ಬಿಹಾರದ ಪೊಲೀಸರು ಹಾಗು ಅರಣ್ಯ ರಕ್ಷಕ ಪಡೆಗಳು ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ನರಭಕ್ಷಕನಾಗಿದ್ದ “T – 104” ಎಂಬ 3 ವರ್ಷದ ಗಂಡು ಹುಲಿಯನ್ನು ಕಳೆದ ಶನಿವಾರ 8 ರಂದು ಹೊಡೆದು ಹಾಕಿದ್ದಾರೆ. ಸ್ಥಳೀಯ ಗ್ರಾಮದ ಜನರು, ಎರಡು ಆನೆಗಳು, 8 ನುರಿತ ಶಾರ್ಪ್ ಶೂಟರ್ಗಳು ಹಾಗು ಅರಣ್ಯ ರಕ್ಷಕ ಪಡೆಗಳು, ಒಟ್ಟು ಸುಮಾರು 200 ಮಂದಿ ಇದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಮೂರು ವರ್ಷ ತುಂಬಿದ್ದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಚಂಪಾರಣ್ ನ ಈ ಗಂಡು ಹುಲಿ ಕಳೆದ ಮೇ ತಿಂಗಳಲ್ಲಿ ತನ್ನ ಮೊದಲ ನರಬೇಟೆಯನ್ನು ಶುರುಮಾಡಿ ಇಲ್ಲಿಯವರೆಗೂ ಒಟ್ಟು ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿತ್ತು. ಮನುಷ್ಯನ ಮಾಂಸದ ರುಚಿ ನೋಡಿದ ಈ ಹುಲಿ ಕ್ರಮೇಣ ನರಹಂತಕನಿಂದ ನರಭಕ್ಷಕನಾಗಿ ಬದಲಾಗಿತ್ತು. ಕಳೆದ ಒಂದು ತಿಂಗಳಲ್ಲೇ ಒಟ್ಟು ಆರು ಜನರನ್ನು ಕೊಂದಿದ್ದ ಈ ಹುಲಿ ಕಳೆದ ವಾರ ಮಲಗಿದ್ದ 12 ವರ್ಷದ ಹುಡುಗಿಯನ್ನು ಹೊತ್ತೊಯ್ದಿತ್ತು. ಕೊನೆಯದಾಗಿ ಈ ಹುಲಿ 35 ವರ್ಷದ ಒಬ್ಬ ತಾಯಿ ಹಾಗು ಅವಳ ಮಗನನ್ನು ಬಲಿ ಪಡೆದಾಗ ಇಡೀ ಗ್ರಾಮಸ್ಥರು ಅರಣ್ಯ ಇಲಾಖೆಯ ವಾಹನಗಳನ್ನು ಸುಟ್ಟು ಪ್ರತಿಭಟಿಸಿದ ಮೇಲೆ ಅರಣ್ಯಾಧಿಕಾರಿಗಳು ‘ಶೂಟ್ ಅಟ್ ಸೈಟ್’ ಆದೇಶ ಪಡೆದು ಇಡೀ ಒಂದು ದಿನದ ಕಾರ್ಯಾಚರಣೆಯಲ್ಲಿ ಅರವಳಿಕೆ ಕೊಟ್ಟು ಸೆರೆಹಿಡಿಯುವುದು ವಿಫಲವಾದ ಮೇಲೆ ಕೊನೆಗೆ ಅದನ್ನು ಸುತ್ತುವರೆದು 5 ಸುತ್ತು ಗುಂಡು ಹಾರಿಸಿ ಅದನ್ನು ಕೊನೆಗಾಣಿಸಲಾಯಿತು.
ನರಹಂತಕ ಹಾಗು ನರಭಕ್ಷಕ – ವ್ಯತ್ಯಾಸ
ಹುಲಿ ಹಾಗು ಚಿರತೆಗಳು ತಮ್ಮ ಆವಾಸ ಸ್ಥಾನಕ್ಕೆ ಮನುಷ್ಯ ಅತಿಕ್ರಮಣ ಮಾಡಿದಾಗ ಮತ್ತು ಅವುಗಳ ಮರಿಗಳಿಗೆ ತೊಂದರೆಯಾಗುತ್ತದೆ ಎಂಬ ಆತಂಕದಲ್ಲಿ ಮನುಷ್ಯನ ಮೇಲೆರಗಿ ದಾಳಿ ಮಾಡಿ ನರಹಂತಕ ಎಂದೆನೆಸಿಕೊಳ್ಳುತ್ತವೆ. ಮನುಷ್ಯನ ದೇಹ ಹುಲಿ ಚಿರತೆಗಳಿಗೆ ಸಹಜವಾದ ಆಹಾರವಲ್ಲ ಆದರೆ ಮುಪ್ಪು ಆವರಿಸಿಕೊಂಡಾಗ ಅಥವಾ ಇತರೆ ಪ್ರಾಣಿಗಳ ಜೊತೆ ಕಾದಾಡುವಾಗ ಆದ ಗಾಯಗಳಿಂದ ಇವು ತಮ್ಮ ನೈಜ್ಯ ಬೇಟೆಯ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆಗ ಅವುಗಳಿಗೆ ಸುಲಭವಾಗಿ ಸಿಗುವ ಬೇಟೆ ಎಂದರೆ ಮನುಷ್ಯನೇ! ಒಮ್ಮೆ ಹುಲಿ ಚಿರತೆಗಳು ಮನುಷ್ಯನನ್ನು ಬೇಟೆಯಾಡಿ ತಿಂದವೆಂದರೆ ಮತ್ತೆ ಅವು ಇತರೆ ಪ್ರಾಣಿಗಳ ಬೇಟೆಯಾಡುವ ಸಾಹಸಕ್ಕೆ ಹೋಗುವುದಿಲ್ಲ. ಆಗ ಶುರುವಾಗುತ್ತದೆ ಮನುಷ್ಯರ ಹಾಗು ಸಾಕುಪ್ರಾಣಿಗಳಾದ ಆಡು ಕುರಿ ಗೋವುಗಳ ಬೇಟೆ ಸರಣಿ. ಎಷ್ಟೋ ಕಡೆ, ಗ್ರಾಮಗಳಿಗೆ ನುಗ್ಗಿ ನಿರ್ಭೀತಿಯಿಂದ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ಗೋವುಗಳನ್ನು ಹಾಗು ಪಡಸಾಲೆಯಲ್ಲಿ ಮಲಗಿರುವ ಮನುಷ್ಯರನ್ನು ಹೊತ್ತೊಯ್ದು ತಿಂದದ್ದು ದಾಖಲಾಗಿವೆ.
ಇದು ನರಭಕ್ಷಕಗಳ ಸಂಗತಿಯಾದರೆ ನರಹಂತಕನದು ಹಾಗಲ್ಲ. ಆಕಸ್ಮಿಕವಾಗಿ ತಮ್ಮ ಆವಾಸ ಸ್ಥಾನಕ್ಕೆ ನುಗ್ಗಿದ ಮನುಷ್ಯನನ್ನು ದಾಳಿ ಮಾಡಿ ಕೊಂದ ಮೇಲೆ ಅವುಗಳು ಮನುಷ್ಯರನ್ನು ಮೂಸಿಯೂ ಸಹ ನೋಡುವುದಿಲ್ಲ ಎಲ್ಲೋ ಕೆಲವೊಮ್ಮೆ ಕೆಲ ಹುಲಿ ಚಿರತೆಗಳು ಕೊತುಹಲ ಹುಟ್ಟಿ ಮನುಷ್ಯನ ಯಾವುದಾದರೊಂದು ಭಾಗವನ್ನು ತಿಂದು ಅವಕ್ಕೆ ರುಚಿ ಹತ್ತಿಬಿಟ್ಟರೆ ಮಾತ್ರ ಕ್ರಮೇಣ ನರಭಕ್ಷಕಗಳಾಗುತ್ತವೆ, ಆದರೆ ಇದರ ಸಾಧ್ಯತೆ ಬಹಳ ಕಡಿಮೆ. ಆದ್ದರಿಂದ ಹುಲಿ ಚಿರತೆ ದಾಳಿಯಿಂದ ಮನುಷ್ಯ ಸತ್ತನೆಂದರೆ ತಜ್ಞರು ಮನುಷ್ಯನ ಮೇಲಾದ ಗಾಯಗಳನ್ನು ಅವಲೋಕಿಸುತ್ತಾರೆ. ಸತತವಾಗಿ ಅವೇ ಸುತ್ತಮುತ್ತಲಿನ ಪ್ರದೇಶದಲ್ಲಿ ಪುನಃ ಪುನಃ ಮನುಷ್ಯನ ಮೇಲೆ ದಾಳಿಗಳಾದರೆ ಅವುಗಳನ್ನು ಅರವಳಿಕೆ ಬಂದೂಕು ಬಳಸಿ ಸೆರೆ ಹಿಡಿದು ಅವಕ್ಕೆ ಪುನರ್ವಸತಿ ಕಲ್ಪಿಸುತ್ತಾರೆ, ಇದು ನರಹಂತಕನ ಮೇಲೆ ನೆಡೆಸುವ ಪ್ರಕ್ರಿಯೆಯಾದರೆ ನರಭಕ್ಷಕಗಳನ್ನು ಸೆರೆ ಹಿಡಿದ ನಂತರ ಯಾವುದೇ ಕಾರಣಕ್ಕೂ ಮತ್ತೆ ಅರಣ್ಯಕ್ಕೆ ಬಿಡುವುದಿಲ್ಲ ಅವಕ್ಕೆ ಮೃಗಾಲಯದಲ್ಲಿ ಅಜೀವ ಪರ್ಯಂತ ಸೆರೆವಾಸವೇ ಗತಿ.
ಶೂಟ್ ಅಟ್ ಸೈಟ್ ಆದೇಶ
ನರಭಕ್ಷಕಗಳನ್ನು ಸೆರೆ ಹಿಡಿದು ಅವಕ್ಕೆ ಪುನರ್ವಸತಿ ಕಲ್ಪಿಸಲು ಜಾಗಗಳ ಅಭಾವವಿರುವುದರ ಕಾರಣ ಅಧಿಕಾರಿಗಳು ಅವುಗಳಿಗೆ ಶೂಟ್ ಅಟ್ ಸೈಟ್ ಆದೇಶವನ್ನು ತೆಗೆದುಕೊಳ್ಳುವುದೇ ಹೆಚ್ಚು. ಹುಲಿ ಚಿರತೆಗಳು ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಷೆಡ್ಯೂಲ್ 1 ರ ಅಡಿಯಲ್ಲಿ ಪಟ್ಟಿಮಾಡಲಾಗಿರುವುದರಿಂದ ಶೂಟ್ ಅಟ್ ಸೈಟ್ ಏನಿದ್ದರೂ ಕೊನೆಯ ಆಯ್ಕೆ. ಅದಕ್ಕೂ ಮೊದಲು ಅವುಗಳನ್ನು ಅರವಳಿಕೆ ಬಂದೂಕಿನ ಮೂಲಕ ಸೆರೆ ಹಿಡಿಯಲು ಪ್ರಯತ್ನಪಟ್ಟು ಸಾಧ್ಯವಾಗಿಲ್ಲದಿರಬೇಕು ಹಾಗು ಅವುಗಳು ಖಂಡಿತ ನರಭಕ್ಷಕಗಳೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಲವಾದ ಕಾರಣಗಳನ್ನು ಹಾಗು ಪರಿಸ್ಥಿತಿಯ ಗಂಭೀರತೆಯನ್ನು ಬರಹದ ಮೂಲಕ ಕೊಟ್ಟಿರಬೇಕು ಆಗಲೇ ಕೊನೆಯ ಆಯ್ಕೆಯಾಗಿ ಶೂಟ್ ಅಟ್ ಸೈಟ್ ಆದೇಶವನ್ನು ಜಾರಿ ಮಾಡಲಾಗುತ್ತದೆ. ಇದಕ್ಕೆ ಆಯಾ ವನ್ಯ ಸಂರಕ್ಷಣಾ ಪ್ರದೇಶದ ಫೀಲ್ಡ್ ಡೈರೆಕ್ಟರ್ ಗಳೇ ಮುಖ್ಯ ಜವಾಬ್ಧಾರರಾಗಿರುತ್ತಾರೆ. ಬಹಳಷ್ಟು ವನ್ಯಜೀವಿಗಳನ್ನು ಕಳೆದುಕೊಂಡ ನಂತರ 1972 ರಲ್ಲಿ ಭಾರತ ‘ವನ್ಯ ಜೀವಿ ಕಾಯ್ದೆ’ ಯನ್ನು ಬಹಳಷ್ಟು ಬಿಗಿ ಮಾಡಿರುವುದರಿಂದ ಅಷ್ಟು ಸುಲಭವಾಗಿ ಶೂಟ್ ಅಟ್ ಸೈಟ್ ಆದೇಶವನ್ನು ಜಾರಿಮಾಡಲಾಗುವುದಿಲ್ಲ.
ಕೆಲ ಸರ್ಕಾರಗಳು ನರಭಕ್ಷಕಗಳನ್ನು ಕೊಲ್ಲಲ್ಲು ಖಾಸಗಿ ಗುರಿಕಾರ ( Private shooters) ರನ್ನು ಕರೆಸುವುದು ಉಂಟು. 2018 ರಲ್ಲಿ ಮಹಾರಾಷ್ಟ್ರ ಸರ್ಕಾರ ನರಭಕ್ಷಕಳಾಗಿ ಪರಿವರ್ತಿತವಾಗಿದ್ದ “ಅವನಿ” ಎಂಬ ಹೆಣ್ಣು ಹುಲಿಯನ್ನು ಕೊಲ್ಲಲು ‘ಅಸ್ಗರ್ ಅಲಿ’ ಎಂಬ ಖಾಸಗಿ ಶೂಟರ್ ನನ್ನು ಕರೆಸಿ ಕೊಲ್ಲಿಸಿ ಆದು ಈಗಲೂ ವಿವಾದಾತ್ಮಕ ಘಟನೆಯಾಗಿಯೇ ಉಳಿದಿದೆ. ನೀತಿ ನಿಯಮಗಳನ್ನು ಗಾಳಿಗೆ ತೂರಿ ಬೇಕೆಂದೇ ಅವನಿ ಯನ್ನು ಕೊಲ್ಲಲಾಗಿದೆ ಎಂದು ದೇಶಾದ್ಯಂತ ‘ಅವನಿ’ ಹೆಸರಿನಲ್ಲಿ ಪ್ರತಿಭಟನೆ ನೆಡೆಯಿತು. ಅಷ್ಟೇ ಯಾಕೆ ಕಳೆದ ವರ್ಷ ಬಿಡುಗಡೆಯಾದ “ಶೇರ್ನಿ” ಎಂಬ ಹಿಂದಿ ಚಲನಚಿತ್ರದಲ್ಲಿ ಇದರ ಕುರಿತು ವಿವರವಾಗಿ ಚಿತ್ರಿಸಲಾಗಿದೆ.
ಚಂಪಾರಣ್ ನ ಈ ಹುಲಿಯನ್ನು ಸೆರೆಹಿಡಿಯಲು ಪ್ರಯತ್ನ ಪಟ್ಟು ಅದು ಕಾರ್ಯಾಚರಣೆಯ ವೇಳೆ ತನ್ನನ್ನು ಸುತ್ತಿದ್ದ ಜನರನ್ನು ಹಾಗು ಶೂಟರ್ಗಳನ್ನು ನೋಡಿಯೂ ಸಹ ದೃತಿಗೆಡದೆ ಅಕ್ರಮಣಶೀಲತೆಯಿಂದ ವರ್ತಿಸಿದ್ದರಿಂದ ಕೊನೆಯ ಆಯ್ಕೆಯಾಗಿ ಹುಲಿಯನ್ನು 5 ಸುತ್ತು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಸದ್ಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಮುಂದೆ ಇನ್ನಷ್ಟ್ಟು ಸತ್ಯ ಸಂಗತಿಗಳು ಹೊರಬೀಳಲು ಕಾಯಬೇಕು.
2018 ರಲ್ಲಿ ಹುಲಿಗಳ ಗಣತಿ ನೆಡೆದಿದ್ದು ಭಾರತದಲ್ಲಿ ಕೇವಲ ೨೯೬೭ ಹುಲಿಗಳು ಉಳಿದುಕೊಂಡಿವೆ. ಮನುಷ್ಯರಿಂದ ಅರಣ್ಯ ಒತ್ತುವರಿ, ಕಾಡು ಮರಗಳ ನಾಶ, ಮೂಢನಂಬಿಕೆ ಹೀಗೆ ಹತ್ತು ಹಲವಾರು ಕಾರಣಗಳಿಂದ ಕಾಡು ಪ್ರಾಣಿಗಳು ತಮ್ಮ ಹೊಟ್ಟೆ ಪಾಡಿಗೆ ಹಳ್ಳಿಗಳಿಗೆ ನಗರಗಳಿಗೆ ಲಗ್ಗೆ ಇಡುತ್ತಿರುವುದು ಎಲ್ಲರಿಗು ಗೊತ್ತಿರುವ ಸಂಗತಿಯಾದರೂ ಸಂಭಂದ ಪಟ್ಟ ಇಲಾಖೆಗಳ ಅಥವಾ ಜನಸಾಮಾನ್ಯರ ನಿರ್ಲಕ್ಷತೆಯಿಂದ ಹುಲಿಯಂತಹ ಇನ್ನೂ ಎಷ್ಟೋ ಪ್ರಾಣಿಗಳು ಅಳಿವಿನಂಚಿನಲ್ಲಿದೆ.
ಹೀಗೆ ಆದರೆ ನಮ್ಮ ಮುಂದಿನ ಪೀಳಿಗೆ ಹುಲಿಗಳನ್ನು ‘ಜಿಮ್ ಕಾರ್ಬೆಟ್’ ಕಥೆಗಳಲ್ಲಿನ ರೇಖಾಚಿತ್ರಗಳಲ್ಲಿ ಮಾತ್ರ ಕಾಣಬೇಕಾಗುತ್ತದೆ.
ಕು ಶಿ ಚಂದ್ರಶೇಖರ್