ಕೀರ್ತಿಶನಿ
ನನಗೇನು ಹಂಬಲವೋ ದುರಾಸೆಯದು
ಎಲ್ಲರ ಗಮನ ಸೆಳೆಯುವ ಅಭಿಲಾಷೆಯು
ನಾ ಮಾಡಿದ ಕಾರ್ಯ ಇತರರಿಗೆ ತೋರಿಸಲು
ಹಿಡಿದಿಹುದು ಎನಗೆ ಕೀರ್ತಿಶನಿಯು
ಜನ್ಮ ನೀಡಿದ ಮಾತೆಯು ಬಯಸದ ಬಯಕೆ
ಅಕ್ಷರವನಿತ್ತ ಗುರು ಕಾಣದ ಅತ್ಯಾಸೆಯು
ಬದುಕು ಕೊಟ್ಟ ಭಾಷೆ ಬೇಡದ ಕಾಮನೆಯು
ನನಗೇಕೆ ಹಿಡಿಯಿತೋ ಕೀರ್ತಿಶನಿಯು
ತ್ರಿಪದಿಗಳಲಿ ಜೀವನ ಬೋಧಿಸಿ ಸರ್ವಜ್ಞ
ಭಾಮಿನಿಯಲಿ ಭಾರತ ಕೊಟ್ಟ ಕುಮಾರವ್ಯಾಸ
ಅನಾಮಧೇಯನಾಗಿ ಬರೆದ ಮುದ್ದಣ ಕವಿ
ಇವರಿಗಿಲ್ಲದ ಕೀರ್ತಿಶನಿಯು ನನಗೇತಕೋ
ಎನ್ನ ಸಾಧನೆಗಳನು ಕಂಡು ಜನರು
ಗುರುತು ಹಿಡಿದು ಮೆಚ್ಚಿ ಹೊಗಳಲು
ಅದುವೇ ಕೀರ್ತಿಯ ಶ್ರೀರಕ್ಷೆಯು
ಬೇಡಿ ಬಯಸದಿರು ಕೀರ್ತಿಶನಿಯನು

ಸಿ.ಎನ್. ಮಹೇಶ್