ಕಾರ್ಟೂನಿಸ್ಟ್ ಜೀವನ್ ಗೆ ಜೀವಮಾನದ ಪ್ರಶಸ್ತಿ

ಕಾರ್ಟೂನಿಸ್ಟ್ ಜೀವನ್ ಗೆ ಜೀವಮಾನದ ಪ್ರಶಸ್ತಿ

ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರಾದ ಜೀವನ್ ಶೆಟ್ಟಿ ಅವರ ಕಾರ್ಟೂನ್ ಕ್ಷೇತ್ರದ ನಿರಂತರ ಸೇವೆಯನ್ನು ಗುರುತಿಸಿ ‘ಕರ್ನಾಟಕದ ವ್ಯಂಗ್ಯಚಿತ್ರಕಾರರ ಸಂಘವು ಕೊಡ ಮಾಡುವ ಜೀವಮಾನದ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ಪ್ರಶಸ್ತಿ ಪ್ರದಾನವು ಇದೇ ಸೆಪ್ಟೆಂಬರ್ 6 ರಂದು ನಡೆಯಲಿದೆ. ಬೆಂಗಳೂರಿನ ಎಂ ಜಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಇರುವ ಭಾರತೀಯ ವ್ಯಂಗ್ಯಚಿತ್ರ ಸಂಸ್ಥೆಯ ಗ್ಯಾಲರಿಯಲ್ಲಿ ಬೆಳಗ್ಗೆ 11 ಕ್ಕೆ ರಾಜ್ಯದ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ ನೆರವೇರಲಿದೆ.

ವೃತ್ತಿ ಬ್ಯಾಂಕ್ – ಪ್ರವೃತ್ತಿ, ವ್ಯಂಗ್ಯಚಿತ್ರ!

ಜೀವನ್ ಅವರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಆಗ ವ್ಯಂಗ್ಯಚಿತ್ರ ರಚನೆಯನ್ನು ಹವ್ಯಾಸವನ್ನಾಗಿಸಿಕೊಂಡಿದ್ದರು. ಈಗ ಹತ್ತು ವರ್ಷಗಳ ಹಿಂದೆ ನಿವೃತ್ತರಾಗಿದ್ದು ಕಾರ್ಟೂನ್ ರಚನೆಯಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾಲೇಜ್ ದಿನಗಳಲ್ಲೇ ಚಿತ್ರ ರಚನೆ

ಕಾಲೇಜಿನಲ್ಲಿ ಓದುವಾಗಲೇ ಅಲ್ಲಿನ ಮ್ಯಾಗಜೀನ್ಗಳಲ್ಲಿ ಚಿತ್ರ ರಚಿಸುತ್ತಿದ್ದರು. ಮುಂದೆ ತಮ್ಮಂದಿರಾದ ಪ್ರಕಾಶ್ ಶೆಟ್ಟಿ ಮತ್ತು ಹರಿಶ್ಚಂದ್ರ ಶೆಟ್ಟಿ (ಹರಿಣಿ) ಅವರು ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದೂ ಕೂಡ ಇವರಿಗೆ ಸ್ಫೂರ್ತಿಯಾಯ್ತು. ಅಲ್ಲದೇ ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್ಕೆ ಲಕ್ಷ್ಮಣ್, ಹಾಗೂ ಹಲವಾರು ವ್ಯಂಗ್ಯಚಿತ್ರಕಾರರು ಮಾದರಿಯಾಗಿದ್ದಾರೆ. ‘ಮ್ಯಾಡ್’ ಮ್ಯಾಗಜೀನ್ಗಳ ಚಿತ್ರಗಳು ಸಾಕಷ್ಟು ಕಲಿಯಲು ಸ್ಪೂರ್ತಿಯಾದವು ಎನ್ನುವುದು ಜೀವನ್ ಅವರ ಮನದ ಮಾತು.

ಸತತ ಅಭ್ಯಾಸ ಹಾಗೂ ಪ್ರಕಟಣೆ

1975 ರಲ್ಲೇ ಇವರ ವ್ಯಂಗ್ಯಚಿತ್ರಕ್ಕೆ ಬಹುಮಾನ ಬಂದಿತ್ತು. ಸತತ ಅಭ್ಯಾಸ ನಡೆದಿತ್ತು. 1980 ರಲ್ಲಿ ‘ತುಷಾರ’ದಲ್ಲಿ ಪ್ರಥಮ ವ್ಯಂಗ್ಯಚಿತ್ರ ಪ್ರಕಟವಾಯ್ತು.

‘ಉದಯವಾಣಿ’ಯ ‘ಶುಭೋದಯ’ ಮ್ಯಾಗಜೀನ್ ಗೆ ವಾರಕ್ಕೆ ಮೂರು ದಿನಗಳು ಕಾರ್ಟೂನ್ ಬರೆಯಲು ಆರಂಭಿಸಿದರು. ಅಲ್ಲದೇ ‘ಉದಯವಾಣಿ’ಯ ‘ವಕ್ರನೋಟ’ ಕಾಲಂ ನಲ್ಲೂ ಹಲವಾರು ಕಾರ್ಟೂನ್ಗಳು ಪ್ರಕಟವಾಗಿವೆ. ಇಲ್ಲಿಯವರೆಗ಼ೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಟೂನ್ಗಳನ್ನು ರಚಿಸಿದ್ದಾರೆ!

ವ್ಯಂಗ್ಯಚಿತ್ರದೊಂದಿಗೆ ಕ್ಯಾರಿಕೇಚರರ್ಗಳಲ್ಲೂ ಆಸಕ್ತಿ

ವ್ಯಂಗ್ಯಚಿತ್ರವಲ್ಲದೇ ಕ್ಯಾರಿಕೇಚರ್ಗಳನ್ನೂ ರಚಿಸುತ್ತಾ ಬಂದಿದ್ದಾರೆ. ‘ವ್ಯಂಗ್ಯತರಂಗ’ದಲ್ಲಿ ಬಹುಮಾನಗಳಿಗೂ ಭಾಜನರಾಗಿದ್ದಾರೆ. ಹಲವಾರು ಕ್ಯಾರಿಕೇಚರ್ಗಳು ಸೆಲೆಬ್ರೇಟಿಗಳ‌ ಮನೆಗಳಲ್ಲಿ ಅಲಂಕೃತಗೊಂಡಿವೆ ಎನ್ನುವುದೇ ಜೀವನ್ ಅವರಿಗೆ ಖುಷಿಯ ಸಂಗತಿ‌.

ಸ್ವಂತ ತಮ್ಮ ಪ್ರಕಾಶ್ ಶೆಟ್ಟಿ ಅವರ ಕ್ಯಾರಿಕೇಚರ್ಗಳು ಹೆಚ್ಚು ಮೆಚ್ಚುಗೆ ಆಗುತ್ತವೆ. ಕಡಿಮೆ ಗೆರೆಗಳಲ್ಲಿ ವ್ಯಕ್ತಿಯ ತದ್ರೂಪವನ್ನು ತರುವ ಕೌಶಲ್ಯ ಮೆಚ್ಚುವಂತದ್ದು. ಅವರೇ ನನಗೆ ಸ್ಪೂರ್ತಿ! ಅವರಂತೆಯೇ ನಾನೂ ಕೂಡ ಸ್ಪಾಟ್ ಕ್ಯಾರಿಕೇಚರ್ಗಳನ್ನು ರಚಿಸಿದ್ದೀನಿ. ಸ್ಪರ್ಧೆಗಳಿಗೆ ಚಾರ್ಕೋಲ್ನಲ್ಲಿ ಸಾಕಷ್ಟು ಕ್ಯಾರಿಕೇಚರ್ಗಳನ್ನು ರಚಿಸಿದ್ದೀನಿ, ಆಯ್ಕೆಯೂ ಆಗಿವೆ, ಬಹುಮಾನಗಳೂ ಬಂದಿವೆ ಎನ್ನುತ್ತಾರೆ.

2003 ರಲ್ಲಿ ‘ವಾಟರ್ ಟು ವಾಟರ್’ ಶೀರ್ಷಿಕೆಯಲ್ಲಿ ತಮ್ಮ ಹರಿಣಿ ಅವರ ಕ್ಯಾರಿಕೇಚರ್ಗಳ ಜೊತೆಗೆ ಇವರ ಜಲವರ್ಣದ ಚಿತ್ರಗಳನ್ನು ಪ್ರದರ್ಶಿಸಿದ್ದರು. ಅದು ದೊಡ್ಡ ಹೆಸರು ಮಾಡ್ತು.

‘ಈ ಭೂಮಿ ನಮ್ಮದು’ ಎಂಬ ಶೀರ್ಷಿಕೆಯಲ್ಲಿ ಹಲವಾರು ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಇಲ್ಲಿ ಪ್ರದರ್ಶಿಸಿದ್ದೆವು. ಖ್ಯಾತ ಹನಿಗವಿ ಡುಂಡಿರಾಜ್ ಅವರು ಉದ್ಘಾಟಿಸಿದ ಈ ಶೋದಲ್ಲಿ ನನ್ನ ಕಾರ್ಟೂನ್ಗಳೂ ಇದ್ದವು

ಬೆಂಗಳೂರಲ್ಲೂ ಕಾರ್ಯನಿರ್ವಹಣೆ

ಬೆಂಗಳೂರಿನಲ್ಲೂ ಹದಿಮೂರು ವರ್ಷಗಳು ಕೆಲಸ ಮಾಡಿದ್ದರು. ಅಲ್ಲಿದ್ದಾಗ ಬ್ಯಾಂಕಿನ ಕಲಾ ಅಕಾಡೆಮಿಯಲ್ಲಿನ ಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿಯೂ ಬಂದಿತ್ತು.

ಆರ್ಟಿಸ್ಟ್ ಆಗಿಯೂ ಸೇವೆ

ಸಿಂಡಿಕೇಟ್ ಬ್ಯಾಂಕನಲ್ಲಿ ಕೆಲಸ ಮಾಡುವಾಗ ಬ್ಯಾಂಕಿನ ಹೋಲ್ಡಿಂಗ್ಸ್, ಪೋಸ್ಟರ್ಗಳಲ್ಲೂ ಜೀವನ್ ಅವರ ಕಾರ್ಟೂನ್ಗಳನ್ನು ಬಳಸಿಕೊಂಡಿದ್ದಾರೆ. ಬ್ಯಾಂಕ್ ಸೇರುವಾಗ ಆರ್ಟಿಸ್ಟ್ ಎಂದು ಗೊತ್ತಿರಲಿಲ್ಲ. ಆದರೆ ಆನಂತರ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದರು. ಸತತ ಮುವತ್ತಾರು ವರ್ಷಗಳು ಬ್ಯಾಂಕಿನ ಕೆಲಸದೊಂದಿಗೆ ಕಲಾವಿದರಾಗಿಯೂ ಕಾರ್ಯ ನಿರ್ವಹಿಸಿದರು.

ತಂತ್ರಜ್ಞಾನದಲ್ಲೂ ಪರಿಣತಿ

ಇತ್ತೀಚೆಗೆ ಐಪ್ಯಾಡ್ನಲ್ಲೂ ಕಾರ್ಟೂನ್ಗಳನ್ನು ರಚಿಸುತ್ತಿದ್ದಾರೆ. ವ್ಯಂಗ್ಯಚಿತ್ರ ಹಾಗೂ ಕ್ಯಾರಿಕೇಚರ್ಗಳ ಹಲವಾರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಲಭಿಸಿವೆ. ‘ಕಾರ್ಟೂನ್ ವಾಚ್’ ಅವರ ಸ್ಪರ್ಧೆಗಳಲ್ಲಿ ಐದು ಬಾರಿ ಬಹುಮಾನಗಳು ಬಂದಿವೆ. ನಮ್ಮ ರಾಜ್ಯದ ಹಲವಾರು ಸ್ಪರ್ಧೆಗಳಲ್ಲೂ ಬಹುಮಾನ ಬಂದಿವೆ.

ಚಿತ್ರ ಕಲಿಸಿದ್ದೂ ಆಯ್ತು

‘ಗೆರೆ ಬರೆ’ ಶೀರ್ಷಿಕೆಯಲ್ಲಿ‌ ಚಿತ್ರ ಕಲಿಸುವ ಶಾಲೆಯನ್ನೂ ತೆರೆದರು. ಸತತ ಹದಿಮೂರು ವರ್ಷಗಳು ಮಕ್ಕಳಿಗೆ ಚಿತ್ರ ಕಲಿಸಿ ‘ಸರ್’ ಎನಿಸಿಕೊಂಡಿದ್ದಾರೆ. ಅಲ್ಲಿ ಪೇಪರ್ ಮೇಲೇ ಅಲ್ಲದೇ ಗೋಡೆ ಹಾಗೂ ಮೊಟ್ಟೆಗಳ‌ ಮೇಲೂ ಚಿತ್ರ ಬರೆಸುತ್ತಾ ಹಲವಾರು ಯಶಸ್ವಿ ಕಾರ್ಯಾಗಾರಗಳನ್ನೂ ನಡೆಸಿದ್ದು ಇವರ ಮತ್ತೊಂದು ಸಾಧನೆ!

ಹೊಸ ವ್ಯಂಗ್ಯಚಿತ್ರಕಾರರಿಗೆ ಕಿವಿ ಮಾತು!

ಕಾರ್ಟೂನ್ ಕ್ಷೇತ್ರಕ್ಕೆ ಬರುವ ಹೊಸ ಪೀಳಿಗೆಯವರಿಗೆ ಕಿವಿಮಾತನ್ನು ಹೇಳುತ್ತಾ, ಆಗ ನಮ್ಮ‌ ಕಾಲದಲ್ಲಿ ನಾವು ಕಲಿಯಲು ಬೇಕಾದ ಮಾದರಿಗಳು ಇರಲಿಲ್ಲ, ಅಗ ಟೂಲ್ಗಳ ಕೊರತೆ ಇತ್ತು. ನಮಗೆ ನಾವೇ ಮರಳಿ ಮರಳಿ ಪ್ರಯತ್ನ ಪಟ್ಟು ಕಲಿಯಬೇಕಿತ್ತು. ಈಗ ಕಲಿಯಲು ಬೆರಳ ತುದಿಯಲ್ಲೇ ಎಲ್ಲವೂ ಎಟಕುತ್ತಿವೆ, ಸಾಕಷ್ಟು ಇ-ಮಾರ್ಗಗಳಿವೆ. ಆದರೆ ಸಾಕಷ್ಟು ಪ್ರಾಕ್ಟೀಸ್ ಮಾಡಬೇಕು, ನಮ್ಮದೇ ಆದ ಒಂದು ಶೈಲಿಯನ್ನು ರೂಢಿಸಿಕೊಳ್ಳಬೇಕು. ಸತತ ಅಭ್ಯಾಸ ಮಾಡಲೇಬೇಕು.

ಜೀವನ್ ಅವರ ಈ ವ್ಯಂಗ್ಯಚಿತ್ರ ರಚನಾ ಪಯಣವು ಸಾಕಷ್ಟು ವಸಂತಗಳತ್ತ ಸಾಗಲಿ. ಹತ್ತು ಹಲವಾರು ಪ್ರಶಸ್ತಿಗಳು ಹುಡುಕಿ ಬರಲಿ. ಹೊಸಬರಿಗೆ ಮಾದರಿಯಾಗಲಿ.

ತುಂಕೂರ್ ಸಂಕೇತ್

Related post