ಚಿಟ್ಟೆಗಳು

ಚಿಟ್ಟೆಗಳು

ಒಂದು ಪ್ರದೇಶ ಆರೋಗ್ಯಕರ ಪರಿಸರ ಹೊಂದಿದೆ ಎಂದು ಹೇಳಬೇಕಾದರೆ ಆ ಪ್ರದೇಶದಲ್ಲಿ ಹಲವು ಗುಣಲಕ್ಷಣಗಳು ಇರುತ್ತವೆ. ಆ ಲಕ್ಷಣಗಳು ಪ್ರಾಣಿ ಪಕ್ಷಿ ಹುಳಹುಪ್ಪಟೆ ಸೇರಿದಂತೆ ಹಲವಾರು ವಿದದ ವೃಕ್ಷಗಳು ಇತ್ಯಾದಿಗಳು ಇರಬಹುದು.

ಚಿಟ್ಟೆ ಮತ್ತು ಜೇನ್ನೋಣಗಳು ನಮ್ಮ ಸುತ್ತಲಿನ ಆರೋಗ್ಯಕರ ಪರಿಸರವನ್ನ ಸೂಚಿಸುತ್ತವೆ.ಇವುಗಳ ಮುಖ್ಯ ಆಹಾರ ಹೂವುಗಳ ಮಕರಂದ. ಎಲ್ಲಿ ಹೂವುಗಳು ಇರುತ್ತವೆಯೋ ಅಲ್ಲಿ ಮಕರಂದ ಹೀರಲು ಚಿಟ್ಟೆ ಹಾಗೂ ಜೇನ್ನೊಣಗಳು ಧಾವಿಸುತ್ತವೆ. ಯಾವ ಪ್ರದೇಶದಲ್ಲಿ ಅಪಾರ ಪ್ರಮಾಣದ ವೈವಿಧ್ಯಮಯ ಹೂವುಗಳು ಇದಾವೆ ಎಂದರೆ ಅಲ್ಲಿ ಹಚ್ಚಹಸಿರು ಕಂಗೋಳಿಸುತ್ತಿದೆ ಎಂದರ್ಥ. ಸುತ್ತಲಿನ ಪರಿಸರದಲ್ಲಿ ಅಪಾರ ಪ್ರಮಾಣದ ಜೇನ್ನೊಣಗಳು ಚಿಟ್ಟೆಗಳು ಇದಾವೆ ಎಂದರೆ ಅಲ್ಲಿ ಸಾಮಾನ್ಯ ಗಾತ್ರದಿಂದ ಹಿಡಿದು ಮಧ್ಯಮ ಮತ್ತು ಭಾರಿ ಪ್ರಮಾಣದ ಮರಗಳನ್ನ ಹೊಂದಿರುವ ಅರಣ್ಯ ಪ್ರದೇಶವಿದೆ ಎಂದರ್ಥ.

ವೈಜ್ಞಾನಿಕ ವಿವರಣೆ :

ವೈಜ್ಞಾನಿಕವಾಗಿ ಲೆಪಿಡಾಪ್ಟೆರಾ ಅಥವಾ ಲೆಪಿಡಾಪ್ಟೆರಾನ್ಸ್ ಎಂದು ಕರೆಯಲ್ಪಡುವ ರೆಕ್ಕೆಗಳುಳ್ಳ ಕೀಟಗಳ ಒಂದು ಗಣವಾಗಿದೆ. ಇದರಲ್ಲಿ ಚಿಟ್ಟೆಗಳು ಮತ್ತು ಪತಂಗಗಳು(moths) ಸೇರಿವೆ. ಲೆಪಿಡಾಪ್ಟೆರಾದ ಸುಮಾರು 180,000 ಪ್ರಭೇದಗಳನ್ನು ವಿವರಿಸಲಾಗಿದೆ, ಇದು ಭೂಮಿಯ ಮೇಲಿನ ಜೀವಿಗಳ ಒಟ್ಟು ಪ್ರಭೇದಗಳಲ್ಲಿ 10% ರಷ್ಟನ್ನು ಪ್ರತಿನಿಧಿಸುತ್ತವೆ . 126 ಕುಟುಂಬಗಳು ಮತ್ತು 46 ಸೂಪರ್‌ಫ್ಯಾಮಿಲಿಗಳೊಂದಿಗೆ ಎರಡನೇ ಅತಿದೊಡ್ಡ ಕೀಟ ಗಣವಾಗಿದೆ ಮತ್ತು ಪ್ರಪಂಚದಲ್ಲಿ ಅತ್ಯಂತ ವ್ಯಾಪಕವಾಗಿ ಗುರುತಿಸಬಹುದಾದ ಕೀಟ ಗಣಗಳಲ್ಲಿ ಒಂದು.

ಚಿಟ್ಟೆಗಳು ಪ್ರಕೃತಿಯ ಅದ್ಭುತ ಕಲಾಕೃತಿಗಳು.

ಹಲವಾರು ಪ್ರಭೇದಗಳಲ್ಲಿ ಕಂಡುಬರುವ ಚಿಟ್ಟೆಗಳಲ್ಲಿ ಪ್ರತಿಯೊಂದು ಚಿಟ್ಟೆಯೂ ತನ್ನದೇ ಆದ ವಿಶಿಷ್ಟ ಬಣ್ಣ ಹಾಗೂ ನಮೂನೆಯನ್ನು ಹೊಂದಿವೆ. ಅವುಗಳ ರೆಕ್ಕೆಗಳ ಮೇಲಿನ ಬಣ್ಣಬಣ್ಣದ ಆಕರ್ಷಕ ಚಿತ್ತಾರಗಳು ಅವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ.ಹಳದಿ, ನೀಲಿ, ಕೆಂಪು, ಹಸಿರು ಮತ್ತು ಕಪ್ಪುಬಣ್ಣಗಳ ಚಿಟ್ಟೆಗಳನ್ನು ನೋಡಿದಾಗ ನಮ್ಮ ಮನಸ್ಸು ಸಂತೋಷದಿಂದ ಅರಳಿ ನಾವು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತೇವೆ.

ಚಿಟ್ಟೆಗಳು ನಮ್ಮ ಪರಿಸರದ ಆರೋಗ್ಯದ ಸೂಚಕಗಳಾಗುವುದರೊಂದಿಗೆ ಅವುಗಳ ಸಂಖ್ಯೆ ಮತ್ತು ವೈವಿಧ್ಯತೆಯು ಪರಿಸರದ ಸಮತೋಲನವನ್ನು ಬಿಂಬಿಸುತ್ತವೆ. ಹೂವಿಂದ ಹೂವಿಗೆ ಹಾರಿ, ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸಿ ಅನೇಕಾನೇಕ ಸಸ್ಯಗಳಿಂದ ಹಿಡಿದು ಮರಗಿಡಗಳ ಜೀವನಚಕ್ರಕ್ಕೆ ಬುನಾದಿಯಾಗಿವೆ.ಅವುಗಳ ಜೀವನಚಕ್ರವೂ ಅತ್ಯಂತ ಮನಮೋಹಕವಾಗಿದೆ. ಮೊಟ್ಟೆಯಿಂದ ಹುಳು, ಹುಳುವಿಂದ ಪ್ಯೂಪಾ ಮತ್ತು ಅಂತಿಮವಾಗಿ ಸುಂದರ ಚಿಟ್ಟೆಯಾಗಿ ರೂಪಾಂತರ ಹೊಂದುವ ಪ್ರಕ್ರಿಯೆ ಪ್ರಕೃತಿಯ ಅದ್ಭುಗಳಲ್ಲಿ ಒಂದು.

ಮೃತ್ಯುಂಜಯ ನ. ರಾ.

Related post