ಮಾರ್ತ ಬ್ರಾಹ್ಮಣ ಪಂಗಡಗಳ ಕುರಿತು ಅಧ್ಯಯನ ನಡೆಸಿ ಮಾಹಿತಿಗಳನ್ನು ಕಲೆಹಾಕಿ ಪುಸ್ತಕದ ರೂಪದಲ್ಲಿ ತರಲಾಗುತ್ತಿದೆ. ನಾಡಿನ ಖ್ಯಾತ ಸಾಹಿತಿ ಗಳು ಮತ್ತು ವಿದ್ವಾಂಸರ ಸಂಶೋಧನಾತ್ಮಕ ಬರಹಗಳನ್ನು ಒಳಗೊಂಡ ಈ ಪುಸ್ತಕ ..ಒಂದು ಸಂಗ್ರಹಯೋಗ್ಯ ಕೃತಿ..
ಬಹುಶ್ರುತ ವಿದ್ವಾಂಸರಾದ ಶ್ರೀ ಶತಾವಧಾನಿ ಡಾ. ಆರ್. ಗಣೇಶ್ ಪುಸ್ತಕದ ಬೆನ್ನುಡಿಯಲ್ಲಿ
“ಜಗದಿತಿಹಾಸದಲ್ಲಿ ಭಾರತೀಯ ಸಂಸ್ಕೃತಿ ಎಂದು ಯಾವ ಜೀವನಪದ್ಧತಿಯು ಅವಿಚ್ಚಿನ್ನವಾಗಿ ಪ್ರವಹಿಸಿದೆಯೋ ಅದರ ಕೇಂದ್ರದಲ್ಲಿರುವ ಸಾರಭೂತಾಂಶ ಸ್ಮಾರ್ತ ಬ್ರಾಹ್ಮಣರೆಂದು ಹೇಳಬಹುದಾದ ಮೌಲ್ಯಗಳೇ ಆಗಿದೆಯೆಂದರೆ ಪಕ್ಷಪಾತದ ಮಾತಾಗದು. ಏಕೆಂದರೆ ಭಾರತದಲ್ಲಾಗಲಿ, ಜಗತ್ತಿನ ಉಳಿದೆಲ್ಲ ದೇಶಗಳಲ್ಲಾಗಲಿ ಕಾಣಸಿಗುವ ಬಗೆಬಗೆಯ ಮತಶ್ರದ್ಧೆಗಳಲ್ಲಿ ತೋರಿಕೊಳ್ಳುವ ಮೌಲ್ಯಗಳು ಸಮನ್ವಯ ಮತ್ತು ಅವಿರೋಧಗಳನ್ನು ಬಿಂಬಿಸುವುದಕ್ಕಿಂತ ಮಿಗಿಲಾಗಿ ಪ್ರತ್ಯೇಕತೆ ಮತ್ತು ಸ್ವೋತ್ಕರ್ಷಗಳನ್ನೇ ಬಿಂಬಿಸುತ್ತಿವೆ.
ಇದಕ್ಕೆ ಸರ್ವಾತ್ಮನಾ ಹೊರತಾದದ್ದು ಸನಾತನಧರ್ಮದ ಆರ್ಷಸಂಸ್ಕೃತಿ. ಇಂದಿಗೂ ಇದರ ಜೀವದ್ರಕ್ಷಣೆ ಮತ್ತು ಪೋಷಣೆಗಳು ಬೆಳವಣಿಗೆಯನ್ನು ಕಾಣುತ್ತಿರುವುದು ಸ್ಮಾರ್ತಪರಂಪರೆಯೆಂದು ಸೀಮಿತಾರ್ಥದಲ್ಲಿ ಹೆಸರಿಸಲ್ಪಟ್ಟ – ತತ್ವತಃ ವ್ಯಾಪಕವಾದ – ಜೀವನಪದ್ಧತಿಯಲ್ಲಿಯೇ. ಈ ಕಾರಣದಿಂದಲೇ ಸಂಕುಚಿತವಾದ ರೀತಿಯಲ್ಲಿ ವೈದಿಕ, ಅವೈದಿಕ, ಪೌರಾಣಿಕ, ಆಗಮಿಕ, ಮಾರ್ಗ, ದೇಶೀ ಎಂದೆಲ್ಲ ಪರಿಚ್ಚೇದಗಳಿಗೆ ಒಳಗಾದ ಮೌಲ್ಯಗಳನ್ನು ಸ್ಮಾರ್ತ ಪರಂಪರೆ ಸಮರಸವಾಗಿ ಮೈಗೂಡಿಸಿಕೊಂಡಿದೆ. ವಸ್ತುತಃ ಇವೆಲ್ಲ ಒಂದೇ ಸನಾತನಧರ್ಮದ ಮುಖಗಳು. ಇಲ್ಲಿಯ ವ್ಯತ್ಯಾಸಗಳು ವೈಷಮ್ಯಮೂಲದವಲ್ಲ ; ಸಾಧಕನ ಆತ್ಮೋಧಾರಕ್ಕೆ ಅನುಗುಣವಾಗಿ ನೆರವಾಗುವ ಹೃದ್ಯಪದ್ಧತಿಗಳು. ಈ ಕಾರಣದಿಂದಲೇ ಯಾವುದನ್ನೆಲ್ಲ ಭಾರತೀಯವೆಂದು ಗುರುತಿಸಬಹುದೋ ಅದೆಲ್ಲ ಸ್ಮಾರ್ತರ ನಿತ್ಯ ಮತ್ತು ನೈಮಿತ್ತಿಕ ಆಚರಣೆಗಳಲ್ಲಿ ಒಂದಲ್ಲ ಒಂದು ರೀತಿ ಕಂಡುಬರುತ್ತದೆ.”
ಪುಸ್ತಕವನ್ನು ಕಾಯ್ದಿರಿಸಲು ಕೆಳಗಿನ ಕೊಂಡಿಯನ್ನು ಒತ್ತಿ
ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಬೇಕಾಗಿ ವಿನಂತಿಸುವ
ಸಾಹಿತ್ಯಮೈತ್ರಿ ತಂಡ