ಕ್ರೆಟೇಶಿಯಸ್ ಯುಗಾಂತ್ಯ
ಕ್ರೆಟೇಶಿಯಸ್ ಯುಗ ಸರಿಸುಮಾರು 201 ದಶಲಕ್ಷ ವರ್ಷಗಳ ಹಿಂದೆ ಆರಂಭವಾಗಿ 66 ದಶಲಕ್ಷ ವರ್ಷಗಳ ಹಿಂದೆ ಮುಗಿಯಿತು.
ಮೆಕ್ಸಿಕೋದ ಯುಕಾಟನ್ ಪ್ರಸ್ಥಭೂಮಿಗೆ ಅಪ್ಪಳಿಸಿದ 180 km ಗಾತ್ರದ ಗೋಳಾಕಾರದ ಕ್ಷುದ್ರಗ್ರಹ ಈ ಭೂಮಿಯ ಮೇಲಿನ ಕ್ರೆಟೇಶಿಯಸ್ ಯುಗದ ಡೈನೋಸಾರಸ್ ಗಳ ಜೊತೆಗೆ ಸಾಕಷ್ಟು ಪ್ರಭೇದದ ಪ್ರಾಣಿ ಸಸ್ಯ ವರ್ಗಗಳನ್ನ ಶಾಶ್ವತವಾಗಿ ನಶಿಸಿಹಾಕಿದೆ. ಜೀವ ವಿಜ್ಞಾನಿಗಳಿಗೆ ಇಂದು ದೊರೆತಿರುವ/ದೊರಕುತ್ತಲಿರುವ ಅರವತ್ತು ದಶಲಕ್ಷ ವರ್ಷಗಳ ಹಿಂದಿನ ಅವಶೇಷಗಳನ್ನ ವಿವಿಧ ವೈಜ್ಞಾನಿಕ ಪರೀಕ್ಷೆಗಳಿಗೆ ಒಡ್ಡಿ ಅವುಗಳ ಕಾಲ ನಿಖರತೆಯ ಜೊತೆಗೆ ಅವುಗಳ ಪ್ರಭೇದ ಗುಣಲಕ್ಷಣ ಇತ್ಯಾದಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕ್ರೆಟೇಶಿಯಸ್ ಯುಗದಲ್ಲಿ ಇದ್ದಂತ ಅನೇಕ ಪ್ರಾಣಿಪ್ರಭೇದಗಳು ಸಸ್ಯಪ್ರಭೇದಗಳು ಮರಗಿಡಗಳು ಇಂದು ಇಲ್ಲ. ಅವುಗಳಲ್ಲಿ ಶೇ 90 ರಿಂದ 95 ರಷ್ಟು ಪ್ರಭೇದಗಳು ಚಿಕ್ಸಲಬ್ ಕ್ಷುದ್ರಗ್ರಹ ಅಪ್ಪಳಿಸುವಿಕೆಯ ನಂತರದ ಭೀಕರ ಪರಿಣಾಮದಿಂದ ಸಂಪೂರ್ಣವಾಗಿ ಶಾಶ್ವತವಾಗಿ ಈ ಭೂಮಿಯ ಮೇಲಿಂದ ಅಳಿದುಹೋಗಿದ್ದಾವೆ.
ಅಂದು ಭೂಮಿಯ ಮೇಲಿನ ಜೀವಿಗಳಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಡೈನೋಸಾರಸ್ ಗಳು ಇದ್ದದ್ದರಿಂದ ಮತ್ತು ಅವು ಭೂಮಿಯ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದರಿಂದ ಕ್ರೆಟೇಶಿಯಸ್ ಯುಗಾಂತ್ಯವನ್ನ ಡೈನೋಸಾರಸ್ ಯುಗಾಂತ್ಯವೆಂದೇ ಕರೆಯಲಾಗುತ್ತದೆ.
ಕ್ರೆಟೇಶಿಯಸ್ ಯುಗಾಂತ್ಯದಲ್ಲಿ ಡೈನೋಸಾರಸ್ ಗಳೊಂದಿಗೆ ನಶಿಸಿಹೋಗಿರುವ ಇನ್ನೊಂದು ಜೀವಿ ಎಂದರೇ ಅಮೋನೈಟ್ ಗಳು.
ಇವು ಮೊಲಸ್ಕಾ (Mollusca) ವರ್ಗ, ಸಿಪಿಲೋಪಡಾ
(Cephalopoda) ಕುಟುಂಬಕ್ಕೆ ಸೇರುವ ಜಲಚರಗಳು. ತಮ್ಮ ದೇಹದ ಸುತ್ತ ಸುರುಳಿ ಆಕಾರದ ಕವಚ ಹೊಂದಿದ್ದ ಈ ಜೀವಿಗಳು ಇಂದಿನ ಆಕ್ಟೋಪಸ್, ಸ್ಕ್ವೀಡ್, ಕಟಲ್ ಪಿಷ್ ಗಳನ್ನ ಹೋಲುತ್ತಲಿದ್ದ ಸಸ್ಯಾಹಾರಿಗಳು. ಮುಖ್ಯವಾಗಿ ಇವು ಅಲ್ಗೆ ಮತ್ತು ಪ್ಲ್ಯಾಂಕ್ಟಾನ್ ಗಳ ಮೇಲೆ ಅವಲಂಬಿತವಾಗಿದ್ದವು.
ಚಿಕ್ಸಲಬ್ ಮಹಾವಿಪ್ಲವದ ನಂತರ ವರ್ಷಾನುಗಟ್ಟಲೇ ನಿರಂತರವಾಗಿ ಭೂಮಿಯ ಮೇಲೆ ಆಮ್ಲದಮಳೆ ಸುರಿಯಿತು. ಇದರಿಂದ ಸಸ್ಯ ಮರಗಿಡಗಳು ಸುಟ್ಟು ನಷ್ಟಹೊಂದಿದವು. ಅಲ್ಲದೇ ಭೂಮಿಯ ಸುತ್ತ ದಟ್ಟವಾಗಿ ಆವರಿಸಿದ್ದ ದೂಳು ಮತ್ತು ಸಲ್ಪರ್ ಮೋಡಗಳ ಕಾರಣದಿಂದ ಭೂಮಿಗೆ ಸೂರ್ಯನ ಕಿರಣಗಳು ತಲುಪದಂತಾಗಿ ದ್ಯುತಿ ಸಂಶ್ಲೇಷಣೆ (Photosynthesis) ಪ್ರಕ್ರಿಯೆ ನಿಂತುಹೋಗಿ ಸಸ್ಯಪ್ರಭೇದಗಳು ನಶಿಸಿಹೋದವು. ಇದರಿಂದ ಸಸ್ಯಗಳ ಮೇಲೆ ಅವಲಂಬಿತವಾದ ಪ್ರಾಣಿಗಳು ಆಹಾರದ ಕೊರತೆಯಿಂದ ಅಸುನೀಗಿದವು.
ಭೂಮಿಯ ಮೇಲೆ ಅತಿಹೆಚ್ಚು ಜೀವಹಾನಿಗೆ ಕಾರಣವಾದ ಚಿಕ್ಸಲಬ್ ನ ಆ ಮಹಾವಿಪ್ಲವದ ನಂತರ ಜೀವವಿಕಸನ ಪ್ರಕ್ರಿಯೆ ಅಲ್ಲಿಗೆ ನಿಲ್ಲಲಿಲ್ಲ. ಅಂದು ಪ್ರಕ್ಷುಬ್ದಗೊಂಡ ಭೂಮಿಯ ವಾತಾವರಣ ಸಾವಿರಾರು ವರ್ಷಗಳ ನಂತರ ನಿಧಾನವಾಗಿ ಒಂದು ಸಹಜ ಸ್ಥಿತಿಗೆ ಮರಳಿ ಪ್ರಕೃತಿಯ ಸಹಯೋಗದಿಂದ ಮತ್ತೇ ಹೊಸ ಜೀವಿಗಳ ಉಗಮಕ್ಕೆ ನಾಂದಿಯಾಗತೊಡಗಿತು. ವಿಪ್ಲವ ಕಾಲದಲ್ಲಿ ಅಳಿದುಳಿದ ಕೆಲವು ಜೀವ ಕೊಂಡಿಗಳು ಈ ಭೂಮಿಯ ಹೊಸ ವಾತಾವರಣಕ್ಕೆ ಅನುಗುಣವಾಗಿ ನಿಧಾನವಾಗಿ ಹಂತಹಂತವಾಗಿ ಹೊಂದಾಣಿಕೆಗೊಳ್ಳುವ ಪ್ರಕ್ರಿಯೆಯೂ ನಿಧಾನವಾಗಿ ಆರಂಭವಾಯಿತು. ಅತ್ಯಂತ ನಿಧಾನಗತಿಯಲ್ಲಿ ನಡೆದ ಈ ಜೀವವಿಕಸನದ ಪ್ರಕ್ರಿಯೆಗೆ ದಶಲಕ್ಷ ವರ್ಷಗಳಷ್ಟು ಸಮಯವೇ ಹಿಡಿದಿದೆ. ಇಂದು ಈ ಭೂಮಿಯ ಮೇಲೆ ನಮ್ಮೊಂದಿಗಿರುವ ಅನೇಕ ರೀತಿಯ ಸಸ್ಯ ಗಿಡಮರ ಜೀವಜಂತುಗಳ ವಿಕಾಸ ಮತ್ತು ಹೊಸಜೀವಿಗಳ ಉಗಮ ಅರವತ್ತು ದಶಲಕ್ಷ ವರ್ಷಗಳಿಂದ ನಿರಂತರವಾಗಿ ನಡೆದುಬಂದಿರುವ ಪ್ರಕ್ರಿಯೆ.
ಈ ಅಮೋನೈಟ್ ಪಳೆಯುಳಿಕೆಗಳು ಜಗತ್ತಿನ ಎಲ್ಲ ಭಾಗಗಳಲ್ಲೂ ಕಂಡುಬರುತ್ತವೆ. ಭಾರತದ ಹಿಮಾಲಯದ ಪರ್ವತಶ್ರೇಣಿಗಳಲ್ಲೂ ಕಂಡುಬರುತ್ತವೆ.
ಮೃತ್ಯುಂಜಯ ನ. ರಾ.