ಕಸೂತಿಯಾಗದ ದಾರದುಂಡೆ – ಕಥಾಗುಚ್ಛ
ಪುಸ್ತಕ : ಕಸೂತಿಯಾಗದ ದಾರದುಂಡೆ
ಲೇಖಕರು : ರೇವತಿ ಶೆಟ್ಟಿ ಕೋಟ
ಪ್ರಕಾಶನ : ಪ್ರಾಂಜಲ ಪಬ್ಲಿಕೇಷನ್ಸ್
ಉಡುಪಿ ಜಿಲ್ಲೆಯ ಕೋಟದ ರೇವತಿ ಶೆಟ್ಟಿ ಯವರ ಪ್ರಥಮ ಕಥಾಸಂಕಲನದ ಹೆಸರು ಕಸೂತಿಯಾಗದ ದಾರದುಂಡೆ. ಹೆಸರೇ ಅದೆಷ್ಟು ಧ್ವನಿಪೂರ್ಣ! ದಾರದುಂಡೆ ಎಂದರೆ ಬೆಸೆಯುವಿಕೆಯ ದ್ಯೋತಕ. ಅದೂ ಕಣ್ಮನ ತಣಿಸುವ ಸೂಕ್ಷ್ಮ ಕಸೂತಿಯಾಗಿ ಆ ದಾರದೆಳೆಗಳು ಅರಳಿದರೆ, ಆ ಕುಸುರಿ ಅದೆಷ್ಟು ಚೆಂದ ಅಲ್ವಾ? ಪ್ರತಿ ವಸ್ತುವಿಗೂ,ವ್ಯಕ್ತಿಗೂ ತಾನೊಂದು ಉತ್ಕೃಷ್ಟ ಪ್ರತಿಮೆಯಾಗಬೇಕು,ತನ್ನಿಂದ ಏನಾದರೊಂದು ಸಾಧನೆಯಾಗಬೇಕು ಎಂಬ ಆಸೆ ಸಹಜ. ಆದರೆ ಎಲ್ಲವೂ,ಎಲ್ಲರೂ ಆ ಗುರಿ ಮುಟ್ಟಲು ಸಾಧ್ಯವಿಲ್ಲ. ಕೆಲವರು ಅಸಾಧ್ಯವನ್ನು ಸಾಧ್ಯವಾಗಿಸಿಕೊಳ್ಳಲು ಪಟ್ಟಪಾಡು, ಮಾಡುವ ತ್ಯಾಗ, ಅನುಭವಿಸುವ ಭೋಗ, ಎಲ್ಲವೂ ಈ ಕಥಾ ಸಂಕಲನದಲ್ಲಿ ಒಂದೊಂದು ಪಾತ್ರದಲ್ಲಿ ಎಳೆಎಳೆಯಾಗಿ ಹೆಣೆಯಲ್ಪಟ್ಟಿದೆ.ಇನ್ನು ಕೆಲವರಿಗೆ ಸಂಕಲ್ಪಿಸಿದ ಬದುಕು ಕೊನೆಗೂ ಸಿಗದೆ ದಾರದುಂಡೆಯಾಗಿಯಾಗಿಯೇ ಉಳಿದ ನಿದರ್ಶನಗಳೂ ಇಲ್ಲಿನ ಕತೆಯಲ್ಲಿದೆ.
“ಜೀವನ್ಮುಖಿ ” ಕಥೆಯ ಶಾಂತಮ್ಮ ಹೆಣ್ಣು ಹೆತ್ತವರೆಲ್ಲರ ಮನಸ್ಥಿತಿಯ ಪಡಿಯಚ್ಚಾಗಿ ನಿಲ್ಲುತ್ತಾರೆ. ಕಥೆಯ ಆರಂಭದ ಸಾಲುಗಳೇ ನಮ್ಮ ಅಮ್ಮಂದಿರ ದಿನನಿತ್ಯದ ಚಟುವಟಕೆ, ಮನೆಯ ಒಳಹೊರಗಿನ ಕೆಲಸ , ಹಂಚಿ ತಿನ್ನುವ ಮನೋಭಾವ,ಕರಾವಳಿಯ ಅಕ್ಕಿ ಮಿಲ್ಲಿನ ಚಿತ್ರಣ, ಪ್ರಾದೇಶಿಕ ಭಾಷೆಯ ಬಳಕೆಯಿಂದ ನಮ್ಮನ್ನಾವರಿಸುತ್ತದೆ. ಶಾಂತಮ್ಮನ ಪತಿ ಮಹಾಲಿಂಗಯ್ಯನವರ ಅಕ್ಕಿಮಿಲ್ಲು, ಅವರ ಒಡೆತನದ ಜಾಪು, ಅವರಿಗೆ ಕೆಲಸದಾಳು ಮಿಣ್ಕುವಿನೊಡನಿದ್ದ ಸಹವಾಸ,ಸಂಬಂಧ, ಗಂಡನಿಗೆ ಮಿಣ್ಕುವಿನ ಸಾಂಗತ್ಯವಿದೆ ಎಂದು ತಿಳಿದು ಆಘಾತಕ್ಕೊಳಗಾಗಿ ಅಂತರ್ಮುಖಿಯಾಗುವ ಶಾಂತಮ್ಮ, ಪತಿ ಮಹಾಲಿಂಗಯ್ಯನ ವಿಯೋಗದ ನಂತರ ಬದಲಾದ ಶಾಂತಮ್ಮನ ಮನಸ್ಥಿತಿ, ಅವರು ಉಂಡು ಉಟ್ಟು ಜಗಕ್ಕೆ ತೆರೆದುಕೊಂಡ ಪರಿ, ಕೊನೆಯಲ್ಲಿ ಮಕ್ಕಳ ಮನೆಯಲ್ಲಿ ಪ್ರಾಣ ಬಿಟ್ಟ ಶಾಂತಮ್ಮ ! ಊರ ಜನರ ನಿರೀಕ್ಷೆ,ಬದಲಾವಣೆ ಜಗದನಿಯಮ ಎಂಬಷ್ಟು ಸಹಜವಾಗಿ ದಾಖಲಾಗಿದೆ.
ಸಾಹುಕಾರ ಮಹಾಲಿಂಗಯ್ಯನವರಿಗಿದ್ದ ದುಡ್ಡಿನ ತೃಷೆ, ಹೆಣ್ಣಿನ ದಾಹ, ಗಂಡ ಹೆಂಡಿರ ನಡುವಿನ ವಿರುದ್ಧ ಇಕ್ಕಿನ ಆಲೋಚನೆಗಳು, ಕೆಲಸದಾಳುಗಳ ಮಾತುಕತೆ ಎಲ್ಲವೂ ಅಪ್ಪಟ ಹಳ್ಳಿಯ ಚಿತ್ರ ತೆರೆದಿಟ್ಟರೆ, ಕೊನೆಗೆ ಹಳ್ಳಿಯ ಬದುಕಿನಿಂದ ಪಲ್ಲಟಗೊಂಡ ಶಾಂತಮ್ಮನ ಬದುಕು, ತಾನು ಹಳ್ಳಿಯಲ್ಲೇ ಇರುವುದೆಂದರೂ ಮಕ್ಕಳ ಮಾತಿಗೆ ಮಣಿಯಬೇಕಾದ ಸ್ಥಿತಿ, ಹಳ್ಳಿಯಲ್ಲಿ ಒಂಟಿ ಮಹಿಳೆ ಬದುಕಲು ಇರುವ ಆತಂಕ , ಇವೆಲ್ಲವೂ ಸಹಜವಾಗಿ ಅಭಿವ್ಯಕ್ತವಾಗಿದೆ.ಕೊನೆಯಲ್ಲಿ ಶಾಂತಮ್ಮ ದೇಹದಾನ ಮಾಡಿ ಅವರ ಉದಾತ್ತತೆ ಮೆರೆದದ್ದು ಓದಿದಾಗ ಸ್ತಂಭೀಭೂತರಾಗುವ ಸರದಿ ಓದುಗರದ್ದು.
“ಸಂಧ್ಯಾರಾಗ” ಇದು ಎರಡನೆಯ ಕತೆ.
ಇಬ್ಬರು ಸ್ತ್ರೀಯರ ಪ್ರಧಾನ ಪಾತ್ರ ಈ ಕತೆಯಲ್ಲಿದೆ. ಇಲ್ಲಿ ಮುಖ್ಯ ಪಾತ್ರ ಯಾರದ್ದೆಂದು ಹೇಳುವುದು ಕಷ್ಟದ ಕೆಲಸ.
ಗಂಡನಿಲ್ಲದ ಹೆಣ್ಣಿನ ಸ್ಥಿತಿ. ಮಕ್ಕಳನ್ನು ಬೆಳೆಸಲು ಆ ಸ್ತ್ರೀಯರು ಆಯ್ದುಕೊಂಡ ದಾರಿ ಇಲ್ಲಿ ಎರಡು ರೀತಿಯಲ್ಲಿ ಹೆಣೆಯಲ್ಪಟ್ಟಿದೆ. ಮೈಮಾರಿ ದುಡ್ಡು ಮಾಡಿ ಮಕ್ಕಳನ್ನು ಸಲಹಿ ದಡ ಸೇರಿಸುವ ವಿಮಲಾ ಒಂದೆಡೆಯಾದರೆ, ಬೀಡಿಕಟ್ಟಿ ಬದುಕು ಸವೆಸಿ,ಮಗಳನ್ನು ಓದಿಸುವ ಮರ್ಯಾದಸ್ಥೆ ಕಾತ್ಯಾಯನಿಯ ಪಾತ್ರ ಇನ್ನೊಂದೆಡೆ.
ಹಾದರಗಿತ್ತಿ ಹೆಂಗಸೊಬ್ಬಳು ಇಡೀ ಊರಿನ ಜನರ ಬಾಯಿಗೆ ತುತ್ತಾಗುವುದರ ಜೊತೆಗೆ, ಅವಳಿಂದ ಇಡೀ ಊರಿನ ವಾತಾವರಣವೇ ಕಲುಷಿತವಾಗುವ ಆತಂಕ ಪ್ರತಿಯೊಬ್ಬರಿಗಿದ್ದರೂ, ಕಾತ್ಯಾಯನಿಯಂತವರು ಜಾಣ್ಮೆಯಿಂದ ವಿಮಲಳ ಮನೆಗೆ ಹೋಗಿ ,ಸಹನೆಯಿಂದ ಅವಳಿಂದಾಗುವ ಸಮಸ್ಯೆಯನ್ನು ಅವಳ ಬಳಿಯೇ ಹೇಳುತ್ತಾ, ಹಿರಿತನದಿಂದ ವರ್ತಿಸಿ ಮನುಷ್ಯತ್ವದಿಂದ ವ್ಯವಹರಿಸಿದ ರೀತಿ ನಿಜಕ್ಕೂ ಮಾದರಿಯಾಗುತ್ತದೆ. ಪ್ರೀತಿ ಕೊಟ್ಟು ಪಡೆಯುವ ವಸ್ತು. ವೇಶ್ಯೆಗೂ ತಾನು ಕೇವಲ ಒಬ್ಬನ ಸ್ವತ್ತಾಗಿ ಜೀವನದ ಸಂಜೆಗಳನ್ನು ಕಳೆಯಬೇಕೆಂಬ ತುಡಿತ ಇದ್ದೇ ಇರುತ್ತದೆ. ಅದನ್ನವಳು ದಕ್ಕಿಸಿಕೊಂಡಾಗ ಆಕೆಗಾಗುವ ಸಂತಸ, ಬದುಕಿನಲ್ಲಿ ಸಿಗುವ ಭದ್ರತೆಯನ್ನು ವಿಮಲಳ ಪಾತ್ರದ ಮೂಲಕ ಚೆನ್ನಾಗಿ ನೆಯ್ದಿದ್ದಾರೆ ಕತೆಗಾರ್ತಿ. ಜೊತೆಗೆ ತನ್ನಂತೆ ಪರರ ಬಗೆದ ಕಾತ್ಯಾಯನಿಯ ಕುರಿತು ವಿಮಲಳಿಗಿದ್ದ ಗೌರವಾದರವನ್ನು ಕತೆಯಲ್ಲಿ ಬಹಳ ನವಿರಾಗಿ ಹೆಣೆದಿದ್ದಾರೆ. ನಾವು ಒಳ್ಳೆಯವರಾದರೆ ಊರೇ ಒಳ್ಳೆಯದು ಎಂಬ ಮಾತಿಗೆ ಪೂರಕವಾಗಿದೆ ಈ ಕತೆ.
ಕಥಾ ಸಂಕಲನದ ಮೂರನೇ ಕತೆ “ಇರುಳಿನ ತಿರುವಿಗೆ ಹಣತೆ ಹಚ್ಚುವಾಸೆ”
ಗ್ರಾಮೀಣ ಭಾಗದ ಹೆಣ್ಣು ಸುಮಾಳ ಬದುಕಿನಲ್ಲಿ ಎ್ಉರಾದ ತಿರುವುಗಳು ಅದೆಷ್ಟು! ಅಮ್ಮನ ಅಕಾಲಿಕ ಮರಣ, ಅಪ್ಪನ ಮರುಮದುವೆ ಸುಮಾಳ ಶೈಕ್ಷಣಿಕ ಬದುಕು ಮುಗಿದೇ ಹೋಯಿತು ಎಂಬ ಸ್ಥಿತಿಗೆ ತಲುಪಿಸಿದರೂ, ಈ ತಿರುವಿಗೆ ಹಣತೆ ಹಚ್ಚಿದವರು ನಳಿನಿಮೇಡಂ ಎಂಬ ಮಹಾಮಾತೆ.
ಈ ನಳಿನಿ ಮೇಡಂ ಎಂಬ ಅಪರಿಚಿತರನ್ನು ನಂಬಿ ಹುಟ್ಟೂರು,ಹೆತ್ತವರನ್ನು ಬಿಟ್ಟು ಬಂದ ಸುಮಾಳ ಬದುಕು ಅದೆಷ್ಟು ಚಂದದ ತಿರುವುಗಳನ್ನು ಪಡೆಯಿತು ಎಂಬುದೇ ಈ ಕಥೆಯ ಹೂರಣ.
ನಳಿನಿಯವರ ಉದಾರತೆ, ಸುಮಾಳ ಪ್ರಯತ್ನ,ಕಲಿಯುವ ತುಡಿತ,ಹೋಮ್ ಸೀಕ್ ನಿಂದ ಬಳಲುವ ಅವಳು ದೃಢ ಸಂಕಲ್ಪದಿಂದ ಮೇಲೆದ್ದ ಪರಿ,ಹೊಂದಿದ ಭಾಷಾ ಪ್ರಾವೀಣ್ಯತೆ ಇಂದಿನ ಹಲವು ಗ್ರಾಮೀಣ ಸುಮಗಳು ಅರಳಿದ ದಾರಿಯ ಕನ್ನಡಿಯಂತಿದೆ.
ಸುಮಾಳ ಬದುಕಿಗೆ ಬೆಳಕಾದ ನಳಿನಿ ಮೇಡಂ ಅಂತವರು ನಾ ಮಾಡಿದ್ದು, ನಿನ್ನ ನಾ ಉದ್ದರಿಸಿದೆ ಎಂದು ಡಂಗುರಸಾರದೆ, ಇಳೆಯಿಂದ ಮೊಳಕೆ ಒಡೆವ ಬೀಜ ಸದ್ದು ಮಾಡದು, ಸೂರ್ಯ ಬೆಳಕುಕೊಟ್ಟೆ ಎಂದು ಬೀಗನು ಎಂಬ ಕಗ್ಗಕವಿಯ ವಾಣಿಗೆ ಸರಿಹೊಂದುವಂತೆ ನಿಂತು ಆದರ್ಶ ಪಾತ್ರವಾಗುತ್ತಾರೆ.
“ಮಾಯಾಮೃಗದ ಬೆನ್ನೇರಿ”
ಇದು ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಈಗಿನ ಯುವಸಮುದಾಯದ ಕತೆ. ಪ್ರಸಿದ್ದರೊಡನೆ ನಾನಿದ್ದರೆ ನನ್ನ ಪ್ರಸಿದ್ದಿ ,ಐಡೆಂಟಿಟಿ ಹೆಚ್ಚುತ್ತದೆ ಎಂಬ ಹುಚ್ಚು ಭ್ರಮೆಯಲ್ಲಿ ಪತ್ರಿಕೋದ್ಯಮ ಮುಗಿಸಿದ ಕಾವ್ಯ ಎಂಬ ಹುಡುಗಿಯ ಸುತ್ತ ಹೆಣೆದ ಕತೆ. ಇಲ್ಲಿ ಮಾಸ್ಟರ್ ಎಂಬ ಯುವ ಸಮೂಹವನ್ನು ಸೆಳೆದು ಜಾದೂಮಾಡಿದ ಪತ್ರಿಕೆಯ ಸಂಪಾದಕ ಶಮಂತ್ ನ ಮಾಸ್ಟರ್ ಮೈಂಡ್, ಅವನು ಪತ್ರಿಕೆಗಾಗಿ ದುಡಿಸಿಕೊಳ್ಳುವ ಹುಡುಗಿಯರ ಜೊತೆಗಿಟ್ಟುಕೊಳ್ಳುವ ಸಂಬಂಧ, ಅವರನ್ನು ದುಡಿಸಿಕೊಳ್ಳುವ ರೀತಿ, ಹೊರ ಜಗತ್ತು ಶಮಂತನನ್ನು ನೋಡುವ ಬಗೆ, ದೀಪದ ಬುಡ ಕತ್ತಲು ಎಂಬಂತೆ ಮಾಸ್ಟರ್ ಪತ್ರಿಕಾ ಕಚೇರಿಯ ಒಳಜಗತ್ತು ಅದೆಷ್ಟು ಕಾಮ ಪ್ರೇಮದ ಕೂಪ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಕಸೂತಿಯಾಗಿಸಿದ್ದಾರೆ.
ಪ್ರಸಿದ್ದಿಯಾಗುವ ಬರದಲ್ಲಿ ನಮಗೆ ಹೆತ್ತವರ,ಹಿತೈಷಿಗಳ ಕಿವಿಮಾತು ಕೇಳಿಸೋದಿಲ್ಲ. ಆದರೆ ಕೆಡುವ ಕಾಲ ಬಂದಾಗ ಅವರೆಲ್ಲರ ನೆನಪಾಗಿ ಕಾಲವೇ ನನ್ನ ಹಿಂದಕ್ಕೆ ಕೊಂಡೊಯ್ಯಲಾರೆಯಾ ಎಂದು ಅಂತರಾಳ ಕೂಗುವಂತೆ ಮಾಡುತ್ತದೆ ಎಂಬ ಸೂಕ್ಷ್ಮ ಸಂದೇಶ ಈ ಕತೆಯಲ್ಲಿದೆ.
“ಕತೆಯಾದ ಒಲವು” ಎಂಬ ಕತೆಯಲ್ಲಿ ಹರೆಯದಲ್ಲಿ ಪ್ರೀತಿಯ ಉನ್ಮಾದದಲ್ಲಿ ಬದುಕುವ ಶ್ರೀನಿಧಿ,ಸೌಧಾಮಿನಿ ಎಂಬ ಆತನ ಪ್ರೇಯಸಿ. ಅದೆಷ್ಟು ಚಂದದ ಪ್ರೇಮವರ್ಣನೆ ಈ ಕತೆಯಲ್ಲಿ! ಅಬ್ಬಾ..ಹೀಗೂ ಪ್ರೀತಿಸುವ ಜೀವಗಳು ಜಾತಿ ಕಾರಣದಿಂದ ಮದುವೆಯ ಬಂಧಕ್ಕೊಳಗಾಗದೆ ದೂರಾದ ಕತೆ ಇದು. ಪ್ರೇಮಿಗಳನ್ನು ದೂರ ಮಾಡಲು ಮನೆಯವರು ಮಾಡುವ ಕಸರತ್ತು, ಶ್ರೀನಿಧಿ ಅದ್ಹೇಗೊ ಆ ಪ್ರೇಮವೈಫಲ್ಯದಿಂದ ನೊಂದು ಬೆಂದು ನಂತರ ಜೀವನ್ಮುಖಿಯಾದರೂ, ಆತನ ಮನದ ಮೂಲೆಯಲ್ಲಿ ಸೌಧಾಮಿನಿ ಅಲೆ ಎಬ್ಬಿಸುತ್ತಲೇ ಇರುತ್ತಾಳೆ. ಒಳ್ಳೆಯ ಉದ್ಯೋಗ ಪಡೆದ ಶ್ರೀನಿಧಿ ಕೊನೆಗೂ ತಾಯಿ ನೋಡಿದ ಹುಡುಗಿ ಅಶ್ವಿನಿಯನ್ನು ಮದುವೆಯಾಗಿ ನೆನಪುಗಳ ಭಾರ ತುಸು ಕಡಿಮೆ ಮಾಡಿಕೊಳ್ಳುವ ರೀತಿ ಕತೆಯಲ್ಲಿ ಗಂಭೀರವಾಗಿ ಬದುಕ ನ್ನು ತೆರೆದಿಡುತ್ತದೆ.
ಅಪ್ಪನ ಆಸ್ತಿಯ ಪಾಲು ತೆಗೆದುಕೊಂಡು ಬಾ ಎಂಬ ಅಶ್ವಿನಿಯ ಆಜ್ಞೆಯನ್ನು ಅಲ್ಲಗಳೆಯಲಾಗದೆ, ಇತ್ತ ಮನೆಯಲ್ಲಿ ಅದನ್ನು ಮಂಡಿಸಲು ಆಗದೆ ಒದ್ದಾಡುವ ಶ್ರೀನಿಧಿಗೆ , ಕೊನೆಗೆ ತಮ್ಮ ನೀಡುವ ಆಸ್ತಿ ಪತ್ರದ ಪ್ರತಿಯ ವಿಲೇವಾರಿಯ ವಿಷಯ ಕತೆಗೊಂದು ಅಚಾನಕ್ ತಿರುವಿನಂತಿದೆ. ಕೆಲವೊಮ್ಮೆ ರೋಗಿ ಬಯಸಿದ್ದೇ ವೈದ್ಯ ಕೊಡಬಹುದುದೆಂಬ ಮಾತು ಮತ್ತೆ ಮತ್ತೆ ನೆನಪಿಸುವ ಕತೆ ಇದು.
“ನೆನಪಾಗಿ ಕಾಡದಿರು ಬದುಕೆ”. ಈ ಕತೆಯ ನಾಯಕಿ ಗಾಯಕಿ ಪಾವನಿ. ಶ್ರೀಮಂತರ ಮನೆ ಹುಡುಗಿ. ಪ್ರಣವನೆಂಬ ಸಂಗೀತ ಮಾಂತ್ರಿಕನ ಪ್ರೇಮಪಾಶಕ್ಕೆ ಸಿಲುಕಿ ನಲುಗಿದ ಕತೆ. ಏಯ್ಡ್ಸ್ ಎಂಬ ಮಹಾಮಾರಿ ಪ್ರಣವನನ್ನು ಬಲಿ ತೆಗೆದುಕೊಂಡ ನಂತರ ಹಸುಗೂಸನ್ನು ಹಿಡಿದು ಹುಬ್ಬಳ್ಳಿ ರೈಲಿನಲ್ಲಿ ಕೂತಾಗ ಸಿಕ್ಕ ದಡೂತಿ,ಗಡಸು ಸ್ವರದ ಹೆಂಗಸು ಶಂಕ್ರಿ. ಟ್ರೈನಿನಲ್ಲಿ ಪೊರೆದವ್ವ ಶಂಕ್ರಿಯ ಜೊತೆ ಪಾವನಿ ಹೊಸ ಬದುಕು ಕಟ್ಟಿಕೊಂಡ ಚಿತ್ರಣವಿದೆ ಇಲ್ಲಿ.
ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಂದು ಬಾಗಿಲ ಕಾಯ್ವರು ಎಂಬ ಮಾತು ಮತ್ತೆ ಮತ್ತೆ ನೆನಪಾಗುವಂತೆ ಕಥೆ ಬೆಳೆಯುತ್ತದೆ. ಛಲ ಹೆಣ್ಣಿನ ಹುಟ್ಟುಗುಣ. ಅವಳು ಪಾತಾಳಕ್ಕೆ ಜಾರಿ ಬದುಕು ಸಮಾಧಿಯಾಯ್ತು ಎಂದೆಣಿಸಿಸಿದರೆ, ಕೈಹಿಡಿದು ನಡೆಸುವ ಶಂಕ್ರಿಯಂತವರು ಸಿಕ್ಕರೆ,ಮತ್ತೆ ಆಗಸದೆತ್ತರಕ್ಕೆ ಏರಬಲ್ಲರು ಎಂಬುದನ್ನು ಪಾವನಿಯ ಪಾತ್ರದ ಮೂಲಕ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ಕಥೆಗಾರ್ತಿ ರೇವತಿ.
“ಲೆಕ್ಕಕ್ಲಿರದ ಸೊನ್ನೆ ನಾನು” ಎಂಬುದು ಮುಂದಿನ ಕಥೆ. ಈ ಸಮಾಜದಲ್ಲಿ ಬಡತನದಲ್ಲಿ ಹುಟ್ಟಿದ ಪ್ರಾಮಾಣಿಕ ಬುದ್ದಿವಂತ ಹುಡುಗನೊಬ್ಬ ಗುರಿಸೇರಲು ಹೆಣಗುವ ಕಥೆಯ ಜೊತೆಗೆ, ದಿಕ್ಕು ದೆಸೆ ಇಲ್ಲದೆ,ನನ್ನವರು ಎಂಬವರ್ಯಾರೂ ಇಲ್ಲದೆ ಹೋದರೆ ಬಡವರ ಮನೆ ಹುಡುಗರು ಶ್ರೀಮಂತರ ಗಾಳಕ್ಕೆ ಬಲಿಪಶುವಾಗುವ ಸಂದರ್ಭವನ್ನು ಈ ಕಥೆಯಲ್ಲಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ ಕಥೆಗಾರ್ತಿ.
ಬಡಪಾಯಿ ಮೋಹನ ಶ್ರೀಮಂತರ ಮನೆಯಳಿಯನಾದ. ಆದರೆ ಆತನ ಹೆಂಡತಿ, ಅವಳ ತಂದೆತಾಯಿ, ಕೊನೆಗೆ ಹುಟ್ಟಿದ ಮಗ ಎಷ್ಟೆಲ್ಲಾ ಸವಾರಿ ಮಾಡಿದರು ಮೋಹನನ ಮೇಲೆ, ಮಗಳು ಮೋಹನನ ಬಾಳಿಗೆ ಬೆಳಕಿಂಡಿಯಂತಿದ್ದಳು. ಆದರೆ ಅವಳೂ ಮದುವೆಯಾಗಿ ಹೋದ ನಂತರ ಮೋಹನನ ಪಾಡು ಏನಾಯ್ತು ಎಂಬುದೇ ಈ ಕತೆಯ ಹೂರಣ.
ಆಟಕ್ಕುಂಟು ಲೆಕ್ಕಕ್ಕಿಲ್ಲದ ವ್ಯಕ್ತಿ ಮೋಹನ ಮಗಳಿಗೆ ಬರೆದ ಪತ್ರವೇ ಲೆಕ್ಕಕ್ಕಿರದ ಸೊನ್ನೆ ನಾನು ಎಂಬ ಕಥೆ.
ಈ ಕಥಾ ಸಂಕಲನದಲ್ಲಿ ನನ್ನನ್ನು ತುಂಬಾ ಕಾಡಿದ ಎರಡು ಕಥೆಗಳು ಕೊನೆಯಲ್ಲವೆ.
“ಜಾರಿ ಬಿದ್ದ ನಕ್ಷತ್ರ” ಎಂಬ ಕಥೆ ವತ್ಸಲಾ ಎಂಬ ಒಬ್ಬ ಆದರ್ಶ ಶಿಕ್ಷಕಿಗೆ ವಿದ್ಯಾರ್ಥಿಗಳ ಮೇಲಿರುವ ಕಾಳಜಿ ಮಮತೆಯನ್ನು ತೆರೆದಿಡುವುದರ ಜೊತೆಜೊತೆಗೆ, ಒಬ್ಬ ಸ್ಲಂ ಏರಿಯಾದ ಮುಗ್ದ ವಿದ್ಯಾರ್ಥಿನಿ ತನ್ನ ಶಿಕ್ಷಣಕ್ಕಾಗಿ ಮತ್ತು ಬದುಕಿಗಾಗಿ ಹೆಣಗಾಡುವ ಸ್ಥಿತಿಯನ್ನು ಸ್ಮಿತಾ ಎಂಬ ಹುಡುಗಿಯ ಪಾತ್ರದ ಮೂಲಕ ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಫಿಸಿಕ್ಸ್ ನಲ್ಲಿ ಸಾಧನೆ ಮಾಡಬೇಕು. ಕಲ್ಪನಾ ಚಾವ್ಲಾ ತರ ಆಗಬೇಕೆಂದು ಹತ್ತನೇ ತರಗತಿಯಲ್ಲಿ ಶೇಕಡಾ ತೊಂಬತ್ತಕ್ಕಿಂತ ಅಧಿಕ ಅಂಕ ಪಡೆದ ಸ್ಲಂ ಹುಡುಗಿ ಸ್ಮಿತಾ, ಕೊನೆಗೆ ಕಾಲೇಜು ಶುರುವಾಗುವ ಮೊದಲೆ ನೇಣಿಗೆ ಶರಣಾದ ಕಥೆ ಓದುವಾಗ ಸಂಕಟವಾಗುತ್ತದೆ. ವತ್ಸಲಾ ಟೀಚರ್ ಸ್ಮಿತಾಳ ಎದೆಯಲ್ಲಿ ಬಿತ್ತಿದ್ದ ಕನಸೆಲ್ಲಾ ಕೊಚ್ಚಿಕೊಂಡು ಹೋದ ಪರಿ, ವತ್ಸಲಾ ಟೀಚರ್ ಮೇಲೆ ಸ್ಮಿತಾ ಇಟ್ಟ ನಂಬಿಕೆಯನ್ನು ಈ ಕತೆ ತೆರೆದಿಡುತ್ತದೆ. ಒಬ್ಬ ಪ್ರಾಮಾಣಿಕ ಶಿಕ್ಷಕಿ ವಿದ್ಯಾರ್ಥಿಗಳ ಬಡ ಅಸಹಾಯಕ ವಿದ್ಯಾರ್ಥಿಗಳನ್ನು ಬೆಳೆಸಲು ಹೆಣಗುವ ಪರಿ, ಅನುಭವಿಸುವ ನೋವು, ಅವರ ಅಸಹಾಯಕತೆ, ಎಲ್ಲವನ್ನೂ ಸಾದ್ಯಂತ ಹೇಳುವ ಕತೆ ಇದು. ಸ್ಮಿತಾ ಎಂಬ ಹೊಳೆಯಬೇಕಾದ ನಕ್ಷತ್ರ, ಯಾರಿಗೋ ಬಲಿಪಶುವಾಗಿ ಜಾರಿ ಬಿದ್ದ ಚಿತ್ರಣ ಓದುಗರ ಅಂತಃಕರಣ ಕಲಕಿಸುತ್ತದೆ.
ಕಥಾಸಂಕಲನದ ಕೊನೆಯ ಕತೆ “ಹೂನೆರಳು” .ಇಡೀ ಆಫೀಸಿನ ಐಕಾನ್ ಆಗಿದ್ದ ಶಶಿಕಾಂತ್ ತನ್ನ ಹೆಂಡತಿ ಮಕ್ಕಳ ಪಾಲಿಗೆ ಯಾಕೆ ಕಠೋರಿಯಾದ ಎಂಬ ಪ್ರಶ್ನೆ ನಮ್ಮನ್ನು ಕಾಡುವಂತೆ ಮಾಡುವ ಕತೆ. ಆಫೀಸಿನ ಪ್ರತಿಯೊಬ್ಬರಿಗೂ ಶಶಿ ಎಂದರೆ ನಂಬಿಕೆ ,ಭರವಸೆ, ಅದೇ ಶಶಿ ಅವನ ಹೆಂಡತಿ ಮಗನಿಗೆ ಬೇಲಿ ಹಾಕಿ ಬಂಧಿಸುವ ಗಂಡ ಮತ್ತು ತಂದೆ.
ಇಷ್ಟು ಮುಖವಾಡ ಹಾಕಿಕೊಂಡು ಬದುಕುವ ಮನುಷ್ಯ ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ತೀರಿ ಹೋದಾಗ ಆಫೀಸಿನವರೆಲ್ಲ ಎಂತಹ ಒಳ್ಳೆಯ ಟೀಂ ಲೀಡರ್, ಸಲಹೆಗಾರ, ಪ್ರೋತ್ಸಾಹಕ ನನ್ನು ಕಳೆದುಕೊಂಡೆವು ಎಂದು ರೋಧಿಸುತ್ತಲೆ , ಶಶಿಯ ಮನೆಗೆ ಬಂದರೆ ಹೆಂಡತಿ ಅನಕ್ಷರಸ್ಥಳಂತೆ ಗೃಹಬಂಧನದಲ್ಲಿ ತೊಳಲಾಡುವುದು, ಇಂಜಿನಿಯರಿಂಗ್ ಪದವಿ ಪಡೆದ ಮಗ ಜಗತ್ತನ್ನು ನೋಡದ ಪೆದ್ದನಂತೆ ಇರುವುದನ್ನು ನೋಡಿ ಅವಕ್ಕಾದ ಕತೆಯಿದು.
ಮನುಷ್ಯ ಹೊರಜಗತ್ತಿಗೆ ಎಷ್ಟೇ ಶ್ರೇಷ್ಠ ನಾದರೂ , ತನ್ನವರಿಗೆ ಪ್ರೀತಿ,ಸ್ವಾತಂತ್ರ್ಯ ನೀಡದಿದ್ದರೆ ಅದು ನಿರರ್ಥಕ ಎಂಬುದನ್ನು ಈ ಕತೆ ತಿಳಿಸುತ್ತದೆ.
ಒಟ್ಟಿನಲ್ಲಿ ಪ್ರತಿ ಕಥೆಯಲ್ಲಿ ಎದುರಾಗುವ ಸನ್ನಿವೇಶ, ಘಟನೆ, ಭಾಷಾ ಪ್ರಯೋಗ, ಸಂಭಾಷಣೆ,ಆಕಸ್ಮಿಕ ತಿರುವುಗಳು ಓದುಗರನ್ನು ಕುತೂಹಲದಿಂದ ಸೆಳೆಯುತ್ತವೆ. ರೇವತಿಯವರ ಪದ ಬಳಕೆ, ಕಥಾ ಹಂದರ , ನವಿರು ಶೈಲಿ ಇವೆಲ್ಲವೂ ಒಬ್ಬ ಶ್ರೇಷ್ಠ ಕಥೆಗಾರ್ತಿ ಅವರೊಳಗಿರುವುದನ್ನು ಸಾಬೀತು ಮಾಡಿವೆ. . ಎಲ್ಲದಕ್ಕೂ ಮುಖ್ಯವಾಗಿ ಅವರು ಒಳಗಣ್ಣಿನಿಂದ ಈ ಜಗತ್ತನ್ನು ನೋಡಿದ ಅನುಭವದ ಗಾಢತೆ ಇಲ್ಲಿನ ಗೆಲುವಿಗೆ ಕಾರಣ. ಜೊತೆಗೆ ನಮ್ಮ ಸುತ್ತಲು ನಡೆವ ಘಟನೆಗಳೇ ಈ ಕಥೆಗಳ ಹೂರಣ.
ರೇವತಿ ಮೇಡಂ ಇಷ್ಟು ಸೊಗಸಾದ ಪರಿಣಾಮಕಾರಿಯಾದ ಕತೆಗಳನ್ನು ಹೆಣೆದ ನಿಮ್ಮ ಲೇಖನಿಯಿಂದ ಇನ್ನೂ ಅನೇಕ ಕತೆಗಳು, ಲೇಖನಗಳು, ಬಹುಬಗೆಯ ಸಾಹಿತ್ಯ ಪ್ರಕಾರಗಳು ಅರಳಲಿ ಎಂಬ ಹಾರೈಕೆಗಳು.
ಪೂರ್ಣಿಮಾ ಕಮಲಶಿಲೆ
ವಿಮರ್ಶಕಿ,ಲೇಖಕಿ,ಚಿಂತಕಿ
ವಿಶ್ವವಾಣಿ ಅಂಕಣಕಾರರು
ಚಿತ್ರ ಕೃಪೆ: ಬುಕ್ ಬ್ರಹ್ಮ