ಕವಿತೆಯ ಸ್ಫೂರ್ತಿಸೆಲೆ
ಮನದ ಗೂಡಲಿ ಭಾವವು ಅವಿತಾಗ
ಮನಸು ಆ ಭಾವದಲಿ ಬಂಧಿಯಾದಾಗ
ಭಾವದುಯ್ಯಾಲೆಯಲಿ ಮನ ಜೀಕಿದಾಗ..
ಕವಿತೆಯೊಂದು ಮನದಿ ಮೂಡಿದೆ!!
ಕನಸುಗಳ ಚಿತ್ತಾರದಿ ಮನವಿರಲು
ಮನದ ಮಾತು ಹೃದಯವರಿತಿರಲು
ನೂರಾಸೆಯ ಭಾವವೇ ಕಣ್ಣಲಿರಲು..
ಕಾವ್ಯವು ಮನದಾಗಸದಿ ಚಿತ್ತೈಸಿದೆ!!
ಬಾಳಿನ ನವಭಾವಕೆ ನಾಂದಿಯ ಹಾಡಿ
ಸಂತಸವದು ಕಂಗಳಲಿ ಮನೆಮಾಡಿ
ಪದಭಂಡಾರವೇ ಮನೋನ್ಮಣಿಯಲಿ ಮೂಡಿ
ಕವನವೊಂದು ಹೃದಯದಲಿ ಉದಯಿಸಿದೆ!!
ಮನದ ಕಂಗಳಲಿ ನಲಿವಿನ ನೆಲೆಯಿರಲು
ನಿರ್ಜೀವದ ಭಾವಗಳಿಗೆ ಜೀವಸೆಲೆಯಿರಲು
ಸೋತ ಚಿಂತನೆಗೆ ಸವಿಸ್ಪೂರ್ತಿಯ ಅಮಲಿರಲು..
ಕವಿತೆಯದು ಅಂತರಾಳವ ತೆರೆದಿದೆ!!
ಸುಮನಾ ರಮಾನಂದ
ಮುಂಬೈ