ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಮೂರು ಕೃತಿಗಳ ಬಿಡುಗಡೆ

ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಮೂರು ಕೃತಿಗಳ ಬಿಡುಗಡೆ

ಸದಾ ಸ್ಟೆತಾಸ್ಕೋಪ್ ಹಿಡಿಯುವ ಹಸ್ತದಿಂದ ಲೇಖನಿಯನ್ನು ಸಹ ಒಲಿಸಿಕೊಂಡವರಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಪ್ರಮುಖರು. ಅವರು ತಾವು ರಚಿಸಿದ ‘ಸಮಯದ ನೀರು ಮತ್ತೆ ಹರಿವ ಹೊತ್ತು’ ಹಾಗು ‘ಮುಖದಿಂದೆದ್ದು ಎತ್ತಲೊ ನಡೆದ ಕಣ್ಣು” ಎಂಬ ಕವನ ಸಂಕಲನಗಳನ್ನು ಮತ್ತು ‘ಹೆಣ್ಣೊಬ್ಬಳು ಗರ್ಭಕೋಶಗಳೆರಡು’ ಎಂಬ ವೈದ್ಯಕೀಯ ಲೇಖನಗಳ ಪುಸ್ತಕವನ್ನು ಹೊರತಂದಿದ್ದಾರೆ.

1976 ರಿಂದ1989 ರವರೆಗೆ ಸೋಮಾಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿರುವ ಅವರು, ‘ಕಗ್ಗತ್ತಲೆಯ ಖಂಡದಲ್ಲಿ’ ಸೋಮಾಲಿಯಾದಲ್ಲಿ 13 ವರ್ಷಗಳು ಪ್ರವಾಸ ಕಥನ ರಚಿಸಿದ್ದರು. ‘ನಮ್ಮಂಗಳದ ಹರಳುಗಳು’ ಕವನ ಸಂಕಲನವನ್ನು ಕೂಡ ಪ್ರಕಟಿಸಿದ್ದರು.

‘ಸಮಯದ ನೀರು ಮತ್ತೆ ಹರಿವು ಹೊತ್ತು’ ಸಂಕಲನದಲ್ಲಿ ಪ್ರಾರ್ಥನೆ, ಅಮಾವಾಸ್ಯೆಯ ದಿನ, ಆ ರಕ್ಕಸ ರಾತ್ರಿಗಳು, ಇವಳು, ಈ… ಬೆಳಕು, ಕಂಸ, ಕಣ್ಣುಕೊಡಿ, ಕಾಲ, ಕುರಿಮರಿ, ಗೆಳೆಯ, ಗೆಳೆಯನೊಬ್ಬ ಸತ್ತ ಸುದ್ದಿ, ಮುಂತಾದ ಅತ್ಯಂತ ಸರಳ, ಸುಂದರ ಶೈಲಿಯಲ್ಲಿರುವ 30 ಕವನಗಳನ್ನು ಸಂಕಲನದಲ್ಲಿವೆ. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡರ ಮುನ್ನುಡಿ, ಡಾ.ಎಂಜಿಆರ್‌ ಅರಸು ಅವರ ಬೆನ್ನುಡಿ ಇದೆ.

ಮೈಸೂರು ಮತ್ತು ವೈದ್ಯವರ್ತ ಪ್ರಕಾಶನ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್-ಇಂಡಿಯಾ (ಐಇಐ) ಯಲ್ಲಿ ಅಕ್ಟೋಬರ್ 20 ರಂದು ಬೆಳಿಗ್ಗೆ 10.45 ಕ್ಕೆ ಈ ಮೂರೂ ಕೃತಿಗಳು ಬಿಡುಗಡೆಗೊಳ್ಳಲಿವೆ.

ಎಂ ಎಲ್ ಸಿ ವಿಶ್ವನಾಥ್ ಎ. ಎಚ್. ಕಾರ್ಯಕ್ರಮ ಉದ್ಘಾಟಿಸುವರು. ಅರಸು ಜಾಗೃತಿ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಎಚ್.ಎ.ವೆಂಕಟೇಶ್ ಪುಸ್ತಕಗಳನ್ನು ಬಿಡುಗಡೆ ಮಾಡುವರು. ಮೈಸೂರು ವೈದ್ಯಕೀಯ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ಜೆ.ಪ್ರಸನ್ನಕುಮಾರ್ ಮತ್ತು ಚುಟುಕು ಯೋಗಾಚಾರ್ಯ ಡಾ.ಎಂ.ಜಿ.ಆರ್.ಅರಸ್ ರವರು ಮೂರು ಪುಸ್ತಕಗಳ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕನ್ನಡಪ್ರಭಾ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಅಂಶಿ ಪ್ರಸನ್ನಕುಮಾರ್ ಆಗಮಿಸುವರು.

ಪುಸ್ತಕಗಳಿಗಾಗಿ ಆಸಕ್ತರು ಮೊ. ೯೪೪೮೪೦೨೦೯೨ ಸಂಖ್ಯೆಗೆ ಸಂಪರ್ಕಿಸಬಹುದು.

ಪ್ರಕಟಣೆ : ಸಾಹಿತ್ಯಮೈತ್ರಿ ತಂಡ

Related post