ಗರುಡ ಎಂದ ಕೂಡಲೆ ನಮ್ಮಲ್ಲಿ ಅನೇಕರಿಗೆ ಹಿರಿಯರು ಆಕಾಶದಲ್ಲಿ ಗರುಡ ಕಂಡ ಕೂಡಲೆ ಕೈಗಳ ಬೆರಳುಗಳನ್ನು ವಿಶಿಷ್ಟವಾಗಿ ಒಳಸೇರಿಸಿಕೊಂಡು ಕೈಮುಗಿಯುವ ದೃಶ್ಯ ಕಣ್ಣಮುಂದೆ ಬರಬಹುದು. ಇದು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಬೆಸೆದಿಕೊಂಡಿದೆ ಎಂಬುದರ ದ್ಯೋತಕವಿದು. ಇದಕ್ಕೂ ಗರುಡಪುರಾಣ ಎಂಬ ಗ್ರಂಥಕ್ಕೂ ಸಂಬಂಧವಿಲ್ಲ. ವಿಷ್ಣುವಿನ ವಾಹನವೆಂಬ ನಂಬಿಕೆ ಆಳವಾಗಿ ಬೇರೂರಿದೆ. ಇದನ್ನು ಕಾಣುವುದು ವಿಷ್ಣುವನ್ನು ಕಂಡಷ್ಟೇ ಪುಣ್ಯವೆಂಬ ನಂಬಿಕೆಯೂ ಇದೆ. ಇಂತಹ ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲ ಈ ಹಕ್ಕಿ ಕಂಡುಬರುವ ಏಷ್ಯಾದ ರಾಷ್ಟ್ರಗಳಲ್ಲೆಲ್ಲಾ ಕಂಡುಬರುತ್ತದೆ.
ಆಕಾಶದಲ್ಲಿ ಎತ್ತರದಲ್ಲಿ ಹದ್ದುಗಳ ಜೊತೆಗೆ ಹಾರುತ್ತದೆ. ತಲೆ, ಕುತ್ತಿಗೆ ಹಾಗೂ ಎದೆ ಬೆಳ್ಳಗಿದ್ದು ಇತರ ಭಾಗಗಳು ಕಡುಕೆಂಗಂದು ಬಣ್ಣವಿರುವುದರಿಂದ ಇವನ್ನು ಸುಲಭವಾಗಿ ಗುರುತಿಸಬಹುದು. ಬಾಲ ಹದ್ದಿನ ಬಾಲದಂತೆ ಕವಲಾಗಿರದೆ, ಗುಂಡಾಗಿರುತ್ತದೆ. ನೆಲದ ಮೇಲೆ ಮರದಡಿ ಗೂಡುಕಟ್ಟಿರುವ ದಾಖಲೆ ಇರುವುದಾದರೂ ಇದು ಸಾಮಾನ್ಯವಾಗಿ ಮರದ ಮೇಲೆ ಗೂಡುಕಟ್ಟುವ ಹಕ್ಕಿ. ವರ್ಷ ವರ್ಷ ಒಂದೇ ಗೂಡನ್ನು ಮತ್ತಷ್ಟು ಎಲೆ, ಕಡ್ಡಿ ಇತ್ಯಾದಿಗಳನ್ನು ಸೇರಿಸಿ ಬಳಸುತ್ತದೆ.
ಭಾರತ, ಪಾಕಿಸ್ಥಾನ, ನೇಪಾಳ, ಭೂತಾನ್, ಬಾಂಗ್ಲದೇಶ, ಶ್ರೀಲಂಕಾ ಹಾಗೂ ಕೆಲವು ಇತರ ಏಷ್ಯಾದಾ ರಾಷ್ಟ್ರಗಳಲ್ಲಿಯೂ ಆಷ್ಟ್ರೇಲಿಯಾದಲ್ಲಿಯೂ ಕಂಡುಬರುತ್ತದೆ. ಭಾರತದ ಅಂಡಮಾನಿನ ಪಕ್ಷಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಅಲ್ಲಿಂದ ಇದನ್ನು ಸಂಗ್ರಹಿಸಿಲ್ಲ ಎನ್ನುತ್ತಾರೆ ಪಕ್ಷಿ ತಜ್ಞರಾದ ಡಾ ಪಮೇಲಾ ರಸ್ಮೆಸನ್. ನಾಲ್ಕು ಉಪಪ್ರಭೇದಗಳು ಕಂಡುಬಂದಿವೆ.
ಸುಲಭವಾಗಿ ಕಾಣಸಿಗುವ, ಈ ಹಕ್ಕಿಯನ್ನು ನೋಡುವ ಪ್ರಯತ್ನ ಮಾಡಿ, ಕಂಡಾಗ ನಮಗೆ kalgundi.naveen@yahoo.com ಗೆ ಬರೆದು ತಿಳಿಸಿ.
ಕಲ್ಗುಂಡಿ ನವೀನ್
ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ