ಕುಟುಂಬ ವ್ಯವಸ್ಥೆಯ ಅಳಿವು ಉಳಿವು

ಕುಟುಂಬ ವ್ಯವಸ್ಥೆಯ ಅಳಿವು ಉಳಿವು

ಮನುಷ್ಯರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿ ವಾಸಿಸುತ್ತಿರುವ ಜನರ ಒಂದು ಗುಂಪು ಎನ್ನಬಹುದು. ಕುಟುಂಬವು ಸಮಾಜ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಒಂದು ಅಂಗವಾಗಿದ್ದು, ಬಹಳ ಸಂದರ್ಭಗಳಲ್ಲಿ ಮಕ್ಕಳು ಜನರ ಜೊತೆಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬವು ಒಂದು ಅಗತ್ಯ ವ್ಯವಸ್ಥೆಯಾಗಿ ನಿಲ್ಲುತ್ತದೆ.

ಭಾರತದ ಇತಿಹಾಸ ಮತ್ತು ಇಲ್ಲಿನ ಸಂಸ್ಕೃತಿಯನ್ನು ವಿಮರ್ಶಿಸಿದಾಗ ಕುಟುಂಬ ವ್ಯವಸ್ಥೆಯನ್ನು ಅವಿಭಕ್ತ ಹಾಗೂ ವಿಭಕ್ತ ಕುಟುಂಬ ಎಂದು ವರ್ಗೀಕರಣ ಮಾಡಬಹುದು. ವಿದೇಶಿ ಸಂಸ್ಕೃತಿಯ ಅನುಕರಣೆಯ ಕಾರಣದಿಂದ (ಲಿವಿಂಗ್ ಟುಗೆದರ್ ವ್ಯವಸ್ಥೆಯ ಕಾರಣದಿಂದ) ಇತ್ತೀಚಿಗೆ ಏಕ ಪೋಷಕ (ಸಿಂಗಲ್ ಪೇರೆಂಟ್) ಕುಟುಂಬ ವ್ಯವಸ್ಥೆಯೂ ನಿರ್ಮಾಣ ಆಗುತ್ತಿದೆ.

ಈ ಎಲ್ಲಾ ಕಾರಣದಿಂದ ಶೀಘ್ರದಲ್ಲೇ ಇಂತಹ ಕುಟುಂಬ ವ್ಯವಸ್ಥೆಯನ್ನು ಪೂರ್ತಿಯಾಗಿ ಕಳೆದುಕೊಂಡರೆ ಅತಿಶಯೋಕ್ತಿ ಆಗಲಾರದು. ಅಷ್ಟೇ ಅಲ್ಲದೆ ಬಹುತೇಕ ಜನರಿಗೆ ಕೂಡು ಕುಟುಂಬ ವ್ಯವಸ್ಥೆಯೂ ಹಿಡಿಸದೇ ಇರುವುದು ಮನುಕುಲದ ದೌರ್ಭಾಗ್ಯ. ಕುಟುಂಬಗಳು ಇದ್ದರೂ ಅವುಗಳು ಕೇವಲ ತೋರಿಕೆಗೆ ಮತ್ತು ಪ್ರತಿಷ್ಠೆಗೆ ಅಷ್ಟೇ ಎನ್ನುವಂತೆ ಇದೆ. ಮುಂದಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆಗಳನ್ನು ಚಲನಚಿತ್ರಗಳಲ್ಲಿ ಮತ್ತು ಫೋಟೋಗಳಲ್ಲಷ್ಟೇ ನೋಡುವ ದಿನಗಳೂ ಬರಬಹುದು.

ಕುಟುಂಬ ವ್ಯವಸ್ಥೆ ಕುಸಿಯಲು ಪ್ರಮುಖ ಕಾರಣಗಳು:

  • ಮನುಷ್ಯನ ಅತಿಯಾದ ಬುದ್ಧಿವಂತಿಕೆ ಮತ್ತು ಹಣದಿಂದ ಎಲ್ಲವನ್ನೂ ಪಡೆಯಬಲ್ಲೆ ಎಂಬ ಹುಸಿ ನಂಬಿಕೆ.
  • ಕುಟುಂಬದ ಸದಸ್ಯರ ನಡುವೆ ನಡೆಯುವ ಸಣ್ಣಪುಟ್ಟ ತಪ್ಪುಗಳನ್ನೂ ಸಹಿಸುವ ಸಹನೆ ಇಲ್ಲದಿರುವುದು.
  • ಕುಟುಂಬ ವ್ಯವಸ್ಥೆಯ ಒಳಗೆ ಎಲ್ಲರೂ (ಹಿರಿಯರು, ಕಿರಿಯರು) ಸಮಾನರು (ಎಲ್ಲರೂ ಸ್ವತಂತ್ರರು) ಎನ್ನುವ ವಿಚಿತ್ರ ಭಾವನೆ ಬೆಳೆಯುತ್ತಿರುವುದು.
  • ದಿನದಲ್ಲಿ ಕನಿಷ್ಟ ಒಮ್ಮೆಯಾದರೂ ಕುಟುಂಬದ ಸರ್ವ ಸದಸ್ಯರು, ಮಕ್ಕಳು ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡದೆ ಇರುವುದು.
  • ಸದಾ ಮನೋರಂಜನೆಯಲ್ಲೇ ಮುಳುಗಿದ್ದು, ಸೆಲೆಬ್ರಿಟಿಗಳ ಜೀವನಶೈಲಿಯ ಬಗ್ಗೆಯೇ ಚರ್ಚಿಸುತ್ತಿರುವ ಸದಸ್ಯರು ಮನೆಯ ಸದಸ್ಯರು ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂದು ತಿಳಿದುಕೊಳ್ಳದೆ ಇರುವ ದುಸ್ಥಿತಿ ಬಂದಿದೆ.
  • ಸಣ್ಣಪುಟ್ಟ ವಿಚಾರಗಳಿಗೂ ಕುಟುಂಬದ ಸದಸ್ಯರ ಜೊತೆಗೆ ಜಗಳ ಮಾಡಿಕೊಂಡು ಆಪ್ತರನ್ನು ದೂರ ಮಾಡಿಕೊಳ್ಳುತ್ತಾ ಇರುವುದು.
  • ಹೊರಗಿನ ಸದಸ್ಯರ ಕೆಟ್ಟ ಮತ್ತು ಆಕರ್ಷಕ ಮಾತುಗಳಿಂದ ಇಡೀ ಕುಟುಂಬವೇ ಒಡೆದುಹೋಗುತ್ತಿದೆ.
  • ಆರ್ಥಿಕ ಸಮಸ್ಯೆಗಳ ಕಾರಣದಿಂದ ಮನೆಯ ಹಿರಿಯ ಸದಸ್ಯರು ದೃಢವಾಗಿ, ಬಲವಾಗಿ ಮತ್ತು ಸರಿಯಾಗಿ ಕುಟುಂಬ ನಿರ್ವಹಣೆ ಮಾಡದೆ ಇರುವುದು.
  • ಮನೆಯಲ್ಲಿ ಗಂಡ ಹೆಂಡತಿ (ತಂದೆ-ತಾಯಿ) ಸಣ್ಣಪುಟ್ಟ ವಿಚಾರಗಳಿಗೂ ಜಗಳ ಮಾಡುವುದರಿಂದ ಮನೆಯ ಸದಸ್ಯರಿಗೆ ಆತಂಕ ಉಂಟುಮಾಡಿದೆ.
  • ಎಲ್ಲ ಕುಟುಂಬಗಳ ಸದಸ್ಯರ ನಡುವೆ ನಿತ್ಯ ನಡೆಯುವ ಜಗಳ ಮತ್ತು ಹೊಡೆದಾಟಗಳನ್ನು ನೋಡಿ ಕುಟುಂಬವೆಂದರೆ ಜಿಗುಪ್ಸೆ ಉಂಟಾಗಿರುವುದು.
  • ಕುಟುಂಬದ ಸದಸ್ಯರ ನಡುವೆ ಅನ್ಯೋನ್ಯತೆ, ಸಹಬಾಳ್ವೆ, ಪ್ರೀತಿ ಪ್ರೇಮಗಳು ಕುಟುಂಬಗಳು ಕಂಡುಬರದೇ ಇರುವುದರಿಂದ ಕೌಟುಂಬಿಕ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲವಾಗಿದೆ.
  • ಈ ಎಲ್ಲಾ ಕಾರಣಗಳಿಂದ ಯುವಜನ ಮದುವೆಗೆ ಮನಸ್ಸು ಮಾಡದೇ ಇದ್ದು, ವಯಸ್ಸು ಮೂವತ್ತೊಂದು ದಾಟಿದರೂ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡುವುದಿಲ್ಲ. ಕಳೆದ 30-40 ವರ್ಷಗಳಿಂದ ಸಂಸಾರವನ್ನು ನಿರ್ವಹಣೆ ಮಾಡಿದ ಕೆಲ ಹಿರಿಯರು ಕುಟುಂಬದ ಜಂಜಾಟಗಳಿಂದ ಬೇಸತ್ತು, ಈ ಕುಟುಂಬ ವ್ಯವಸ್ಥೆಯೇ ಸಾಕಪ್ಪಾ ಎಂದು ನೇರವಾಗಿ ಮಕ್ಕಳಿಗೆ ಹೇಳುತ್ತಿದ್ದಾರೆ.
  • ಆರ್ಥಿಕತೆಯ ಅವಸರ ಮತ್ತು ವ್ಯತ್ಯಾಸಗಳನ್ನು ಪರಸ್ಪರ ಇನ್ನೊಬ್ಬರಿಗೆ ಹೋಲಿಕೆ ಮಾಡಿಕೊಳ್ಳುವುದರಿಂದ ಕುಟುಂಬ ಸೋಲುತ್ತಿದೆ.
  • ಮನುಷ್ಯತ್ವಕ್ಕೆ ಮೌಲ್ಯ ಕಡಿಮೆ ಆಗಿದ್ದು, ಒಬ್ಬರು ಇನ್ನೊಬ್ಬರನ್ನು ಕಂಡರೆ ಬೇಜಾರು ಆಗುತ್ತಿದ್ದಾರೆ.
  • ಕೌಟುಂಬಿಕ ಸಮಸ್ಯೆಗಳನ್ನು ಸರಿಪಡಿಸಲು ಮಧ್ಯಸ್ಥಿಕೆ ವಹಿಸುವ ಮೌಲ್ಯಯುತ ಹಿರಿಯರು ಇಲ್ಲವಾಗಿದ್ದು, ಹಿರಿಯರ ಮಾತಿಗೆ ಮತ್ತು ಅನುಭವಕ್ಕೆ ಬೆಲೆ ಇಲ್ಲದಾಗಿದೆ.ಹೀಗಾಗಿ ಕಿರಿಯರು ಸ್ವೇಚ್ಛೆಯಿಂದ ಬದುಕುತ್ತಿದ್ದಾರೆ.
  • ಕುಟುಂಬದ ನಿರ್ವಹಣೆಯೂ ಒಂದು ಕಲೆಯಾಗಿದ್ದು, ಆ ಕಲೆ ಎಲ್ಲರಲ್ಲೂ ಇಲ್ಲದೇ ಇರುವುದರಿಂದ ಕೂಡ ಕುಟುಂಬ ವ್ಯವಸ್ಥೆ ತಲೆಕೆಳಗಾಗಿದೆ.
  • ಮನುಷ್ಯನ ವರ್ತನೆಗೆ ಒಂದು ಮಿತಿ ಎನ್ನುವುದು ಇಲ್ಲದೇ ಇರುವುದರಿಂದ ಎಲ್ಲರೊಂದಿಗೂ ಒರಟಾಗಿ ಪ್ರವರ್ತಿಸುತ್ತಿದ್ದಾನೆ. ನಾನು, ನನ್ನ ಹೆಂಡತಿ ಅಥವಾ ಗಂಡ ಎನ್ನುವ ಸಿದ್ಧಾಂತವು ಹೋಗಿ, ‘ನಾನೇ ನಾನು’, ‘ನಾನು ನಾನೇ’ ಎನ್ನುವ ಸಿದ್ಧಾಂತ ಈಗ ಇದೆ.
  • ಕುಟುಂಬದ ಮಕ್ಕಳಿಗೆ ಮದುವೆ ಆಗುತ್ತಿದ್ದಂತೆ ಬೇರೆಯೇ ಮನೆ ಮಾಡುವುದು ಇಂದು ಪದ್ಧತಿ ಆಗಿಬಿಟ್ಟಿದೆ. ಮದುವೆಯಾದ ಮಗ ಮತ್ತು ಸೊಸೆಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಳ್ಳಲು ಭಯಪಡುವ ಸನ್ನಿವೇಶ ಇದೆ. ನಂತರ ಜಗಳ ಆಗುವುದಕ್ಕಿಂತ ಈಗಲೇ ದೂರವಾಗುವುದು ಉತ್ತಮ ಎನ್ನುವ ಭಾವನೆ ಇದೆ.
  • ಕುಟುಂಬದ ಮೌಲ್ಯಗಳು ಕಟ್ಟುಪಾಡುಗಳಿಗೆ ಹೆಚ್ಚಿನ ಮೌಲ್ಯಗಳು ಇಲ್ಲವಾಗಿದ್ದು, ಮುಂದಕ್ಕೆ ತಮಗೆ ಇಷ್ಟ ಬಂದಂತೆ ಬದುಕುವ ದಿನಗಳು ಬರಲಿವೆ.
  • ಅಣ್ಣ ತಮ್ಮ, ಅಣ್ಣ ತಂಗಿ, ಅಕ್ಕ ತಮ್ಮ, ಅಕ್ಕ ತಂಗಿ ಮತ್ತು ಗಂಡ-ಹೆಂಡತಿ ಮಧ್ಯೆ ಬಲವಾದ ಸಂಬಂಧಗಳು ಇಲ್ಲದಾಗಿದೆ. ಇನ್ನೂ ಕೆಲವು ದಿನಗಳ ನಂತರ ಈ ಸಂಬಂಧಗಳು ಪೂರ್ತಿ ಇರುವ ಸಾಧ್ಯತೆ ಕಡಿಮೆ.
  • ಡಿಜಿಟಲ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇರುವಂತಹ ಸಂಬಂಧ, ಬಾಂಧವ್ಯಗಳೇ ನೈಜ ಎನ್ನುವ ತಪ್ಪು ಕಲ್ಪನೆಯಲ್ಲಿ ಬದುಕುತ್ತಿರುವ ಕುಟುಂಬದ ಸದಸ್ಯರು, ಕುಟುಂಬದಲ್ಲಿ ಯಾರದ್ದಾದರೂ ಮರಣ ಆದರೆ ಅಲ್ಲಿಗೆ ಹೋಗಿ ಕುಟುಂಬದ ಸದಸ್ಯರ ಜತೆಗೆ ಇರುವುದು ಹಾಗಿರಲಿ, ಒಂದು ಆಕರ್ಷಣೀಯ ಮೆಸೇಜ್ನೂ ಹಾಕುವುದಿಲ್ಲ, ಕೇವಲ RIP ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸುಮ್ಮನೆ ಇರುತ್ತಾರೆ. ಅತ್ತ ಶವ ಸಾಗಿಸಲು ೪ ಜನಾನೂ ಇರದಂತಹ ಪರಿಸ್ಥಿತಿ ಇದೆ.
    ಆಧುನಿಕ ಜೀವನಕ್ಕೆ ಮನುಷ್ಯ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗುತ್ತಾ ಇವೆ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ತಂದೆ ತಾಯಿಯನ್ನು ವೃದ್ಧಾಪ್ಯದಲ್ಲಿ ಆಶ್ರಮಕ್ಕೆ ದೂಡುವ ಮಕ್ಕಳಿಗೆ ಕುಟುಂಬದ ಮಹತ್ವವನ್ನು ತಿಳಿಸಿಕೊಡಬೇಕು. ಮಕ್ಕಳಿಗೆ ಮಾನವೀಯತೆಯ ಪಾಠ ಹೇಳಿಕೊಟ್ಟು, ಸಮಾಜ ವ್ಯವಸ್ಥೆಯ ಮೇಲೆ ನಂಬಿಕೆ, ನೈತಿಕತೆ ಎಂಬ ಹಸಿರನ್ನು ಮಕ್ಕಳ ಹೃದಯದಲ್ಲಿ ಬಿತ್ತಬೇಕು. ಕುಟುಂಬಗಳಲ್ಲಿ ಛಿದ್ರ ಆಗುತ್ತಿರುವ ಕೌಟುಂಬಿಕ ಮೌಲ್ಯ, ಕಟ್ಟುಪಾಡುಗಳನ್ನು ಮತ್ತೆ ಒಟ್ಟುಗೂಡಿಸುವ ಜವಾಬ್ದಾರಿ ಕುಟುಂಬದ ಪ್ರತಿಯೊಬ್ಬ ಹಿರಿಯರ ಮೇಲಿದೆ. ಇಲ್ಲದೇ ಇದ್ದರೆ ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿ ಭವ್ಯ ಭಾರತದ ಸಂಸ್ಕೃತಿಯನ್ನು ಅಳಿಸಿ ಹಾಕಿದಂತೆ ಆಗುತ್ತದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post