ಗೋವಿಂದಯ್ಯ (ಭಾಗ -೧)

-ಒಂದು-

ಗೋವಿಂದಯ್ಯ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದು ಒಂದು ಅಂದಾಜಿನಲ್ಲಿ ನಲವತ್ತೈದು-ಐವತ್ತು ವರ್ಷಗಳೇ ಆಗಿರಬಹುದು. ಅದು ಯಾವ ಅಂದಾಜು ಅಂತ ಎಂದೂ ಅವರಿಗೇ ತಿಳಿದಿಲ್ಲ. ಆದರೂ, ಯಾರೇ ಆಕಸ್ಮಿಕವಾಗಿ ಕೇಳಿದರೂ, ಅವರು ಹೇಳೋದೇ ಹಾಗೆ. ಆಗ ಈ ಬೆಂಗಳೂರು ನೆಮ್ಮದಿಯ ಬದುಕಿನ ನಗರವಾಗಿತ್ತು…ಕೋಟಿಗಟ್ಟಲೆ ಬರೀ ಕೆಟ್ಟ ಜನಗಳೇ ಸತ್ತೂ ಸತ್ತು, ಇರುವೆ ಹರಿದಾಡಲೂ ಕೊಂಚ ತಾವಿಲ್ಲದ ಹಾಗೆ ಈಗ ನರಕ ಹೇಗೆ ಗಬ್ಬಾಗಿ ನಾರುತ್ತಾ ಇರಬಹುದೋ, ಅದೇ ಮಾದರಿಯಲ್ಲೇ ಇದೆ, ಈ ನಮ್ಮ ಹೆಮ್ಮೆಯ ನಗರ ಇಂದು! ಹಿಗ್ಗಲಾರದೆ ಹಿಗ್ಗುತ್ತಾ ಇನ್ನೇನು ಒಡೆದು ಕರುಳೆಲ್ಲ ಆಚೆ ಚೆಲ್ಲುವುದೋ ಅನ್ನಿಸುವ ಭಾರೀ ಡೊಳ್ಳು ಹೊಟ್ಟೆಯ ಹಾಗೆ.

ಗೋವಿಂದಯ್ಯ ತನ್ನ ಹುಟ್ಟುಹಳ್ಳಿ ತೊರೆದಾಗ, ಕರಾರುವಾಕ್ಕಾಗಿ ಅಲ್ಲಿ ಹತ್ತೊಂಬತ್ತು ಮನೆ ಇದ್ದದ್ದು. ಮನೆ ಎಂದರೆ, ಆ ಕಡೆ ಮನೇನೂ ಅಲ್ಲ, ಈ ಕಡೆ ಗುಡಿಸಲೂ ಅಲ್ಲ ಅನ್ನೋ ಹಾಗೆ. ಎರಡೋ ಮೂರೋ ಉತ್ತಮ ಅಷ್ಟೇ; ಅದೂ ಅಲ್ಪಸ್ವಲ್ಪ ಹಣ ಅಂತ ಇದ್ದವರದ್ದು. ಆದರೆ, ಬೆಂಗಳೂರಿನ ಹಾಗೆ, ಆ ಹಳ್ಳಿ ಕೂಡ ಈಗ ಉದ್ದಗಲಕ್ಕೆ ಬೆಳೆದು, ಹೋಬಳಿ ಕೇಂದ್ರ ಆಗಿಬಿಟ್ಟಿದೆ! ಹೊರ ಊರಿನವರಷ್ಟೇ ಅಲ್ಲದೆ, ಹೊರರಾಜ್ಯಗಳಿಂದ ಸಹ ವಲಸೆ ಬಂದು ಅಂಗಡಿ, ಹೋಟೆಲ್ ಮುಂತಾಗಿ ವ್ಯಾಪಾರ ಮಾಡ್ತಿದಾರೆ- ಅವರಲ್ಲಿ ಸೇಟುಗಳು, ಮಲಯಾಳಿ, ಮರಾಠಿ ಎಲ್ಲರೂ ಇದಾರೆ! ಗೋವಿಂದಯ್ಯ, ‘ಈ ಜನ ವಟ್ಟೆ ಒರೆಯಕ್ಕಂತ ಎತ್ತೆತ್ಲಿಂದ ಅಂತೆಲ್ಲಾ ಬತ್ತಾರಪ್ಪೋ’ ಅಂತ ಬೆರಗಾಗೋದು ಉಂಟು! ‘ಮೂರ್ಮನೆ ಕೊಂಪೇನೂ ಬುಟ್ಟಿಲ್ವಲ್ಲ!’ ಎಂದೆಲ್ಲಾ.

ತಿಂಡಿ ತಿಂದು ಹೊಸ್ತಿಲಿನಿಂದ ಆಚೆ ಕಾಲಿಟ್ಟಾಗ, ಎಂದಿಗಿಂತ ಅರ್ಧ ಘಂಟೆ ತಡ ಆಗಿತ್ತು. ಗೋವಿಂದಯ್ಯ, ನಿತ್ಯ ಕರಾರುವಾಕ್ಕಾಗಿ ಹತ್ತು ಘಂಟೆಗೇ ಮನೆ ಬಿಡುವ ರೂಢಿ. ಹೇಗಿದ್ದರೂ ದೊಡ್ಡ ಮಗ ಬಹಳಷ್ಟು ವ್ಯವಹಾರ ಎಲ್ಲವನ್ನೂ ತಾನೆ ಅಚ್ಚುಕಟ್ಟಾಗಿಯೇ ನಡೆಸಿಕೊಂಡು ಹೊಗುತ್ತಿದ್ದಾನೆ; ಹಾಗಾಗಿ, ಎರಡೂ ಲಾಡ್ಜಿಗೂ ಅತ್ತಿಂದಿತ್ತ ಓಡಾಡುವ ಒಬ್ಬ ತಮ್ಮ ಇದ್ದರೂ, ಸಂಪೂರ್ಣ ಮೇಲ್ವಿಚಾರಣೆ ಸ್ವತಃ ಅಣ್ಣಂದೇ. ಗೋವಿಂದಯ್ಯ ಸಾಮಾನ್ಯವಾಗಿ ಲಾಡ್ಜ್ ಗಳ ಕಡೆ ತಲೆ ಹಾಕುವುದು ಕಮ್ಮಿ. ಅವರು ಏನಿದ್ದರೂ, ದಶಕಗಳ ಹಿಂದೆ ಪ್ರಾರಂಭಿಸಿದ್ದ, ಈಗ ಅತ್ಯಂತ ಪ್ರಖ್ಯಾತಿ ಪಡೆದಿದ್ದ “ಕಾರ್ತಿಕೇಯ ದೋಸೆ ಹೋಟೆಲ್” ನಲ್ಲೇ, ಅದರ ಗಲ್ಲದ ಮೇಲೇ ಆಸೀನರಾಗಿಯೇ, ಅಧಿಪತ್ಯ ಮಾಡುವ ನಿತ್ಯಕ್ರಮ ಇದ್ದವರು. ಬೆಳಿಗ್ಗೆ ಆರರಿಂದ ರಾತ್ರಿ ಒಂಭತ್ತರ ತನಕ ಸಾವಿರ ಸಾವಿರ ಕಾಲುಗಳ ಓಡಾಟ ಒಳಹೊರಗೆ! ಅಂಥ ವ್ಯವಸ್ಥೆ ಕಟ್ಟಿದ್ದರು, ಗೋವಿಂದಯ್ಯ. “ಅಪ್ಪ, ಸ್ವಲ್ಪ ಚೆಕ್ ಬುಕ್ ಕೊಡಿ, ಪೇಮೆಂಟ್ಸ್ ಇವೆ” ಅಂದ ಮಗ, ಕಾರ್ತೀಕೇಯನಿಗೆ, ಗಲ್ಲ ಎಳೆದು ಕೊಡುತ್ತಾ, “ಅಂಗೇ ವಸಿ ಲಾಡ್ಜಿನ ಕಡೆ ಹೋಗ್ಬಾ…ಮಾರ್ಕಂಡ ಅದೇನ್ ಮಾಡ್ತಾ ಅವನೆ ಅಂತ ನೋಡು…” ಅಂದರು. ಆ ಕ್ಷಣ ಗಿರಾಕಿಯ ಬಿಲ್ ಬಂತು; ಬರ್ತಾನೇ ಇವೆ-ಒಂದರ ನಂತರ ಒಂದು; ಹಾಗೆ ಚಿಲ್ಲರೆ ಎಣಿಸಿ ಕೊಟ್ಟರು.

ಗೋವಿಂದಯ್ಯ ಹಳ್ಳಿ ಬಿಟ್ಟು ಬೆಂಗಳೂರು ಸೇರಿದಾಗ, ಕೇವಲ ಹತ್ತು ವಯಸ್ಸು. ಅವ್ವ ಜ್ವರದಲ್ಲಿ ಬೆಂದು ಸತ್ತುಹೋದ ವರ್ಷಕ್ಕೇ, ಅಪ್ಪ ಮಲತಾಯಿ ಕಟ್ಟಿಕೊಂಡ. ಆಯಮ್ಮ, ಪಾಪ, ಪುಟ್ಟ ಗೋವಿಂದನ ಬಾಳಲ್ಲಿ ‘ಯಮದೂತಮ್ಮ ಆಗ್ಬುಟ್ಳು!’ ಆಗ ಗೋವಿಂದನಿಗೆ ಎಳಯ ಎಂಟು ವರ್ಷ. ಹಗಲು ಬರೀ ಜೀತ; ಮೈಮುರಿಯೋ ಜೀತ! ರಾತ್ರಿ, ಕೊಟ್ಟಿಗೇಲಿ ದನಗಳ ಜೊತೆಗೆ ಒಂದು ಮೂಲೆಯಲ್ಲಿ ಬಿದ್ದುಕೊಂಡರೆ ಆಯಿತು; ‘ಸುತ್ಲೂ ಜುಯ್ಞ್ ಅನ್ನೋ ನೊರ್ಜ’; ಅಲ್ಲಿ ಕೂಡ ನಿದ್ದೇ ಅಂದ್ರೆ ನಿದ್ದೆ ಆ ಹುಡುಗನಿಗೆ!…”ಬರೀ ದನ ಮೇಯಿಸ್ಲಾ ಗೋಯಿಂದ” ಅಂದಿದ್ದರೆ, ವೈನಾಗೇ ಮಾಡೋನೋ ಏನೋ; “ಅದ ಬುಟ್ಟು, ಹಿತ್ಲ ಕಡೇಲೇ ಇದ್ದ್ ವಲದ ಸುತ್ತ ದನಾನೆಲ್ಲ ಮೆಯ್ಯಾಕ್ ಬುಟ್ಬುಡೋಳು ಮಾರಿ”, ಪಾಪ, ಗೋವಿಂದನಿಗೆ, “ಮನೆ ಗುಡ್ಸೋದು, ವರ್ಸೋದು, ಬಟ್ಟೆ -ಪಾತ್ರೆ ಎಲ್ಲಾ ಉಜ್ಜೋದು ಅಂತ ಎಲ್ಲಾನೂವೆ”…ಜೊತೆಗೆ, “ಚಿಗವ್ವ ಯೋಳ್ಬುಟ್ಳು ಅಂದ್ರ್ ಆತು” ಅಪ್ಪನ ಬಡಿತ; ಏನೇ ಸಿಕ್ಕಿದರೂ ಅದರಲ್ಲೆ. ಹೀಗೆ ಗೋವಿಂದ ಎರಡು ವರ್ಷ ಕಷ್ಟಪಟ್ಟ. ಯಾವಾಗ ಬಿಡುಗಡೆ ಇದ್ದಹಾಗೆ ಕಾಣಲಲ್ಲವೋ, ಒಂದು ದಿನ, ಮಲತಾಯಿ ಕಾಸು ಬಚ್ಚಿಡೋ ಜಾಗ ಪತ್ತೆಹಚ್ಚಿ, ಸ್ವಲ್ಪ ಜೇಬಿಗೆ ಇಳಿಸಿ, ಕಂಬಿ ಕಿತ್ತ. ಎಲ್ಲಿಗೆ, ಎತ್ತ ಏನೂ ಗೊತ್ತಿಲ್ಲ, ಪಕ್ಕದ ದೊಡ್ಡ ಹಳ್ಳಿ ತನಕ ಓಡೋಡಿ ಬಸ್ ಹತ್ತೇಬಿಟ್ಟ. ಹತ್ತಿ ಯಾವುದೋ ಊರು ಸೇರಿ, ಅಲ್ಲಿಂದ ಮತ್ತೆ ಬೇರೆ ಬಸ್ಸು. ಊರಿಗೆ ಹತ್ತಿರ, ಇದ್ದು ಅಕಸ್ಮಾತ್ ಗೊತ್ತಾಗಿಬಿಟ್ಟರೆ!…ಜೀತದ ಸಂಕಷ್ಟ, ಆ ಪುಟ್ಟನಿಗೂ, ಸ್ಕೂಲಿಗಿಂತಲೂ ಚೆನ್ನಾಗಿ ದೊಡ್ಡ ಪಾಠ ಕಲಿಸಿಬಿಟ್ಟಿತ್ತು!

ಗೋವಿಂದಯ್ಯ ಹಾಗೇ ಕೂತಲ್ಲಿಂದಲೇ ಹಿಂದೆ ತಿರುಗಿ, ಆಂಜನೇಯನ ಲೈಫ್ ಸೈಜ್ ಫೋಟೋ ಒಂದು ಸಲ ನೋಡಿ, ಅಲ್ಲೇ ಮತ್ತೊಮ್ಮೆ ಮನಸ್ಸಿನಲ್ಲೇ ವಂದಿಸಿ, ಆಳವಾಗಿ ಗಂಧದಕಡ್ಡಿ ಸುವಾಸನೆ ಆಘ್ರಾಣಿಸಿ ಖುಷಿಯಾದರು. “ಮನೆ ದೇವ್ರು ಆಂಜನೇಯಸ್ವಾಮಿ; ಆದರೂ, ಯಾಕೆ ನಂಗೆ ಗೋವಿಂದಯ್ಯ ಅಂತ ಎಸರು”…ಹೆಸರೇನೋ ಎಲ್ಲರಿಗೂ ಅಪ್ಪಂದಿರೇ ಇಟ್ಟಿದ್ದು ಅನ್ನೋ ರೂಢಿ ಇದ್ದರೂ, ಪಂಚಾಂಗ ನೋಡಿ ಕಟ್ಟಿಕೊಡುತ್ತ ಇದ್ದವರು ‘ಐನೋರೇ’ ಅಲ್ಲವೇ. ಅಂದರೆ, ಎಲ್ಲರ ಹೆಸರೂ “ಐನೋರ್ದೂ ಅಂತ್ಲೇ ಆಯ್ತಲ್ಲ…?” ಅಷ್ಟರಲ್ಲಿ ಗಿರಾಕಿ. ಒಬ್ಬರ ಮೇಲೆ ಒಬ್ಬರು…ಹನುಮಂತ ಗೋವಿಂದನ ಪರಮಭಕ್ತ; ಹಂಗಾಗಿ ಆ ಹೆಸರೂ ಓಕೆ!…ಈಗ ದೊಡ್ಡ ವ್ಯಾಪಾರದ ಧಣಿ ಆದ್ದರಿಂದ, ಗೋವಿಂದಯ್ಯ ಅಲ್ಲಲ್ಲಿ ಒಮ್ಮೊಮ್ಮೆ ಇಂಗ್ಲಿಷ್ ಸದ್ದು ಮಾಡೋರು…ಈಗೀಗ ಅವರ “ಬಾಸೆ ಕೂಡ ವಸಿ ಮದ್ಲಗಿಂತ ಸುದ್ದ ಆಗೈತೆ”. ಗೋವಿಂದಯ್ಯ ಬದಲಿಗೆ, ಮಾಡ್ರನ್ನಾಗಿ ಗೋವಿಂದಮೂರ್ತಿ ಅಂತಲೋ, ಗೋವಿಂದರಾಜ್, ಅಥವಾ ಶಾರ್ಟ್ ಆಗಿ ಗೋವಿಂದ್ ಅಂತಾನೋ ಕಟ್ಟಿದ್ದರೆ…? ಹೆಸರು ಇಡೋದ್ರಲ್ಲೂ, “ವಸಿ ಕಾಲಕ್ ತಕ್ಕಂಗ್ ಇರ್ಬ್ಯಾಡ್ದಾ; ಅದ್ಕೂ ಯಾಕೀ ಜಾತಿ-ಗೀತಿ…!”ಮಗನ ಫೋನ್ ಬಡ್ಕೊಂಡು, ಗೋವಿಂದಯ್ಯ ಎಚ್ಚರ ಆದಂತೆ ಆಗಿ, ಮಾತಾಡ್ತಾನೇ, ಬಲಗೈಯ್ಯಲ್ಲಿ ಗಿರಾಕಿಗಳ ಕ್ಯಾಶ್ ಆಟದಲ್ಲಿ ಮಗ್ನ.

ಅದಾವ ಊರು ತಲುಪಿದ್ದು ಅನ್ನುವ ಭ್ರಮೆ ಕೂಡ ಕಿಂಚಿತ್ತೂ ಇಲ್ಲದೆ, ಕೂತಲ್ಲೇ ನಿದ್ದೆಯಲ್ಲಿದ್ದ ಹುಡುಗನ್ನ, ಟಿಕೆಟ್ ಇಲ್ಲ ಅಂತ ಕಂಡಕ್ಟರ್ ಬೈದು ಇಳಿಸಿದ್ದ. ಯಾವ ಊರಾದರೆ ಏನು, ದಿಕ್ಕು-ದೆಸೆ ಇಲ್ಲದ ಅಲೆಮಾರಿಗೆ! ಸದ್ಯ ನಡುದಾರಿಯಲ್ಲೇ ಇಳಿಸಿರಲಿಲ್ಲ. ಬಸ್ ಸ್ಟಾಂಡ್ ನಲ್ಲೇ ಸುಸ್ತಾಗಿ, ಹಸಿದು ಮಲಗಿದ್ದ, ‘ಪೋಲೀಸ್ ಮಾಮ’ ಬಂದು ಏಳಿಸೋವರೆಗೆ. ಪಾಪ, ಒಳ್ಳೇ ಮಾಮ, ಅವರೇ ನೀರು ಕುಡಿಸಿ, ಯಾವುದೋ ಹೋಟೇಲಲ್ಲಿ ಕೆಲಸಕ್ಕೆ ಸೇರಿಸಿದ್ದರು. ಹೋಟೆಲಿನ ಕ್ಲೀನರ್ ಕೆಲಸ ಮಾಡ್ತಾ ಮಾಡ್ತಾ, ಗಿರಾಕಿಗಳಿಂದ ಆ ಊರು ಕುಣಿಗಲ್ಲು ಅಂತ ತಿಳೀತು. ಅಲ್ಲಿ, ಬಹುಶಃ, ಮೂರು ವರ್ಷ ಇದ್ದ. ನಂತರ ಯಾರೋ ಪುಣ್ಯಾತ್ಮರ ಸಲಹೆ ಮೇಲೆ, ಬೆಂಗಳೂರು ಬಿದ್ದಿದ್ದ, ಹುಡುಗ ಗೋವಿಂದ. ಅಲ್ಲೂ ಅವನಿಗೆ ಗೊತ್ತಿದ್ದೇ ಕೆಲಸ ಸಿಕ್ಕಿತ್ತು; ಈಗ ಸಪ್ಲೈಯರ್ ಆಗಿ! ಅಂದಾಜು ಇಪ್ಪತ್ತು ವಯಸ್ಸು ತುಂಬೋ ವರೆಗೂ, ಬೇರೆಬೇರೆ ಹೋಟೆಲ್ ಗಳಲ್ಲಿ ಜೀತ ಉಜ್ಜಿ, ಅಷ್ಟರಲ್ಲಿ ಆ ವೃತ್ತಿ ರಹಸ್ಯದಲ್ಲಿ ಪರಿಣಿತನಾಗಿ, “ಎಸ್ಟ್ ದಿವ್ಸ ಅಂತ ಹಿಂಗೇ, ಬ್ಯಾರೋರ್ ಕೈಕೆಳಗ್ ಬದ್ಕಾದು”, ಅಂದುಕೊಂಡು, ತಾನು ಉಳಿಸಿದ್ದ ಅಲ್ಪಸ್ವಲ್ಪ ಕೈಕಾಸಿನಲ್ಲಿ ಒಂದು ತಳ್ಳೋ ಗಾಡಿ ಖರೀದಿಸಿ, ದೋಸೆ-ಇಡ್ಲಿ, ಕಾಫಿ-ಟೀ ವ್ಯಾಪಾರವನ್ನ ರೋಡ್ ಸೈಡ್ ನಲ್ಲಿ ಆರಂಭಿಸಿದ. ಅಷ್ಟರಲ್ಲಿ, ಅವನಿಗೆ ಸಾಕಷ್ಟು ಜನ ಪರಿಚಯ ಸಹ ಆಗಿತ್ತು. ಅಷ್ಟೇ…ಗೋವಿಂದ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ತಳ್ಳೋ ಗಾಡಿ ಹೋಗಿ, ಸಣ್ಣದಾಗಿ ದೋಸೆ ಹೋಟೆಲ್ ಆಯಿತು… ಅವನ ‘ಕೈ’, ತನ್ನ ಅನುಭಾವದ ಭಕ್ತಿಯಿಂದ, ರುಚಿ ಅನ್ನುವ ಅಮೃತವನ್ನೇ ಆಪೋಶಿಸಿತ್ತು.

ಕರಾರುವಾಕ್ಕಾಗಿ ತಿಳಿದಿಲ್ಲದಿದ್ದರೂ, ಅಂದಾಜು ಮೂವತ್ತನೇ ವಯಸ್ಸಿಗೆ, ತನ್ನ ಊರಿನ ಕಡೆಯ ಪರಿಚಯದ ವ್ಯಕ್ತಿಯ ಮೂಲಕ, ತನ್ನದೇ ಜಾತಿಯ ಒಬ್ಬಳು ಹುಡುಗಿ ಮದುವೆಯಾದ. ಬಾಡಿಗೆ ಮನೆ ಬಿಟ್ಟು, ಮೂವತ್ತು ನಲವತ್ತು ಸೈಟ್ ಖರೀದಿ ಮಾಡಿ, ಸುಮಾರು ಅನ್ನಿಸುವಂತಹ ತನ್ನದೇ ಒಂದು ಮನೆ ಕಟ್ಟಿಕೊಂಡಿದ್ದ…ಕ್ರಮೇಣ ಏಣಿ ಏರುತ್ತ, ಏರುತ್ತಾ, ಗೋವಿಂದ ಹೋಗಿ ಗೋವಿಂದಯ್ಯ ಆಯ್ತು…ಹಾಗೇ ಬಹುವಚನ ಸಹ ಬಂದೇ ಬಿಟ್ಟಿತ್ತು!… ಎಲ್ಲ ಥರದ ಕೊಳೆಯನ್ನು ‘ಕಾಲದ ಬ್ರಶ್’ ಉಜ್ಜುತ್ತಾ ಉಜ್ಜುತ್ತಾ ಅಳಿಸಿ ಹಾಕುವುದಲ್ಲದೆ, ಪ್ರಖರ ಕಿರಣದ ಕಾಂತಿಯಲ್ಲಿ ಶುಭ್ರ ಹೊಳೆಯುವಂತೆ ಮಾರ್ಪಡಿಸುತ್ತದೆ ಈ ಬದುಕು…!

ಮಗ ಬಂದು, “ಅಪ್ಪ ಊಟ…?” ಅಂದಾಗ, “ಆಯ್ತಪ್ಪ, ನಡಿ…” ಗಲ್ಲ ಬಿಟ್ಟು ಏಳ್ತಾ ಇದ್ದ ಹಾಗೇ, “ಮಾರ್ಕಂಡ, ಏನ್ ಮಾಡ್ತಾ ಅವನೆ” ಅಂತ ಕೇಳಿದರು. ಉತ್ತರ ಬರೋದಕ್ಕಿಂತ ಮುಖ್ಯವಾಗಿ, ಕೇಳಿದೆ ಅನ್ನೋ ಹಾಗೆ…ಕಾರಿನತ್ತ ಹೆಜ್ಜೆ ಇಡುತ್ತಾ ಹೊರಟರು. ಗೋವಿಂದಯ್ಯ ಮದುವೆ ಆಗುವಾಗ ಸಹ, ತನ್ನ ಸಣ್ಣ ದೋಸೆ ಹೋಟೆಲ್ ಪ್ರಾರಂಭದ ಪೂಜೆ ಮಾಡಿದ್ದ ‘ಐನೋರ’ನ್ನೇ ಆಹ್ವಾನಿಸಿದ್ದ. ಎಲ್ಲ ಶಾಸ್ತ್ರ ಮುಗಿಸಿ, ಇಬ್ಬರೂ ಐನೋರ ಕಾಲಿಗೆ ನಮಸ್ಕಾರ ಮಾಡಿದ ಮೇಲೆ, “ಅಪ್ಪಾ, ಗೋವಿಂದ; ನಿನ್ನ ಹೋಟೆಲ್ ಪೂಜೇನೂ ನಾನೇ ಮಾಡಿದ್ದಾದರೂ, ಆಗ್ಗೂ ಈಗ್ಗೂ ನಿನ್ನ ಭವಿಷ್ಯದಲ್ಲಿ ಒಂದು ಮಹತ್ವದ ಬದಲಾವಣೆ ಕಾಣ್ತಾ ಇದೆ. ಅದೇನಂದರೆ …ಈ ನಿನ್ನ ವಧು ಲಕ್ಷ್ಮಿ ಇದಾಳಲ್ಲ, ಈಕೆ ಬರೀ ಲಕ್ಷ್ಮಿ ಅಲ್ಲವಯ್ಯ; ನನ್ನ ಗುಣಾಕಾರದ ಪ್ರಕಾರ, ಇವಳು ನಿನ್ನ ಭವಿಷ್ಯದ ಮಹಾಲಕ್ಷ್ಮಿ ಆಗ್ತಾಳೆ ಕಣಯ್ಯಾ…ಈವತ್ತಿಗೆ ಇನ್ನ ಹತ್ತು ವರ್ಷಕ್ಕೆ ನೋಡು, ನೀನೊಬ್ಬ ದೊಡ್ಡ ಹೋಟೆಲ್ ಉದ್ಯಮಿ ಆಗಿರ್ತೀಯ…ಎಲ್ಲ ಈ ಮಹಾಲಕ್ಷ್ಮಿ ತಂದ ಭಾಗ್ಯ…ನೋಡ್ತಾ ಇರು…ಆ ನಿನ್ನ ಸ್ವಾಮಿ, ಆಂಜನೇಯನ ಕೃಪಾಕಟಾಕ್ಷ!” ಅಂತ ಹೇಳಿ ಹರಸಿದ್ದರು. ಅದು ಅಕ್ಷರ ಸಹ ಸತ್ಯ ಆಗಿತ್ತು. ಮೊದಲಿನ ಅತೀ ಸಣ್ಣ ಹೋಟೆಲ್ ಹೋಗಿ, ಸ್ವಲ್ಪ ದೊಡ್ಡದಾಗಿ, ಮತ್ತೀಗ ತನ್ನದೇ ಜಾಗದಲ್ಲಿ, ಈ ಬಂಗಲೆ ಥರದ್ದು…!ಈಗಲೂ ದೋಸೆ ಹೋಟೆಲೇ ಆದರೂ, ಹೆಸರು “ಕಾರ್ತಕೇಯ” ಆಗಿದೆ; ಹೆಂಡತಿ ಹೆಸರನ್ನೇ ಇಡಬೇಕು ಅನ್ನೋ ಭಾರಿ ಬಯಕೆ ಇದ್ದರೂ,”ಲಕ್ಸ್ಮೀನೇ ಮಗನ ಎಸರೇ ಇರ್ಲಿ” ಅಂತ ಹಠ ಮಾಡಿದ್ದು. ಆದ್ದರಿಂದ ಇದು “ಕಾರ್ತಿಕೇಯ ದೋಸೆ ಹೋಟೆಲ್” ಅಂತ ಆದಮೇಲೆ, ಮೊದಲನೇ ಲಾಡ್ಜಿಗೆ “ಲಕ್ಷ್ಮಿ ಲಾಡ್ಜ್” ಹಾಗೂ, ಎರಡನೇದಕ್ಕೆ “ಮಾರ್ಕಂಡೇಯ ಲಾಡ್ಜ್” ಅಂತ ಹೆಸರು ಇಟ್ಟಿದ್ದರು. ಐನೋರು ಹೇಳಿದ್ದಂಗೆ, ಮದುವೆ ಆದ ಹತ್ತು ವರ್ಷಕ್ಕೇ ಗೋವಿಂದ ಹೋಗಿ ಗೋವಿಂದಯ್ಯ ಅಂತ ಆಗಿ, ಹಾಗೇ ಏಳಿಗೆ ಸಹ ಆಗೋಗಿತ್ತು.
ವಾಸ್ತವವಾಗಿ, ತನ್ನ ಭವಿಷ್ಯದ ಬಗ್ಗೆ ಜಾಗಟೆ ಬಾರಿಸಿದ್ದ ಐನೋರನ್ನ ಕರೆದು, ದೊಡ್ಡದಾಗಿ ಪುರಸ್ಕಾರ ಮಾಡುವ ಯೋಜನೆ ಗೋವಿಂದಯ್ಯನ ಮನಸ್ಸಿನಲ್ಲಿ ನಾಟಿತ್ತಾದರೂ, ಹತ್ತು ವರ್ಷ ಆಗೋ ಹೊತ್ತಿಗೆ ಐನೋರ ಸಾವಿನ ಸುದ್ದಿ ಬಂದಾಗಿತ್ತು…

ಮದುವೆ ಆದ ಹೊಸದರಲ್ಲಿ, ಲಕ್ಷ್ಮೀಗೂ ಗೋವಿಂದಯ್ಯನ ಜೊತೆಗೆ ಹೋಟೆಲ್ ನಲ್ಲೇ ಕೆಲಸ. ತರಕಾರಿ ಹಚ್ಚೋದು, ಪಾತ್ರೆ ತೊಳೆಯೋದು, ದೋಸೇನೂ ಹಾಕೋದು, ಹೀಗೆ; ಒಂದ,ಎರಡ; ಅಲ್ಲದೆ ಹೋಟೆಲ್ ನಲ್ಲಿ ಕಲಸಗಾರರನ್ನ ಇಡೋ ಹಾಗೆ ಇನ್ನೂ ಬೆಳೆದಿರಲಿಲ್ಲ; ಅಂದಮೇಲೆ, ಹಣ ಉಳಿಸಲೇಬೇಕು ಅಂದರೆ, ಹೀಗೇ ತಾನೆ. ಗೋವಿಂದಯ್ಯನಿಗೆ ಪಾಪ ಅನ್ನಿಸೋದು. “ಹೊಸ್ ಮದ್ವೆ ಎಣ್ಣು ಬ್ಯಾರೆ…ಅವಳ್ಗೂ ಗಂಡನ ಜೊತ್ಗೆ ಸುತ್ತಾಡ್ಬೇಕು ಅನ್ನೋ ಆಸೆ-ಗೀಸೆ ಇರಾಕಿಲ್ವ”…ಅಂಥ ಹೊಚ್ಚ ಹೊಸ ಬದಕನ್ನೇ ತ್ಯಾಗ ಮಾಡಿ, ತಾನೂ ಜೀವ ತೆಯ್ದು ಕಟ್ಟಿದ್ದ ಹೋಟೆಲ್ ಅಂತ ಅವಳಿಗೂ ಹೆಮ್ಮೆ ಇದೆ; ಖಂಡಿತ! ಇಲ್ಲ ಅಂತಲ್ಲ. ಆದರೂ’…ಹೀಗೆ ತನ್ನಲ್ಲೇ ಮಗ್ನ ಆಗಿದ್ದ ಗೋವಿಂದಯ್ಯ, ದೊಡ್ಡ ಸದ್ದಿನಿಂದ ಒಂದು ಆಕಳಿಕೆ ಹೊರ ಹಾಕಿದರು. ಮಧ್ಯಾಹ್ನದ ಊಟ ಅದ ಮೇಲೆ, ಸ್ವಲ್ಪ ಮಲಗೋದು ರೂಢಿ. ಯೋಚನೆ ಮಾಡ್ತಾ ಹಾಗೆ ನಿದ್ದೆಗೆ ಏರಿದ್ದರು. ರೂಢಿಯಲ್ಲಿ ನಿದ್ದೆ ಅರ್ಧ ಅಥವ ಮುಕ್ಕಾಲು ಘಂಟೆ, ಅಷ್ಟೇ. ನಾಲ್ಕರ ಅಂದಾಜಿಗೆ ಎದ್ದು ರೆಡಿ ಆಗಿ, ಸ್ವಲ್ಪ ಹೊತ್ತು ಹೆಂಡತಿ ಸಂಗಡ ಹರಟೆ ಹೊಡೆಯೋದು. ಅದನ್ನು ಮಾತ್ರ ತಪ್ಪಿಸೋ ಹಾಗೆ ಇಲ್ಲ-ಅಷ್ಟು ಪ್ರೀತಿ; ಅಕ್ಷರವನ್ನೇ ಅರಿಯದ, ಈ ಬೆಸೆದ ಜೀವಿಗಳ ನಡುವೆ! ಜೊತೆಜೊತೇಗೆ, ವ್ಯಾಪಾರದ ಆಗುಹೋಗುಗಳ ಬಗ್ಗೆ ಮಾತಾಡಿದ ನಂತರ ಮತ್ತೆ ಹೊರಡುವ ಅಭ್ಯಾಸ. ಆರಂಭಕ್ಕೆ ಲಕ್ಷ್ಮೀನೆ ತಾನೆ ಗಂಡನ ಬಲಗೈ ಆಗಿ, ಏಳಿಗೆಗೆ ಕಾರಣ ಆದದ್ದು. ಮೇಲಾಗಿ, ಜೋಯಿಸರು ಅಪ್ಪಣೆ ಕೊಟ್ಟಿದ್ದಂತೆ, ಲಕ್ಷ್ಮಿ ಕಾಲ್ಗುಣದಿಂದ ಅಲ್ಲವೇ ಇಷ್ಚೆಲ್ಲ! ಆದರೂ, ಲಕ್ಷ್ಮಿ ದೇವಸ್ಥಾನದಲ್ಲಿನ ಶಿಲಾಲಕ್ಷ್ಮಿ ರೀತಿ. ಮಾತು ಅತೀ ವಿರಳ! ಗೋವಿಂದಯ್ಯ ಒಂದಿಪ್ಪತ್ತು ಮಾತಾಡಿದರೆ, ಅವಳು ಒಂದೇ ಒಂದು, ಮುತ್ತಿನಂತೆ! ಆದರೂ, ಗಂಡನ ಜೊತೆಗೆ ಕೂತು ಮಾತಾಡೋ ಖುಷಿ. ಗ್ರಾಮ್ಯದ ಮುಗ್ಧತೆಯ ಒಂದೇ ಒಂದು ಮುಗುಳುನಗೆಯ ಬಾಣಕ್ಕೆ ಗೋವಿಂದಯ್ಯನ ಸ್ವರ್ಗ! ಅದು ಮತ್ತೆ ಮತ್ತೆ ಬೇಕನ್ನಿಸಿ ಮತ್ತು ಅವಳ ಮುಗ್ಧತೆಗೆ ಮಾರುಹೋಗಿ, ತಾನೇ ಹುರುಳಿ ಹುರಿಯೋದು ಗಂಡನ ಅಭ್ಯಾಸ…!

“ಅಯ್ಯಾವರೇ, ಅಯ್ಯಾವರೇ ಎದೋಳಿ, ಬಗ್ಗನೆ ಎದೋಳಿ, ಅಮ್ಮಾವ್ರು ಬಿದ್ದೋಗ್ಬುಟ್ಟವರೆ, ಎದೋಳಿ”, ಅಂತ ಕೆಲಸದ ಸಾಕಮ್ಮನ ಕಿರುಚು ಧ್ವನಿ ಕೇಳಿ, ದಡಬಡ ಎಂದು ಎದ್ದು, ಬೆಡ್ ರೂಮಿಂದ ಆಚೆ ದೌಡಾಯಿಸಿದರು ಗೋವಿಂದಯ್ಯ. ಕಿಚನ್ನಿನಲ್ಲೇ ಬಿದ್ದಿದ್ದ ಹೆಂಡತಿಯನ್ನು ನೋಡಿ ಗಾಬರಿ ಆಗಿ, ತಕ್ಷಣ ಕಾರ್ತೀಕೇಯನಿಗೆ ಕೂಡಲೇ ಬಾ ಅಂತ ಫೋನ್ ಮಾಡಿ, ಹೆಂಡತಿ ಪಕ್ಕ, “ಎದ್ದೇಳು ಲಕ್ಷ್ಮಿ, ಎದ್ದೇಳು” ಅಂತ ಅಲುಗಾಡಿಸುತ್ತ ಕೂತರು. ಊಹ್ಞೂ…ಯಾವ ಪ್ರತಿಕ್ರಿಯೆಯೂ ಇಲ್ಲ! ಇವರ ವ್ಯರ್ಥ ಪ್ರಯತ್ನ ನಡೆಯುವಾಗಲೇ, ಮಗ ಕೂಡ ಬಂದು, ಸಮಯ ಹಾಳು ಮಾಡದೆ, ಕಾರಿಗೆ ತಾನೇ ಅಮ್ಮನನ್ನ ಎತ್ತಿಕೊಂಡು ಮಲಗಿಸಿ, ಅಪ್ಪನ ಸಂಗಡ ಹೊರಟ. ಸೀದಾ ತಮ್ಮ ಕುಟುಂಬಕ್ಕೆ ಆಪ್ತವಾಗಿದ್ದ, ಡಾಕ್ಟರ್ ಏಳುಕೋಟಿ ಅವರ ಕ್ಲಿನಿಕ್ಕಿಗೇ ನೇರ ಹೋದರು. ವೈದ್ಯರು ಪರೀಕ್ಷಿಸಿ, ಹೆಚ್ಚು ಮಾತಾಡದೆ, ಸ್ಕ್ಯಾನಿಂಗ್, ಎಕ್ಸ್ ರೇ, ರಕ್ತ ಪರೀಕ್ಷೆಗೆಲ್ಲ ಬರೆದು, ಪ್ರಥಮವಾಗಿ ಎಮ್ಮಾರೈ ಸ್ಕ್ಯಾನಿಂಗಿಗೇ ಕಳಿಸಿದರು. ಅಲ್ಲೇ ಅವರ ನರ್ಸಿಂಗ್ ಹೋಮ್ಗೇ ಅಡ್ಮಿಟ್ ಮಾಡಿ, ಕಾಯೋಣ ಅಂದರು.

ಎಲ್ಲ ಆದಮೇಲೆ, ಡಾಕ್ಟರ್ ಕೇಳಿದ್ದು, ಬಿಪಿ ಮಾತ್ರೆ ಯಾಕೆ ನಿಲ್ಲಿಸಿದ್ದು, ಅಂತ. ಗೋವಿಂದಯ್ಯ, “ಸಾರ್, ಎಷ್ಟು ಏಳಿದರೂ ಕಿವೀಗೇ ಆಕ್ಕೋತಿರ್ನಿಲ್ಲ. ನಾನೇ ಎಷ್ಟೋ ಸಲ ಇವ್ಸೆ ಮಾಡಿ ಕೊಡ್ತಿದ್ದೆ…ಎಷ್ಟು ಅಂತ ಏಳೋದು ಸಾರ್…” ಉತ್ತರಿಸಿದರು. ಡಾಕ್ಟರು, “ನೋಡಿ ಅದರ ಪರಿಣಾಮ ಏನೂ ಅಂತ. ಬಿಪಿ ಅಧ್ವಾನವಾಗಿ ಜಾಸ್ತಿ ಆಗಿ, ಮೆದುಳಲ್ಲೇ ಹೆವಿ ಬ್ಲೀಡಿಂಗ್ ಆಗಿ ಹೀಗಾಗಿದೆ” ಎದೆಗೆ ನೇರ ಝಾಡಿಸಿ ಒದ್ದು ಬಿಟ್ಟರು ಅನ್ನೋ ಹಾಗಿತ್ತು, ಡಾಕ್ಟರ್ ಅವರ ಮಾತು! “ಅವರು ತಾನೆ ಇನ್ನೇನು ಮಾಡಾರು?” ಪ್ರತಿ ಬಾರಿ ಕನ್ಸಲ್ಟೇಶನ್ ಅಂತ ಬಂದಾಗಲೂ, ಲಕ್ಷ್ಮೀಗೇ ಗಿಣೀಗೆ ಹೇಳಿದ ಹಾಗೇ ಹೇಳ್ತಿದ್ದರು…’ಕೇಳ್ಬೇಕಲ್ಲ!’
ಗೋವಿಂದಯ್ಯ ಉಮ್ಮಳಿಸುವ ದುಃಖ ತೋರಿಸಿಕೊಳ್ಳದ ಹಾಗೆ, ಮನಸ್ಸಿನಲ್ಲೇ ಅಂದುಕೊಂಡು, ಡಾಕ್ಟರಿಗೆ ಏನೋ ಉತ್ತರ ಕೊಟ್ಟಿದ್ದರು. ಕಾರ್ತಿಕೇಯ ಹೊರಗೆ ಕುಳಿತು ಕಣ್ಣು ಒರೆಸಿಕೊಳ್ಳುತ್ತಿದ್ದ. ಆದರೂ ಒಳಗಿನ ಪ್ರತಿ ಮಾತೂ ಕೇಳಿಸ್ತಿತ್ತು.

ತಿಥಿ ಕಾರ್ಯ ಮುಗಿದಾಗಿತ್ತು. ಈಗ ಮನೆ ಖಾಲಿ! ಯಾರೂ ಇಲ್ಲವೋ ಅಥವಾ ಇದ್ದೂ ಅದೃಶ್ಯರೋ, ಅನ್ನಿಸುವ ಹಾಗೆ, ಎಲ್ಲಿ ಕಣ್ಣು ಹಾಯಿಸಿದರೂ ಅಲ್ಲೆಲ್ಲ ಭಣಭಣ. ಮೂಲೆಮೂಲೆಯಲ್ಲೂ ಯಾರೋ ಯಾರನ್ನೋ ಕಳೆದುಕೊಂಡು ರೋದಿಸಿದಂತೆ! ಮಕ್ಕಳು ಹೋಟೆಲ್ ಕಡೆ ಹೊರಟ ನಂತರ ಅಂತೂ, ಗೋವಿಂದಯ್ಯ ಒಂಟಿ. ಆ ಒಂಟಿತನ ಎಷ್ಟು ಗಾಢವಾಗಿ ಪೀಡಿಸುತ್ತಿತ್ತು ಎಂದರೆ, ಬಿಡುಗಡೆಯ ಹಕ್ಕನ್ನು ಬೇಡುತ್ತ, ದೇವರ ಮುಂದೆ ತಲೆ ಚಚ್ಚಿಕೊಂಡ ಹಾಗೆ! ಆದರೂ, ಪಟ್ಟಿದ್ದ ಸಂಕಷ್ಟಗಳ ಕಾರಣ, ವಾಸ್ತವ ಅರಿತಿದ್ದ ಅವರು, ಅಡಿಗೆ ಸಹ ಮಾಡುತ್ತಿದ್ದ ಕೆಲಸದ ಸಾಕಮ್ಮನಿಗೆ ತೊಂದರೆ ಆಗದಂತೆ, ಹೊತ್ತೊತ್ತಿಗೆ ಸರಿಯಾಗಿ ಅಲ್ಪಸ್ವಲ್ಪ ತಿನ್ನುತ್ತಿದ್ದರು.

ಒಬ್ಬರೇ ಇದ್ದಾಗ ಲಕ್ಷ್ಮಿಯ ಜೊತೆ ಕಳೆದ ಒಂದೊಂದು ಗಳಿಗೆಯೂ ನೆನಪಿನ ಪಟಲದ ದೃಶ್ಯಾವಳಿ ಆಗಿ ಹಿಂಡುತ್ತಿದ್ದವು. ಪಾಪ, ಬಡವರ ಮನೆ ಹುಡುಗಿ, ಅಪ್ಪನ ಮನೆಯಲ್ಲೂ ಸುಖ ಕಾಣದೆ, ಗಂಡನ ಮನೆಯಲ್ಲಿ ಸಹ ಕಷ್ಟಕ್ಕೇ ಗೋಣು ಕೊಟ್ಟು, ಇನ್ನೇನು ಸುಖಾಸನದಲ್ಲೇ ಉರುಳಾಡುವ ಕಾಲ ಹತ್ತಿರ ಬಂತು, ಅನ್ನುವ ಸಮಯಕ್ಕೆ ಸರಿಯಾಗಿ ಕೈ ಕೊಟ್ಟು ನಡೆದುಬಿಟ್ಟಿದ್ದಳು… ಎಂಥ ಕ್ರೂರ ವಾಸ್ತವ!

ಮುಂದುವರೆಯುವುದು…

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಚಿತ್ರಗಳ ಕೃಪೆ :

Paintingvalley.com
clipartbest.com
vecteezy.com

Related post

3 Comments

  • ಕಥೆ ಚೆನ್ನಾಗಿದೆ. ಅಭಿನಂದನೆಗಳು

  • Very nice story, continue life this……

  • Very nice story, continue like this……

Leave a Reply

Your email address will not be published. Required fields are marked *