ತಂತಿಗೆ ತಂತಿ ತಾಗಿ
ದೀಪಕ್ಕಳ ‘ತಂತಿಗೆ ತಂತಿ ತಾಗಿ’ ಕವನ ಸಂಕಲನ ಓದುವುದೇ ಚೆಂದ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ಎಲ್ಲರೂ ಓದಬಹುದಾದ ಪುಟ್ಟ ಪುಟ್ಟ ಕವಿತೆಗಳಿಂದ ಹಿಡಿದು ಪುಟ ಪುಟಗಳ ತುಂಬ ಹರವಿಕೊಂಡಿರುವ ದೊಡ್ಡ ಗಾತ್ರದ ಕವಿತೆಗಳೂ ಇಲ್ಲಿ ಸಾಲುಸಾಲಾಗಿ ಜಾಗ ಪಡೆದುಕೊಂಡಿವೆ. ಬರೀ ಕವಿತೆಗಳಾಗದೆ ನೆನಪಿನ ಬುತ್ತಿ ಬಿಚ್ಚಿಡುವ, ಇನಿಯನಿಗೆ ಪ್ರೇಮ ನಿವೇದನೆ ಹೇಳಿಕೊಳ್ಳುವ, ಇನ್ಯಾರೊಂದಿಗೋ ಸಂವಾದ ಮಾಡುವ ಒಂದಷ್ಟು ಗದ್ಯ ಕವಿತೆಗಳು ನಮ್ಮನ್ನು ಮಾತು ಮಾತಿಗೂ ಕೆಣಕುತ್ತವೆ.
ಪರಿಶುದ್ಧವಾದ ಪ್ರೀತಿಯ ಹುಡುಕಾಟದಲ್ಲಿ ಕೊನೆಗೆ ಸಿಗುವುದೇ ಕವಿತೆ ಇರಬೇಕು. ಇಲ್ಲಿ ಪ್ರೀತಿ ಮತ್ತು ಕವಿತೆಗೆ ವ್ಯತ್ಯಾಸವಿಲ್ಲದಂತೆ ಒಂದನ್ನೊಂದು ಬೆಸೆದುಕೊಂಡಿವೆ. ಯಾವುದೇ ಚಂದೋವ್ಯಾಕರಣಕ್ಕೆ, ಸಂಗೀತ ಲಯಕ್ಕೆ ಬದ್ಧವಾಗಿರದ ಈ ಕವಿತೆಗಳು ಕವಿತೆ ಎಂದರೆ ಹೀಗೇ ಇರಬೇಕೆಂಬ ಚೌಕಟ್ಟನ್ನು ಮೀರಿ ನಮ್ಮನ್ನು ಮುಟ್ಟುವ ಪರಿ ಇದೆಯಲ್ಲಾ ಅದೇ ದೀಪಕ್ಕಳ ಗೆಲುವೆಂದು ನಾನು ಭಾವಿಸಿದ್ದೇನೆ.
ಮುನಿಸಿಗೂ, ಬೇಸರಕ್ಕೂ ವ್ಯತ್ಯಾಸ ತಿಳಿಸಿಕೊಡುವ, ಮಾತು-ಮೌನ-ತನನನಗಳಿಂದ ಹೊಮ್ಮಿದ ರಿಂಗಣ ದನಿಗಳು ನಮ್ಮೊಳಗೆ ಮನೆಮಾಡಿ ಕೂತುಬಿಡುತ್ತವೆ. ಸರಳವಾಗಿ ಓದಬಹುದಾದ ಗಾಢಾರ್ಥ ತುಂಬಿದ ಕೆಲವು ಕವಿತೆಗಳು ದೀಪಕ್ಕಳ ಒಳಮನಸ್ಸನ್ನು ಪರಿಚಯ ಮಾಡಿಕೊಡುತ್ತದೆ. ಅದಕ್ಕಾದರೂ ಈ ಸಂಕಲನವನ್ನು ಒಮ್ಮೆ ಓದಬೇಕು.
“ನಿಲ್ಲಬಾರದು, ಇದು ಅಂತರಂಗ, ಮೈ ಕೊಡವದಿರು, ಅಷ್ಟೇ, ಬದಲಾಗುತ್ತಿವೆ ದಿನಗಳು” ಎಂಬಿತ್ಯಾದಿ ಕವಿತೆಗಳು ಬಹಳ ಇಷ್ಟವಾದವು. ದೀಪಕ್ಕಳಿಂದ ಮತ್ತಷ್ಟು ನಾದ ಹೊಮ್ಮಿಸುವ ತಂತಿಗಳು ಕವಿತೆಯ ರೂಪ ಪಡೆದು ನಮ್ಮನ್ನು ತಟ್ಟಲಿ..
ಅನಂತ್ ಕುಣಿಗಲ್