ಕ್ರಿಸ್ಮಸ್ ಹಕ್ಕಿಗಳು

ಸಾಂತಾ ತಂದದ್ದು ಪ್ರಶಾಂತ

ಹಕ್ಕಿಗಳೆರಡು ಹಾರಾಡಿ ಹುಡುಕಿದವು ಮರ

ತಮ್ಮ ಜೀವನಕೆ, ತಮ್ಮ ವಂಶೋದ್ಧಾರಕೆ

ಮೊಟ್ಟೆ ಇಟ್ಟು ಮರಿ ಮಾಡಲು ಜಾಗಬೇಕಿತ್ತು

ಹಾರಿ ಹಾರಾಡಿ ಹರಿದಾಡಿ ಜಾಗ ಹುಡುಕಿತ್ತು

ಅಮ್ಮ ಹಕ್ಕಿಯು ತನ್ನ ಪ್ರಿಯತಮನೊಂದಿಗೆ….

ಕಟ್ಟ ಕಡೆಗೂ ಕಂಡಿತ್ತೊಂದು ಟ್ರೀ…

ತನ್ನ ಮರಿಗಳಿಗೆ ಸ್ವಚ್ಚ ಜಾಗವೀ ಟ್ರಿ

ಎಂದೆಂಬ ನಿರ್ಧಾರಕ್ಕೆ ಬಂದವು

ಅಲ್ಲಿ ಇಲ್ಲಿ ಸಿಕ್ಕ ಇ-ವೇಸ್ಟ್ಗಳನ್ನು

ಕೂಡಿಸಿ, ಗುಣಿಸಿ ಹಾಗೀಗೆ ಹೆಣೆದು

ಗಟ್ಟಿಮುಟ್ಟಾದ ಗೂಡ ಕಟ್ಟಿದವು.

ಮಿಣುಕು ದೀಪಗಳಿದ್ದ ಆ ಟ್ರೀ

ಮೊಟ್ಟೆಯಿಂದ ಹೊರಬರುವ

ಮರಿಗಳಿಗೆ ಸ್ವಾಗತ ಕೋರುವಂತಿತ್ತು!

ಮೊಟ್ಟೆಗಳಿಗೆ ಕಾವು ಕೊಟ್ಟದ್ದು ಮುಗಿದಿದೆ

ಮರಿ ಹೊರ ಬರುವ ಸಮಯ ಬಂದಿದೆ!

ಆಹಾರಕ್ಕಾಗಿ ಹೊರ ಹೋಗಿ ಬಂದ

ಅಪ್ಪ-ಅಮ್ಮ ಹಕ್ಕಿಗಳು ಕಂಗಾಲು..

ಮರಿ ಹೊರಬೇಕಿದ್ದ ಮೊಟ್ಟೆಗಳಿದ್ದ

ಮರವೇ ಕಣ್ಮರೆ, ಅಯೋಮಯ!

ಅದೇ ಜಾಗ, ಅದೇ ಮಾಲು,

ಮೊಟ್ಟೆಗಳಿದ್ದ ಟ್ರೀ ಮಾಯ!

ಮಾಲ್ನಲ್ಲಿದ್ದ ಕ್ರಿಸ್ಮಸ್ ಟ್ರೀ ಅಲ್ಲಿರಲಿಲ್ಲ!

ಅದರಲ್ಲೇ ಕಟ್ಟಿದ್ದು, ಈ ಹಕ್ಕಿಗಳು ತಮ್ಮೀ ಗೂಡ!

ಕ್ರಿಸ್ಮಸ್ ಆಯ್ತು, ನ್ಯೂಇಯರ್ ಬಂತು

ಸಡಗರ ಮುಗಿದಿತ್ತು ಟ್ರೀ ಗೋಡೌನ್ ಸೇರಿತ್ತು

ಮೊಟ್ಟೆಯೂ ಇಲ್ಲ, ಮರಿಗಳೂ ಇಲ್ಲ..

ದೊಡ್ಡ ಮಾಲ್ನಲ್ಲಿ ಹುಡುಕುವುದೆಲ್ಲಿ

ಎಂತೆಂತಹ ಬಣ್ಣದ ಮೊಟ್ಟೆಗಳೆಲ್ಲಾ

ಬೇಕಾದ ಹಾಗೆ ಸಿಗುವ ಈ ಮಾಲ್ನಲ್ಲಿ

ತಾವೇ ಇಟ್ಟ, ಕೂತು ಕಾವು ಕೊಟ್ಟ

ಮರಿ ಬರಲಿದ್ದ ಮೊಟ್ಟೆಗಳೆಲ್ಲಾ

ಕಾಣೆಯಾಗಿವೆಯಲ್ಲ!

ಮೊಟ್ಟೆಯಿಂದ ಬರಬೇಕಿದ್ದ ಮರಿಯೂ ಇಲ್ಲ

ಅಕ್ಕರೆಯಿಂದ ಬೆಳಸಬೇಕಿದ್ದ ಕುಡಿಗಳಿಲ್ಲ

ಏನು ಬೇಕಾದರೂ ಸಿಗುವ ಮಾಲ್ನಲ್ಲಿ

ತಮ್ಮದೇ ಸೃಷ್ಟಿಯ ತಮ್ಮದೇ ಮರಿಗಳಿಲ್ಲ

ಗೋಳಾಡಿ ಕಿರುಚಾಡಿ ಹಾರಾಡಿದ್ದವು

ಎಲ್ಲವ ಗಮನಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್

ಗಾಡ್ನಂತೆ ಬಂದ, ಹಕ್ಕಿಗಳ ಗೋಳ ಕಂಡ

ಟ್ರೀ ಇದ್ದ ಗೋಡೌನಿನ ಕೀ ಹುಡುಕಿದ ತಂದ

ಕ್ರಿಸ್ಮಸ್ ಮುಗಿದಿದ್ದರೂ ಹೊಸವರ್ಷ ಬಂದಿದ್ದರೂ

ಮೊದಲಿನ ಜಾಗದಲ್ಲೇ ಆ ಟ್ರೀಯನ್ನಿಟ್ಟು ಬಿಟ್ಟ

ಕಂಗಾಲಾಗಿದ್ದ ಹಕ್ಕಿಗಳ ಗೋಳು ತಣ್ಣಗಾಯ್ತು

ಟ್ರೀಯತ್ತ ಬಂದು ಮೊಟ್ಟೆಗಳನು ಮುದ್ದಿಸಿ

ಮುದುಡಿ ಕೂತು ಮತ್ತಷ್ಟು ಕಾವು ಕೊಟ್ವು

ಕೂತಲ್ಲೇ ಕಣ್ಣಲ್ಲಿ ಗಾರ್ಡ್ಗೆ ನಮನ ಸಲ್ಲಿಸಿತ್ತು

ಗಂಡು ಹಕ್ಕಿ ಗಾರ್ಡ್ಗೆ ಸುತ್ಹಾಕಿ ಗೌರವ ಸಲ್ಲಿಸಿತ್ತು!

-ಸಂಕೇತದತ್ತ!

Related post