ಕುಂಭಮೇಳದಲ್ಲೊಂದು ಸುತ್ತು – 2

ಕುಂಭಮೇಳದಲ್ಲೊಂದು ಸುತ್ತು – 2

ಭಾರತ ದೇಶವು ಆಧ್ಯಾತ್ಮಿಕತೆಯ ನೆಲೆವೀಡು ಎಂಬುದು ಎಲ್ಲರಿಗೂ ತಿಳಿದಿದೆ,.ದೇಶದ ಮೂಲೆ ಮೂಲೆಗಳಲ್ಲಿ ವಿಭಿನ್ನ ಧಾರ್ಮಿಕ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ನಾವು ಇಲ್ಲಿ ಕಾಣಬಹುದು.

ನಮ್ಮ ದೇಶದ ಹಲವು ಸ್ಥಳಗಳು ಬಹಳ ಜನಪ್ರಿಯವಾಗಿವೆ. ಇಲ್ಲಿನ ಆಚರಣೆಗಳು ಮತ್ತು ಧಾರ್ಮಿಕ ಮೆರವಣಿಗೆಗಳಿಂದಾಗಿ ಇಡೀ ಜಗತ್ತಿಗೆ ಪರಿಚಯಿಸಲ್ಪಟ್ಟಿವೆ. ಅಂತಹ ಆಚರಣೆಗಳಲ್ಲಿ, ಕುಂಭಮೇಳವೂ ಒಂದು. ಕುಂಭಮೇಳವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದು ಗುರುತಿಸಲಾಗಿದೆ.

ನಮ್ಮ ದೇಶದಲ್ಲಿ ನಡೆಯುವ ನಾಲ್ಕು ಪ್ರಮುಖ ಕುಂಭಮೇಳಗಳು

  • ಪ್ರಯಾಗರಾಜ್ (ಅಲಹಾಬಾದ್), ಉತ್ತರ ಪ್ರದೇಶ : ಗಂಗಾ, ಯಮುನಾ ಮತ್ತು ಪೌರಾಣಿಕ ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮದಲ್ಲಿ ನೆಲೆಗೊಂಡಿರುವ ಪ್ರಯಾಗರಾಜ್ , ಕುಂಭಮೇಳ ನಡೆಯುವ ಸ್ಥಳಗಳಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.ಮೂರು ನದಿಗಳ ಸಂಗಮವು ಇಲ್ಲಿ ನಡೆಯುತ್ತದೆ.
  • ಹರಿದ್ವಾರ, ಉತ್ತರಾಖಂಡ : ಗಂಗಾನದಿ ಹಿಮಾಲಯದಿಂದ ಬಯಲು ಪ್ರದೇಶಕ್ಕೆ ಪ್ರವೇಶ ಮಾಡುವ ಸ್ಥಳ ಹರಿದ್ವಾರ.
  • ನಾಸಿಕ್, ಮಹಾರಾಷ್ಟ್ರ : ಗೋದಾವರಿ ನದಿಯ ದಡದಲ್ಲಿರುವ ನಾಸಿಕ್ ಕುಂಭಮೇಳದ ಮತ್ತೊಂದು ಮಹತ್ವದ ಸ್ಥಳ. ಸಮುದ್ರ ಮಂಥನದಿಂದ ಕುಂಭದಲ್ಲಿ ಸಂಗ್ರಹಿಸಲಾದ ಅಮೃತದ ಕೆಲವು ಹನಿಗಳು ಇಲ್ಲಿ ಬಿದ್ದವು ಎಂಬ ನಂಬಿಕೆ ಇದೆ.
  • ಉಜ್ಜಯಿನಿ, ಮಧ್ಯಪ್ರದೇಶ : ಕ್ಷಿಪ್ರಾ ನದಿಯ ದಡದಲ್ಲಿರುವ ಉಜ್ಜಯಿನಿ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಅಮೃತದ ಹನಿಗಳು ಈ ನಗರವನ್ನು ಪವಿತ್ರಗೊಳಿಸಿದವು ಎಂದು ಹೇಳುತ್ತಾರೆ.

ಪ್ರಸ್ತುತ ನಾವು ಪ್ರಯಾಗರಾಜ್‌ನ ಕುಂಭಮೇಳದ ಕುರಿತು ತಿಳಿದುಕೊಳ್ಳುವ ಒಂದು ಪುಟ್ಟ ಪ್ರಯತ್ನ .

2025 ರ ಕುಂಭಮೇಳ ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ವೇದಿಕೆಯಾಗದೆ ಜ್ಯೋತಿಷ್ಯ, ಯೋಗ, ಧ್ಯಾನ, ಹಿಂದೂ ಆಚರಣೆಗಳ ಬಗ್ಗೆ ತಿಳಿದುಕೊಳ್ಳಲು ಅತ್ಯುತ್ತಮ ಅವಕಾಶವನ್ನು ಒದಗಿಸಿದ್ದು ಸುಳ್ಳಲ್ಲ.
ಧಾರ್ಮಿಕ ಸಭೆಗಳ ಜೊತೆಜೊತೆಗೆ, ಕುಂಭಮೇಳವು ವಿಶಿಷ್ಟವಾದ ವಾಣಿಜ್ಯ ಚಟುವಟಿಕೆಯನ್ನು ಸಹ ನೀಡಿತು. ಕುಂಭಮೇಳವು ಕೋಟ್ಯಂತರ ಜನರ ಭಾಗವಹಿಸುವಿಕೆಯೊಂದಿಗೆ ಸುಮಾರು 45 ದಿನಗಳವರೆಗೆ ನಡೆದು ಹಿಂದೆಂದೂ ಕಾಣದ ಮಹತ್ವದ ಘಟನೆಗೆ ಸಾಕ್ಷಿಯಾಯಿತು. ಇಲ್ಲಿ ತಾತ್ಕಾಲಿಕ ನಗರವೇ ನಿರ್ಮಾಣವಾಗಿ ಬ್ಯಾಂಕು, ಆಸ್ಪತ್ರೆ, ಮಾರುಕಟ್ಟೆ, ಆಹಾರ ಕೇಂದ್ರಗಳು, ಮನರಂಜನಾ ಚಟುವಟಿಕೆಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಕುಂಭ ನಗರದಲ್ಲಿ ವ್ಯವಸ್ಥೆ ಆಗಿತ್ತು.

ಹಲವಾರು ದೇಶೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತಾ,ಹಲವಾರು ಪ್ರಕಾಶನ ಸಂಸ್ಥೆಗಳು ತಮ್ಮ ಪ್ರಕಟಣೆಯ ಧಾರ್ಮಿಕ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದವು. ಹಲವಾರು ಸಮೀಕ್ಷೆಗಳು, ಜನ ಜಾಗೃತಿ ಕಾರ್ಯಕ್ರಮಗಳು, ಬೀದಿ ನಾಟಕಗಳು ಏರ್ಪಾಡಾಗಿದ್ದವು. ಗಣನೀಯವಾಗಿ ವ್ಯಾಪಾರ ಚಟುವಟಿಕೆಗಳು ನಡೆದವು. ಪ್ರಯಾಗರಾಜ್‌ನ ಮಹಾಕುಂಭಮೇಳವು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಭವ್ಯ ಹಿಂದೂ ಸನಾತನ ಧರ್ಮದ ಪರಿಪೂರ್ಣ ಪ್ರದರ್ಶನದಂತೆ ಕಂಡುಬಂದದ್ದರಲ್ಲಿ ಆಶ್ಚರ್ಯವಿಲ್ಲ.
ವಿಶ್ವದ ಅತಿದೊಡ್ಡ ಉತ್ಸವದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ತಮ್ಮ ಜೀವಿತಾವಧಿಯಲ್ಲಿ ವಿಶಿಷ್ಟ ಅನುಭವ ಆಗಿದ್ದು ನಿಜ.

ಮಹಾ ಕುಂಭಮೇಳ 2025 ಜನ ಸಾಮಾನ್ಯರಲ್ಲಿ ಒಂದು ಸಂಚಲನವನ್ನೇ ಮೂಡಿಸಿತು. ಕುಂಭಮೇಳಗಳ ಕುರಿತು ಕೇಳಿದ್ದರೂ,ಸಾಮಾಜಿಕ ಜಾಲತಾಣಗಳು,ಫೇಸ್‌ಬುಕ್, ಯೂಟ್ಯೂಬ್, ಟ್ವಿಟ್ಟರ್‌ನಂತಹ ವೇದಿಕೆಗಳ ಮೂಲಕ ಹೆಚ್ಚು ಹೆಚ್ಚು ಜನರನ್ನು‌ ತಲುಪಿ ಅಲ್ಲಿನ ವಿಶೇಷತೆಗಳ ಕುರಿತು ಜನರಲ್ಲಿ ಕುತೂಹಲವನ್ನು ಮೂಡಿಸುವುದರ ಜೊತೆಗೆ, ತಾವೂ ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆಯನ್ನು ಹುಟ್ಟುಹಾಕಿತ್ತು. ಇಷ್ಟೇ ಅಲ್ಲದೆ 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭ ಮೇಳ ಎಂಬ ಅಂಶವೂ ಧಾರ್ಮಿಕ ಶ್ರದ್ಧಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಗರಾಜ್‌ನತ್ತ ಮುಖ ಮಾಡಲು ಕಾರಣವಾಯಿತು. ನಾನೂ ಕೂಡಾ ಮಾಹಾ ಕುಂಭಮೇಳಕ್ಕೆ ಹೋಗಿಬರಬೇಕೆಂದು ತೀರ್ಮಾನಿಸಿದೆ. ಅಷ್ಟರಲ್ಲಾಗಲೇ ನನ್ನ ಪರಿಚಿತರು ಹೆಚ್ಚಿನವರು ಕುಂಭಮೇಳಕ್ಕೆ ಹೋಗಿ ಬಂದಿದ್ದರು, ಕೆಲವರು ಹೋಗುವ ತಯಾರಿಯಲ್ಲಿ ಇದ್ದರು. ಕೆಲವರು ನೀ ಹೋಗಿ ಬಂದು ನಿನ್ನ ಅನುಭವವನ್ನು ಹೇಳಿದ ನಂತರ ಹೋಗಲು ಯೋಚನೆ ಮಾಡುತ್ತೇವೆ ಎಂದು ಹೇಳಿದರು. ಕುಂಭಮೇಳಕ್ಕೆ ಹೋದ ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಫೆಬ್ರವರಿ 17 ರಂದು ಸಂಜೆ 4.30 ರ ವಿಮಾನದಲ್ಲಿ ಬೆಂಗಳೂರಿನಿಂದ ನಾಗಪುರಕ್ಕೆ ಪ್ರಯಾಣಿಸಿ, ಅಲ್ಲಿಂದ ರಾತ್ರಿ 9.30 ಕ್ಕೆ ಸ್ಲೀಪರ್ ಕೋಚಿನ ಬಸ್ಸಿನಲ್ಲಿ ಸುಮಾರು‌ 12 ತಾಸುಗಳ ಪ್ರಯಾಣ.

ಮಹಾಕುಂಭ ಮೇಳದ ಕಥನ

ಫೆಬ್ರವರಿ 18ರ ಬೆಳಿಗ್ಗೆ 9 ಗಂಟೆಗೆ ಪ್ರಯಾಗ್ ರಾಜ್ ತಲುಪಬೇಕಾಗಿದ್ದ ಬಸ್ಸು ,ಸಂಚಾರ ದಟ್ಟಣೆಯ ಕಾರಣದಿಂದ 11 ಗಂಟೆಗೆ ಪ್ರಯಾಗ್ ರಾಜ್ ಇನ್ನೇನು 30 ಕಿ.ಮೀ ದೂರ ಇದೆ ಎನ್ನುವಾಗಲೇ ಗುರುಪುರ ಎಂಬ ಪ್ರದೇಶದಲ್ಲಿ ಪ್ರಯಾಣಿಕರನ್ನು ಇಳಿಸಿಬಿಟ್ಟಿತು.
ಮೈಲುಗಳಗಟ್ಟಲೆ ವಾಹನಗಳ ದಟ್ಟಣೆ ಇದ್ದು ನಡೆದು ಹೋಗಲೂ ಕಷ್ಟ ಸಾಧ್ಯ ಎನ್ನುವಷ್ಟು ಜನಜಂಗುಳಿ ಅಲ್ಲಿತ್ತು. ಏನೂ ಮಾಡಲು ತೋಚದ ನಾನು ನಡೆದೇ ಹೊರಟೆ. ಸುಮಾರು ನಾಲ್ಕು ಕಿಮೀ ನಡೆದಾಗಿತ್ತು, ಅಷ್ಟರಲ್ಲಿ ಒಬ್ಬ ಬೈಕ್ ಸವಾರ ಬಂದು ತ್ರಿವೇಣಿ ಸಂಗಮದ ಬಳಿಗೆ ಕರೆದೊಯ್ಯುವುದಾಗಿ ತಿಳಿಸಿದ, ನಾನೂ ಒಪ್ಪಿ ಕುಳಿತೆ. ಆದರೆ ಆತ ೧೦-೧೨ ಕಿಮೀ ಕರೆದೊಯ್ದು ಇನ್ನು ಮುಂದೆ ನಡೆದೇ ಹೋಗಬೇಕು, ಪೊಲೀಸರು ಅವಕಾಶ ಕೊಡುತ್ತಿಲ್ಲ ಎಂದು ಹೇಳಿ ನನ್ನನ್ನು ಇಳಿಸಿ ಹಣ ಪಡೆದು ವಾಪಸಾದ.

ಎಲ್ಲಾ ಭಾಗದಿಂದಲೂ ಪ್ರಯಾಗರಾಜ್ ಕಡೆ ಹೋಗುವವರ ಸಂಖ್ಯೆ ಜಾಸ್ತಿ ಇದ್ದುದರಿಂದ ಪೋಲಿಸರು ಸಂಚಾರ ಸುಗಮವಾಗಿಸಲು ಹರಸಾಹಸ ಪಡುತ್ತಿದ್ದರು.
ಅಲ್ಲಿ ಕಂಡು ಬಂದ ವಿಶೇಷ ಏನೆಂದರೆ, ಹಲವಾರು ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಸಾವಿರಾರು ಜನರಿಗೆ ಚಹಾ, ಉಪಹಾರ, ನೀರಿನ ವ್ಯವಸ್ಥೆ, ಚಿಕ್ಕ ಮಕ್ಕಳಿಗೆ ಕುಡಿಯಲು ಹಾಲು, ಬಿಸ್ಕೆಟ್, ಮತ್ತು ಊಟದ ವ್ಯವಸ್ಥೆಯನ್ನು ನಿರಂತರವಾಗಿ ಮಾಡುತ್ತಿದ್ದರು.

ಅಲ್ಲಿಂದ ಮುಂದೆ ಯಾವುದೇ ವಾಹನಗಳಿಗೆ ಅವಕಾಶವೇ ಇಲ್ಲದ್ದರಿಂದ ನಡೆದುಕೊಂಡೆ ಸಾಗುವುದು ಅನಿವಾರ್ಯವಾಗಿತ್ತು ಸುಮಾರು 15 ಕಿ ಮೀ ನಡೆದು, ಮಧ್ಯೆ ಮಧ್ಯೆ ಪೊಲೀಸರನ್ನು ದಾರಿ ಕೇಳುತ್ತಾ ಸಾಗುತ್ತಿದ್ದೆ. ತುಂಬಾ ಜನಸಂಖ್ಯೆ ಇದ್ದಿದ್ದರಿಂದ ನೇರಮಾರ್ಗವನ್ನು ಸುತ್ತುಬಳಸಿ ಹೋಗುವ ಹಾಗೆ ಮಾಡಿದ್ದರಿಂದಾಗಿ ಕಾಲ್ನಡಿಗೆಯಲ್ಲೇ ಪ್ರಯಾಣಿಸಿ ಮಧ್ಯಾಹ್ನ 3:45 ರ ಹೊತ್ತಿಗೆ ಸಂಗಮ ಸ್ಥಾನ ತಲುಪಿದೆ. ನಾನು ಸಾಗಿದ ದಾರಿ ಉದ್ದಕ್ಕೂ ಅತ್ಯುತ್ತಮವಾದ ಶೌಚಾಲಯ ವ್ಯವಸ್ಥೆ, ಅಲ್ಲಲ್ಲಿ ನೀರಿನ ಕೊಳಾಯಿಗಳ ವ್ಯವಸ್ಥೆ ಮಾಡಿದ್ದರು. ಯಾರೊಬ್ಬರೂ ತಪ್ಪು ಮಾಹಿತಿ ನೀಡುತ್ತಿರಲಿಲ್ಲ, ಅಲ್ಲಿನ ಪೊಲೀಸರು ನನಗೆ ಮಾರ್ಗದರ್ಶಕರಂತೆ ಕಂಡುಬಂದರು, ಯಾರ ಮುಖದಲ್ಲೂ ಬೇಜಾರು, ತಾತ್ಸಾರ, ಕೋಪದಂತಹ ಭಾವಗಳು ಕಂಡು ಬರಲಿಲ್ಲ.

ಹಲವಾರು ಸೆಕ್ಟರ್ ಗಳು ನಿರ್ಮಾಣವಾಗಿದ್ದು ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆಗಳು ಇದ್ದವು. ಹಲವಾರು ಸಂಘ ಸಂಸ್ಥೆಗಳಿಂದ ಮಠಗಳಿಂದ ಉಚಿತವಾದ ಪ್ರಸಾದ ವಿತರಣೆ ಸಹ ನಡೆಯುತ್ತಿತ್ತು. ಗಂಗಾ ಯುಮನಾ ಸಂಗಮ ಸ್ಥಳವು ,ಬಹಳ ವಿಸ್ತಾರವಾದ ನದಿಯ ದಂಡೆಯಾಗಿದ್ದರಿಂದ ಸ್ವಚ್ಛತೆಯ ದೃಷ್ಟಿಯಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು.
ಪೊಲೀಸರು, ಸೇನಾ ಪಡೆಯವರು ರಕ್ಷಣೆ ಮತ್ತು ಜನಸಂದಣಿಯ ನಿಯಂತ್ರಣದ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಸಂಗಮದಲ್ಲಿ ಸ್ನಾನ ಮಾಡಬೇಕೆಂಬ ಉದ್ದೇಶದಿಂದ ಕಷ್ಟವಾದರೂ ಭಕ್ತಿಯಿಂದ ನಡೆದುಕೊಂಡು ಹೋಗುತ್ತಿರುವುದು ಕಂಡುಬಂತು.

ಕುಂಭಮೇಳದಲ್ಲಿ ಮಾಡುವ ಪವಿತ್ರವಾದ ಸ್ನಾನ, ಭಕ್ತಿ ಮತ್ತು ನಂಬಿಕೆಯ ವಿಚಾರವಾದರೂ, ಇದರಿಂದ ನಾವು ಕಲಿತದ್ದು ಮತ್ತು ಕಲಿಯಬೇಕಾದದ್ದು ಸಾಕಷ್ಟು ಇರುವುದಂತೂ ನಿಜ.

ಮುಂದುವರೆಯುವುದು….

ಸುನೀಲ್ ಹಳೆಯೂರು

Related post