ಗಲಾಟೆ ಗುಬ್ಬಿ
ಗುಬ್ಬಿಗಳಿಲ್ಲದ ಮನೆಯನ್ನು ಊಹಿಸಲು ಸಾಧ್ಯವೇ? ನಮ್ಮ ಅಜ್ಜಿಯ ಮನೆಯ ಪಡಸಾಲೆಯ ತುಂಬಾ ಹಾಗಾಗ ನಾನಾ ತರಹದ ಕಾಳುಗಳು, ಅಕ್ಕಿ ನುಚ್ಚು ಹಾಗೂ ಒಮ್ಮೊಮ್ಮೆ ಗೋದಿ ಕಾಳುಗಳನ್ನು ಒಣಗಲು ಹಾಕುತಿದ್ದಾಗ ಈ ಗುಬ್ಬಿಗಳು ತಮ್ಮ ಸೈನ್ಯದ ಸಮೇತ ದಾಳಿ ಇಡುತಿದ್ದವು. ಚಿಇಂಕ್-ಚಿಇಂಕ್ ಎಂದು ಎಡೆಬಿಡದೆ ಸದ್ದು ಮಾಡಿ ಕಾಳುಗಳನ್ನು ಹಾರಿಸಿಕೊಂಡೋಗುತಿದ್ದವು. ಅದೇನು ಸದ್ದು ಅವುಗಳದ್ದು, ಅಬ್ಬಬಾ ಆದರು ಇವುಗಳ ಸದ್ದು ಮನುಷ್ಯರ ಹಾಗೂ ವಾಹನದ ಸದ್ದಿನಷ್ಟು ಕಿರಿಕಿರಿಯೇನಲ್ಲ. ನಮ್ಮ ಅಜ್ಜಿಯ ಊರುಗೋಲಿನ ಸದ್ದು ಅವುಗಳನ್ನು ಕೆಲಕಾಲ ಹೆದರಿಸುತ್ತಿತ್ತೆ ವಿನಃ ಅವುಗಳ ಗಲಾಟೆ ಮತ್ತೆ ದಾಂಗುಡಿಯನ್ನು ತಡೆಯಲು ಪೆಡಸಾಲೆಯಲ್ಲೇ ಕಾಳು ಒಣಗುವವರೆಗೂ ಕಾಯುತ್ತ ಕೂರಬೇಕಾಗಿತ್ತು.
ನಮ್ಮ ಮಾಧ್ಯಮ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಗುಬ್ಬಿಯ ಸಣ್ಣ ಕಥೆಯೊಂದಿತ್ತು. ಆ ಕಥೆಯಲ್ಲಿ ಗುಬ್ಬಿಯು ಗೋದಿ ಕಾಳೊಂದನ್ನು ಹೆಕ್ಕಿಕೊಂಡು ಬಂದು ಅದನ್ನು ಗಿರಿಣಿಯಾಡಿಸಿ ಚಪಾತಿ ಮಾಡಿ ತಿನ್ನುವ ಸಾಹಸದ ಬಗ್ಗೆ ಕಲ್ಪಿಸಿ ಪುಟ್ಟ ಮಕ್ಕಳಿಗೆ ಪಕ್ಷಿಗಳ ಅರಿವು ಮೂಡಿಸಲಾಗಿತ್ತು. ನಮಗೆ ಆ ಪಾಠವನ್ನು ಓದಿದ ನಂತರ ಗುಬ್ಬಿಗಳನ್ನು ತದೇಕ ಚಿತ್ತದಿಂದ ನೋಡಲಾರಂಭಿಸಿದೆವು. ಅವುಗಳ ಹಾರಾಡುವಿಕೆ, ಅವುಗಳ ಬಣ್ಣ, ಮೈಮಾಟ, ಸಣ್ಣ ಮಳೆ ನೀರಿನ ಹೊಂಡದಲ್ಲಿ ಪುಳಕ್ಕನೆ ಮಿಂದು ಪುರ್ರನೆ ಹಾರಿಹೋಗುತಿದ್ದವು. ಇವು ಒಂದು ತರಹ ಸರ್ವಾಂತರ್ಯಾಮಿ, ಮನೆ ಮಹಡಿಯ ಉಪ್ಪರಿಗೆ, ಊರ ಗುಡಿಯ ಕಂಬಗಳ ಮೂಲೆ, ಶಾಲೆಗಳ ಮಂಗಳೂರು ಹೆಂಚಿನ ಸಂದಿಯಲ್ಲಿ ಹಾಗೂ ಕೆಲವೊಮ್ಮೆ ಊರ ಕೆರೆಯಂಚಿನ ಮರಗಳ ಕೊಂಬೆಯಲ್ಲಿ ತಾತ್ಕಾಲಿಕ ಗೂಡುಗಳನ್ನು ಕಟ್ಟಿ ಸಂತಾನಾಭಿವೃದ್ಧಿ ಮಾಡಿ, ಮರಿಗಳು ಬಲಿತು ಹಾರಲು ಆರಂಭಿಸಿದೊಡನೆ ಮತ್ತೊಂದು ಕಡೆ ಗೂಡು ಕಟ್ಟುತಿದ್ದವು.
ಗುಬ್ಬಿಗಳ ಗೂಡು ಗೀಜಗನ ಗೂಡಷ್ಟು ಕಲಾತ್ಮಕತೆ ಹೊಂದಿಲ್ಲದಿದ್ದರು ಅವುಗಳು ಸಾಮಾನ್ಯವಾಗಿ ಒಣಕಡ್ಡಿ, ಒಣಹುಲ್ಲು, ನಾರುಗಳನ್ನು ವೃತಾಕಾರದಲ್ಲಿ ಗುಂಪಾಗಿ ಜೋಡಿಸಿ, ನಡುವಿನಲ್ಲಿ ಪುಕ್ಕ, ಗರಿಗಳನ್ನು ಇಟ್ಟು ತಮ್ಮ ಮೊಟ್ಟೆ, ಮರಿಗಳು ಬೆಚ್ಚಗೆ ಇರುವಂತೆ ನೋಡಿಕೊಳ್ಳುತವೆ. ಮುಖ್ಯವಾಗಿ ಏಪ್ರಿಲ್ ನಿಂದ ಆಗಸ್ಟ್ ತಿಂಗಳ ಮದ್ಯೆ ಇವುಗಳು ಒಂದು ಬಾರಿಗೆ 3 ರಿಂದ 4 ಮೊಟ್ಟೆಗಳನ್ನು ಇಟ್ಟು ತಮ್ಮ ಸಂತಾನಭಿವೃದಿಯನ್ನು ಮಾಡುತ್ತವೆ. ಮೊಟ್ಟೆಗಳನ್ನು ಗಂಡು ಹಾಗೂ ಹೆಣ್ಣು ಗುಬ್ಬಿ ಸರದಿ ಪ್ರಕಾರ ಕಾವು ಕೊಟ್ಟು 11 ರಿಂದ 14 ದಿನಗಳಲ್ಲಿ ಮರಿ ಮಾಡುತ್ತವೆ. ಹಾವು-ಹದ್ದುಗಳಿಂದ ಸರದಿ ಪ್ರಕಾರ ಕಾವಲಿದ್ದು ಮೊಟ್ಟೆಗಳನ್ನು ರಕ್ಷಿಸಿ ಮುಂದಿನ 15 ರಿಂದ 17 ದಿನಗಳಲ್ಲಿ ಮರಿಗಳು ಬೆಳೆದು ಸ್ವತಂತ್ರವಾಗಿ ಗೂಡಿನಿಂದ ಹಾರಿ ಹೋಗುವಂತೆ ಮಾಡುತ್ತವೆ. ಅಲ್ಲಿಯವರೆಗೂ ತಂದೆ ಹಾಗೂ ತಾಯಿ ಗುಬ್ಬಿ ಸಣ್ಣ ಪುಟ್ಟ ಉಳ ಉಪ್ಪಟೆಗಳನ್ನು ಹಿಡಿದು ತಂದು ಮರಿಗಳಿಗೆ ತಿನಿಸಿ ಪಾಲನೆಯ ಜವಾಬ್ದಾರಿಯನ್ನು ಹೊರುತ್ತವೆ.
ಹಳ್ಳಿಗಳ ಹೊಲ-ಗದ್ದೆಗಳಲ್ಲಿ, ಗುಡಿಗಳು, ಮನೆಯ ಉಪ್ಪರಿಗೆ ಹಾಗೂ ಹಿತ್ತಲ ಸೌದೆ ರಾಶಿಯ ಮೇಲೆ, ನಗರಗಳ ದೂರವಾಣಿ ಕಂಬಗಳಲ್ಲಿ, ಸಹಕಾರಿ ಮಳಿಗೆಗಳ ಮೇಲೆ ಸದಾ ಗಲಾಟೆ ಮಾಡುತ್ತಿದ್ದ ಈ ಗಲಾಟೆ ಗುಬ್ಬಿಗಳು ಎತ್ತ ಹೋದವು. ಕಳೆದ ದಶಕಗಳಿಂದಲೂ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿಹೋದವಲ್ಲ. ಯಾಕೆ? ಕೆಲವು ಸಮೀಕ್ಷೆ ಹಾಗೂ ಅಧ್ಯಯನಗಳ ಪ್ರಕಾರ ಕಾರಣಗಳು ಈ ಕೆಳಗಿನವು:
- ಆಹಾರ ಮೂಲದಲ್ಲಿ ಇಳುವಿಕೆ : ಹೊಲ-ಗದ್ದೆಗಳಲ್ಲಿ ಕೀಟನಾಶಕ ಸಿಂಪಡಿಸುವೆಕೆಯಿಂದ ಗುಬ್ಬಿಯ ಹಾಗೂ ಅವುಗಳ ಮರಿಗಳ ಆಹಾರವಾದ ಎರೆಹುಳ, ಮುಂತಾದ ಸಣ್ಣ ಕೀಟಗಳು ಅವಕ್ಕೆ ಸಿಗುವುದು ಕಡಿಮೆಯಾಗಿದೆ. ಹಾಗೂ ಅವರೆಕಾಯಿ, ಮುಂತಾದ ದಾನ್ಯಗಳಲ್ಲಿ ಸಿಗುವ ಹಸಿರು ಹುಳಗಳು ಪರಿಷ್ಕರಿಸಿದ ಪೊಟ್ಟಣಗಳಿಂದ ಅವುಗಳಿಗೆ ಸುಲಭವಾಗಿ ಸಿಗುತ್ತಿಲ್ಲ.
- ಕಟ್ಟಡಗಳ ವಾಸ್ತುಶಿಲ್ಪ : ಮುಂಚಿನ ಮರದ ತೊಲೆಗಳಿಂದ ಹಾಗೂ ಹೆಂಚಿನಿಂದ ನಿರ್ಮಿಸುತ್ತಿದ್ದ ಮನೆಗಳು ಅವಕ್ಕೆ ಆರಾಮದಾಯಕವಾಗಿರುತ್ತಿದ್ದವು ಆದರೆ ಈಗಿನ ಕಾಂಕ್ರೀಟ್ ನಾಡಿನಲ್ಲಿ ಅವುಗಳ ನಿರ್ಮಿಸುವಿಕೆ ತೀರಾ ಕಡಿಮೆ. ಎಲ್ಲಾ ಕಡೆ ತಾರಸಿ ಮನೆಗಳು, ಗಾಜಿನ ಕಟ್ಟಡಗಳು, ಗ್ರಾನೈಟ್ ನಿರ್ಮಿತ ಕಟ್ಟಡಗಳೇ ತುಂಬಿವೆ. ಈ ಜಾಗಗಳು ಗುಬ್ಬಿಗಳ ಬದುಕಿನ ಕ್ರಮಕ್ಕೆ ಆರಾಮದಾಯಕವಾಗಿಲ್ಲ.
- ವಿಕಿರಣಗಳು : ಹಳ್ಳಿ ಹಾಗೂ ನಗರಗಳ ಮೊಬೈಲ್ ಟವರಿನ ವಿಕಿರಣಗಳು ಅವುಗಳ ದಾರಿ ತಪಿಸುತ್ತಿವೆ ಹಾಗೂ ಗುಬ್ಬಿಯ ಸೂಕ್ಷ್ಮ ನರಮಂಡಲಗಳು ವಿಕಿರಣಗಳ ಜೊತೆ ಬಾಳಲು ಸಹಕರಿಸುತ್ತಿಲ್ಲ. ವೈಜ್ಞಾನಿಕವಾಗಿ ಈ ಕಾರಣ ಸೈದಾಂತಿಸಿಲ್ಲವಾದರೂ ವಿಕಿರಣಗಳ ಏರುಪೇರಿನಿಂದ ಮನುಷ್ಯನ ನರಮಂಡಲಕ್ಕೆ ತೊಂದರೆಯಾಗುವುದಾದರೆ ಇನ್ನು ಪುಟ್ಟ ಗುಬ್ಬಿ ದೇಹ ಹೇಗೆ ತಡೆದೀತು.
- ಪರಿಸರ ನಾಶ : ಕಣ್ಮರೆಯಾಗುತ್ತಿರುವ ಮರ ಹಾಗೂ ಪೊದೆಗಳು, ಗುಬ್ಬಿಗಳ ಆಹಾರ ಹುಡುಕುವಿಕೆಗೆ ತೊಂದರೆಯಾಗಿದೆ.
- ವಾಯು ಹಾಗೂ ಶಬ್ದ ಮಾಲಿನ್ಯ : ಕಲ್ಮಶಗೊಂಡ ಗಾಳಿ ಹಾಗೂ ಬಾರಿ ವಾಹನಗಳ ಸದ್ದಿನಿಂದ ಅವುಗಳ ಸ್ವಚಂದ ಹಾರಾಟಕ್ಕೆ ತೊಂದರೆಯಾಗಿದೆ.
- ಪರಭಕ್ಷಕ : ಬೆಕ್ಕು ಹಾಗೂ ಹದ್ದುಗಳ ಪರಭಕ್ಷಣೆಯಿಂದ ಗುಬ್ಬಿಗಳ ಮರಿಗಳು ಕಣ್ಬಿಡುವುದ್ದಕ್ಕೂ ಮುಂಚೆಯೇ ಅವುಗಳ ಭಕ್ಷಣೆಯಾಗುತಿದ್ದೆ. ಮೊಟ್ಟೆಗಳ ನಾಶದಲ್ಲಿ ಮನುಷ್ಯನ ಪಾತ್ರವು ಇಲ್ಲದಿಲ್ಲ.
- ಆಹಾರ ಪೈಪೋಟಿ: ಗುಬ್ಬಿಗಳ ಆಹಾರ ಇತರೆ ಪಕ್ಷಿಗಳಾದ ಕಾಗೆ, ಪಾರಿವಾಳ ಹಾಗೂ ಮುಂತಾದ ದೊಡ್ಡ ಹಕ್ಕಿಗಳಿಂದ ಪೈಪೋಟಿಯಿಂದಾಗಿ ಸಣ್ಣ ಗುಬ್ಬಿಗೆ ಚಿಕ್ಕ ಪಾಲು ದೊರೆಯುತ್ತಿವೆ.
ಈಗೆ ಇನ್ನು ಅನೇಕ ಕಾರಣಗಳಿಂದ ಗುಬ್ಬಿಗಳ ಸಂಖ್ಯೆ ಗಣನೀಯವಾಗಿ ಅಳಿವಿನಂಚಿನಲ್ಲಿದೆ. ಐಯುಸಿಎನ್ ವರದಿಯ ಪ್ರಕಾರ ಕಳೆದ 25 ವರ್ಷಗಲ್ಲಿ ಗುಬ್ಬಿಗಳ ಸಂತತಿ ಶೇ.71ರಷ್ಟು ಕುಸಿದಿದೆ. ಈ ಪಕ್ಷಿ ಸಂಕುಲವನ್ನು ಸಂರಕ್ಷಿಸಲು 2012ರಲ್ಲಿ ದಿಲ್ಲಿಯ ರಾಜ್ಯ ಪಕ್ಷಿಯಾಗಿ ಘೋಷಿಸಲಾಯಿತು. ಇತ್ತೀಚಿಗೆ ಬಿಹಾರವೂ ಸಹ ರಾಜ್ಯ ಪಕ್ಷಿಯಾಗಿ ಘೋಷಿಸಿದೆ.
ಪರಿಸರ ವಿಜ್ಞಾನದಲ್ಲಿ ಪದವೀಧರರಾದ ಶ್ರೀ ಮಹಮ್ಮದ್ ದಿಲಾವರ್ ಅಳಿವಿನಂಚಿನ ಗುಬ್ಬಿಗಳನ್ನುಳಿಸಲು ನೇಚರ್ ಫಾರ್ ಎವರ್ ಎಂಬ ಸಂಸ್ಥೆ ಆರಂಭಿಸಿ ಇನ್ನಿತರ ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಸೇರಿ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನದಿಂದ ಕಣ್ಮರೆಯಾಗುತ್ತಿರುವ ನಮ್ಮ ಪ್ರೀತಿಯ ಗುಬ್ಬಿಗಳು ಮತ್ತೆ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಲಿ ಎಂದು ಆರೈಸೋಣ ಹಾಗೂ ಬೆಂಬಲಿಸೋಣ.
ಚಂದ್ರಶೇಖರ ಕುಲಗಾಣ
ಮಾಹಿತಿ ಹಾಗೂ ಚಿತ್ರ ಕೃಪೆ
1. Veterinary World Vol.3(2): 97-100 https://www.researchgate.net/publication/49290191_The_case_of_the_Disappearing_House_Sparrow_Passer_domesticus_indicus/link/548c66b80cf214269f1ddffc/download
2. ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ದಿನಪತ್ರಿಕೆ
3. ಗೂಗಲ್ ಅಂತರ್ಜಾಲ