ಆಟಿಕೆಗಳು ಕೇವಲ ಆಟಿಕೆಗಳಲ್ಲ, ಅದರಿಂದ ಮಕ್ಕಳ ಕಲ್ಪನಾ ಶಕ್ತಿ, ಮೇಧಾ ಶಕ್ತಿ ಬೆಳವಣಿಗೆಯಾಗುತ್ತದೆ. ಮತ್ತು ಇತರರ ಜತೆ ಬೆರೆಯುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. “ಆಟಿಕೆಗಳಿಂದ ಮನೋರಂಜನೆಯಷ್ಟೇ ಸಿಗುವುದಿಲ್ಲಆಟದ ಜೊತೆಗೆ ಪಠ್ಯ ಕಲಿಯುವುದು ನೂತನ ಶಿಕ್ಷಣ ನೀತಿಯ ಭಾಗವಾಗಲಿದೆ ಎಂದು ಎನ್ಇಪಿ ಹೇಳುತ್ತದೆ”. ಲಡಾಖ್ ಗಡಿ ತಂಟೆ ಬಳಿಕ ‘ಬಾಯ್ಕಾಟ್ ಚೀನಾ’ ಆಂದೋಲನ ತೀವ್ರಗೊಳಿಸಿದ ಕೇಂದ್ರ ಸರಕಾರ, ಚೀನಾ ಆಟಿಕೆಗಳ ಅಬ್ಬರಕ್ಕೆ ಕಡಿವಾಣ ಹಾಕಿ ಜಾಗತಿಕ ಆಟಿಕೆಗಳ ತಯಾರಿಕಾ ಕ್ಷೇತ್ರದಲ್ಲಿ ಚೀನಾ ಹೊಂದಿರುವ ಪ್ರಾಬಲ್ಯ ಹತ್ತಿಕ್ಕಲು ಆತ್ಮನಿರ್ಭರ ಅಭಿಯಾನ ಕೈಗೊಂಡಿದೆ. ಅದಕ್ಕಾಗಿ ದೇಶದಲ್ಲಿನ ಜಾನಪದೀಯ ಕಲೆಗಳನ್ನು ಪ್ರೋತ್ಸಾಹಿಸುತ್ತಿದೆ. ಕರೋನಾದ ಹಿನ್ನೆಲೆಯಲ್ಲಂತೂ ಈ ಪ್ರೋತ್ಸಾಹ ಕರಕುಶಲ ಕಲಾವಿದರಿಗೆ ದೊರೆಯಲೇಬೇಕಾಗಿದೆ.
ಸುಮಾರು ಇನ್ನೂರು ವರ್ಷಗಳ ಇತಿಹಾಸವಿರುವ ಈ ಗೊಂಬೆಗಳನ್ನು ಚನ್ನಪಟ್ಟಣದಲ್ಲಿ ತಯಾರಿಸುತ್ತಾರೆ. ಈ ಕಾರಣದಿಂದಲೇ ಈ ಪಟ್ಟಣವನ್ನು ಗೊಂಬೆಗಳ ನಾಡು ಎಂದು ಕರೆಯುತ್ತಾರೆ. ಬೆಂಗಳೂರಿನಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿ ಇರುವ ಈ ಪಟ್ಟಣಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆಂಧ್ರದ ಕೊಂಡಪಲ್ಲಿ ಬೊಂಬೆಗಳ ಹಾಗೆಯೇ ಈ ಬೊಂಬೆಗಳನ್ನು ತಯಾರಿಸಲಾಗುತ್ತದೆಯಾದರೂ ಹಲವಾರು ವಿಧಗಳಲ್ಲಿ ಈ ಬೊಂಬೆಗಳು ಬಿನ್ನರೂಪವನ್ನು ಪಡೆಯುತ್ತವೆ.
ಆಲೆ ಮರ ಹಾಗು ದೂಪದ ಮರಗಳನ್ನು ಬೊಂಬೆ ತಯಾರಿಸಲು ಬಳಸುತ್ತಾರೆ. ಚೆನ್ನಾಗಿ ಒಣಗಿದ ಮರಗಳನ್ನು ಆಯ್ಕೆ ಮಾಡಿಕೊಂಡು ಲೇತ್ (ತಿರುಗಣಿ ಯಂತ್ರ) ನ ಸಹಾಯದಿಂದ ಮರವನ್ನು ಬೇಕಾದ ಆಕೃತಿಗೆ ತಂದು ನುಣ್ಣಗೆ ಪಾಲಿಷ್ ಮಾಡಿ ನಂತರ ಲ್ಯಾಕರ್ ಅನ್ನು ಬಳಸಿ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಾರೆ. ಕೊನೆಗೆ ಬೊಂಬೆಯ ಕಣ್ಣು, ಕಿವಿ ಮೊದಲಾದ ಸೂಕ್ಷ್ಮಗಳನ್ನು ಕುಂಚದ ಸಹಾಯದಿಂದ ಚಿತ್ರಿಸುತ್ತಾರೆ. ಇವುಗಳನ್ನು ಸಿದ್ಧಪಡಿಸುವ ಕುಶಲ ಕರ್ಮಿಗಳು ಮನೆಗಳಲ್ಲೇ ಎಲ್ಲಾ ಮೂಲವ ಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಟಿಪ್ಪುವಿನ ಕಾಲದಲ್ಲಿ ಈ ಕಲೆಯಿಂದ ಬದುಕು ಮಾಡಿಕೊಳ್ಳಲು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಿದ್ದು ಸ್ವಾತಂತ್ರದ ನಂತರದಲ್ಲೂ ಈ ತರಬೇತಿ ಕೇಂದ್ರಗಳು ಕಾರ್ಯಗತವಾಗಿ ಇದ್ದವು. ಮಕ್ಕಳು ಆಡುವ ಕುದುರೆ, ಬುಗುರಿ, ಬೊಂಬೆಗಳು ಮೊದಲಾಗಿ ಮನೆಯ ತೋರುಗಿಂಡಿಯಲ್ಲಿ ಪ್ರದರ್ಶಿಸಬಹುದಾದ ಅನೇಕ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ.
ಟಿಪ್ಪು ಸುಲ್ತಾನನು ತನ್ನ ಕಾಲದಲ್ಲಿ ಪರ್ಷಿಯಾ ದೇಶದಿಂದ “ಬವಾಸ್ ಮಿಯಾ” ಎಂಬ ಕಲಾವಿದನನ್ನು ಕರೆಸಿ ಇಲ್ಲಿನ ಸ್ಥಳೀಯರಿಗೆ ತರಬೇತಿ ನೀಡಿಸಿದನೆಂದು ಚರಿತ್ರೆ ಹೇಳುತ್ತದೆ. ಬವಾಸ್ ಮಿಯಾ ತನ್ನ ಜೀವಮಾನದ ಕಾಲವನ್ನು ಈ ಗೊಂಬೆಗಳನ್ನು ಕಲಿಸುವ ಕಾಯಕದಲ್ಲಿಯೇ ಕಳೆದನು. ಇದಕ್ಕಾಗಿ ಮಿಯಾರವರು ಚೈನಾ ದೇಶಕ್ಕೆ ಹೋಗಿ ಈ ಬೊಂಬೆಗಳನ್ನು ತಯಾರಿಸುವ ವಿದ್ಯೆಯನ್ನು ಕಲಿತಿದ್ದರು. ಆತನ ಶ್ರಮದ ಫಲವೇ ಈ ಚನ್ನಪಟ್ಟಣದ ಬೊಂಬೆಗಳನ್ನು ಸುಮಾರು ಇನ್ನೂರು ವರ್ಷಗಳಿಂದಲೂ ಜೀವಂತವಾಗಿಸಿವೆ. ಕೆಲವು ತುರ್ತು ಸಂದರ್ಭಗಳಲ್ಲಿ ರೋಸ್ವುಡ್ ಮತ್ತು ಗಂಧದ ಮರಗಳನ್ನೂ ಸಹ ಬಳಸಿ ಬೊಂಬೆಗಳನ್ನು ತಯಾರಿಸಿದ್ದಾರೆ. ಈಗಿನ ಕಾಲಮಾನದಲ್ಲಿ ಈ ಮರಗಳ ಬಳಕೆಯು ನಿಖರವಾಗಿ ಇಲ್ಲದೆ ದೀರ್ಘ ಬಾಳಿಕೆ ಬರಬಲ್ಲ ಸ್ಥಳೀಯವಾಗಿ ದೊರೆಯುವ ಯಾವುದಾದರೂ ಮರವನ್ನು ಬಳಸುತ್ತಿದ್ದಾರೆ. ಮಕ್ಕಳಿಗೆ ವಿಷಕಾರಿಯಾಗದಂತೆ ಈ ಬೊಂಬೆಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ ಬೊಂಬೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಾರೆ. ೨೦೦೬ರ ಗಣತಿಯ ಪ್ರಕಾರ ೬೦೦೦ ಸಾವಿರ ಮಂದಿ ಕುಶಲ ಕರ್ಮಿಗಳು, ೨೫೪ ಗುಡಿಗಾರಿಕೆಗಳು, ೫೦ ಸಣ್ಣ ಬೊಂಬೆಯ ಕಾರ್ಖಾನೆಗಳು ಇದ್ದವು.
ಕೊಂಡಪಲ್ಲಿ ಗೊಂಬೆಗಳು ಒರಟಾದ ಮೇಲ್ಮೆಯನ್ನು ಹಾಗು, ಸ್ಥಳೀಯ ಮೂಲ ಧಾತುವನ್ನು ಹೊಂದಿ, ಧಾರ್ಮಿಕ ಮತ್ತು ಪ್ರಾಣಿ ಪಕ್ಷಿಗಳ ಬೊಂಬೆಗಳನ್ನು ತಯಾರಿಸಿದರೆ, ಚನ್ನಪಟ್ಟಣದ ಬೊಂಬೆಗಳಲ್ಲಿ ನವಿರಾದ ಮೇಲ್ಮೆ ಇರುತ್ತದೆ. ಈ ಪ್ರಕಾರದಲ್ಲಿ ಚೀನಾದ ಗೊಂಬೆಗಳ ಪ್ರಭಾವ ಇದ್ದು, ಕೇವಲ ಆಟಿಕೆಯ ಉದ್ದೇಶದಿಂದ ತಯಾರಿಸಿದ ಬೊಂಬೆಗಳು ಮಾತ್ರ ಕಾಣುತ್ತವೆ.
ಈ ಬೊಂಬೆ, ಆಟಿಕೆಗಳನ್ನು ನಂಬಿಕೊಂಡು ನೂರಾರು ಕುಟುಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿವೆ. ಸಂಸ್ಕೃತಿಯ ಪ್ರತಿನಿಧಿಗಳಾಗಿ, ಕಲೆಯ ಆಕರ್ಷಣೆಯಾಗಿದ್ದ ಬೊಂಬೆ ಆಟಿಕೆಗಳೀಗ ಕರಕುಶಲ ಉದ್ಯಮವಾಗಿ ವಿಸ್ಮಯ ಹುಟ್ಟಿಸಿವೆ. ‘ಇಲ್ಲಿನ ಬೊಂಬೆ ಉದ್ಯಮಕ್ಕೆ ಸುಮಾರು ೩೫೦ ವರ್ಷಗಳ ಇತಿಹಾಸವುಂಟು. ಪರ್ಷಿಯಾದಿಂದ ಕರೆತಂದಿದ್ದ ಕುಶಲಕರ್ಮಿಗಳಿಂದ, ಚನ್ನಪಟ್ಟಣದ ಜನತೆಗೆ ಬಣ್ಣದ ಕರಕುಶಲ ಕಲೆಯನ್ನು ತಿಳಿಸಿ-ಕಲಿಸಿಕೊಟ್ಟಿದ್ದರಿಂದ ಇಲ್ಲಿ ಬೊಂಬೆಗಳ ಗುಡಿಕೈಗಾರಿಕೆ ಉದ್ಯಮವಾಗಿ ಬೆಳೆಯಿತು. ಆಗಿನ ಮೈಸೂರು ಸಂಸ್ಥಾನದ ದಿವಾನರಿಗೆ ಕುಶಲಕರ್ಮಿಗಳು ತಮ್ಮ ಕಲೆಯ ಬಗ್ಗೆ ತಿಳಿಸಿದರು. ಇದರಿಂದ ಪ್ರೇರೇಪಿತರಾದ ಮೈಸೂರು ದಿವಾನರು, ೧೯೦೨ರಲ್ಲಿ ಚನ್ನಪಟ್ಟಣದಲ್ಲಿ ಕುಶಲಕರ್ಮಿ ತರಬೇತಿ ಸಂಸ್ಥೆ ಆರಂಭಿಸಿದರು. ಈಗ ಚನ್ನಪಟ್ಟಣ ತಾಲೂಕಿನಲ್ಲಿ ೩ ಸಾವಿರಕ್ಕೂ ಹೆಚ್ಚು ಬೊಂಬೆ ಕರಕುಶಲಕರ್ಮಿಗಳಿದ್ದು, ಇದರಿಂದ ಎಂಟು ಸಾವಿರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ನಗರದಲ್ಲಿ ೩೦೦ರಿಂದ ೪೦೦ ಪರಿಣತರು ಈಗ ಆಟಿಕೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಬೊಂಬೆ ತಯಾರಿ ಮತ್ತು ಮಾರಾಟ ಸೇರಿದಂತೆ ಪ್ರಸಕ್ತ ಸಂದರ್ಭದಲ್ಲಿ ನೇರ ಮತ್ತು ಪರೋಕ್ಷವಾಗಿ ಎಂಟು ಸಾವಿರಕ್ಕೂ ಅಧಿಕ ಮಂದಿ ಉದ್ಯಮವನ್ನೇ ಅವಲಂಬಿಸಿದ್ದಾರೆ. ೧೯೮೫ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗು ಡಚ್ ಸರ್ಕಾರಗಳು ಜಂಟಿಯಾಗಿ ಚನ್ನಪಟ್ಟಣದ ಶೇರ್ವ ಹೋಟೆಲ್ ಬಳಿ “ಕಲಾನಗರ” ಎಂಬ ಬಡಾವಣೆ ಯನ್ನು ನಿರ್ಮಿಸಿಕೊಟ್ಟಿವೆ. ಸುಮಾರು ೨೦೦ಕ್ಕೂ ಹೆಚ್ಚು ವಸತಿನಿಲಯಗಳಲ್ಲಿ ಕುಶಲಕರ್ಮಿಗಳು ನೆಲೆ ಕಂಡುಕೊಂಡಿದ್ದಾರೆ.’ ಕೆಲವರಿಗೆ ಮನೆಯಲ್ಲಿಯೇ ಬೊಂಬೆ ತಯಾರಿಸಲು ಅವಕಾಶ ಕಲ್ಪಿಸಲಾಗಿದ್ದು ಸಾವಿರಕ್ಕೂ ಹೆಚ್ಚು ಬಗೆಯ ಗೊಂಬೆಗಳು ಇಲ್ಲಿ ಸಿದ್ಧಗೊಂಡು ಹತ್ತು ರೂಪಾಯಿಗಳಿಂದ ನಿಂದ ಲಕ್ಷ ರೂಪಾಯಿಗಳವರೆಗೂ ಮಾರಾಟವಾಗುತ್ತಿವೆ. ಇವರು ತಯಾರಿಸುವ ೪೫೦ಕ್ಕೂ ಹೆಚ್ಚು ಬಗೆಯ ಬೊಂಬೆಗಳಿಗೆ ವಿಪರೀತ ಬೇಡಿಕೆಯಿದೆ. ಗುಲಗಂಜಿ ಗಾತ್ರದ ಗೊಂಬೆ ಕೆತ್ತನೆಯಿಂದ ಬೃಹತ್ ಗಾತ್ರದ ಉಯ್ಯಾಲೆ, ಮಂಚ ತಯಾರಿಸುವವರೆಗೂ ಇಲ್ಲಿನ ಕುಶಲಕರ್ಮಿಗಳು ನಿಪುಣರು.
ಬಣ್ಣದ ಬುಗುರಿ, ಆಕರ್ಷಕ ರೈಲು, ಮರದ ಕೀ ಬಂಚ್, ಕಿವಿಯೋಲೆ, ಬಳೆ, ನೆಕ್ಲೆಸ್, ಚೂಡಿದಾರ್ ಮೇಲೆ ಬಳಸುವ ಅಲಂಕಾರದ ಬೊಂಬೆಗಳು ಇಲ್ಲಿ ತಯಾರಾಗುತ್ತವೆ. ಕೀಲುಕುದುರೆ, ಕ್ರಿಸ್ಮಸ್ ಗಿಡ, ಎತ್ತಿನ ಬಂಡಿ, ವಿಶ್ವಪ್ರಸಿದ್ದ ಜಾನಪದ ಮಾದರಿಯಲ್ಲಿ ವಿವಿಧ ಬಗೆಯ ಬೊಂಬೆ ಗಳನ್ನು ತಯಾರಿಸುವ ಕುಶಲಕರ್ಮಿಗಳು ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಕೆತ್ತನೆಯ ವಿನ್ಯಾಸ, ಪದಾರ್ಥಗಳನ್ನೂ ಇಲ್ಲಿ ತಯಾರಿಸಲಾಗುತ್ತಿದೆ ಶೈಲಿಯಲ್ಲಿ ಸುಧಾರಣೆ ಮಾಡಿಕೊಂಡಿದ್ದಾರೆ. ಆಟಿಕೆಗಳ ಜತೆಗೆ ಬಳಕೆಗೆ ಪೂರಕವಾದ ಪ್ರೋತ್ಸಾಹ ಬೇಕಿದ್ದು ಚೀನಾ, ಜಪಾನ್, ತೈವಾನ್ ದೇಶಗಳಿಂದ ಆಮದಾಗುತ್ತಿದ್ದ ಪ್ಲಾಸ್ಟಿಕ್ ಬೊಂಬೆಗಳು, ಪಿಂಗಾಣಿ ವಸ್ತುಗಳು, ಆಟಿಕೆ- ಅಲಂಕಾರಿಕ ಸಾಮಗ್ರಿಗಳ ಆಕರ್ಷಣೆಯಿಂದಾಗಿ ದಶಕದಿಂದೀಚೆಗೆ ಚನ್ನಪಟ್ಟಣದ ಬೊಂಬೆ ಉದ್ಯಮ ತೀವ್ರ ಸಂಕಷ್ಟಕ್ಕೆ ತುತ್ತಾಗಿತ್ತು. ೪೦೦ಕ್ಕೂ ಹೆಚ್ಚು ಬಗೆಯ ಚೀನಾ ಬೊಂಬೆಗಳು ಪಟ್ಟಣದ ಆಟಿಕೆ ಮಳಿಗೆಗೆ, ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೂ ಬರ ಸಿಡಿಲಾಯಿತು. ಆದರೂ ಚನ್ನಪಟ್ಟಣದ ಬೊಂಬೆಗಳು ನಲುಗಿಲ್ಲ, ನೈಜತೆಯ ಮೆರುಗಿನಿಂದ ತನ್ನ ತನವನ್ನು ಉಳಿಸಿಕೊಂಡು, ಗ್ರಾಹಕರನ್ನು ಸೆಳೆದಿವೆ.
ವಿದೇಶಿಗರ ಮನಗೆದ್ದ ಬೊಂಬೆ
- ಬ್ರಿಟನ್ ರಾಣಿ “ಡಯಾನಾ” ಮತ್ತು ದೊರೆ “ಚಾರ್ಲ್ಸ್” ವಿವಾಹಕ್ಕೆ ಪೌಡರ್ ಡಬ್ಬದ ಉಡುಗೊರೆಗಳು ಚನ್ನಪಟ್ಟಣದಿಂದ ತಯಾರಾಗಿದ್ದವು.
- ಚನ್ನಪಟ್ಟಣಕ್ಕೆ ಬಂದಿದ್ದ ಅಮೆರಿಕದ “ಜಾಕಿ ಚಂದಾನಿ” ಎಂಬ ಹೆಣ್ಣು ಮಗಳು, ೧೯೭೦ರ ದಶಕದಲ್ಲಿ ಇಲ್ಲಿನ ಕರಕುಶಲ ಕಲೆಗೆ ಮಾರುಹೋಗಿ ನಂತರ ಇಲ್ಲಿಯೇ ನೆಲೆಸಿ ಕಲಾವಿದರಿಗೆ ಮಾರ್ಗದರ್ಶಕರಾದರು.
- ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರ ಪತ್ನಿ “ಮಿಶೆಲ್” ಈ ಬಣ್ಣದ ಆಟಿಕೆಗಳಿಗೆ ಮಾರು ಹೋಗಿದ್ದರು.
- ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ಪ್ರಧಾನಿಯಾಗಿದ್ದ “ಭಂಡಾರ ನಾಯಕೆ” ಅವರು ಬೊಂಬೆಗಳನ್ನು ಖರೀದಿಸಿದ್ದರು.
ಕೇಂದ್ರ ಸರ್ಕಾರದ ಆತ್ಮನಿರ್ಬರ್ ಯೋಜನೆಯು ಈ ಬೊಂಬೆ ಉದ್ಯಮಕ್ಕೆ ಹೊಸ ಚೈತನ್ಯವನ್ನು ತಂದಿದೆ, ಕೊಳ್ಳುವವರ ಪ್ರೋತ್ಸಾಹವಿದ್ದರೆ, ಈ ಬೊಂಬೆಗಳು ಮತ್ತೆ ಜಗತ್ತಿನ ಎಲ್ಲಡೆ ತಲುಪಲು ಸಾಧ್ಯ. ಇಂಥ ಅದ್ಭುತವಾದ ಆಟಿಕೆಗಳನ್ನು ತಯಾರಿಸುವವರನ್ನು ನಾವು ಇಂದು ಪ್ರೋತ್ಸಾಹಿಸಿ ಕರೋನ ಕಾಲದಲ್ಲಿ ಬದುಕಿನ ಭರವಸೆಯನ್ನು ನೀಡಬೇಕಾಗಿದೆ. ಸ್ವದೇಶೀ ಆಂದೋಲನವನ್ನೂ ಇಂದಿಗೂ ಕೂಡ ನಮ್ಮ ಜನ ನಮ್ಮ ಕಲೆ ಮತ್ತು ನಮ್ಮ ಅಸ್ಮಿತೆಗಾಗಿ ಮಾಡಲೇ ಬೇಕಾಗಿದೆ.
ಟಿ ಲಕ್ಷ್ಮೀನಾರಾಯಣ್