ಕರ್ನಾಟಕದ ಎರಳೆಗಳು – Antelopes
ಹುಲ್ಲೆ ಅಥವಾ ಎರಳೆಗಳ (Antelope) ಜಾತಿಗೆ ಸೇರಿದ ನಾಲ್ಕು ಪ್ರಾಣಿಗಳನ್ನು ನಮ್ಮ ರಾಜ್ಯದಲ್ಲಿ ನೋಡಬಹುದು. ಇವು ಸೀಳುಗೊರಸುಳ್ಳ ಮೆಲಕು ಹಾಕುವ ಬೋವಿಡೀ ಕುಟುಂಬದ ಪ್ರಾಣಿಗಳಾಗಿವೆ, ಇವುಗಳ ಕೊಂಬುಗಳು ಕವಲು ಒಡೆಯುವುದಿಲ್ಲ ಹಾಗು ಇವುಗಳ ಕೊಂಬುಗಳು ಜಿಂಕೆಗಳ ಕೊಂಬುಗಳಂತೆ ಕಾಲಕಾಲಕ್ಕೆ ಬಿದ್ದು ಹುಟ್ಟಿದೆ ಶಾಶ್ವತವಾಗಿ ಇರುತ್ತವೆ. ಹೆಚ್ಚಾಗಿ ಒಣ ಪರಿಸರಕ್ಕೆ ಹೊಂದಿ ಕೊಂಡ ಇವನ್ನು ಮಲೆನಾಡಲ್ಲಿ ಕಾಣುವುದು ಅಪರೂಪ. ನಮ್ಮಲ್ಲಿಯ ಎರಳೆಗಳ ಕುರಿತು ಕಿರು ಪರಿಚಯ ಇಲ್ಲಿದೆ ನೋಡಿ.
ಕೃಷ್ಣಮೃಗ (Black Buck)
ಕೃಷ್ಣಮೃಗಗಳಲ್ಲಿ ಗಂಡುಗಳು ವಯಸ್ಸಿಗೆ ಬರುತ್ತಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ ಹಾಗಾಗಿ ಕೃಷ್ಣಮೃಗ ಎನ್ನುವ ಹೆಸರು ಬಂದಿದೆ, ವೇಗದ ಓಟಗಾರರಾದ ಇವನ್ನು ಭಾರತದ ನಿಜವಾದ antelope ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಈಗ ಆಫ್ರಿಕಾದ ಚೀತಾಗಳನ್ನು ಪರಿಚಯಿಸುವ ಯೋಜನೆ ಕೇಳಿರಬಹುದು ಇದೇ ರೀತಿ ನಮ್ಮಲ್ಲಿನ ಕೃಷ್ಣಮೃಗಗಳನ್ನು 1930ರ ದಶಕದಲ್ಲಿ ಅಮೆರಿಕಾದ ‘ಟೆಕ್ಸ್ ಸಾಸ್’ ನಲ್ಲಿ ಪರಿಚಯಿಸಲಾಯಿತು, ಈಗ ಅಲ್ಲಿ ಕೃಷ್ಣಮೃಗಗಳ ಸಂತತಿ 20 ಸಾವಿರಕ್ಕೂ ಅಧಿಕವಿದೆ. ಇವುಗಳ ಸಂರಕ್ಷಣೆಗಾಗಿ ನಮ್ಮ ರಾಜ್ಯದ ರಾಣೆಬೆನ್ನೂರಲ್ಲಿ ಕೃಷ್ಣಮೃಗ ವನ್ಯಧಾಮವಿದೆ. ವೇಗವಾಗಿ ಓಡುವ ಇವನ್ನು ಬೆನ್ನಟ್ಟಿ ಹಿಡಿಯಲು ಈ ಹಿಂದೆ ನಮ್ಮಲ್ಲಿ ಇದ್ದ ಚೀತಾಗೆ ಮಾತ್ರ ಸಾಧ್ಯವಿತ್ತು.
ಚಿಂಕಾರ (Indian Gazelle)
ಚಿಂಕಾರಗಳನ್ನು ಬಯಲು ಸೀಮೆಯ ಕೆಲವು ಭಾಗಗಳಲ್ಲಿ ಅಪರೂಪವಾಗಿ ಕಾಣಬಹುದು, ಗಂಡು ಹೆಣ್ಣು ಎರಡಕ್ಕೂ ಕೊಂಬುಗಳು ಇರುತ್ತವೆ, ಇವು ಕೂಡ ಬಹಳ ವೇಗವಾಗಿ ಓಡುವ ಪ್ರಾಣಿಗಳು. ಇವುಗಳ ಸಂರಕ್ಷಣೆಗೆ ಬಾಗಲಕೋಟೆ ಜಿಲ್ಲೆಯ ಎಡಹಳ್ಳಿ ಹಾಗೂ ತುಮಕೂರಿನ ಬುಕ್ಕಾಪಟ್ಟಣದಲ್ಲಿ ಚಿಂಕಾರ ವನ್ಯಜೀವಿಧಾಮಗಳು ಇವೆ.
ನೀಲ್ಗಾಯ್ (Blue Bull)
ಇದನ್ನು ಮರವಿ, ನೀಲಿದನ ಎಂತಲೂ ಕರೆಯುತ್ತಾರೆ, ಹುಲ್ಲೆಯ ಜಾತಿಗೆ ಸೇರಿದ ಎತ್ತಿನ ಗಾತ್ರದ ದೊಡ್ಡ ಪ್ರಾಣಿ, ಕತ್ತಿನ ಮೇಲೆ ಆಯಾಲವಿರುವುದರಿಂದ ಕುದುರೆಯಂತೆ ಕಾಣುತ್ತದೆ. 1966 ಸುಮಾರಿಗೆ ಕರ್ನಾಟಕದಲ್ಲಿ ನೋಡಿದ ದಾಖಲೆಗಳು ಇದ್ದವು, ನಂತರ ಇದು ನಮ್ಮ ರಾಜ್ಯದಿಂದ ಕಣ್ಮರೆಯಾಗಿತ್ತು, 2018 ರಲ್ಲಿ ಭದ್ರಾ ದ ಮುತ್ತೋಡಿಯಲ್ಲಿ ಒಂಟಿ ನೀಲ್ಗಾಯಿ ಪತ್ತೆಯಾಗಿ ಎಲ್ಲೆಡೆ ಸುದ್ದಿಯಾಗಿತ್ತು, ನಂತರ 2021ರಲ್ಲಿ ಬೀದರಿನ ಔರಾದ ತಾಲ್ಲೂಕಲ್ಲಿ ನೀಲ್ಗಾಯಿಗಳ ಹಿಂಡು ಪ್ರತ್ಯಕ್ಷವಾಗಿ ನಮ್ಮ ರಾಜ್ಯದಲ್ಲಿ ಇವುಗಳ ಇರುವಿಕೆ ಖಾತ್ರಿ ಪಡಿಸಿದವು. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿದ್ದು ಕೃಷಿ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ, ಕೆಲವು ರಾಜ್ಯಗಳಲ್ಲಿ ಇವುಗಳನ್ನು ಕೊಲ್ಲಲು ಷರತ್ತುಬದ್ದ ಅನುಮತಿ ನೀಡಲಾಗಿದೆ. ವಯಸ್ಕ ಗಂಡಿನ ಬಣ್ಣ ನೀಲಿ ಬೂದು, ನೀಲ್ಗಾಯ್ ಇದು ನಮ್ಮ ದೇಶದ ಹೆಸರು ‘ನೀಲಿ ದನ’ ಎನ್ನುತ್ತಾರೆ, ಆಕಳುಗಳೆಂದು ಧಾರ್ಮಿಕ ಬಾವನೆಯಿಂದ ಹಿಂದೂ ಜನರು ಇವುಗಳನ್ನು ಬೇಟೆಯಾಡುವುದಿಲ್ಲ.
ಕೊಂಡು ಕುರಿ ಅಥವಾ ಚೌಸಿಂಗ – Four Horned Antelope
ಅರೆ ಮಲೆನಾಡು, ಬಯಲು ಸೀಮೆಯ ಮುಳ್ಳುಕಾಡುಗಳಲ್ಲಿ ಅಪರೂಪವಾಗಿ ಕಾಣುವ ಕೊಂಡು ಕುರಿ ಈಗ ಬದುಕಿರುವ ಪ್ರಾಣಿಗಳಲ್ಲಿ 4 ಕೊಂಬುಗಳನ್ನು ಹೊಂದಿರುವ ಪ್ರಪಂಚ ಏಕೈಕ ವನ್ಯಜೀವಿಯಾಗಿದೆ. ಇವುಗಳ ಸಂರಕ್ಷಣೆಗೆ ದಾವಣಗೆರೆಯ ಜಗಳೂರಲ್ಲಿ ರಂಗಯ್ಯನದುರ್ಗ ಕೊಂಡುಕುರಿ ವನ್ಯ ಜೀವಿ ಧಾಮವಿದೆ.
ಹೆಚ್ಚಾಗಿ ಬಯಲು ಸೀಮೆಯ ಕಾಡುಗಳಲ್ಲಿ ಕಂಡುಬರುವ ಎರಳೆಗಳು ಚಿರತೆ, ತೋಳ, ನರಿಗಳಂತಹ ಮಾಂಸಹಾರಿಗಳ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಕಳ್ಳಬೇಟೆ, ಆವಾಸ ನಾಶಗಳಿಂದ ಎರಳೆಗಳು ಅಪಾಯ ಎದುರಿಸುತ್ತಿವೆ.
ನಾಗರಾಜ್ ಬೆಳ್ಳೂರು
Nisarga Conservation Trust