ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೩೦ (ಕೊನೆಯ ಭಾಗ)

ಡಾ. ಅರಕಲಗೂಡು ನೀಲಕಂಠಮೂರ್ತಿ ಯವರು “ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ” ಎಂಬ ಸರಣಿಯ ಮೂಲಕ ಆಫ್ರಿಕಾ ಖಂಡದ ದಲ್ಲಿ ತಮ್ಮ ವೃತ್ತಿಯ ಅನುಭವಗಳನ್ನು ಹಾಗು ಅಲ್ಲಿನ ದೇಶದ ರೀತಿ, ರಿವಾಜು, ಅಲ್ಲಿನ ಉಸಿರುಗಟ್ಟಿಸುವ ಆಡಳಿತ, ಕಂಡಂತಹ ಸಹೃದಯಿಗಳು, ಕಪಟಿಗಳು, ಅವೈಜ್ಞಾನಿಕ ಆಚರಣೆಗಳು, ಅಲ್ಲಿನ ಜನರ ಮೌಢ್ಯತೆ ಹಾಗು ವಿವಿಧ ರೀತಿಯ ಜನರ ಬಗ್ಗೆ ಕಳೆದ ಮೂವತ್ತು ವಾರಗಳಿಂದ ಸಾಹಿತ್ಯಮೈತ್ರಿ ಮೂಲಕ ಓದುಗರೊಡನೆ ಹಂಚಿಕೊಂಡಿದ್ದಾರೆ. ಈ ಸರಣಿಯನ್ನು ಪುಸ್ತಕದ ಮೂಲಕ ಹೊರತರುವ ಯೋಜನೆಯು ಅವರಿಗಿದೆ. ನೀಲಕಂಠಮೂರ್ತಿ ಯಂತಹ ಸಜ್ಜನರನ್ನು ಸಾಹಿತ್ಯಮೈತ್ರಿಗೆ ಪರಿಚಯಿಸಿದ “ನಿಕಿತಾ ಅಡವೀಶಯ್ಯ” ರವರಿಗೆ ಹಾಗು ವಾರ ವಾರ ತಪ್ಪದೆ ಅಂಕಣಗಳನ್ನು ಕಳುಹಿಸಿದ “ಡಾ.ನೀಲಕಂಠಮೂರ್ತಿ” ಯವರಿಗೆ ಸಾಹಿತ್ಯಮೈತ್ರಿ ಎಂದಿಗೂ ಚಿರಋಣಿ…

–ದಿ ಲಾಸ್ಟ್ ಫ್ಲೈಟ್–

ಕಳೆದ ವಾರದಲ್ಲಿನ ಮೊಗದಿಶು ಟಿಟ್ ಬಿಟ್ಸ್ ನಲ್ಲಿ ಹೈಲೈಟಾದಂಥ ರಾಮಣ್ಣನವರ ಇನ್ನೊಂದು ಬಹಳ ಮುಖ್ಯವಾದ ಅಂಶದ ಅಥವ ಅನುಕರಣೀಯ ಗುಣದ ಬಗ್ಗೆ ಹೇಳದಿದ್ದರೆ ಅವರ ವ್ಯಕ್ತಿತ್ವದ ಸಂಪೂರ್ಣ ರಚನೆ ಅಸಾಧ್ಯ. ಒಂದು ಸಂಜೆ, ಮನೆಗೆ ಬಂದು ಕಾಫಿ ಕುಡಿದು ಕೆಲ ಸಮಯವಾದ ನಂತರ, “ರಜೆಗೆ ಹೋಗುವ ದಿನ ಯಾವುದು ರಾಮಣ್ಣೋರೆ?” ಎಂದು ಕೇಳಿದೆ. ಹಿಂದೊಮ್ಮೆ ಬಂದಿದ್ದಾಗ ಅವರೇ ರಜೆಗೆ ಹೋಗಿಬರುವ ಸಮಯ ಇನ್ನೇನು ಬರುವುದು ಎಂದು ತಿಳಿಸಿದ್ದರು. ಅವರು, ತಮ್ಮ ಎಂದಿನ ಸಾವಕಾಶ ಶೈಲಿಯಲ್ಲಿ, ದೊಡ್ಡದೊಂದು ಮುಗುಳ್ನಕ್ಕು, “ಸದ್ಯ ಅದನ್ನ ಈಗಲೇ ಹೇಳಲಾರೆ” ಎಂದು ಮತ್ತೆ ತಡೆದು, ನಗುತ್ತಾ “ನನ್ನ ಪರ್ಸನಲ್ ಡಾಕ್ಯುಮೆಂಟ್ಸ್ ಇದ್ದ ಹ್ಯಾಂಡ್ ಬ್ಯಾಗೇ ಕಳೆದು ಹೋಗಿದೆ. ಅದರಲ್ಲಿ, ಪಾಸ್ಪೋರ್ಟ್, ಏರ್ ಟಿಕೆಟ್, ಸ್ವಲ್ಪ ಡಾಲರ್ ನೋಟುಗಳು, ಸೋಮಾಲಿ ದುಡ್ಡು ಎಲ್ಲ ಹೋಗಿವೆ” ಎಂದು ಈ ಬಾರಿ ಮತ್ತೆ ಮುಗುಳ್ನಕ್ಕು, “ಈಶ್ವರ ಕೆಲವು ಸಲ ನಮ್ಮನ್ನ ಟೆಸ್ಟ್ ಮಾಡೋಕ್ಕೆ ಕಳ್ಳನ ರೂಪದಲ್ಲೂ ಬರ್ತಾನೆ…ಕಂಪ್ಲೈಂಟ್ ಕೊಟ್ಟು, ಎಂಬೆಸಿಯಲ್ಲೂ ತಿಳ್ಸಿದೀನಿ, ನೋಡೋಣ” ಎಂದು ನಕ್ಕು “ಬರ್ತೀನಿ, ಯಾರನ್ನೋ ನೋಡ್ಬೇಕು”, ಎಂದು ನಗುತ್ತಲೇ ಕಾಲ್ಕಿತ್ತರು. “ಯಾವ್ದಕ್ಕೂ ಏನಾಯ್ತು ಅಂತ ತಿಳ್ಸಿ ರಾಮಣ್ಣೋರೆ” ಎಂದೆ. ಹಣ ಎಷ್ಟೆಂದು ಅವರು ಕರಾರುವಾಕ್ಕಾಗಿ ಹೇಳದಿದ್ದರೂ, ಅದು ಕನಿಷ್ಟ ಐನೂರು ಡಾಲರ್ ಆದರೂ ಖಂಡಿತ ಹೋಗಿರುವ ಗ್ಯಾರಂಟಿ ನನಗಿತ್ತು; ಅದು ಅಂದಿನ ಡಾಲರ್ ಮೌಲ್ಯದ ಪ್ರಕಾರ!

ಬೇರೆ ಯಾರೇ ರಾಮಣ್ಣನವರ ಸ್ಥಾನದಲ್ಲಿ ಇದ್ದರು, ಹಾಗೆ ಇನ್ನೇನು ಊರಿಗೆ ಹೋಗಲು ಹೊಸ್ತಿಲಲ್ಲಿ ನಿಂತಿದ್ದಂತಹ ಸಮಯದಲ್ಲಿ, ಮತ್ತು ಎಲ್ಲ ಕಳೆದುಕೊಂಡೂ ಸಹ, ಇನ್ನೊಬ್ಬರ ಮನೆಗೆ ನೆಮ್ಮದಿಯಿಂದ ಹೋಗಿ ನಗುನಗುತ್ತಲೇ ಮಾತನಾಡಿ, ಕಾಫಿಯನ್ನೂ ಆರಾಮ ಕೂತು ಕುಡಿದು, ಈಶ್ವರನ ಮೇಲೆ ಎಲ್ಲ ಹೊರಿಸಿ, ತೋರಿಕೆಯಿಲ್ಲದ ಸ್ಥಿತಪ್ರಜ್ಞತೆ ಕಾಪಾಡಿಕೊಂಡಿರುವುದು ಎಷ್ಟು ಸಾಧ್ಯ ಎಂದು ನಾನು ಈಗಲೂ ಯೋಚಿಸುತ್ತೇನೆ. ಮತ್ತು ಅಂಥ ಘಳಿಗೆಗಳಲ್ಲಿ ಹೀಗೂ ಸಾಧ್ಯಾನಾ ಎನ್ನಿಸಿ ಅಚ್ಚರಿಯಾಗುತ್ತದೆ.

ಮೊಗದಿಶು ಬದುಕಿನ ಚಿತ್ರಣದಲ್ಲಿ ಹೇಳುವುದನ್ನು ಇಷ್ಟಕ್ಕೇ ನಿಲ್ಲಿಸಿಬಿಡಲು ಸಾಧ್ಯವೇ ಎಂದು ನನ್ನನ್ನು ನಾನೇ ಕೇಳಿಕೊಂಡರೆ, ಉತ್ತರ ಖಂಡಿತ ಇಲ್ಲ. ಆದರೆ ಅದನ್ನೇ ಕೊರೆದು, ಕೆತ್ತಿ ಶಿಲ್ಪವನ್ನೇ ವಿರೂಪಗೊಳಿಸುವ ಇಷ್ಟವೂ ಇಲ್ಲ. ಪ್ರಮುಖ ಅನಿಸಿದ ಎಲ್ಲ ಸ್ತರಗಳ ವೈವಿಧ್ಯಮಯ ಪಾತ್ರ ಪರಿಚಯಗಳನ್ನು, ಸನ್ನಿವೇಶಗಳನ್ನು, ಅಲ್ಪಸ್ವಲ್ಪ ಇತಿಹಾಸವನ್ನು, ಸಾಮಾಜಿಕ ಸ್ಥಿತಿಗತಿಗಳನ್ನು, ರಾಜಕೀಯ ಮತ್ತು ಅದರ ಪರಿಣಾಮ ಯುದ್ಧ ಆಗಿದ್ದು ಮುಂತಾಗಿ, ಆರಂಭದಿಂದಲೂ ವಿವರಿಸುತ್ತಾ ಬಂದಿದ್ದೇನೆ. ಆದ್ದರಿಂದ ಇನ್ನೂ ಮುಂದುವರೆಸಿ ಬೋರ್ ಮಾಡುವುದಿಲ್ಲ.‌

ನಾನು ಸ್ವಲ್ಪ ಕಾಲ ಅರೆಸೈನಿಕ ಪಡೆಯ ಆರೋಗ್ಯವನ್ನು ಸುಧಾರಿಸುವ ವೈದ್ಯನೂ ಆಗಿದ್ದ ಕಥೆ ತಿಳಿದೇ ಇದೆ. ಅಲ್ಲಿ ಬರದಿದ್ದ ಸಂಬಳಕ್ಕಾಗಿ ಅಬ್ದುಲ್ ಖಾದಿರ್ ಔತಣ‌ ಏರ್ಪಡಿಸಿದ್ದು, ಆದರೂ ನನ್ನ ಹಣ ನನಗೆ ದೊರಕದೇ ಹೋದದ್ದೂ ಹೊಸದಲ್ಲ. ಹಾಗಾಗಿ ಮತ್ತೆ ನಾನು ಮೊದಲಿದ್ದ ಸಂಸ್ಥೆಗೆ ವಾಪಸ್ಸು ಬಂದು ಕೆಲಸ ನಿರ್ವಹಿಸುತ್ತಿದ್ದೆ.

ಈ ನಡುವೆ ಸೈಯ್ಯದ್ ಬರ್ರೆ ದುರಾಡಳಿತದ ಕಾರಣ ಸೋಮಾಲಿ ಶಿಲ್ಲಿಂಗ್ ತನ್ನ ಮೌಲ್ಯವನ್ನು ಮೌನವಾಗಿ ಕಳೆದುಕೊಳ್ಳುತ್ತಲೇ ಇತ್ತು. ಆದರೆ ಹಿಂದಿನ ಮುಖ್ಯಸ್ಥನ ರೀತಿಯೇ, ಹೊಸ ಡೈರೆಕ್ಟರ್ ಜನರಲ್ ಸಹ ಕುಸಿತಕ್ಕೆ ತಕ್ಕಂತೆ, ಸಂಬಳವನ್ನು ಡಾಲರ್ ಸಮ‌ಕ್ಕೆ ಶಿಲ್ಲಿಂಗಿನ ಪ್ರಮಾಣ‌ ಏರಿಸಲು ಸುತರಾಂ ಒಪ್ಪಲಿಲ್ಲ. ಇದರಿಂದ ಭಾರತಕ್ಕೆ ಕಳಿಸುತ್ತಿದ್ದ ಡಾಲರ್ ಪ್ರಮಾಣ ಸಹ ಮೆಟ್ಟಿಲಿಳಿದಿಳಿದು, ಇನ್ನು ಆ ದೇಶದಲ್ಲಿ ಇರುವುದು ಕಷ್ಟಸಾಧ್ಯ ಅನ್ನುವ ಸ್ಥಿತಿಯನ್ನು ಬೇರೆಲ್ಲರಂತೆ ನಾನೂ ಸಹ ತಲುಪಿದೆ.

ಸೋಮಾಲಿ ಕರೆನ್ಸಿ ಮುಕ್ತ ಮಾರುಕಟ್ಟೆಗಳು

ನಾನು ಸೋಮಾಲಿಯಾ ದೇಶವನ್ನು ಪ್ರವೇಶಿಸಿದಾಗ, ಒಂದು ಡಾಲರಿಗೆ ಸುಮಾರು‌ ಏಳು ಶಿಲ್ಲಿಂಗ್ ಇದ್ದ ಬೆಲೆ, ಈ ಲೇಖನ ಬರೆಯುವ ಹೊತ್ತಿನಲ್ಲಿ ಐನೂರೆಂಭತ್ತು ಶಿಲ್ಲಿಂಗಾಗಿದೆ! ಉತ್ತರದ ಸೋಮಾಲಿ ಲ್ಯಾಂಡಿನಲ್ಲಿ ಅದು ಸಾವಿರಗಟ್ಟಲೆ; ಕೆಲ ಡಾಲರಿಗೆ, ಮೂಟೆಯಲ್ಲೇ ಸಿಗುವ ಸೋಮಾಲಿ ಶಿಲ್ಲಿಂಗು! ರಸ್ತೆ ಬದಿಗಳಲ್ಲಿ ಮೂಟೆಗಳಲ್ಲಿ ತುಂಬಿ ಮುಕ್ತ ಮಾರುಕಟ್ಟೆಯಲ್ಲೇ ವಿನಿಮಯ ಮಾಡಿಕೊಡುವ ದೃಶ್ಯ ಸಾಮಾನ್ಯ. ಈ ಹೊಸ ಲೆಕ್ಕಾಚಾರದಂತೆ, 1980 ರ ದಶಕದಲ್ಲಿ ಎಷ್ಟಿದ್ದಿರಬಹುದು ಎಂದು ಊಹಿಸಿದರೆ, ಸೋಮಾಲಿಯಾದ ಸರ್ಕಾರಿ ಕೆಲಸಕ್ಕಾಗಿ ಬಂದಿದ್ದ ನನ್ನಂಥ ವಿದೇಶೀಯರ ಸ್ಥಿತಿ ದುಸ್ತರವೇ ಆಗಿತ್ತು. ಇಂಥ ಪರಿಸ್ಥಿತಿಯ ತಲೆಯ ಮೇಲೆ ಮುಳ್ಳಿನ ಕಿರೀಟ ಬೇರೆ ಇಟ್ಟಂತೆ, ಆಂತರಿಕ ದಂಗೆಯ ಹೊಗೆ ತುಂಬಿದ ಗಾಳಿ ದೇಶದೆಲ್ಲೆಡೆ ಬೀಸುತ್ತಿರುವ ಸುದ್ದಿ ದಿನದಿಂದ ದಿನಕ್ಕೆ ಗಾಢವಾಗುತ್ತಿತ್ತು! ಆದ್ದರಿಂದ, ಸ್ವದೇಶಕ್ಕೆ ಮರಳುವುದಾದರೆ, ಇದಕ್ಕಿಂತ ಉತ್ತಮ ಸಮಯ ಬೇರೆ ದೊರಕಲಾರದು ಎಂಬ ತೀರ್ಮಾನ ಮಾಡಿದ್ದಂತೂ ಆಯಿತು.

ಜೈನ್, ಲೇಖಕ, ಜಾಮಾ, ಡೇವಿಡ್ ರಾಜ್, ಜಾಮಾ, ಲೇಖಕರು, ಶಾ, ಜಾಮಾ ಮಗ, ಡೇವಿಡ್ ರಾಜ್, ಮುದ್ದಪ್ಪ ಆಂಟಿ, ಜಾಮಾ ಮಗಳು

ಈ ನಡುವೆ ಮಕ್ಕಳ ಶಾಲೆಯ ಪ್ರವೇಶದ ಪ್ರಯತ್ನಕ್ಕಾಗಿ, ಕಮಲ ಮತ್ತು ಮಕ್ಕಳನ್ನು ನನಗಿಂತ ಮುಂಚಿತವಾಗಿಯೇ ವಿಮಾನ ಹತ್ತಿಸಿ, ಅಂತಿಮವಾಗಿ ಬ್ಯಾಂಕಿನ ವ್ಯವಹಾರ ಮುಂತಾದ ಉಳಿದ ಫಾರ್ಮ್ಯಾಲಿಟಿ ಗಳನ್ನೆಲ್ಲ ಪೂರೈಸುವ ಸಲುವಾಗಿ, ನಾನು ಕೆಲ ಕಾಲ ಅಲ್ಲೇ ಉಳಿಯಬೇಕಾಯಿತು. ಈ ಜಂಜಾಟಗಳ ನಡುವೆ, ಬ್ರಿಜ್ ಆಟದ ಯೋಚನೆ ಸಹ ನನ್ನ ತಲೆ ಹೊಕ್ಕಿರಲಿಲ್ಲ. ಹಾಗಾಗಿ, ಜನರಲ್ ಜಾಮಾ ಮತ್ತು ಇನ್ನಿತರರನ್ನು ಸಂಧಿಸಿ ತಿಂಗಳುಗಳ ಮೇಲೆ ಆಗಿತ್ತು. ಒಮ್ಮೆ ಶಾ ಅವರು ನನ್ನನ್ನು ಕಾಣಲು ಬಂದಾಗ ನಾನು ಫೈನಲ್ಲಾಗಿ ದೇಶ ಬಿಡುವ ಸುದ್ದಿ ತಿಳಿಸಿದ್ದೇ ತಡ, ಅದು ಬಿತ್ತರವಾಯಿತು. ಹಾಗಾಗಿ ಜನರಲ್ ಜಾಮ ಅವರು ಒಂದು ಮಧ್ಯಾಹ್ನ ಊಟಕ್ಕೆ ಆಹ್ವಾನಿಸಿದರು. ಮುದ್ದಪ್ಪ ಆಂಟಿಯವರನ್ನೂ ಕರೆದಿದ್ದರು. ಅಲ್ಲಿ ಶಾ, ಜೈನ್, ಡೇವಿಡ್ ರಾಜ್ ದಂಪತಿ ಎಲ್ಲರೂ ಇದ್ದರು. ಊಟದ ನಂತರ ಎಲ್ಲರಿಗೂ ಅಂತಿಮ ವಿದಾಯ ಹೇಳಿ, ಮಾರನೇ ದಿನ ದುಬೈ, ಬಾಂಬೆ ಮೂಲಕ, ದಶಕಕ್ಕೂ ಮಿಕ್ಕಿದ ನನ್ನ ಸೋಮಾಲಿಯಾದ ನಂಟಿಗೆ ‘ಫಿನಾಲೆ’ ಹೇಳಿ, ಸೋಮಾಲಿ ಏರ್ ಲೈನ್ಸ್ ನಲ್ಲಿ ನನ್ನ ‘ಫೈನಲ್ (ಲಾಸ್ಟ್) ಫ್ಲೈಟ್’ ಪ್ರಯಾಣ ಹೊರಟೆ!

ಮನುಷ್ಯನ ಆಶಾವಾದಿತನಕ್ಕೆ ಮತ್ತು ಆಸೆಗೆ ಬಹುಶಃ, ಕ್ಷಿತಿಜ ಸಹ ಅಂತ್ಯವಲ್ಲ ಎನಿಸಿದರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ! ಆಗ ಆಂತರಿಕ ದಂಗೆಯ ಗಾಢ ಸುದ್ದಿಯಿಂದ ಭಾರವಾಗಿ ಬೀಸುತ್ತಿದ್ದ ಗಾಳಿಯನ್ನೂ ಲೆಕ್ಕಿಸದೆ, ಅನೇಕ ಭಾರತೀಯರು ಮೊಗದಿಶುವಿನಲ್ಲೆ ಉಳಿದುಕೊಂಡಿದ್ದರು. ಬಹುಶಃ ಸೈಯದ್ ಬರ್ರೆಯ ‘ಅಪ್ರತಿಮ’ ಶಕ್ತಿ ಮತ್ತು ಚಾಣಾಕ್ಷತನ ನಂಬಿ! ಅವರಲ್ಲಿ ಅನೇಕರು ಅಲ್ಲೇ ಹುಟ್ಟಿ ಬೆಳೆದಿದ್ದ ವ್ಯಾಪಾರಸ್ತರು, ಅಕ್ಕಸಾಲಿಗರು, ಸೋಮಾಲಿಯಾ ಪಾಸ್ಪೋರ್ಟ್ ಹೊಂದಿದ್ದು, ತಾಯ್ನಾಡಿನ ಸಂಬಧವನ್ನೇ ಕಡಿದುಕೊಂಡಿದ್ದವರು ಮುಂತಾಗಿ. ಅವರಿಗೆ, ಆ ದೇಶದ ಯಾವ ಸಂಕಟದ ಪರಿಸ್ಥಿತಿಯಲ್ಲೂ ಅದೇ ಅವರ ನಿರಂತರ ನೆಲೆ. ಬದುಕು ಸಾವು ಎಲ್ಲ ಆ ನೆಲದಲ್ಲೇ. ಆದರೆ, ಅಂತಹ ಭಯ ಹೆರುವಂತಹ ಸನ್ನಿವೇಶದಲ್ಲೂ, ನನ್ನಂತೆ ಅಲ್ಲಿಂದ ಕಾಲ್ಕಿತ್ತವರು ಹೆಚ್ಚಿರಲಿಲ್ಲ. ಸ್ಥಳೀಯರ ಹಾಗೆ ನಮ್ಮ ಜನ ಸಹ ಅಲ್ಲಿಂದ ಕದಲಿರಲಿಲ್ಲ. ಹಾಗೆಯೇ, ಅವರವರ ವಿಭಿನ್ನ ಕಾರಣಗಳಿಂದ, ಬೇರೆ ಅನೇಕ ದೇಶವಾಸಿಗಳೂ ಮೊಗದಿಶು ಬಿಟ್ಟಿರಲಿಲ್ಲ.

ಗಾಳಿಯಲ್ಲಿ ಗುಮಾನಿಯಾಗಿ ಭಾರ ಹೊತ್ತಂತೆ ಬೀಸುತ್ತಿದ್ದ ದಂಗೆಯ ಸುದ್ದಿ, ದಿಢೀರನೆ ನೆಲಕ್ಕೆ ಅಪ್ಪಳಿಸಿದ ಹಾಗೆ, 1992 ರಲ್ಲಿ ಬಂಡಾಯ ಆರಂಭವಾಯಿತು. ಸೋಮಾಲಿಯಾ ಸರಕಾರೀ ಸೈನ್ಯದ ಜೊತೆ, ಆಫ್ರಿಕಾ ಒಕ್ಕೂಟದ ಶಾಂತಿಪಾಲನಾ ಪಡೆ ಕೂಡ ಸೇರಿಕೊಂಡು ದಂಗೆಯನ್ನು ಹೊಸಕಿಹಾಕಲು ಪ್ರಯತ್ನ ಪಡುತ್ತಿದ್ದವು. ದಂಗೆಯಲ್ಲಿ, ಸೈಯ್ಯದ್ ಬರ್ರೆಯ ಸರ್ಕಾರ ಕಿತ್ತೊಗೆಯುವ ಉದ್ದೇಶದಿಂದ, ಬಂಡಾಯದ ಬೇರೆಬೇರೆ ಗುಂಪುಗಳು ಕಾದಾಡತೊಡಗಿದ್ದವು. ಅಷ್ಟಲ್ಲದೆ, ಅಲ್ ಶಬಾಬ್ ಮತ್ತು ಇತರ ಭಯೋತ್ಪಾದಕ ಗುಂಪುಗಳೂ ಕಾದಾಡತೊಡಗಿದ್ದವು. ಈ ದೌರ್ಜನ್ಯ ಸಾವಿರಾರು ಜನರನ್ನು ದಕ್ಷಿಣ ಸೋಮಾಲಿಯಾ ಭಾಗದಿಂದ ಸ್ಥಳಾಂತರ ಮಾಡಿತು.

ವಿಧಿಯಿಲ್ಲದೆ ವಿದೇಶೀಯರ ಆತುರಾತುರ ಸ್ಥಳಾಂತರ ಕೂಡ ಆರಂಭ ಆಗಿ, ಭಾರತೀಯ ರಾಯಭಾರಿ ಕಛೇರಿಯ ಸಹಕಾರ ಎಂದಿನಂತೆ ಇಲ್ಲದೆ, ಇಟಾಲಿಯನ್ ಮತ್ತು ಅಮೇರಿಕಾ ರಾಯಭಾರಿ ಕಛೇರಿಯ ಸಹಾಯದಿಂದ ಕೆನ್ಯಾ ರಾಜಧಾನಿ ನೈರೋಬಿಯತ್ತ ಧಾವಿಸಿದರು. ಹಡಗಿನ ಮೂಲಕ ಕೆನ್ಯಾದ ಬಂದರು ನಗರ ಮೊಂಬಾಸ ಕಡೆ ಸಹ ಅನೇಕರು ಹೋಗುವಂತಾಯಿತು. ಈ ಕಾರ್ಯಕ್ಕೆ, ಗುಜರಾತಿನವರಾದ ಬಿಕ್ಕು ದುಸ್ಸಾರ ಎಂಬವವರು ಹೊರಡುವವರೆಲ್ಲರಿಗೂ ಸಹಾಯ ಹಸ್ತ ನೀಡುತ್ತಾ ಕೊನೆ ಘಳಿಗೆಯವರೆಗೂ ಅಲ್ಲೇ ಇದ್ದು, ಎಲ್ಲರ ನಿರ್ಗಮನ ಖಾತ್ರಿ ಮಾಡಿಕೊಂಡು, ಅಂತಿಮವಾಗಿ ಅವರೂ ಆ ದೇಶ ಬಿಟ್ಟ ಕಥೆ ಅನುಕರಣೀಯ. ಬಿಕ್ಕು ಅವರು ಅಮೇರಿಕಕ್ಕೆ ತೆರಳಿದ್ದರು. ಅವರು ನನಗೂ ಆತ್ಮೀಯರಾಗಿದ್ದರು; ಇತ್ತೀಚೆಗೆ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ನನಗೆ ಆಘಾತವಾಯಿತು.

ತದೇಕ ಗುಂಡುಗಳ ಸುರಿಮಳೆಯ ಮಧ್ಯೆ ತೂರಿ ಹರಸಾಹಸ ಪಟ್ಟು ವಿಮಾನ ನಿಲ್ದಾಣ ಹಾಗೂ ಮೊಗದಿಶು ಬಂದರು ಸೇರುವುದು ಹುಡುಗಾಟದ ಮಾತಾಗಿರಲಿಲ್ಲ. ಕೆಲಸಕ್ಕಾಗಿ ಅಲ್ಲಿಯೇ ಉಳಿದಿದ್ದ ಮುದ್ದಪ್ಪ ಆಂಟಿಯವರೂ ಹಾಗೆ ಬರಬೇಕಾಯಿತು. ವಾಹನಗಳ ಹೊರಗೆ ಕಾಣುವ ಹಾಗೆ, ಬಿಳಿ ಬಟ್ಟೆಯನ್ನು ಹಾರಿಬಿಟ್ಟು (ಶಾಂತಿ ಸೂಚಕವಾಗಿ) ನಿಲ್ದಾಣಗಳತ್ತ ತೆರಳುವುದು ಸಾಮಾನ್ಯ ದೃಶ್ಯವಾಗಿತ್ತಂತೆ! ಆದರೂ, ವಾಹನ ಚಾಲಕರು ಧೈರ್ಯ ಮಾಡಿ ಬಿಟ್ಟುಕೊಡುವುದೂ ಸುಲಭ ಆಗಿರಲಿಲ್ಲ. ಯಾವ ಘಳಿಗೆಯಲ್ಲಿ ಗುಂಡುಗಳ ಸದ್ದು ಕಮ್ಮಿ ಆಗುವುದೋ ಅದಕ್ಕಾಗಿ ತಾಳ್ಮೆಯಿಂದ ಕಾಯ್ದು, ಧೈರ್ಯದಿಂದ ಹೊರಡಬೇಕು! ನಾನು ಅರಿತ ಪ್ರಕಾರ ಯಾರ ಸಾವುನೋವೂ ಆಗದೆ, ಎಲ್ಲರೂ ಕ್ಷೇಮವಾಗಿ ಬಂಡಾಯನಿರತ ದೇಶ ತೊರೆದರು ಎಂದು – ಅದು ಕನಿಷ್ಟ ಖುಷಿ ಪಡುವ ವಿಷಯ. ಕೊನೆಗೂ ದಂಗೆನಿರತರೆಲ್ಲರ ಉದ್ದೇಶ ಈಡೇರಿ, ಸೈಯದ್ ಬರ್ರೆಯ ಸರ್ಕಾರ ಉರುಳಿದರೂ, ದೇಶದಲ್ಲಿ ಈಗಲೂ ಶಾಂತಿ ಮಾತ್ರ ನೆಲೆಸಿಲ್ಲ.

ಇದೂ ಸೇರಿ ಮೂವತ್ತು ಕಂತುಗಳಲ್ಲಿ ನನ್ನ ಸೋಮಾಲಿಯಾದ ಬದುಕಿನ ಕಥೆ ಪ್ರಸ್ತುತಪಡಿಸಿದ್ದೇನೆ. ಎಷ್ಟು ಮಂದಿ ಅದನ್ನು ಸಂಪೂರ್ಣ ಓದಿದರೋ ನನಗೆ ತಿಳಿಯದು. ಇಂಗ್ಲೀಷಿನಲ್ಲಿ “ಆಲ್ ಗುಡ್ ಥಿಂಗ್ಸ್ ಮಸ್ಟ್ ಕಮ್ ಟು ಅನ್ ಎಂಡ್” ಎಂಬ ಅರ್ಥ ಬರುವ ಮಾತಿದೆ. ಆದ್ದರಿಂದ ನನ್ನ ಈ ಬರವಣಿಗೆ ಸಹ ಇಲ್ಲಿಗೆ ಮುಕ್ತಾಯ ಆಗುತ್ತಿದೆ. ತನ್ನ ಬರೆಹವನ್ನು ತಾನೇ ‘ಗುಡ್ ಥಿಂಗ್’ ಅಂದುಕೊಳ್ಳುತ್ತಿದ್ದಾನೆ ಅನ್ನುವ ತೀರ್ಮಾನ ಖಂಡಿತ ದಯಮಾಡಿ ಬೇಡ. ಅದು ಒಳ್ಳೆಯದೋ ಕೆಟ್ಟದೋ ಅನ್ನುವ ತೀರ್ಮಾನ ಸಹೃದಯ ಓದುಗರ ಹಕ್ಕು – ಎಂದೆಂದೂ!

ತನ್ನ ಬರಹ ಪುಸ್ತಕ ರೂಪ ತಾಳಿದರೆ ಯಾರಿಗೆ ಖುಷಿ ಆಗದು ಹೇಳಿ. ಖಂಡಿತ ಅಂಥ ಹಂಬಲ ನನಗೂ ಇದೆ. ಆದರೆ ಅದನ್ನು ಸಾಕಾರಗೊಳಿಸಲು ಆಗುವುದೋ ಇಲ್ಲವೋ ಕಾಲ ನಿರ್ಧರಿಸಬೇಕು. ಆ ಕಾಲ ಕೂಡಿಬರಲಿ ಎಂದಷ್ಟೇ ಆಶಿಸುವುದು ನನಗಿರುವ ಹಕ್ಕು. ಪುಸ್ತಕ ರೂಪ ತಾಳಿದರೆ, ಆರಂಭದ ಲೇಖಕನ ಮಾತಿನಲ್ಲಿ, ಸಹಕರಿಸಿದ ಎಲ್ಲ ಒಡನಾಡಿಗಳನ್ನು ನೆನೆದು ಧನ್ಯವಾದ ತಿಳಿಸಲು ಸಾಧ್ಯ. ಅಕಸ್ಮಾತ್ ಹಾಗಾಗದಿದ್ದರೆ? ಅದಕ್ಕಾಗಿ ಈ ಲೇಖನಗಳನ್ನು ಬರೆದು ಪ್ರಕಟಿಸುವವರೆಗೆ ನನಗೆ ಅನೇಕ ರೀತಿ ನೆರವಾದ ಎಲ್ಲರಿಗೂ ನನ್ನ ಧನ್ಯವಾದಗಳನ್ನು ತಿಳಿಸಲೇಬೇಕು.

ಪ್ರಥಮವಾಗಿ, “ಸಾಹಿತ್ಯ ಮೈತ್ರಿ” ಪತ್ರಿಕೆ ಇರುವಿಕೆಯ ಬಗ್ಗೆ ನನಗೆ ತಿಳಿಸಿ, ಸಂಪಾದಕರಾದ ಕು.ಶಿ. ಚಂದ್ರಶೇಖರ್ ಅವರನ್ನು ಪರಿಚಯಿಸಿದ ಶ್ರೀಮತಿ ನಿಖಿತ ಅವರಿಗೆ ಮತ್ತು ತಮ್ಮ ಸ್ವಂತ ಕೆಲಸದಷ್ಟೇ ಮುತುವರ್ಜೀ ವಹಿಸಿ ಲೇಖನಗಳನ್ನು ಪ್ರಕಟಿಸಿ ಬೆಳಕಿಗೆ ತಂದ ಚಂದ್ರಶೇಖರ್ ಅವರಿಗೆ ನನ್ನ ಧನ್ಯವಾದಗಳು. ಪ್ರತಿ ಲೇಖನವನ್ನೂ ಕೂಲಂಕಷ ಓದಿ, ಕಾಗುಣಿತ ಮುಂತಾದ ತಪ್ಪುಗಳನ್ನು ಸರಿಪಡಿಸಲು ಮತ್ತು ಫೋಟೋ ಆಲ್ಬಮ್ ನಿಂದ ನಿಖರವಾದ ಚಿತ್ರಗಳ ಆಯ್ಕೆಮಾಡಲು ಸಹಾಯವಾದ ನನ್ನ ಮಡದಿ, ಕಮಲ ಹಾಗೂ, ಮೊಬೈಲ್ ತಾಂತ್ರಿಕ ವಿಚಾರಗಳಲ್ಲಿ ಸದಾ ಬಲಗೈ ಆಗಿದ್ದ ನನ್ನ ಮೊಮ್ಮಗಳಾದ ಕುಮಾರಿ ಸಿರಿ ಮೂರ್ತಿ ನೆನೆಯಲೇಬೇಕು. ಸೋಮಾಲಿಯಾದಲ್ಲಿ ನನ್ನ ಜೊತೆ ಅವರೂ ಇದ್ದು, ಸದ್ಯ ನಾನು ಮರೆತಂತಿದ್ದ ಕೆಲವು ವಿಷಯಗಳ ಮತ್ತು ಸೋಮಾಲಿ ಭಾಷೆಯ ಅನೇಕ ಪದಗಳ ಬಗ್ಗೆ ನನಗೆ ತಿಳಿವಳಿಕೆ ನೀಡಿದ ಶ್ರೀಮತಿ ನಿರ್ಮಲ ಮುದ್ದಪ್ಪ, ಮಕ್ಕಳ ತಜ್ಞ, ಗೆಳೆಯ ಡಾ. ಜಗನ್ನಾಥ ಮತ್ತು ಶ್ರೀಮತಿ ರತ್ನ ಜಗನ್ನಾಥ, ಶ್ರೀ ಬೆಳ್ಳಿಯಪ್ಪ, “ಮಹಿಳಾ ಜನನಾಂಗ ಛೇದನ”ದ ವಿಷಯದಲ್ಲಿ ವೈದ್ಯಕೀಯ ತಾಂತ್ರಿಕ ಶಬ್ದಗಳ ಕನ್ನಡ ಪದಗಳ ಬಗ್ಗೆ ಮುಂತಾಗಿ ತಿಳಿಸಿ ಸಹಕರಿಸಿದ, ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಗೆಳೆಯ ಡಾ. ದಾಮೋದರ್, ಮತ್ತು ನನ್ನ ಪ್ರತಿ ಬರಹವನ್ನೂ ಮಲೇಶಿಯಾದಲ್ಲಿ ಇದ್ದಾಗ ಮತ್ತು ಈಗ ಮೈಸೂರಿನಲ್ಲೂ ಮುಂಚಿತವಾಗಿ ಓದಿ, ವಿಮರ್ಶಾತ್ಮಕ ವ್ಯಾಖ್ಯಾನ ಮಾಡುವ, ಶರೀರಶಾಸ್ತ್ರತಜ್ಞ ಪ್ರಾಧ್ಯಾಪಕ, ಗೆಳೆಯ ಡಾ. ಪ್ರಸನ್ನ ಕುಮಾರನಿಗೂ ನಾನು ಆಭಾರಿ. ಅಂತಿಮವಾಗಿ ಎಲ್ಲ ಅಂಕಣಗಳನ್ನೂ ಓದಿದ ನಿಮಗೆಲ್ಲ ಎಂದೆಂದಿಗೂ ಆಭಾರಿ.

ಮುಗಿಯಿತು….

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್ ಫೋನ್: 98446 45459

Related post

1 Comment

  • Each episode was narrated in a very simple and understandable way. Thank you dear Neela, May god fulfill your desire to bring it as a book.
    Prasannakumar

Leave a Reply

Your email address will not be published. Required fields are marked *