ಕಲ್ಲು ಮೀನು
ಬಹುಶಃ ಕಡಲತೀರದಲ್ಲಿ ಅತ್ಯಂತ ಅಪಾಯಕಾರಿ ಎಂದರೇ ಅದು ಈ ಕಲ್ಲು ಮೀನು (ಸ್ಟೋನ್ ಪಿಶ್) ಇರಬಹುದು.
ಸಾಮಾನ್ಯವಾಗಿ ಇವು ಸಾಗರದ ಹವಳದ ಬಂಡೆಗಳು, ಸಮುದ್ರದ ಹುಲ್ಲು ಮತ್ತು ಇತರೇ ಸಸ್ಯಗಳ ನಡುವೆ
ಚಲನರಹಿತವಾಗಿರುತ್ತವೆ (ನಿಶ್ಚಲವಾಗಿ ಬಿದ್ದುಕೊಂಡಿರುತ್ತವೆ), ಕೆಲವೊಂದು ಸರ್ತಿ ಸಮುದ್ರದ ಮರಳಿನಡಿಯಲ್ಲಿ ದೇಹದ ತಲೆಯನ್ನ ಹೊರಹಾಕಿ ಸಮುದ್ರದ ಮರಳಿನಲ್ಲಿ ಬಾಗಶಃ ಮರೆಮಾಚಿಕೊಂಡು ಮುಚ್ಚಿಹಾಕಿಕೊಂಡಿರುತ್ತವೆ. ಇವು ಭೇಟೆಗಳ ಬೆನ್ನು ಹತ್ತಿ ಹೋಗುವುದಿಲ್ಲ. ತಮ್ಮ ಹತ್ತಿರ ಬರುವ ಭೇಟೆಗಳ ಮೇಲೆ ಮಿಂಚಿನಂತೆ ಎರಗಿ ಭೇಟೆಯಾಡಿ ಭಕ್ಷಿಸುತ್ತವೆ.
ಇವುಗಳ ವಿಷ ಗ್ರಂಥಿಗಳು ಸಿರಿಂಜ್ ನಂತೆ ಚೂಪಾದ ಮೂರು ಮುಳ್ಳುಗಳನ್ನ ಹೊಂದಿರುತ್ತವೆ. ಸಮುದ್ರದ ಇನ್ನೊಂದು ಭಕ್ಷಕ ಜೀವಿಯಿಂದ ರಕ್ಚಣೆ ಪಡೆಯಲು ಇವುಗಳ ವಿಷಗ್ರಂಥಿಯ ಈ ಮುಳ್ಳುಗಳು ಸಹಾಯಕವಾಗುತ್ತವೆ.
ಸಮುದ್ರ ತೀರದ ಹತ್ತಿರ ಹವಳದ ಬಂಡೆಗಳು ಇರುವ ಮರಳಿನಲ್ಲಿ ವೀಕ್ಷಿಸಲು ಹೋಗುವ ಈಜುಗಾರರ ಪಾದಗಳನ್ನ ಶತ್ರುಗಳು ಎಂದು ಭಗೆದು ಅಕಸ್ಮಾತ್ತಾಗಿ ಇವು ಕುಟುಕುತ್ತವೆ. ಇದರ ವಿಷ ವ್ಯಾಪಕ ಪರಿಣಾಮ ಬೀರುತ್ತದೆ. ಕುಟುಕಿದ ತಕ್ಷಣವೇ ಅಸಹನೀಯವಾದ ಭಯಾನಕ ನೋವು ಉಂಟಾಗುವುದಲ್ಲದೇ ಕೈ ಕಾಲು ಬೆನ್ನು ಮೂಳೆಗಳ ನರವ್ಯವಸ್ಥೆ ಹಾಳಾಗಿ ಕುಸಿಯುತ್ತವೆ. ಜೊತೆಗೆ ಉಸಿರಾಟದ ತೊಂದರೆ, ಸ್ನಾಯುಗಳಲ್ಲಿ ಪಾರ್ಶ್ವವಾಯು ಸಂಭವಿಸಿ ಹೃದಯ ಸ್ಥಂಬವಾಗತೊಡಗುತ್ತದೆ. ವಿಷದ ಡೋಸೇಜ್ ಹೆಚ್ಚಿದ್ದರೆ ಕೆಲವೇ ಕೆಲವು ನಿಮಿಷಗಳಲ್ಲಿ ಸಾವು ನಿಶ್ಚಿತ.
ಸಾಗರದಲ್ಲಿನ ಇಂತಹ ಅನೇಕ ವಿಷಜಂತುಗಳ ಕಾರಣದಿಂದಾಗಿಯೇ ಸಮುದ್ರದಲ್ಲಿ ಡೈವರ್ಸ್ ಗಳಿಗೆ ವಿಶೇಷ ರೀತಿಯ ಈಜುಡುಗೆಯನ್ನು ಶಿಫಾರಸು ಮಾಡಿರುತ್ತಾರೆ. ಈ ಈಜುಡುಗೆಗಳು ಸಮುದ್ರದಲ್ಲಿ ಡೈವ್ ಹೊಡೆಯುವವರಿಗೆ ರಕ್ಷಣೆ ಒದಗಿಸುವುದಲ್ಲದೇ ಪ್ರಾಣಾಪಾಯದಿಂದ ಕಾಪಾಡುತ್ತವೆ. ಸಂಶೋಧನಾ ವಿಧ್ಯಾರ್ಥಿಗಳು ಮತ್ತು ಸಮುದ್ರ ವಿಜ್ಞಾನಿಗಳಿಗೆ ತಾವು ಡೈವ್ ಹೊಡೆಯುತ್ತಿರುವ ಸಮುದ್ರದ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಸರಿಯಾದ ಮಾಹಿತಿ ಇದ್ದೇ ಇರುತ್ತದೆ.
ಅವಶ್ಯಕತೆಗೆ ಅನುಗುಣವಾಗಿ ಹೆಚ್ಚು ಸುರಕ್ಷಿತ ಈಜುಡುಗೆಗಳನ್ನು ಧರಿಸುತ್ತಾರೆ. ಕೆಲವು ಕಡೆಯ ಸಮುದ್ರದಲ್ಲಿ ಈ ಈಜುಡುಗೆಗಳ ಅವಶ್ಯಕತೆಯೇ ಇರೋದಿಲ್ಲ. ಯಾಕೆಂದರೆ ಅಲ್ಲಿ ಇಂತಹ ಅಪಾಯಕಾರಿ ವಿಷಕಾರಿ ಜೀವಿಗಳು ಇರುವುದಿಲ್ಲ.
ಸಾಗರದಲ್ಲಿನ ಒಂದೊಂದು ಚಿತ್ರ ವಿಚಿತ್ರ ಜೀವಿಗಳು ನಿಜಕ್ಕೂ ವಿಸ್ಮಯ.
ಮೃತ್ಯುಂಜಯ ನ ರಾ