ಕರ್ನಾಟಕದ ಚಿಕ್ಕ ಕಾಡು ಬೆಕ್ಕುಗಳು
ನಮ್ಮ ದೇಶದಲ್ಲಿ ಸುಮಾರು 15 ಬೆಕ್ಕಿನ ಕುಟುಂಬದ ಪ್ರಾಣಿಗಳಿವೆ. ಇದರಲ್ಲಿ ಹುಲಿ ಸಿಂಹಗಳಂತಹ ದೊಡ್ಡ ಬೆಕ್ಕುಗಳಿಂದ ಹಿಡಿದು ಕೇವಲ ಒಂದೂಕಾಲು ಕಿಲೋ ತೂಗುವ ಚಿಕ್ಕ ಬೆಕ್ಕಿನ ಜಾತಿಗಳು ಸಹ ಇವೆ.
ನಮ್ಮ ರಾಜ್ಯದಲ್ಲಿ ಹುಲಿ ಚಿರತೆ ಬಿಟ್ಟರೆ ಚಿಕ್ಕ ಚಿಕ್ಕ ಕಾಡು ಬೆಕ್ಕುಗಳು ಸಹ ಇವೆ, ನಮ್ಮಲ್ಲಿ ಅನೇಕರು ಚಿರತೆ ಬಿಟ್ಟರೆ ಅದನ್ನೇ ಹೋಲುವ ಚಿರತೆಗಿಂತ ಸ್ವಲ್ಪ ಚಿಕ್ಕದಾದ ‘ಕುರ್ಕ’ ಎಂಬ ಕಾಡು ಬೆಕ್ಕಿದೆ, ಅದು ದನ ಕರುಗಳನ್ನು ಬೇಟೆಯಾಡಬಲ್ಲದು ಎಂದು ಆಗಾಗ ಹೇಳುತ್ತಿರುತ್ತಾರೆ, ಆದರೆ ವಾಸ್ತವಾಂಶ ಎಂದರೆ ಈ ಚಿರತೆಯೇ ‘ಕುರ್ಕ’. ನಮ್ಮ ಮಲೆನಾಡಲ್ಲಿ ಚಿರತೆಗೆ ‘ಕುರ್ಕ, ಕುರ್ಕಿ, ಗೇರುಕಳ, ಚುಕ್ಕಿಹುಲಿ‘ ಎಂದೆಲ್ಲ ಕರೆಯುತ್ತಾರೆ. ಒಮ್ಮೊಮ್ಮೆ ನಾಯಿಗೆ ಬೈಯಲು ‘ನಿನ್ ಕುರ್ಕಿ ಹೊತ್ಹೋಗ ‘ ಎಂಬ ಪದ ಬಳಸುತ್ತಾರೆ.
ಚಿಕ್ಕನ ಕುಟುಂಬದ ಎಲ್ಲಾ ಪ್ರಾಣಿಗಳು ಮಾಂಸಹಾರಿಗಳು, ಬೇಟೆಗೆ ಯುಕ್ತವಾದ ಮೈಕಟ್ಟು, ಸೂಕ್ಷ್ಮ ಕಣ್ಣು, ಚುರುಕು ಕಿವಿಗಳಿವೆ. ಈ ಕುಟುಂಬದ ಎಲ್ಲಾ ಜೀವಿಗಳ ಕಾಲುಗಳ ಬೆರಳುಗಳಲ್ಲಿ ಒಳ ಸೇರಬಲ್ಲ ಉಗುರುಗಳು ಇವೆ (ಚೀತಾ ಹೊರತುಪಡಿಸಿ). ಇದರಿಂದ ಕೆಸರು ಮಣ್ಣಿನಲ್ಲಿ ಹೆಜ್ಜೆ ಇಟ್ಟರೂ ಸಹ ಉಗುರಿನ ಗುರುತು ಮೂಡುವುದೇ ಇಲ್ಲ, ಇವುಗಳ ಕಣ್ಣಿನ ರೆಟಿನಾ ದ ಮೇಲೆ ಬಿದ್ದ ಅತೀ ಕಡಿಮೆ ಬೆಳಕು ಸಹ ಹೆಚ್ಚು ದೃಷ್ಠಿ ಸ್ಪಷ್ಟತೆ ನೀಡಬಲ್ಲದು, ಬೆಳಕಿನ ಪ್ರಕಾಶಮಾನಕ್ಕೆ ತಕ್ಕಂತೆ ಕಣ್ಣಿನ ಕನೀನಿಕೆಗಳು (Iris) ಹಿಗ್ಗುವ ಕುಗ್ಗುವ ಸಾಮಾರ್ಥ್ಯ ಹೊಂದಿದ್ದು ಅತೀ ಕತ್ತಲೆಯಲ್ಲೂ ಸಹ ಹೆಚ್ಚು ಸ್ಪಷ್ಟವಾದ ದೃಷ್ಟಿ ಹೊಂದಿವೆ.
ನಮ್ಮ ರಾಜ್ಯದಲ್ಲಿ 4 ಬಗೆಯ ಚಿಕ್ಕ ಕಾಡು ಬೆಕ್ಕುಗಳಿದ್ದು, ಇವುಗಳಲ್ಲಿ 3 ಜಾತಿಯವು ಸಾಮಾನ್ಯವಾಗಿ ಕಾಣಿಸಿದರೆ, ಕರಾವಳಿ ಜಿಲ್ಲೆಗಳಲ್ಲಿ ಕಾಣಿಸುತ್ತಿದ್ದ ಮೀನುಗಾರ ಬೆಕ್ಕು (Fishing Cat) ಕಳೆದ 2-3 ದಶಕಗಳಿಂದ ಯಾರ ಕಣ್ಣಿಗೂ ಕಾಣಿಸಿಲ್ಲವಾದುದರಿಂದ ನಮ್ಮ ರಾಜ್ಯದಲ್ಲಿ ಇದು ವಿನಾಶವಾಗಿದೆ (extinct) ಎಂದು ತೀರ್ಮಾನಿಸಲಾಗಿದೆ.
Rusty Spotted Cat – ತುಕ್ಕು ಚುಕ್ಕೆಗಳ ಬೆಕ್ಕು
ತುಕ್ಕು ಚುಕ್ಕೆಗಳ ಬೆಕ್ಕು ಸುಮಾರು ಒಂದರಿಂದ ಒಂದೂಕಾಲು ಕಿಲೋ ತೂಗಬಲ್ಲ ಇದು ಪ್ರಪಂಚದ ಅತೀ ಚಿಕ್ಕ ಕಾಡು ಬೆಕ್ಕು ಎನಿಸಿದೆ. ಬೂದು ಮಿಶ್ರಿತ ಮೈ ಬಣ್ಣದ ಮೇಲೆ ತುಕ್ಕಿನ ಬಣ್ಣದಂತೆ ಕಾಣುವ ಚಿಕ್ಕ ಚಿಕ್ಕ ಮಚ್ಚೆಗಳಿವೆ, ಕುತ್ತಿಗೆ ಹಾಗು ಭುಜದ ಮೇಲೆ ತುಕ್ಕು ಬಣ್ಣದ 4 ಪಟ್ಟೆಗಳಿವೆ , ಬಾಲದಲ್ಲಿ ಯಾವುದೇ ಚುಕ್ಕೆಗಳಿಲ್ಲ , ಬಿಳಿ ಬಣ್ಣದ ಹೊಟ್ಟೆಯಡಿ ಕಪ್ಪುಚುಕ್ಕೆಗಳ ಈ ಲಕ್ಷಣಗಳಿಂದ ಇದನ್ನು ಚಿರತೆ ಬೆಕ್ಕಿನಿಂದ ಬೇರೆಯಾಗಿ ಗುರುತಿಸಬಹುದು, ಮೈ ಮೇಲೆ ಮೃದುವಾದ ಕೂದಲನ್ನು ಹೊಂದಿದೆ.
ಭಾರತ ಶ್ರೀಲಂಕಾದಲ್ಲಿ ಮಾತ್ರ ಕಂಡು ಬರುವ ಇದು ಚತುರ ಬೇಟೆಗಾರ ಬೆಕ್ಕು, ಪಕ್ಷಿ,ಇಲಿ – ಹೆಗ್ಗಣ, ಕೀಟಗಳನ್ನು ತಿನ್ನುತ್ತವೆ, ಮಳೆ ಬಂದಾಗ ಹಾರುವ ರೆಕ್ಕೆಗೆದ್ದಲುಗಳನ್ನು ಸಹ ತಿನ್ನುತ್ತದೆ. 2-3 ಮರಿಗಳನ್ನು ಹಾಕುತ್ತವೆ, ಮೊದಮೊದಲು ತೀರಾ ಅಪರೂಪ ಎಂದು ತಿಳಿದ್ದಿದ್ದ ಇವುಗಳು ಈಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಡ ವರದಿ ಬರುತ್ತಿರುವುದು ಸ್ವಲ್ಪ ಸಮದಾನದ ವಿಷಯ.
Leopard Cat – ಚಿರತೆ ಬೆಕ್ಕು
ಚಿರತೆ ಬೆಕ್ಕು, ಹುಲಿ ಬೆಕ್ಕು ಎಂದು ಕರೆವ ಇವು ನಿಶಾಚರಿಗಳು, 3 – 4 ಕಿಲೋ ತೂಗುತ್ತವೆ, ಮೈ ಬಣ್ಣವು ಮೇಲೆ ಹಳದಿ ಕೆಳಗೆ ಬಿಳಿ, ಶರೀರ ಮತ್ತು ಬಾಲದ ಮೇಲೆ ಕಪ್ಪು ಅಥವಾ ಕಂದು-ಕಪ್ಪು ಚುಕ್ಕೆಗಳಿವೆ. ಇದನ್ನು ಚಿರತೆಯ ಸಣ್ಣ ಪಡಿಯಚ್ಚು ಎನ್ನಬಹುದು, ಸುಲಭವಾಗಿ ಮರ ಏರಬಲ್ಲವು, ಈಜಬಲ್ಲವು, ಪಕ್ಷಿಗಳನ್ನು ಬೇಟೆಯಾಡುವ ಇವು, ಸಾಕು ಕೋಳಿ ಗೂಡಿನ ಮೇಲೆ ದಾಳಿ ಮಾಡುವ ವರದಿಗಳು ಆಗಾಗ ಬರುತ್ತಿರುತ್ತವೆ. ಅರಣ್ಯ ಪ್ರದೇಶಗಳ ಆಸುಪಾಸಲ್ಲಿ ಹೆಚ್ಚು ಕಂಡುಬರುತ್ತವೆ, 2-4 ಮರಿಗಳಿಗೆ ಜನ್ಮ ನೀಡುತ್ತವೆ.
Jungle Cat – ಕಾಡು ಬೆಕ್ಕು
ಕಾಡು ಬೆಕ್ಕು ಇದನ್ನು ನಮ್ಮ ಮಲೆನಾಡಲ್ಲಿ ತಟ್ಟೆ ಮಾಳ (ಗಂಡು ಬೆಕ್ಕಿಗೆ ನಮ್ಮಲ್ಲಿ ಮಾಳ ಬೆಕ್ಕು ಎನ್ನುತ್ತಾರೆ ) ಎಂಬ ಹೆಸರಿನಿಂದಲೂ ಕರೆಯುತ್ತಾರೆ, ನಿಶಾಚರಿ, 8-10 ಕಿಲೋ ತೂಗುವ ಇದರ ಶರೀರ ಬಣ್ಣ ಮರಳು ಹಳದಿಯಿಂದ ಹಳದಿ ಬೂದು, ಬಾಲದ ತುದಿ ಉಂಗುರಗಳು ಇದ್ದು, ತುದಿ ಬಾಲ ಕಪ್ಪು, ಉದ್ದ ಕಾಲುಗಳು, ತಿಳಿ ಹಸಿರು ಕಣ್ಣುಗಳು, ಕಿವಿ ತುದಿಯಲ್ಲಿ ಕೂದಲಿದ್ದು, ಕಿವಿ ಬಣ್ಣ ಸ್ವಲ್ಪ ಕೆಂಪು, 2 – 5 ಮರಿಗಳಿಗೆ ಜನ್ಮ ನೀಡುತ್ತವೆ, ಸಣ್ಣ ಸಸ್ತನಿ ಹಾಗೂ ಪಕ್ಷಿಗಳನ್ನು ಬೇಟೆಯಾಡುತ್ತವೆ, ಒಮ್ಮೊಮ್ಮೆ ಕರಾಕಲ್ ಬೆಕ್ಕಿನಂತೆ ಗಾಳಿಯಲ್ಲಿ ಹಾರಿ ಬೇಟೆ ಹಿಡಿಯಬಲ್ಲದು, ಕೋಳಿ ಗೂಡಿನ ಮೇಲೆ ದಾಳಿ ಮಾಡಿ ಕೋಳಿ ಹಿಡಿಯುತ್ತದೆ, ಕೆಲವು ಸಲ ಹಾವುಗಳನ್ನು ಬೇಟೆಯಾಡುತ್ತವೆ. ದಟ್ಟ ಕಾಡಿಗಿಂತ ಕುರುಚಲು ಕಾಡು ,ಬಯಲು ಸೀಮೆಯ ಹೊಲ ಗದ್ದೆಗಳಲ್ಲಿ ಹೆಚ್ಚು ಕಂಡು ಬರುತ್ತವೆ. ಕೆಲವು ಸಲ ಗಂಡು ಹೆಣ್ಣನ್ನು ಜೊತೆಯಾಗಿ ನೋಡಬಹುದು.
ಇವು ರಸ್ತೆ ಅಪಘಾತಗಳಲ್ಲಿಯೂ ಸಾಯುತ್ತವೆ, ಒಮ್ಮೆ ಕೋಳಿ ಫಾರಂಗೆ ನುಗ್ಗಿ ಬಲೆಗೆ ಸಿಲುಕಿ ಸತ್ತ ಕಾಡು ಬೆಕ್ಕು 8-7 ಕಿಲೋ ತೂಗುತ್ತಿತ್ತು. ಇವು ಸ್ವಲ್ಪ ಧೈರ್ಯದ ಪ್ರಾಣಿಗಳು ಮನುಷ್ಯನನ್ನು ನೋಡಿ ಅಷ್ಟಾಗಿ ಹೆದರುವುದಿಲ್ಲ.
Fishing Cat – ಮೀನುಗಾರ ಬೆಕ್ಕು
ಮೀನುಗಾರ ಬೆಕ್ಕು ಸುಮಾರು 6-10 ಕಿಲೋ ತೂಗುತ್ತದೆ, ಮೈಮೇಲೆ ಬಿರುಸಾದ ಗಿಡ್ಡ ತುಪ್ಪಳವಿದೆ, ಬಾಲ ಗಿಡ್ಡವಿದೆ, ಕಂದು -ಬೂದು ಅಥವಾ ಆಲಿವ್ಹ -ಬೂದು ಮೈಬಣ್ಣದ ಮೇಲೆ ಉದ್ದ ಸಾಲುಗಳ ವಿಭಿನ್ನ ಆಕಾರದ ಕಪ್ಪುಚುಕ್ಕೆಗಳಿವೆ, ಕಪ್ಪು ಗೆರೆಗಳು ಹಣೆಯಿಂದ ತಲೆಯ ಮೇಲೆ ಹಾಯ್ದು ಕುತ್ತಿಗೆ ಮುಟ್ಟಿ ಭುಜದ ಮೇಲೆ ಸಣ್ಣ ಪಟ್ಟೆ ಹಾಗೂ ಚುಕ್ಕೆಗಳಾಗಿ ಪರಿವರ್ತನೆ ಗೊಂಡಿವೆ, ಶರೀರದ ಕೆಳಭಾಗದಲ್ಲಿ ಚುಕ್ಕೆಗಳಿದ್ದು ಬಾಲದಲ್ಲಿ ಉಂಗುರಗಳಿವೆ. ಒಳ್ಳೆಯ ಈಜುಗಾರ ,ಕಾಲಲ್ಲಿ ಈಜಲು ಅನುಕೂಲವಾಗುವಂತಹ ರಚನೆ ಇದೆ.
ಚಿಕ್ಕ ಸಸ್ತನಿ, ಪಕ್ಷಿಗಳನ್ನು ಹಿಡಿಯುತ್ತದಾದರೂ ಮೀನುಗಳು ಇವುಗಳ ಪ್ರಮುಖ ಆಹಾರ, ತನ್ನ ಕಾಲಿನ ಪಂಜಗಳನ್ನು ನೀರಿನ ಮೇಲೆ ಆಡಿಸಿದಾಗ ಯಾವುದೋ ಕೀಟ ಇರಬೇಕು ಎಂದು ಭಾವಿಸಿ ಮೀನುಗಳು ಹತ್ತಿರ ಬಂದಾಗ ಬೇಟೆಯಾಡುತ್ತದೆ. 1-4 ಮರಿಗಳನ್ನು ಹಾಕುತ್ತದೆ. ಜವುಗು ಪ್ರದೇಶಗಳು ಇವುಗಳ ಪ್ರಮುಖ ನೆಲೆಗಳಾದರೂ ಇತ್ತೀಚಿಗೆ ಎಲ್ಲಾ ಕಡೆ ಹೊಂದಿ ಕೊಂಡಿರುವಂತೆ ಕಂಡು ಬರುತ್ತದೆ. ನಮ್ಮ ರಾಜ್ಯದಲ್ಲಿ 1980 ರಿಂದ ಈಚೆಗೆ ಇದನ್ನು ನೋಡಿದ ಯಾವುದೇ ದಾಖಲೆ ಇಲ್ಲವಾದುದರಿಂದ ನಮ್ಮ ರಾಜ್ಯದಲ್ಲಿ ಇದು ವಿನಾಶವಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.
1970 ರ ನಂತರ ಕೃಷಿ, ಕೈಗಾರಿಕೆಗಳ ವಿಸ್ತರಣೆಗಾಗಿ ಜವುಗು ಭೂಮಿಗಳನ್ನು ನಾಶಪಡಿಸಿದರ ಪರಿಣಾಮ ಈ ಬೆಕ್ಕುಗಳ ಸಂಖ್ಯೆ ಕುಸಿದು ಕೊನೆಗೆ ನಮ್ಮ ರಾಜ್ಯದಿಂದಲೇ ಕಣ್ಮರೆಯಾದವು.
ಆವಾಸ ನಾಶ ಇವುಗಳ ವಿನಾಶಕ್ಕೆ ಪ್ರಮುಖ ಕಾರಣ, ಇತ್ತೀಚಿಗೆ ಬೇರೆ ಬೇರೆ ರಾಜ್ಯಗಳಲ್ಲಿ ಅಪರೂಪವಾಗಿ ಕಂಡ ವರದಿಗಳು ಬರುತ್ತಿರುವುದು ಸ್ವಲ್ಪ ಸಮಾಧಾನಕರ ವಿಷಯ. ಈ ಮೀನುಗಾರ ಬೆಕ್ಕು ಪಶ್ಚಿಮ ಬಂಗಾಳದ ರಾಜ್ಯ ಪ್ರಾಣಿಯಾಗಿದೆ.
–ವನ್ಯಜೀವಿ ರಕ್ಷಣೆ ಮಾನವನ ಆದ್ಯ ಕರ್ತವ್ಯ–
ನಾಗರಾಜ್ ಬೆಳ್ಳೂರು
ನಿಸರ್ಗ ಕನ್ಜರ್ವೇಶನ್ ಟ್ರಸ್ಟ್