ಚಾರ್ಲಿ ಚಾಪ್ಲಿನ್ ಎಂಬ ಹಾಸ್ಯ ಚೇತನ
ಮಾನ್ಯ ಡಿ.ವಿ. ಗುಂಡಪ್ಪನವರು ತಮ್ಮ ಒಂದು ಕಗ್ಗದಲ್ಲಿ
ನಗುವು ಸಹಜದ ಧರ್ಮ;
ನಗಿಸುವುದು ಪರಧರ್ಮ
ನಗುವ ಕೇಳುತ
ನಗುವುದತಿಶಯದ ಧರ್ಮ
ನಗುವ ನಗಿಸಿ ನಗುತ
ಬಾಳುವ ವರವ ಮಿಗೆ
ನೀನು ಬೇಡಿಕೊಳೋ ಮಂಕುತಿಮ್ಮ…
ಎಂದು ಹೇಳಿರುತ್ತಾರೆ. ಈ ಕಗ್ಗದ ತಾತ್ಪರ್ಯಕ್ಕೆ ಅಕ್ಷರಶ ಹೊಂದುವ ಮಹಾನಟನೆಂದರೆ ಅದು “ಸರ್ ಚಾರ್ಲಿ ಚಾಪ್ಲಿನ್”…
ಏಪ್ರಿಲ್ 16 ಚಾಪ್ಲಿನ್ ಹುಟ್ಟಿದ ದಿನ. ಆ ಯುದ್ಧಕಾಲದಲ್ಲಿ ಹಾಸ್ಯ ಎಂಬುದು ಚಾರ್ಲಿ ಚಾಪ್ಲಿನ್ ರೂಪದಲ್ಲಿ ಹುಟ್ಟಿದ್ದು ನಿಜಕ್ಕೂ ಮನುಕುಲಕ್ಕೆ ಒಂದು ವರವೇ ಸರಿ.
16 ಏಪ್ರಿಲ್ 1889 ಲಂಡನ್ ನಗರದಲ್ಲಿ ಹುಟ್ಟಿದ “ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್” ಎಂಬುದು ಚಾರ್ಲಿ ಚಾಪ್ಲಿನ್ ನ ನಿಜವಾದ ಹೆಸರು. ತಂದೆ “ಚಾರ್ಲ್ಸ್ ಚಾಪ್ಲಿನ್ ಸೀ” ಗಾಯನ ಹಾಗು ನಟನೆಯಲ್ಲಿ ಬಹುಮುಖ ಪ್ರತಿಭೆ. ತಾಯಿ “ಲಿಲಿ ಹಾರ್ಲೆ” ಕೂಡ ಗಾಯಕ ನಟಿ. ತಂದೆ ತಾಯಿ ಇಬ್ಬರೂ ಗಾಯನ ಹಾಗು ನಟನ ವೃತ್ತಿಯಲ್ಲಿ ಇದ್ದರೂ ದುಡಿಯುವುದು ಹೊಟ್ಟೆ ಬಟ್ಟೆಗೆ ಸಾಕಾಗುತ್ತಿತ್ತು.
ತನ್ನ ಹತ್ತನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಚಾಪ್ಲಿನ್ ತಾಯಿಯ ಅನಾರೋಗ್ಯದ ನಡುವೆ ತನ್ನ ಸಹೋದರ “ಸಿಡ್ನಿ”ಯ ಜೊತೆಗೂಡಿ ದುಡಿಮೆಗಿಳಿಯಬೇಕಾಗಿ ಬಂದಿತು. “ದಿ ಏಟ್ ಲ್ಯಾಂಕಾಷೈರ್ ಲ್ಯಾಡ್ಸ್” ಎಂಬ ಸಾರ್ವಜನಿಕ ಬ್ಯಾಂಡಿನಲ್ಲಿ ಟ್ಯಾಪ್ ಡ್ಯಾನ್ಸರ್ ಮೂಲಕ ತನ್ನ ಕಲಾವೃತ್ತಿಯನ್ನು ಶುರುಮಾಡಿದ ಚಾಪ್ಲಿನ್ ತನ್ನ ಹನ್ನೆರಡನೇ ವಯಸ್ಸಿನಲ್ಲಿದ್ದಾಗ “ಬಿಲ್ಲಿ” ಎಂಬ ಪಾತ್ರಧಾರಿಯಾಗಿ ಕಲಾವೇದಿಕೆಯೊಂದರಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು. ನಂತರ “ವಾಯಡೆವಿಲ್ಲೆ” ಎಂಬ ಸ್ಟೇಜ್ ಶೋ ನಲ್ಲಿ ಹಾಸ್ಯನಟನಾಗಿ ಮಿಂಚಿದ ಚಾಪ್ಲಿನ್ ನನ್ನು ಯುನೈಟೆಡ್ ಸ್ಟೇಟ್ಸ್ ನ “ಫ್ರೆಡ್ ಕಾರ್ನೋ ರೆಪೆರ್ಟಾಯ್ರ್” ಎಂಬ ಸಂಚಾರಿ ಬ್ಯಾಂಡ್ ತಮ್ಮಲ್ಲಿ ನಟಿಸಲು ಅಮೆರಿಕಾಕ್ಕೆ ಆಹ್ವಾನ ನೀಡಿತು. ಸಿಕ್ಕ ಅವಕಾಶವನ್ನು ಬಳಸಿ ಚಾಪ್ಲಿನ್ “ಎ ನೈಟ್ ಇನ್ ಎ ಇಂಗ್ಲಿಷ್ ಮ್ಯೂಸಿಕ್ ಹಾಲ್” ಎಂಬ ಶೋ ಮೂಲಕ ಅಮೆರಿಕಾದ ಜನರ ಮನಸಿನಲ್ಲಿ ಭದ್ರ ಬುನಾಧಿ ಹಾಕಿಕೊಂಡ.
ಸಂಚಾರಿ ಬ್ಯಾಂಡ್ ವಾಪಸಾದ ನಂತರ ಚಾಪ್ಲಿನ್ ಗೆ ಆಗಿನ ಮೂಕಿ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಒದಗಿ ಬಂದಿತು. 1914 ರಲ್ಲಿ ಚಾಪ್ಲಿನ್ ಅಭಿನಯಿಸಿದ “ಮೇಕಿಂಗ್ ಎ ಲಿವಿಂಗ್” “ಕಿಡ್ ಆಟೋ ರೇಸಸ್” ಎರಡು ಚಿತ್ರಗಳು ಒಮ್ಮೆಲೇ ತೆರೆಕಂಡವು. ಅಚ್ಚರಿಯೆಂದರೆ ಆ ಒಂದೇ ವರ್ಷದಲ್ಲಿ ಚಾಪ್ಲಿನ್ 40 ಕ್ಕೂ ಹೆಚ್ಚು ಮೂಕಿ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲವು ಪ್ರದರ್ಶನಗೊಂಡು ಎಲ್ಲರ ಜನಮನದಲ್ಲಿ ಆಕರ್ಷಿತನಾದ.
1919 ರಲ್ಲಿ ಚಾಪ್ಲಿನ್ “ಯುನೈಟೆಡ್ ಆರ್ಟಿಸ್ಟ್ಸ್” ಎಂಬ ವಿತರಕ ಸಂಸ್ಥೆಯ ಸಹಸಂಸ್ಥಾಪಕನಾಗಿ ಪೂರ್ಣಪ್ರಮಾಣದ ಚಿತ್ರಗಳನ್ನು ತೆರೆಗೆ ತರಲು ಯಶಸ್ವಿಯಾದ. “ದಿ ಕಿಡ್” “ಎ ವಿಮೆನ್ ಆಫ್ ಪ್ಯಾರಿಸ್” “ದಿ ಗೋಲ್ಡ್ ರಶ್” “ದಿ ಸರ್ಕಸ್” ಇವೆಲ್ಲಾ ಮೂಕಿ ಚಿತ್ರಗಳಾದರೂ ಶಬ್ದ ಚಿತ್ರ ಮಾತಿಲ್ಲದ ಆದರೆ ಹಿನ್ನಲೆ ಸಂಗೀತವಿರುವ “ಸಿಟಿ ಲೈಟ್ಸ್” ಮತ್ತು “ಮಾಡ್ರನ್ ಟೈಮ್ಸ್” ಎಂಬ ಎರಡು ಚಿತ್ರಗಳು ನಂತರ ಅದ್ಬುತ ಯಶಸ್ಸನ್ನು ಕಂಡವು.
“ಮಾಡ್ರನ್ ಟೈಮ್ಸ್” ದಲ್ಲಿ ಚಾಪ್ಲಿನ್ ಆಗಿನ ಕೈಗಾರಿಕಾ ಕ್ರಾಂತಿಯಲ್ಲಿ ಆಧುನಿಕ ಯಂತ್ರಗಳು ಹೇಗೆ ಮನುಷ್ಯನನ್ನು ಹೈರಾಣಾಗಿಸುತ್ತಿದ್ದವು ಎಂಬ ಅಂಶವನ್ನು ಪರಿಣಾಮಕಾರಿಯಾಗಿ ಅಭಿನಯಿಸಿ ತೋರಿಸಿದ.
“ಸಿಟಿ ಲೈಟ್ಸ್” ಚಿತ್ರದ ಕಥಾವಸ್ತು ಮತ್ತು ಚಾಪ್ಲಿನ್ ಡ್ರೆಸ್ ಕೋಡ್ ನಮ್ಮ ಭಾರತೀಯ ಚಲನಚಿತ್ರವು ಸೇರಿ ಅನೇಕ ಭಾಷೆಯ ಚಲನಚಿತ್ರಗಳ ವಸ್ತುವಾಯಿತು ಇದರಲ್ಲಿ ನಮ್ಮ ಕನ್ನಡದ ಉಮಾಕಾಂತ್ ನಿರ್ದೇಶಿಸಿದ “ಅನುರಾಗ ಸಂಗಮವು” ಒಂದು.
ಎರಡನೇ ಮಹಾಯುಧ ದ ಕಾಲದಲ್ಲಿ ಎಂದರೆ 1940 ರಲ್ಲಿ ಚಾಪ್ಲಿನ್ ನಟಿಸಿದ “ದಿ ಗ್ರೇಟ್ ಡಿಕ್ಟೇಟರ್” ತೆರೆಗೆ ಬಂತು. ಇಡೀ ಜಗತ್ತಿಗೆ ತನ್ನ ಅಭಿನಯದಿಂದ ಅಡಾಲ್ಫ್ ಹಿಟ್ಲರ್ ನ ಕ್ರೂರತೆಯನ್ನು ತನ್ನ ಹಾಸ್ಯ ಚಾತುರ್ಯದಿಂದ ನಟಿಸಿ ನಾಜಿಸಂ ವಾದಕ್ಕೆ ಪ್ರತಿರೋಧ ತೋರಿಸಿದ ಚಾಪ್ಲಿನ್ ಎಲ್ಲೋ ಒಂದು ಕಡೆ ಅಡಾಲ್ಫ್ ಹಿಟ್ಲರ್ ಕೂಡ ಮುಜುಗರಗೊಳ್ಳುವಂತೆ ಮಾಡಿಬಿಟ್ಟ. ಈ ಚಿತ್ರವು ಸಂಭಾಷಣೆಯಿಂದ ಕೂಡಿದ್ದು ಚಿತ್ರದಲ್ಲಿ ಹಿಟ್ಲರ್ ಹಾಗು ಅವನ ಡ್ಯೂಪ್ ಪಾತ್ರವೆರಡನ್ನು ಚಾಪ್ಲಿನ್ ತಾನೇ ನಿಭಾಯಿಸಿ ಚಿತ್ರವನ್ನು ಅದ್ಬುತ ಯಶಸ್ವಿಯಾಗಿಸಿದ.
ಹೀಗೆ ಇನ್ನೂ ಅನೇಕ ಚಿತ್ರಗಳಲ್ಲಿ ತನ್ನ ಹಾಸ್ಯ ನಟನೆ ಮತ್ತು ಕಥಾವಸ್ತುವಿಗೆ ಪರಿಣಾಮಕಾರಿಯಾಗಿ ನಟಿಸಿ ಜಗತ್ತಿನ ಮನೆಮಾತಾದ ಚಾಪ್ಲಿನ್ ತನ್ನ ವೈಯುಕ್ತಿಕ ಬದುಕಿನ ತುಂಬಾ ಬರಿ ನಿರಾಸೆ ಬಡತನ ನೋವುಗಳನ್ನು ತುಂಬಿಕೊಂಡು ಹೊರಜಗತ್ತಿಗೆ ಮಾತ್ರ ಎಲ್ಲ ವರ್ಗದ ಜನರನ್ನು ನಗೆಗಡಲಲ್ಲಿ ಮುಳುಗಿಸಿ ತಾನು ಮಾತ್ರ ಡಿ. ವಿ. ಗುಂಡಪ್ಪನವರ ಕಗ್ಗದಂತೆ “ನಗುವ ನಗಿಸುತ” ಎಂಬ ಎರಡು ಪದಗಳಿಗೆ ಮಾತ್ರ ತನ್ನ ಬದುಕನ್ನು ಮುಡುಪಾಗಿಟ್ಟ. ಆದರೆ ಯಾಕೋ, ನಗುತ ಬಾಳುವ ವರವನ್ನೇ ಆ ದಯಾಮಯ ಚಾಪ್ಲಿನ್ ಗೆ ಅನುಗ್ರಹಿಸಲಿಲ್ಲವಲ್ಲ ಎಂಬುದೇ ಸೋಜಿಗ.
ನಗುವುದಕ್ಕೆ ಇಂತಹದ್ದೆ ದಿವಸ ಎಂಬುದು ಇಲ್ಲವಲ್ಲಾ! ಇಂತಹ ಎಷ್ಟೋ ಹಾಸ್ಯ ಚೇತನಗಳು ಎಲ್ಲರ ಮನಸ್ಸಿನಲ್ಲಿರುವಾಗ…
ಕು ಶಿ ಚಂದ್ರಶೇಖರ್
ಮಾಹಿತಿ ಹಾಗು ಚಿತ್ರಗಳು : https://www.charliechaplin.com/