ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ

ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ

ಕೊಬಾಲ್ಟ್ ಕಲಾ ಸಂಪರ್ಕ ಪ್ರಕೃತಿಯ ತರಂಗಗಳೊಂದಿಗೆ ಕಲಾ ತರಂಗಗಳು ಮೇಳೈಸಿದಾಗ ಮನಸ್ಸಿಗೆ ಮುದ, ಆಹ್ಲಾದಕರ ಅನುಭವ. ಇಂತಹ ಒಂದು ವಾತಾವರಣವೇ ಕಲೆಯಾಗಿತ್ತು.

ಭಾನುವಾರ 7-12-2025 ರಂದು ರಾಜ ರಾಜೇಶ್ವರಿ ನಗರದ, ಬಿಇಎಂಎಲ್ ಬಡಾವಣೆಯ ಮಾವಿನ ತೋಪಿನ ಉದ್ಯಾನವನದಲ್ಲಿ ಕೊಬಾಲ್ಟ್ ಕಲಾ ಸಂಸ್ಥೆ ಕಲಾ ಸಮ್ಮಿಲನದ ಕಾರ್ಯಕ್ರಮ ಹಮ್ಮಿಕೊಂಡಿತ್ತು. 25 ಕ್ಕೂ ಹೆಚ್ಚು ಕಲಾವಿದರು, ನೂರಾರು ಕಲಾ ಪ್ರಿಯರು, ಕಲಾ ಮಕ್ಕಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಅದಕ್ಕೆ ಸರಿಯಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಪ ಸ ಕುಮಾರವರು, ಕೊಬಾಲ್ಟ್ ಬಣ್ಣವಾದ ನೀಲಿ ಆಗಸದೊಂದಿಗೆ ಮಾಮರದೊಂದಿಗೆ ಮಕ್ಕಳು ಕಲರವದ ಚಿತ್ರವನ್ನು ಬಿಡಿಸಿ ಎಲ್ಲರ ಗಮನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ನುರಿತ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಮಾವಿನ ತೋಪಿನ ತಂಪಿನಲ್ಲಿ ಕಲಾ ರಚನೆಯಲ್ಲಿ ತೊಡಗಿದ್ದರೆ ಕಲಾಭಿಮಾನಿಗಳು ಮತ್ತು
ಮಕ್ಕಳು ಅವರ ಸುತ್ತುವರೆದಿದ್ದು ಅದೊಂದು ಕಲಾ ಹಬ್ಬವಾಗಿತ್ತು.

ಚಿತ್ರ ಕಲಾವಿದರು ಅಕಾಡೆಮಿಯ ಯೋಜನೆಗಳಿಗೆ ಸ್ಪಂದಿಸಬೇಕೆಂದು ಅಧ್ಯಕ್ಷರ ಅಭಿಮತ. ಉತ್ತರ ಕರ್ನಾಟಕದವರು ಸ್ಪಂದಿಸುವಷ್ಟು ಬೆಂಗಳೂರು ಮೈಸೂರು ಪ್ರಾಂತ್ಯದ ಕಲಾವಿದರು ಹೆಚ್ಚು ಸ್ಪಂದಿಸುವುದಿಲ್ಲ. ಅದಲ್ಲದೆ ಕಲಾವಿದರ ಧ್ವನಿ ಬಲವಾಗಬೇಕು. ಈ ಬಾರಿ ನಮ್ಮ ಚಿತ್ರಕಲಾಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೇವಲ ಒಂದೇ ನೀಡಿದ್ದಾರೆ. ಇನ್ನೂ ಹೆಚ್ಚು ಬರಬೇಕಾದಲ್ಲಿ ಕಲಾವಿದರು ಸಮಾಜದಲ್ಲಿ ಕಲಾ ಕಾರ್ಯಕ್ರಮದೊಂದಿಗೆ ಬೆರೆಯಬೇಕು. ಪ್ರಕೃತಿಯಲ್ಲಿ ಸಿಗುವ ಅನೇಕ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಮಕ್ಕಳಲ್ಲಿ ಕಲಾ ಅಭಿರುಚಿ ಆಸಕ್ತಿ ಬೆಳೆಯುವಂತೆ ಮಾಡುವ ಅವಶ್ಯಕತೆ ಇದೆ.

ಕಲಾವಿದರು ಬೆಳೆಯುವಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಫಲಕಾರಿ ಎಂದು ಅಭಿಪ್ರಾಯಪಟ್ಟರು. ಹಿರಿಯ ಕಲಾವಿದ ಶ್ರೀ ವಿದ್ಯಾಧರ ಸಾಲಿ, ಸ್ಥಳೀಯ ಮುಖಂಡರಾದ ಶ್ರೀ ಜಿ ಹೆಚ್ ರಾಮಚಂದ್ರ ಕಾರ್ಯಕ್ರಮವನ್ನು ಶ್ಲಾಘಿಸಿದರು. ಸಂಗೀತಗಾರರಾದ ಶ್ರೀ ರಾಜೇಶ್ ಅವರು ಸುಶ್ರಾವ್ಯವಾಗಿ ಪ್ರಾರ್ಥನೆ ಗೈದರು. ಕೊಬಾಲ್ಟ್ ಅಧ್ಯಕ್ಷರಾದ ಶ್ರೀ ಗಣಪತಿ ಎಸ್ ಹೆಗಡೆ ಎಲ್ಲರನ್ನೂ ಗೌರವಿಸಿದರು. ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನದೊಂದಿಗೆ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ತನಕ ಉದ್ಯಾನವನ ಒಂದು ಕಲಾಮಂದಿರವೇ ಆಗಿತ್ತು.

ಸಾಹಿತ್ಯಮೈತ್ರಿ

Related post