ಗಾಣಿಕೆ – ಸೊಲನಂ ನಿಗ್ರಮ್
ಅಮ್ಮನ ಜೊತೆ ಮಾತನಾಡಲು ಕುಳಿತರೆ ಸಮಯ ಸಾಗುವುದೇ ತಿಳಿಯುವುದಿಲ್ಲ. ಹೆಚ್ಚಾಗಿ ತನ್ನ ಬಾಲ್ಯದ ನೆನಪುಗಳನ್ನು ಅಮ್ಮ ಹೇಳುವಾಗ ಕೇಳಿದಷ್ಟು ಚೆನ್ನ. ಅವರು ಹುಟ್ಟಿ ಬೆಳೆದದ್ದು ಹಳ್ಳಿಯಲ್ಲಿ, ತಾವು ಆಡಿದ ಆಟಗಳು, ಕಲಿತ ಪಾಠಗಳು, ಕೆಲಸಗಳು, ಹಸುಗಳನ್ನು ಮೇಯಿಸುವ ಪರಿ, ಗುಡ್ಡಗಳಲ್ಲಿ ಓಡಾಡಿ ಅಲ್ಲಿ ಸಿಗುತ್ತಿದ್ದ ಹಣ್ಣುಗಳನ್ನು ಸವಿದ ಪರಿ ಕೇಳುತಿದ್ದರೆ ನಮಗೆ ಇಂತಹ ಬಾಲ್ಯ ಯಾಕೆ ಸಿಗಲಿಲ್ಲ ಎನಿಸುತ್ತದೆ.
ಅಮ್ಮನಿಂದಲೇ ತಿಳಿದಿದ್ದು ಗಾಣಿಕೆ ಹಣ್ಣಿನ ರುಚಿ. ನಮ್ಮ ತಾರಸಿ ತೋಟದ ಕುಂಡದಲ್ಲಿ ಪುಟ್ಟ ಪುಟ್ಟ ಟೊಮೊಟೊ ಗುಚ್ಛದ ಹಾಗೆ ಹಣ್ಣು ಬಿಟ್ಟು ಬೆಳೆದ ಗಿಡವೊಂದು ಕಣ್ಣಿಗೆ ಬಿತ್ತು. ಅಮ್ಮನನ್ನು ಕೇಳಿದಾಗಲೇ ಗೊತ್ತಾದದ್ದು ಅದು ಗಾಣಿಕೆಯ ಸಸಿ ಎಂದು. ಇದರ ಹಣ್ಣುಗಳು ತಿನ್ನಲು ಬಲು ರುಚಿ, ಕಪ್ಪಾಗುವರೆಗೂ ಕಾಯಬೇಕು ಎಂದಿದ್ದಳು. ಅವು ಕಪ್ಪಾಗುವುದನ್ನೇ ಕಾದು ಕಿತ್ತು ತಿನ್ನಲೆಂದೇ ಕಾದಿದ್ದೆ. ಆಹಾ ತಿನ್ನುತ್ತಿದ್ದರೆ ನಾಲಿಗೆಗೆ ಅದೆಂತಹ ಸ್ವಾದ! ಕೊಂಚ ಹುಳಿ-ಸಿಹಿ ರಸಭರಿತ ಹಣ್ಣು. ಈ ಹಣ್ಣು ನಾನು ಸವಿದರಷ್ಟೇ ಸಾಲದು ಪರಿಚಯಿಸಿ ಆಸೆ ಹೆಚ್ಚಿಸೋಣ ಎನಿಸಿ ಈ ಅಂಕಣ ಬರೆಯುತ್ತಿರುವೆನು.
ಗಾಣಿಕೆ ಹಣ್ಣು ಮತ್ತು ಸೊಪ್ಪು ತಿನ್ನಲು ಸೂಕ್ತವಿದ್ದು ಬಹಳಷ್ಟು ಖಾದ್ಯಗಳಲ್ಲಿ ಉಪಯೋಗಿಸುತ್ತಾರೆ. ಗಾಣಿಕೆಯ ಸೊಪ್ಪನ್ನು ಕಾಶಿ ಸೊಪ್ಪು ಎಂದು ಸಹ ಕರೆಯುತ್ತಾರೆ. “ಸೊಲನಂ ನಿಗ್ರಮ್” ಎಂಬ ವೈಜ್ಞಾನಿಕ ಹೆಸರುಳ್ಳ ಗಾಣಿಕೆಯನ್ನು ಹಿಂದಿಯಲ್ಲಿ ‘ಮಾಕೋಯ್’ ತಮಿಳಿನಲ್ಲಿ ‘ಮನಥಕಾಲಿ’ ಆಂಗ್ಲ ಭಾಷೆಯಲ್ಲಿ ‘ಯುರೋಪಿಯನ್ ಬ್ಲಾಕ್ ಶೇಡ್’, ‘ಹೌಂಡ್ ಬೆರ್ರ್ರಿ’ ‘ವಂಡರ್ ಬೆರ್ರಿ’ ಎಂದೆಲ್ಲಾ ಕರೆಯಲಾಗುತ್ತದೆ.
ಗಾಣಿಕೆಯು ದೀರ್ಘಕಾಲಿಕ ಪೊದೆ ಸಸ್ಯವಾಗಿದ್ದು, ಏಶಿಯಾ ಹಾಗು ಯೂರೋಪ್ ಖಂಡದಲ್ಲಿ ಹೆಚ್ಚಾಗಿ ಕಂಡುಬರುತ್ತದೆ, 10 ರಿಂದ 40 ಇಂಚು ಎತ್ತರಕ್ಕೆ ಬೆಳೆವ ಈ ಸಸ್ಯವು ಮೊಟ್ಟೆ ಆಕಾರದ ಎಲೆಗಳನ್ನು ಹೊಂದಿದ್ದು ಪುಟ್ಟದಾದ ಐದು ದಳವುಳ್ಳ ಬಿಳಿಯ ಹೂಗಳು ನಂತರ ಗಾಣಿಕೆ ಹಣ್ಣಾಗಿ ಗಿಡದಲ್ಲಿ ಗುಚ್ಚಾಗಿ ಕಂಗೊಳಿಸುತ್ತವೆ. ಗಾಣಿಕೆ ಹಣ್ಣು ತಿನ್ನಲು ರುಚಿಕರವಾದರೆ ಗಾಣಿಕೆ ಸೊಪ್ಪು ತನ್ನದೇ ವೈಶಿಷ್ಟತೆಯನ್ನು ಹೊಂದಿದೆ.
ಗಾಣಿಕೆಯ ಪತ್ರೆಯು ಗಣಪನಿಗೆ ಶ್ರೇಷ್ಠವೆಂದು ಪೂಜೆಗೆ ಉಪಯೋಗಿಸುವುದು ಉಂಟು. ದಕ್ಷಿಣ ಭಾರತದಲ್ಲಿ ಗಾಣಿಕೆ ಸೊಪ್ಪಿನಿಂದ ಸಾರು ಪಲ್ಯಗಳನ್ನು ಸಹ ಮಾಡಲಾಗುತ್ತದೆ. ಬಾಯಲ್ಲಿನ ಹುಣ್ಣು ಹೋಗಲಾಡಿಸಲು ಗಾಣಿಕೆಯ ಸೊಪ್ಪು ಹಾಗು ಹಣ್ಣು ಬಲು ಸೂಕ್ತ. ಗಾಣಿಕೆಯ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ “ಸಿ” ಹಾಗು ಇನ್ನಿತರ ಪೌಷ್ಟಿಕಾಂಶ ತುಂಬಿದ್ದು ಗಾಣಿಕೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ವಿಟಮಿನ್ “ಎ ಸಿ ಬಿ ” ದೇಹಕ್ಕೆ ದೊರಕುತ್ತದೆ.
ಗಾಣಿಕೆಯ ಸೊಪ್ಪಿನಿಂದ ಬಹಳಷ್ಟು ಖಾಯಿಲೆಗೂ ಸೂಕ್ತ ಚಿಕಿತ್ಸೆ ದೊರುಕುವುದೆಂಬುವುದು ಹಿರಿಯರ ಮಾತು. ಒಣ ಕೆಮ್ಮು, ಬಾಯಿ ಹುಣ್ಣು, ಹೊಟ್ಟೆಯಲ್ಲಿನ ಬಾಧೆ, ಮುಟ್ಟಿನ ದಿನದ ನೋವು, ಮೂಲವ್ಯಾದಿ, ಆಸ್ತಮಾ, ನಿದ್ರಾಹೀನತೆ, ಇತ್ಯಾದಿ ಅರೋಗ್ಯ ಸಮಸ್ಯೆಗಳನ್ನು ದೂರವಿಡಲು ತುಂಬಾ ಸಹಕಾರಿ.
ನಿಮಗೆಲ್ಲಾದರೂ ಗಾಣಿಕೆಯ ಸಸ್ಯ ಕಂಡರೆ ಸೊಪ್ಪಿನ ಉಪಯೋಗ ಪಡೆಯಿರಿ, ಹಣ್ಣನ್ನು ಸವಿದು ಅವಕಾಶ ಸಿಕ್ಕರೆ ಹಣ್ಣಲ್ಲಿನ ಬೀಜವನ್ನು ನಿಮ್ಮ ತಾರಸಿಯ ತೋಟದಲ್ಲಿ ಚೆಲ್ಲಿದರೆ ಆಗಾಗ ಗಾಣಿಕೆ ಹಣ್ಣಿನ ರುಚಿ ಅನುಭವಿಸುವ ಅವಕಾಶ ಸಿಗುತ್ತದೆ.
ಶಿಲ್ಪ ಸಂತೋಷ್
ಚಿತ್ರಗಳು: ಅಂತರ್ಜಾಲ