ಗಂಗಾವತರಣ..
ಮಳೆಯು ತಾನು ಇಳೆಗೆ ಇಳಿದು
ಹಸಿದ ನೆಲಕೆ ಹರುಷ ತರಲು
ಹೊಂಗೆ ತೆಂಗು ಬಾಳೆಯೆಲ್ಲ
ಮುದದಿ ನಕ್ಕು ನಲಿದವು
ಗಿರಿಯ ತುದಿಯ ಅಂಚಿನಿಂದ
ಹರಿವ ತೊರೆಯ ನೋಟ ಚಂದ
ಬಳುಕಿ ಬಳಸಿ ಸಾಗುತಿರಲು
ಜಲಲ ಧಾರೆ ಅದುವೆ ಅಂದ
ಚಿಲಿಪಿಲಿಸುವ ಪಕ್ಷಿಗಳಲಿ
ಅರಳಿ ನಗುವ ಹೂಗಳಲಿ
ಕುಣಿದು ನಲಿವ ಜಿಂಕೆಗಳಲಿ
ಧರೆಯು ಖುಷಿಯ ಕಂಡಿದೆ
ಮನದ ಕೊಳೆಯು ದೂರವಾಗಿ
ತನುವ ಕಳೆಗೆ ಹೊಳಪು ಮೂಡಿ
ಭಾವ ಝರಿಗೆ ಮೊಗವ ತೋರಿ
ಮನವು ಇಂದು ನಲಿದಿದೆ
ರವಿಯು ಪೂರ್ವದಿಂದ ಮೂಡಿ
ಕವಿಯ ಮನವು ಹಾಡ ಹಾಡಿ
ದೂರ ತೀರದಿಂದ ಬೆಳಕು
ನಲಿವಿನಲೆಯ ತಂದಿದೆ
ಧರೆಯ ತುಂಬ ಸಿರಿಯು ಉಕ್ಕಿ
ಸುರಿವ ವರ್ಷಧಾರೆ ಹೆಚ್ಚಿ
ಮುದುಡಿ ಹೋದ ಹೂವು ಅರಳಿ
ಇಳೆಗೆ ಶಕ್ತಿ ಬಂದಿದೆ
ತನುವು ಜಡವ ಕಳೆದು ನಿಂತು
ತನ್ನ ಮನಕೆ ಮುದವ ನೀಡಿ
ಜಗದ ಒಳಿತ ಬಯಸಿ ನಿಂದು
ಸ್ವಾಗತವನು ಬಯಸಿದೆ
ಸುನೀಲ್ ಹಳೆಯೂರು