ಚಂದ್ರಮಾನೆ ಹಾಗು ಸಾಹಿತ್ಯ ಮತ್ತು ಸಮಾಜ – ಕಗ್ಗೆರೆ ಪ್ರಕಾಶ್

ಲೇಖಕರ ಪರಿಚಯ

ಶ್ರೀ ಕಗ್ಗೆರೆ ಪ್ರಕಾಶ್

ತಮ್ಮ ಹುಟ್ಟೂರಾದ ಕಗ್ಗೆರೆಯನ್ನು ಸೇರಿಸಿಕೊಂಡ ಪ್ರಕಾಶ್ ಕನ್ನಡ ಸಾಹಿತ್ಯ ಲೋಕದಲ್ಲಿ ಕಗ್ಗೆರೆ ಪ್ರಕಾಶ್ ಎಂದೇ ಚಿರಪರಿಚಿತರು. ಕೆ. ಸಿ. ಚೆನ್ನಾಚಾರ್ ಮತ್ತು ಅಮ್ಮಯಮ್ಮ ದಂಪತಿಗಳ ಶ್ರೀ ಪ್ರಕಾಶ್ ರವರು ತಮ್ಮ 18 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಹಲವು ಕಷ್ಟ ನೋವು ಸಂಕಟದ ರುಚಿಯನ್ನು ಅನುಭವಿಸಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪಡೆದು ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ , ಕರ್ನಾಟಕದ ಟೀವಿ ಲೋಕ, ಕನ್ನಡ ಪ್ರಭ, ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಅನಂತ, ಭೂಮಿಕೆ ಸಾಹಿತ್ಯ ಪತ್ರಿಕೆಗಳನ್ನು ತಮ್ಮದೇ ಕಗ್ಗೆರೆ ಪ್ರಕಾಶನದ ಮೂಲಕ ನಡೆಸಿದ್ದಲ್ಲದೆ. ಮೈಸೂರು ಸಾಹಿತ್ಯಾಸಕ್ತರ ಬಳಗವನ್ನೂ ಕಟ್ಟಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ.ಪ್ರತಿಷ್ಠಿತ ಸಂಘ-ಸಂಸ್ಥೆಗಳಿಂದ ವಿವಿಧ ಪ್ರಶಸ್ತಿ, ಪುರಸ್ಕಾರಗಳೂ ಲಭಿಸಿವೆ.

ಚಂದ್ರಮಾನೆ

“ಚಂದ್ರಮಾನೆ” ಸತ್ಯ ಘಟನೆಯಾದಾರಿತ ಕಾದಂಬರಿಯಾಗಿದ್ದು ಸಂಕೀರ್ಣ ಹಾಗೂ ಸೂಕ್ಷ್ಮ ಮನಸ್ಸಿನ ಒಳನೋಟದ ತ್ರಿಕೋನ ಪ್ರೇಮ ಕಥೆಯ ಕಥಾಹಂದರ. ಇದು ಪ್ರಕಾಶ್ ರವರ ಮೊದಲ ಕಾದಂಬರಿ. ಕಾದಂಬರಿಯಲ್ಲಿ ಬರುವ ಆಯಾ ಘಟನೆ, ಸನ್ನಿವೇಶ, ಸಂದರ್ಭ, ಪ್ರಸಂಗಗಳು ಬಹುಮುಖ್ಯವಾಗುತ್ತವೆ. ಈ ಮೂರು ಮುಖ್ಯ ಪಾತ್ರಗಳು ನಮ್ಮ ನಡುವೆ ಇರುವ ಮನುಷ್ಯ ಸಂಬಂಧಗಳ ಸಾಂಕೇತಿಕ ಪ್ರತಿನಿಧಿಗಳಾಗಿ ನಿಲ್ಲುತ್ತವೆ. ಹಾಗಾಗಿ ಇಲ್ಲಿನ ಪಾತ್ರಗಳು ಜೀವಂತಿಕೆಯಿಂದ ನೈಜತೆಯನ್ನು ಉಳಿಸಿಕೊಂಡಿವೆ. ತಿಳಿದೋ ತಿಳಿಯದೆಯೋ ಮಾಡುವ ನಮ್ಮ ತಪ್ಪುಗಳು ಜೀವನಪೂರ್ತಿ ನಮ್ಮನ್ನು ನರಕದ ಕೂಪಕ್ಕೆ ತಳ್ಳುವಂತಾಗಬಾರದು. ಹೌದು, ಇಲ್ಲಿ ಬರುವ ಮುಖ್ಯ ಪಾತ್ರಗಳು ಚಂದ್ರ, ಮಾನೆ, ರಿಯಾಜ್. ಮಾನೆ, ಗಂಡ ಚಂದ್ರನ ವಂಚಿಸಿ ರಿಯಾಜ್ ಜೊತೆ ಪ್ರೀತಿ, ಪ್ರೇಮ, ಪ್ರಣಯ ಬೆಳೆಸಿಕೊಳ್ಳುವುದೇ ಒಂದು ವಿಸ್ಮಯ. ಇದು ಪ್ರೀತಿಯೋ, ಪ್ರೇಮವೋ, ಕಾಮವೋ, ಆಕರ್ಷಣೆಯೋ, ಹುಚ್ಚುತನವೋ ತಿಳಿಯದಷ್ಟು ಗಂಭೀರ ವಿಷಯವಾಗಿಬಿಡುತ್ತದೆ. ಇದರ ಸಮಸ್ಯೆಯ ಪರಿಹಾರಕ್ಕೆ ಮನಶಾಸ್ತ್ರಜ್ಞರು ಏನು ಹೇಳುತ್ತಾರೆ? ಸಮಾಜ ಇದನ್ನು ಹೇಗೆ ನೋಡುತ್ತದೆ? ಕುಟುಂಬ ವ್ಯವಸ್ಥೆಯ ಮಾನ, ಮರ್ಯಾದೆ, ಗೌರವ ಏನು? ಇದು ನೈತಿಕವೋ, ಅನೈತಿಕವೋ? ಎಂಬೆಲ್ಲ ಪ್ರಶ್ನೆಗಳು ಬರುತ್ತವೆ. ಆದರೆ ಇಷ್ಟಂತ್ತು ಸತ್ಯ; ನೆಮ್ಮದಿಯ ಬದುಕನ್ನು ನರಕ ಮಾಡಿಕೊಳ್ಳುವುದಿದೆಯಲ್ಲ; ಅದು ಮಾತ್ರ ಘೋರ. ಇಂಥ ಘೋರ ಘಟನೆಗಳು ಎಲ್ಲಿಯೂ ನಡೆಯದಿರಲಿ ಎಂಬುದಷ್ಟೇ ಈ ಕಾದಂಬರಿಯ ಉದ್ದೇಶ.

ಸಾಹಿತ್ಯ ಮತ್ತು ಸಮಾಜ

ಸಾಹಿತ್ಯ ಮತ್ತು ಸಮಾಜ ವಿವಿಧ ಲೇಖಕರ ವಿಚಾರ ವಿಮರ್ಶೆಗಳನ್ನು ಹೊಂದಿರುವ ಪುಸ್ತಕ. ಈ ಪುಸ್ತಕದಲ್ಲಿ ಪ್ರಕಾಶ್ ರವರು 40 ಕ್ಕೂ ಹೆಚ್ಚು ಲೇಖಕರ ವಿಚಾರ ವಿಮರ್ಶೆಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಸಿ. ಪಿ. ಕೃಷ್ಣಕುಮಾರ್, ಡಾ. ದೊಡ್ಡರಂಗೇಗೌಡ, ದೇವು ಪತ್ತಾರ್, ಮಂಜು ಕನ್ನಿಕಾ, ಪ್ರೊ. ಎಂ. ಕೃಷ್ಣಪ್ಪ, ಡಾ. ತಿಪ್ಪೇಸ್ವಾಮಿ, ಜಿ. ಎನ್. ಕೃಷ್ಣಶರ್ಮ, ಎ. ಎಸ್. ಸತೀಶ್ ಆರಾಧ್ಯ, ಡಾ. ಎಸ್.ವಿ ಪ್ರಭಾವತಿ, ರೇಖಾ ಮರಿಯಯ್ಯ ಸ್ವಾಮಿ, ಪ್ರಕಾಶ್ ಕೆ ನಾಡಿಗ್ ಇನ್ನು ಮುಂತಾದ ಪ್ರಬುದ್ಧ ಲೇಖಕರು ತಮ್ಮ ದೃಷ್ಟಿಕೋನದಲ್ಲಿ ದಾಖಲಿಸಿದ ವಿಚಾರ ವಿನಿಮಯಗಳನ್ನು ಈ ಪುಸ್ತಕದಲ್ಲಿ ಓದಬಹುದು.

ಈ ಎರಡು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಸಾಹಿತ್ಯ ರಂಗದಲ್ಲಿ ಒಳ್ಳೆಯ ವಿಮರ್ಶೆಗಳನ್ನು ಹೊತ್ತು ತರುತ್ತಿದೆ. ಚಂದ್ರಮಾನೆ ಕಾದಂಬರಿಯ ಕಥಾಹಂದರವು ಓದುಗ ಪ್ರಿಯರನ್ನು ರಂಜಿಸಿದರೆ ಸಾಹಿತ್ಯ ಮಾತು ಸಮಾಜ ಸಂಪಾದಕ ಕೃತಿಯು ಬಹಳಷ್ಟು ವಿಷಯಗಳನ್ನು ವಿವಿಧ ಲೇಖಕರ ಭಿನ್ನ ವಿಚಾರ – ಅಭಿಪ್ರಾಯವನ್ನು ಓದಿ ತಿಳಿದುಕೊಳ್ಳಬಹುದಾಗಿದೆ. ಈ ಎರಡೂ ಪುಸ್ತಕಗಳು ನಿಮ್ಮ ಮನೆಯಲ್ಲಿನ ಪುಸ್ತಕ ಸಂಗ್ರಹವನ್ನು ಸೇರಿದರೆ ಆಕರ್ಷಣೀಯ. ಓದುಗ ಪ್ರಿಯರು ಪುಸ್ತಕ ಬೇಕಾಗಿದ್ದಲ್ಲಿ ಪ್ರಕಾಶ್ ರವರನ್ನು ಅವರ ಮೊಬೈಲ್ ಸಂಖ್ಯೆ 9663412986 ಗೆ ಕರೆ ಮಾಡಿದರೆ ತಮ್ಮ ಮನೆ ಬಾಗಿಲಿಗೆ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.

ಕೃತಿಗಳೊಂದಿಗೆ ಶ್ರೀ ಸಂಕೇತದತ್ತರು

ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ (ಕಾವ್ಯಗಳು). ಅನಂತ (ಸಾಹಿತ್ಯ ಸಂಚಿಕೆಯ ಸಂಪಾದನೆ). ಬಿಡುಗಡೆ (ಬಹುಮಾನಿತ ಬರಹಗಳ ಸಂಪಾದನೆ). ಅವಳ ಮಧುರ ಅಮರ ಪತ್ರಗಳು (ಸಂಪಾದನೆ). ಭೂಮಿಕೆ (ಸಾಹಿತ್ಯ ಸಂಚಿಕೆಯ ಸಂಪಾದನೆ). ಮಾತುಕತೆ- (ಸಂದರ್ಶನಗಳು). ಕಾಡತಾವ ನೆನಪು- (ವ್ಯಕ್ತಿ ಚಿತ್ರಗಳು). ತ್ರಿವೇಣಿಗೆ ಮಿಡಿದ ಶಂಕರ್-(ಸಂಪಾದನೆ). ಉದಯ್ ಕುಮಾರ್- (ಜೀವನ ಚರಿತ್ರೆ). ಶೃತಿ ಪ್ರೇಮಾಯಣ-(ಆತ್ಮಕಥೆ). ಕಲಾವಿದರ ಕಥಾನಕ-(ಸಂದರ್ಶನಗಳು). ಭುವಿಬಾಲೆ(ಕಾವ್ಯ). ಗುಬ್ಬಿ ತೋಟದಪ್ಪ(ಜೀವನ ಚರಿತ್ರೆ). ಹೇಳೇ ಸಖಿ ಕೇಳೋ ಸಖ(ಪತ್ರ ಸಾಹಿತ್ಯ). ವೀರಭದ್ರರ ಸಮಗ್ರ ಕಥಾ ಸಾಹಿತ್ಯ(ಸಂಪಾದನೆ). ಎಂ.ಎನ್.ವ್ಯಾಸರಾವ್ ಸಮಗ್ರ ಕಾವ್ಯ(ಸಂಪಾದನೆ). ಎಂ.ಎನ್.ವ್ಯಾಸರಾವ್ ಸಮಗ್ರ ಕಥೆ, ಚಂದ್ರಮಾನೆ (ಕಾದಂಬರಿ), ಸಾಹಿತ್ಯ ಮತ್ತು ಸಮಾಜ (ಸಂಪಾದನೆ) ಇವಿಷ್ಟು ಕಗ್ಗೆರೆ ಪ್ರಕಾಶ್ ರವರ ಬರಹ ಸಂಪಾದನೆ. ಸದ್ಯಕ್ಕೆ ತಮ್ಮ ಆತ್ಮಕಥೆಯಾದ “ಕೆಂಡದುಂಡೆಗಳ ಮೇಲೆ” ಕೃತಿಯ ಬರಹದಲ್ಲಿ ತೊಡಗಿರುವ ಪ್ರಕಾಶ್ ರವರಿಗೆ ಅಭಿನಂದನೆಗಳು. ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಓದುಗರ ಸಂಖ್ಯೆ ಕುಸಿಯುತ್ತಿರುವ ಈ ಸಂಧರ್ಭದಲ್ಲಿ ಕಗ್ಗೆರೆ ಪ್ರಕಾಶ್ ರವರು ಈ ಎರಡೂ ವಿಭಿನ್ನ ಪುಸ್ತಕಗಳನ್ನು ಹೊರತಂದಿರುವುದು ಅವರ ಸಾಹಸ ಪ್ರವೃತ್ತಿಗೆ ಸಾಕ್ಷಿಯಾಗಿದೆ. ಕಗ್ಗೆರೆ ಪ್ರಕಾಶನವು ಇನ್ನಷ್ಟು ಸಧಭಿರುಚಿಯ ಪುಸ್ತಕಗಳನ್ನು ಹೊರತಂದು ಸಾಹಿತ್ಯ ಲೋಕಕ್ಕೆ ಹಾಗು ಓದುಗರ ಕೈ ತಲುಪಿಸಲಿ ಎಂದು ಸಾಹಿತ್ಯಮೈತ್ರಿ ತಂಡ ಆಶಿಸಿ ಅಭಿನಂದಿಸುತ್ತದೆ.

ಕು ಶಿ ಚಂದ್ರಶೇಖರ್
ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *