ಜೋಡು

ನಿತ್ಯ ಹೊತ್ತು ಮೆರೆಯುವ
ಜೋಡಿಗೆ, ಯಾರು ಇಜ್ಜೋಡು
ಆಗದಿದ್ದರೆ ಸಾಕು

ಜಾತಿ ಧರ್ಮವೆನ್ನದೆ
ತನ್ನ ಜಾತಿ ಧರ್ಮ ಮರೆಯದೆ
ಜೋಡಾಗಿ ಸಾಗುವ ಜೋಡು
ಅದಕ್ಕಿದೆ ಅದರದೇ ಹಾಡು ಪಾಡು

ಸಾವಿರಾರು ವರ್ಷಗಳ ಹಿಂದೆ
ಜನಿಸಿ ಬಂದಾಗಿನಿಂದಲೂ
ತಂದೆ ತಾಯಿಯ ಗುರುತು ಪತ್ತೆ ಇಲ್ಲ
ವಂಶ ವೃಕ್ಷ ಬೆಳೆಯುತ್ತಲೇ ಸಾಗಿದೆ

ಬೆಟ್ಟಗುಡ್ಡ ಅಲೆಯುವ
ಕುರಿಗಾರನ ಕಾಲ್ಮರಿಯಿಂದ
ಇಂದಿನ ಪ್ಯಾಶನ್ ಲೋಕದ ಸೊಂಟ ಬಳಕಿಸುವ
ಕ್ಯಾಟ್ ವಾಕ್ ಮಣಿಯರ ಹೈ ಹೀಲ್ಡ್ ವರೆಗೂ
ಬಗೆಬಗೆಯ ಅಂಕಿತ ನಾಮ

ಇಂಗ್ಲೆಂಡ್ ರಾಣಿಯ ಶಯಾಗೃದಿಂದ
ಸ್ವಚ್ಛ ಮನಸ್ಸಿನ ಪೌರ ಕಾರ್ಮಿಕರ
ಹೊತ್ತು ಮೆರೆಸುವ ಗಟ್ಟಿ ಧೈರ್ಯ
ಧರೆಯ ಮೇಲೆ ಮತ್ಯಾರಿಗಾದರು ಉಂಟೆ

ಆಕಾರ ವಿಕಾರವಾಗದಂತೆ
ಹರಿತಾಯುಧದಿಂದ ತುಂಡರಿಸಿದ ದೇಹ
ಎದೆ ಬಗೆದು ಕುಳಿತ ಮೊಳೆ,
ಹೊಟ್ಟೆಯೊಳಗೆ ನುಗ್ಗಿದ ದಾರ
ಎಂಜಲಿಗಿಂತ ಜಿಗುಟಾದ ಸಂಶೋಧಿಸಿದ ಅಂಟು
ಮೊಸಗಾರರೇನಲ್ಲ ಮನುಜರಂತೆ

ಪಟ್ಟಣದಲ್ಲಿ ಬೃಹತ್ ಪ್ಯಾಕ್ಟರಿಯಿಂದ
ಮಾರುಕಟ್ಟೆಯಲ್ಲೂ ಕಮಾಲು
ಇವಕ್ಕೆಂದೇ ದೊಡ್ಡ ದೊಡ್ಡ ಮಾಲು
ಗ್ಲಾಸಿನ ಶೋ ರೂಮಗಳು
ನೂರಾರು ಸೇವಕರು ಭದ್ರತೆಯ ಜೊತೆಗೆ

ಆರೋಗ್ಯವಾಗಿದ್ದಾಗ ಲಕ್ಷಾಂತರ ಬೆಲೆಗಿದ್ದರೂ
ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ
ಪೈಸೆ ಆಣೆಯಿಂದ ಚೌಕಾಸಿ ಮಾಡಿ
ಚಿಕಿತ್ಸೆ ಕೊಡಿಸಿದವರಿಗೆ ಮತ್ತಷ್ಟು ದಿನ
ಜೋಡಿ ಈ ಜೋಡು…

ಶ್ರೀ ಹನಮಂತ ಸೋಮನಕಟ್ಟಿ

Related post