ಒಬ್ಬ ವ್ಯಕ್ತಿ ನಿಜವಾಗಿ ನಾಯಕನಾಗಬೇಕೆಂದರೆ 7 ಅಡಿ ಎತ್ತರ ಇರಬೇಕು,ಚಾಕ್ಲೇಟ್ ಸ್ಕಿನ್ ಹೊಂದಿರಬೇಕು, ಹತ್ತಾರು ಸಂಘ-ಸಂಸ್ಥೆಗಳಿರಬೇಕು, ಎನ್ನುವಂತಹ ರೂಲ್ಸ್ ಏನಿಲ್ಲಾ. ಒಬ್ಬ ನಾಯಕನಲ್ಲಿ ‘ಮುಖ ಲಕ್ಷಣಗಳಿಗಿಂತ ಗುಣ ಲಕ್ಷಣಗಳೆ ಮುಖ್ಯವಾಗಿರುತ್ತದೆ’. ನಾಯಕನೆಂದರೆ ಸಾಮಾನ್ಯ ವ್ಯಕ್ತಿಯಾಗಿದ್ದರು ಸಾಮಾಜಿಕ ಮೌಲ್ಯಗಳನ್ನು, ರಾಜಕೀಯ ದೌರ್ಬಲ್ಯಗಳನ್ನು ಜನಗಳಿಗೆ ತೋರಿಸಿ, ಉತ್ತಮ ಸಮಾಜ ನಿರ್ಮಿಸುವಂತಹ ಧೈರ್ಯ, ಸಾಹಸ ಹೊಂದಿರುವಂತಹವರು ನಿಜವಾದ ಹೀರೊಗಳೆ. ಇಂತಹ ಪಾತ್ರಗಳ ಮೂಲಕವೆ ಜನ-ಮನ ಮುಟ್ಟಿದಂತಹ ನಾಯಕನಟರು ನಮ್ಮ ಕನ್ನಡ ಚಿತ್ರರಂಗದ ಅಭಿಜಾತ ನಟರಾದಂತಹ ‘ಡೈನಾಮಿಕ್ ಸ್ಟಾರ್’ ದೇವರಾಜ್ ರವರು.
ಸೆಪ್ಟಂಬರ್ 20ಕ್ಕೆ ದೇವರಾಜ್ ರವರಿಗೆ 60ನೇ ಜನ್ಮದಿನದ ಸಂಭ್ರಮಾಚರಣೆ. ವಯಸ್ಸು 60 ಆದರು ಇಂದಿಗೂ ‘ಯಂಗ್ ಡೈನಾಮಿಕ್’ ಆಗಿಯೆ ಕಾಣಿಸುತ್ತಾರೆ. 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಮನೆ ಮಾತಾಗಿದ್ದಾರೆ, ಅತೀ ಹೆಚ್ಚು ಪೋಲಿಸ್ ಪಾತ್ರಗಳ ಮೂಲಕ ಇಂದಿಗೂ ಕನ್ನಡಿಗರ ಮನಸ್ಸಲ್ಲಿದ್ದಾರೆ. ಇವರಿಗೆ ಯಾವುದೇ ಅಭಿಮಾನಿಗಳ ಸಂಘಗಳು ಇರದೆ ಇದ್ದರು, ಕರ್ನಾಟಕದಲ್ಲಿ ತುಂಬಾ ಅಭಿಮಾನಿಗಳ ಬಳಗವಿದೆ. ಇಂದಿಗೂ ಇವರನ್ನು ಮೀರಿಸುವಂತಹ ಖಡಕ್ ಪೋಲಿಸ್ ಅಧಿಕಾರಿಯ ಪಾತ್ರವನ್ನು ಯಾರೊಬ್ಬರು ಮಾಡಲು ಸಾಧ್ಯವಿಲ್ಲ. ಮೊದ-ಮೊದಲು ಖಳನಾಯಕರಾಗಿ ಬಂದು ನಂತರ ನಾಯಕರಾಗಿ ಚಿತ್ರರಂಗದಲ್ಲಿ ಮಿಂಚಿದರು. ತಮ್ಮ ಬಾಲ್ಯ ಜೀವನದಲ್ಲಿ ಕಷ್ಟದ ದಿನಗಳನ್ನು ಕಂಡ ಇವರು ಎಚ್.ಎಂ.ಟಿ (ಹಿಂದುಸ್ಥಾನ್ ಮಶೀನ್ ಟೂಲ್ಸ್ ಲಿ.) ವಾಚ್ ಕಂಪನಿಯಲ್ಲಿ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.
ಹೆಚ್ ಎಂ ಟಿ ಕಂಪನಿಯಲ್ಲಿ ಉದ್ಯೋಗ ಮಾಡುವಾಗಲೆ ಕಲಾಜೀವನ ಕೈ ಬೀಸಿ ಕರೆದಿದ್ದು. ಅಲ್ಲಿಯೆ ರಂಗಭೂಮಿ ನಂಟನ್ನು ಬೆಳೆಸಿಕೊಂಡರು. ಪ್ರಾರಂಭದಲ್ಲಿ ಬಿ.ಜಯಶ್ರೀ ಅವರ ‘ಸ್ಪಂದನ’ ರಂಗ ತಂಡದಲ್ಲಿ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸಿ ಉತ್ತಮ ಅಭಿನಯ ಕೌಶಲ್ಯವನ್ನು ಹೊಂದಿದ್ದರು. ನಂತರ ಶಂಕರನಾಗ್ ರವರ ಸಂಕೇತ್ ಕಲಾತಂಡವನ್ನು ಸೇರಿ ಸದಸ್ಯರಾದರು.
ಪಿ.ನಂಜುಡಪ್ಪನವರ ‘ತ್ರಿಶೂಲ’ ಎನ್ನುವ ಚಿತ್ರದ ಮೂಲಕ ಇವರು ಹಾಗೂ ಅವಿನಾಶ್ ಇಬ್ಬರು ಒಟ್ಟಿಗೆ ಬೆಳ್ಳಿತೆರೆಯನ್ನು ಪ್ರವೇಶ ಮಾಡಿದರು. ಆದರೆ ಆ ಚಿತ್ರ ಬಿಡುಗಡೆಗೂ ಮುನ್ನ ಅವರ ಇನ್ನೊಂದು ಚಿತ್ರ ’27 ಮಾವಳ್ಳಿ ಸರ್ಕಲ್’ 1986ರಲ್ಲಿ ತೆರೆಗೆ ಬಂತು. ನಟನೆಯ ಮೊದಲ ಚಿತ್ರ ಬಿಡುಗಡೆಯಾಗಿದ್ದು ಅನಂತರ. ತಮ್ಮ ವಿಶಿಷ್ಟ ಅಭಿನಯ,ಹಾವ-ಭಾವ,ವಿಕೃತ ನಗುವಿನ ಮೂಲಕ ಖಳನಾಯಕನ ಪಾತ್ರಗಳಿಗೆ ಆಯ್ಕೆಯಾಗಿ ನಟಿಸುತ್ತಾ 1986 ರಿಂದ 1990ರ ತನಕ ಚಿತ್ರರಸಿಕರ ಪಾಲಿಗೆ ವಜ್ರಮುನಿ,ತೂಗುದೀಪ ಶ್ರೀನಿವಾಸರಂತೆ ಮೆಚ್ಚಿನ ಖಳನಟರಾಗಿ ಜನ-ಮನವನ್ನು ಗೆಲ್ಲುತ್ತಾರೆ. ಆಗಂತುಕ, ಕೆಂಡದ ಮಳೆ, ಅರ್ಜುನ್, ನವಭಾರತ, ಯುದ್ಧಕಾಂಡ, ಡಾನ್ಸ್ ರಾಜ ಡಾನ್ಸ್, ಸಾಂಗ್ಲಿಯಾನ ಚಿತ್ರಗಳಲ್ಲಿನ ಅವರ ಅಭಿನಯ ಅದ್ಭುತ. ಆಗಂತುಕ ಚಿತ್ರದ ವಿಶಿಷ್ಟಾಭಿನಯಕ್ಕೆ ಉತ್ತಮ ಖಳನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಭಿನಯದ ಜೊತೆಗೆ ಒಂದು ಚಿತ್ರಕ್ಕೆ ಕಥೆಯನ್ನು ಕೂಡ ಬರೆದಿದ್ದಾರೆ. 1987 ರಲ್ಲಿ ಬಂದ ‘ಅಂತೀಮ ತೀರ್ಪು’ ಚಿತ್ರ ಇವರದೆ ಕಥೆ.೨೦೧೪ ರಲ್ಲಿ ತಮ್ಮ ಮಗ ಪ್ರಜ್ವಲ್ ಅಭಿನಯದ ‘ನೀನಾದೆ ನಾ’ ಸುಂದರ ಕಥಾ ಚಿತ್ರವನ್ನು ಸಹ ನಿರ್ಮಿಸಿದ್ದಾರೆ.
ಹೀಗೆ ಕಲಾಜೀವನವನ್ನು ಪ್ರಾರಂಭಿಸಿದ ಇವರಿಗೆ ಖಳ ಪಾತ್ರದ ಜೊತೆಗೆ ಒಳ್ಳೋಳೆ ಪಾತ್ರಗಳು ಹುಡುಕಿ ಬಂದವು. ಕೆ.ವಿ ರಾಜು ನಿರ್ದೇಶನದ ಎವರ್ ಗ್ರೀನ್ ಚಿತ್ರಗಳಲ್ಲೊಂದಾದ ‘ಇಂದ್ರಜಿತ್’ ಚಿತ್ರದಲ್ಲಿನ ಇವರ ಇನ್ಸ್ ಫೆ಼ಕ್ಟರ್ ‘ಫ಼ರ್ನಾಂಡೀಸ್’ ಪಾತ್ರ ಹೇಗೆ ಮರೆಯೋಕೆ ಸಾಧ್ಯ ಹೇಳಿ…? ಒಂದೆ ಪಾತ್ರ, ಆದರೆ ಎರಡು ವಿಭಿನ್ನ ಅಭಿನಯ. ತಾನೊಬ್ಬ ನಾಯಕನ ಪಾತ್ರಕ್ಕೂ ಸೈ ಎನ್ನುವಂತೆ ಮಾಡಿದ ಸವಾಲಿನ ಪಾತ್ರ ಅದು. ನಂತರ ಅಲ್ಲಲ್ಲಿ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.
ಅವತಾರ ಪುರುಷ, ಆಪತ್ಭಾಂಧವ, ತ್ರಿನೇತ್ರ, ಆವೇಶ ಹೀಗೆ ಹಲವು ಚಿತ್ರಗಳಲ್ಲಿ ನಾಯಕನೊಂದಿಗೆ ಪೊಲೀಸ್ ಅಧಿಕಾರಿಯಾಗಿ ಪಾತ್ರಕ್ಕೆ ಜೀವ ತುಂಬಿದರು. ಎಸ್ ಪಿ ಭಾರ್ಗವಿ ಚಿತ್ರದ ಮೂಲಕ ಪರಿಪೂರ್ಣ ನಾಯಕನಾಗಿ ತಮ್ಮ ವೃತ್ತಿ ರಂಗದ ಇನ್ನೊಂದು ಮಜಲನ್ನು ಆರಂಭಿಸಿದರು. ಆ ದಿನಗಳಲ್ಲಿ ದೇವರಾಜ್ ಅಂದರೆ ಪೊಲೀಸ್ ಎನುವಷ್ಟರ ಮಟ್ಟಿಗೆ ಅಭಿಮಾನಿಗಳ ಮನಸಲ್ಲಿ ಉಳಿದುಬಿಟ್ಟರು. 1991ರಲ್ಲಿ ಬಂದಂತಹ ‘ವೀರಪ್ಪನ್’ ಚಿತ್ರ ಇಂದಿಗೂ ದೇವರಾಜ್ ರವರ ವೃತ್ತಿ ಜೀವನದಲ್ಲಿ ಮರೆಯಲಾಗದ ಚಿತ್ರವೆಂದರು ತಪ್ಪಾಗಲಾರದು. ಯಾಕೆಂದರೆ,ಕಾಡುಗಳ್ಳ ವೀರಪ್ಪನ್ ಕಥಾಹಂದರವಿದ್ದ ಈ ಚಿತ್ರ,ವೀರಪ್ಪನ್ ಬುದುಕಿರುವಾಗಲೆ ತೆರೆಕಂಡಿತ್ತು.ಆ ದಿನಗಳಲ್ಲಿ ಬಹಳಷ್ಟು ಸುದ್ದಿಯಾಗಿತ್ತು. ಆ ಚಿತ್ರದಲ್ಲಿನ ಅವರ ಅಭಿನಯಕ್ಕೆ ಉತ್ತಮ ನಟ ರಾಜ್ಯಪ್ರಶಸ್ತಿಯು ದೊರಕಿತು. 2003ರಲ್ಲಿ ತೆರೆ ಕಂಡ ‘ಖಾಕಿ’ಎಂಬ ಚಿತ್ರದಲ್ಲಿ ವೀರಪ್ಪನ್ ಚಿಕ್ಕ ಪಾತ್ರ ಮಾಡುವ ಮೂಲಕ ಮತ್ತೊಮ್ಮೆ ಆ ಪಾತ್ರವನ್ನು ನೆನಪಿಸಿಕೊಟ್ಟರು. ಆಮೇಲೆ ಎಲ್ಲಾ ಹೆಚ್ಚಿನದಾಗಿ ನಾಯಕ ಪ್ರಧಾನ ಪಾತ್ರಗಳಲ್ಲೆ ದೇವರಾಜ್ ಮಿಂಚಲು ಪ್ರಾರಂಭಿಸಿದರು. ತೆಲುಗು,ತಮಿಳು ಭಾಷೆಗಳಲ್ಲು ನಟಿಸಿದರು. ಉತ್ತಮ ಖಳನಟರಾಗಿ ಬಂದು ನಾಯಕರಾದ ಮೇಲೆ ಕನ್ನಡಕ್ಕೆ ‘ಡೈನಾಮಿಕ್ ಸ್ಟಾರ್’ ಎಂದೆ ಹೆಸರಾದರು.
ನಮ್ಮ ಶಂಕ್ರಣ್ಣರವರ ಚಿತ್ರಗಳಲ್ಲಂತು ದೇವರಾಜ್ ರವರಿಗೆ ಪಾತ್ರಗಳು ಇದ್ದೆ ಇರುತ್ತಿತ್ತು. ಸಿ.ಬಿ.ಐ ಶಂಕರ್, ಇದುಸಾಧ್ಯ, ಎಸ್.ಪಿ ಸಾಂಗ್ಲಿಯಾನ-1 ಮತ್ತು 2 ಸುಂದರ ಕಾಂಡ ಹೀಗೆ ಐದಾರು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದಾರೆ.ನಂತರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಷ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್ ಎಲ್ಲ ನಟರೊಂದಿಗೂ ಖಳನಾಯಕನಿಂದ ಹಿಡಿದು ಕಥಾನಾಯಕನ ಪಾತ್ರದವರೆಗೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ನಿರ್ದೇಶಕ ಕೆ.ವಿ ರಾಜು ರವರ ಚಿತ್ರಗಳಲ್ಲಂತೂ ದೇವರಾಜ್ ಖಾಯಂ ಎನಿಸುವಷ್ಟು ಆಗಿ ಬಿಟ್ಟಿದ್ದರು.ಇವರ ಜೋಡಿಯ ಯುದ್ಧಕಾಂಡ, ಕದನ, ಅಭಿಜಿತ್, ಹುಲಿಯಾ, ಯುದ್ಧ, ಪೋಲಿಸ್ ಪವರ್ ನಂತಹ ಚಿತ್ರಗಳನ್ನು ಇಂದಿಗೂ ಜನ ಮರೆತಿಲ್ಲಾ. ಹುಲಿಯಾ ಚಿತ್ರವಂತೂ ದೇವರಾಜ್ ರವರ ನಟನೆಗೆ ಇನ್ನಷ್ಟು ಸತ್ವ ಕೊಟ್ಟಂತಹ ಚಿತ್ರ. ಅದರಲ್ಲಿನ ಸಾಮಾಜಿಕ ನೈಜ ಕಥಾವಸ್ತು, ಅಭಿನಯ ಅದ್ಭುತ. ಹೀಗೆ ಅಭಿನಯಿಸುತ್ತಾ ಎಲ್ಲಾ ಥರದ ಪಾತ್ರಗಳಲ್ಲು ದೇವರಾಜ್ ಅಭಿಮಾನಿಗಳಿಗೆ ಮೆಚ್ಚುಗೆಯಾದರು. ಸುನೀಲ್ ಕುಮಾರ ದೇಸಾಯಿಯವರ ತರ್ಕ, ಉತ್ಕರ್ಷದಲ್ಲಿನ ಪಾಶವೀವೃತ್ತಿ ಪಾತ್ರ. ಗೂಂಡಾರಾಜ್ಯ, ಲಾಕಪ್ ಡೆತ್, ಇಂಡಿಯನ್ ಚಿತ್ರದಲ್ಲಿನ ಸಮಾಜದ ಜವಾಬ್ದಾರಿಯುತ ಪ್ರಜೆಯ ಪಾತ್ರ,ನನ್ನ ತಂಗಿ, ಬಂಗಾರದ ಮನೆ, ಹೆತ್ತಕರುಳು, ಜೇನುಗೂಡು ಚಿತ್ರದಲ್ಲಿನ ಕೌಟುಂಬಿಕ ಪಾತ್ರ. ಮಾನವ 2022, ಮಿ.ಎಕ್ಸ್, ನೀಲಾಂಬರಿ, ದುರ್ಗಾ ಶಕ್ತಿಗಳಂತಹ ವಿಭಿನ್ನ ಕಥಾಹಂದರದ ಚಿತ್ರಗಳು. ಗೋಲಿಬಾರ್, ಕರ್ಫ್ಯೂ, ಗೋಲ್ಡ್ ಮೆಡಲ್, ಸರ್ಕಲ್ ಇನ್ಸ್ ಪೆಕ್ಟರ್ ಚಿತ್ರಗಳ ಖಡಕ್ ಪೋಲೀಸ್ ಅಧಿಕಾರಿಯ ಪಾತ್ರಗಳು ಇವತ್ತಿಗೂ ಅಭಿಮಾನಿಗಳು ಮರೆಯುವಂತಿಲ್ಲ. ’ಸರ್ಕಲ್ ಇನ್ಸ್ ಪೆಕ್ಟರ್’ ಚಿತ್ರ ಅಂದಿನ ಕಾಲದಲ್ಲೆ ಎಲ್ಲಾ ದಾಖಲೆಗಳನ್ನು ಮೀರಿ ಹೆಸರು ಮಾಡಿದಂತಹ ಚಿತ್ರವಾಗಿತ್ತು.
ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳ, ಚಿತ್ರಗಳ ಮೂಲಕ ದೇವರಾಜ್ ಮನೆ ಮಾತಾಗಿದ್ದರು. ಆದರೆ,ಅವರು ಎಷ್ಟೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿದರು ಕೂಡ ಇಂದಿಗೂ ಜನ ಅವರನ್ನು ಗುರುತಿಸುವುದು ಮಾತ್ರ ಒಬ್ಬ ದಕ್ಷ ಪೋಲೀಸ್ ಅಧಿಕಾರಿಯಾಗಿ. ಹೌದು ಅವರ ಆ ಪಾತ್ರಗಳು ಬರಿ ಅಭಿನಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ,ಎಷ್ಟೊ ಯುವಕರ ಕನಸಿನ ಪಾತ್ರಗಳು ಆಗಿವೆ.
ಎಷ್ಟೊ ಜನರ ಸ್ಫೂರ್ತಿ ಪಾತ್ರಗಳು ಆಗಿದೆ. ನಾನು ಸ್ಕೂಲ್ ಗೆ ಹೋಗುವಾಗ ವಾರ್ಷಿಕೋತ್ಸವದಲ್ಲಿ ಡ್ರಾಮಾದಲ್ಲಿ ನನಗೆ ಪೋಲಿಸ್ ಪಾತ್ರವೆ ಬೇಕು ಅನ್ನುವಷ್ಟರ ಮಟ್ಟಿಗೆ ದೇವರಾಜ್ ಇಷ್ಟವಾಗಿಬಿಟ್ಟಿದ್ದರು.
ನಾನು ದೇವರಾಜ್ ರವರ ಚಿತ್ರಗಳಲ್ಲಿ ಮೊದಲು ನೋಡಿದ್ದು ‘ನನ್ನ ತಂಗಿ’. ಅಂದಿನಿಂದ ಇಂದಿನ ‘ಹೆಬ್ಬಟ್ಟ ರಾಮಕ್ಕ’ ಚಿತ್ರದವರೆಗೂ ಲೆಕ್ಕವಿಲ್ಲದಷ್ಟು ಬಾರಿ ಅವರ ಚಿತ್ರಗಳನ್ನು ನೋಡಿದ್ದೇನೆ.ದೇವರಾಜ್ ಎಂದರೆ ನನಗೆ ಮಾತ್ರವಲ್ಲ ನಮ್ಮ ಮನೆಯವರೆಲ್ಲರಿಗೂ ಅಚ್ಚು-ಮೆಚ್ಚು. ಇಂದು ದೇವರಾಜ್ ಚಿತ್ರಗಳು ಟಿ.ವಿಯಲ್ಲಿ ಬಂತೆಂದರೆ ಸಾಕು ನಮ್ಮ ಅಜ್ಜಿ, ಅಣ್ಣಂದಿರು, ತಂಗಿ,ಭಾವ ಎಲ್ಲರೂ ಕೂತು ನೋಡುತ್ತಾರೆ. ನಮಗೆಲ್ಲಾ ಇಷ್ಟವಾಗಿದ್ದು ದೇವರಾಜ್ ರವರ ಖಡಕ್ ಲುಕ್, ಸ್ಪಷ್ಟ ಭಾಷಾ ಶೈಲಿ, ಖದರ್ ಸಂಭಾಷಣೆ, ಸಮಾಜಕ್ಕೆ ಉತ್ತಮ ಸಂದೇಶವುಳ್ಳ ಕಥೆಗಳು. ನಿಜ ಹೇಳಬೇಕೆಂದರೆ ಗೋಲಿಬಾರ್, ಕರ್ಫ್ಯೂ ಅಂತಹ ಚಿತ್ರಗಳು ಬರುವ ಮುಂಚೆ, ನಮಗೆ ಅವುಗಳ ಅರ್ಥಗಳೆ ಗೊತ್ತಿರಲಿಲ್ಲ. ಅವರ ಕೆಲವು ಪಾತ್ರಗಳನ್ನು ನೋಡುತ್ತಿದ್ದರೆ ನಾವೆ ನಾಯಕರಾಗುವಷ್ಟು ಇಷ್ಟವಾಗುತ್ತದೆ.ಲಾಕಪ್ ಡೆತ್ ಚಿತ್ರದ ಅಮರ್ ಪಾತ್ರ, ಬಂಗಾರದ ಮನೆ ಚಿತ್ರದ ಅಣ್ಣನ ಪಾತ್ರ, ಕರ್ಫ್ಯೂ ಚಿತ್ರದ ಎ.ಸಿ.ಪಿ ಪ್ರದೀಪ್ ಪಾತ್ರ. ಹೈ ಕಮಾಂಡ್,ರಾಜಕೀಯ, ನಕ್ಸಲೈಟ್,ಸಿಂಹಾದ್ರಿ, ಹೀಗೆ ಹಲವು ಚಿತ್ರಗಳ ಪಾತ್ರಗಳು ತುಂಬಾ ಇಷ್ಟವಾಗುತ್ತದೆ. ಇವತ್ತು ಎಷ್ಟೆ ಹೊಸಬರು, ಪಾತ್ರಧಾರಿಗಳು ಬಂದರು ದೇವರಾಜ್ ರವರು ಮಾಡಿದಂತಹ ಪಾತ್ರಗಳಿಗೆ ಸರಿಸಮಾನಾಗಿ ಮಾಡಲು ಸಾಧ್ಯವಿಲ್ಲ, ಮುಂದೆಯೂ ಅಸಾಧ್ಯ. ಅವರ ಅಭಿನಯಕ್ಕೆ ಅವರ ಪಾತ್ರಕ್ಕೆ ಅವರೊಬ್ಬರೆ ಸರಿ-ಸಮ.
ಆದರೆ,ಇಂದು ದೇವರಾಜ್ ರವರು ಪಾತ್ರಗಳಲ್ಲಿ ಬದಲಾಗಿದ್ದಾರೆ. ಅಂದು ನಮಗೆಲ್ಲಾ ‘ಡೈನಾಮಿಕ್’ ಆಗಿ ಕಾಣಿಸಿಕೊಂಡವರು, ಇಂದು ಜವಬ್ದಾರಿಯುತ ಅಪ್ಪನಾಗಿ, ಒಳ್ಳೇಯ ಅಣ್ಣನಾಗಿ,ಮಾವನಾಗಿ,ಕಮೀಷನರ್ ಆಗಿ ಎಲ್ಲಾ ಥರದ ಮುಖ್ಯ ಪೋಷಕ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ’ಚಾಲೆಂಜಿಂಗ್ ಸ್ಟಾರ್’ ದರ್ಶನ್ ರವರ ಚಿತ್ರಗಳಲ್ಲಂತೂ ‘ಡೈನಾಮಿಕ್ ಸ್ಟಾರ್’ ಇದ್ದೆ ಇರುತ್ತಾರೆ. ದೇವರಾಜ್ ರವರದು ಕಲಾವಿದರ ಕುಟುಂಬ.ಇಬ್ಬರು ಮಕ್ಕಳಾದಂತಹ ಪ್ರಜ್ವಲ್ ಹಾಗೂ ಪ್ರಣಮ್ ಇಬ್ಬರು ಚಿತ್ರರಂಗದಲ್ಲಿ ನಾಯಕರಾಗಿದ್ದಾರೆ. ಅವರ ಪತ್ನಿ ಚಂದ್ರಲೇಖಾ ದೇವರಾಜ್ ರವರು ಕೂಡ ಮೊದಲು ನಾಯಕಿಯಾಗಿದ್ದರು. ದೇವರಾಜ್ ರವರು ಇಂದು ಪಾತ್ರಗಳಲ್ಲಿ ಬದಲಾದರು, ಅವರ ’ಡೈನಾಮಿಕ್ ಸ್ಟಾರ್’ ವ್ಯಾಲ್ಯೂ ಮಾತ್ರ ಎಂದಿಗೂ ಬದಲಾಗೋಕೆ ಸಾಧ್ಯವಿಲ್ಲಾ. ಯಾವತ್ತಿಗೂ ಕನ್ನಡಕ್ಕೊಬ್ಬರೆ ’ಡೈನಾಮಿಕ್ ಸ್ಟಾರ್’. ಅವರು ಹೀಗೆ ಮತ್ತಷ್ಟು ಕಲಾಸೇವೆ ಮಾಡಲು ದೇವರು ಅವಕಾಶವನ್ನು ಕೊಡಲಿ, ಒಳ್ಳೇಯ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರಲಿ. ಅವರ ವೃತ್ತಿ ಜೀವನ,ವೈಯಕ್ತಿಕ ಜೀವನ ಎಂದಿಗು ಚೆನ್ನಾಗಿರಲಿ. ಅದೇ ನಮ್ಮೆಲ್ಲರ ಆಶಯ.
ಲೇಖನ್ ನಾಗರಾಜ