ತನಗಗಳು

ತನಗಗಳು

ತನಗ ಫಿಲಿಪೈನ್ಸ್ ದೇಶದ ಕಾವ್ಯ ಪ್ರಕಾರ, ಈ ಕಾವ್ಯ ಪ್ರಕಾರಕ್ಕೂ ಜಪಾನಿನ ಹೈಕು ವಿಗೂ ಕೆಲವು ಹೋಲಿಕೆಗಳಿವೆ. ಹೈಕು ಮೂರು ಸಾಲಿನ ಕವಿತೆ, ತನಗ ನಾಲ್ಕು ಸಾಲಿನ ಸಾಲುಗಳ ಕವಿತೆ. ಪ್ರತಿ ಸಾಲು ಏಳು ಪದಗಳಿಂದ ಕೂಡಿರುತ್ತದೆ. ಈ ಕಾವ್ಯ ಪರಂಪರೆ ಅಂತ್ಯಪ್ರಾಸವುಳ್ಳ ಕವಿತೆ, ವಿವಿಧ ವಿನ್ಯಾಸಗಳಿಗೆ ಆಸ್ಪದವಿದೆ ಇಲ್ಲಿ ಲಯ ಮತ್ತು ಸಿಲಬಲ್ ಮನಗಳು ಇರುವುದರಿಂದ ಕವಿಯ ಸಾಮರ್ಥ್ಯವನ್ನು ಓರಗೆ ಹಚ್ಚುತ್ತವೆ.

ತನಗಗಳ

ನಿನ್ನ ಅಂತರಂಗದಾ
ನೋವಿಗೆ ಕಿವಿಯಾಗು,
ಅದುವೆ ನಿನ್ನಾ ಬಾಳ
ಮುನ್ನಡೆಯ ದಿಕ್ಸೂಚಿ!!
**
ಹಕ್ಕಿ ರೆಕ್ಕೆಗಳಂತೆ
ಸುಖ ದುಃಖ ಬಾಳಲ್ಲಿ
ಬಡಿಯುತ್ತ ಮೇಲೇರು
ಬಾಳಿನಾಕಾಶದಲಿ!
**
ನಿನ್ನದೇ ಹಾದಿಯಿದು
ಬಂದು ಹೋಗುವರೆಷ್ಟೋ,
ಬಿಡದೆ ನಡೆಯುತಿರು
ಗುರಿ ಮುಟ್ಟುವನಕ!!
**
ನಿನ್ನೊಳಗಿನಾ ನಿನ್ನ,
ನಿನ್ನೊಡನೆ ಜಗವ,
ಬೆಸೆವ ಮಾಯೆ ಕಾಣಾ
ಕಣ್ಣೊಳಗಿನ ಪ್ರೀತಿ!!
**
ಪ್ರೀತಿಯೆಂಬುದು ಬಾಳ
ನೀರೊರತೆಯಿದ್ದಂತೆ,
ಮನಸೋಯಿಚ್ಛೆ ಅದ
ಕುಡಿದುಬಿಡು ನೀನು!!
**
ಜಗವು ನೀನೆಂಬಂತೆ,
ಜಗ ನಿನದೆಂಬಂತೆ,
ಹೊಳೆ ಹೊಳೆದು ಬಿಡು
ನೀನು ಜಗವೇ ಆಗಿ!!
**
ಹೊತ್ತ ಹೊರೆಯೆಂದಿಗೂ
ಭಾರವಲ್ಲದು ಜೀವಿ,
ಹೊತ್ತ ರೀತಿಯೆ ನಿನ್ನ
ಕುಗ್ಗಿಸುತಲಿಹುದು!!

**
ಎಳೆಬಿಸಿಲು, ಮುತ್ತು
ಮಳೆ, ಸುಳಿಗಾಳಿಗೆ,
ಜೀವಿ ಬೆಸೆವ ಕಲೆ
ಕರತಲಾಮಲಕ!!

**
ನಿನ್ನ ಬದುಕ ಸುತ್ತಾ
ಬೆಂಕಿಯನ್ನಿಟ್ಟು ಬಿಡು,
ಅದ ಉರಿಸಾರಿಸೋ
ನಿನ್ನವರಾರು ತಿಳಿ!!

**
ಜಗದಲೇನಿಹುದೋ
ಎಲ್ಲ ನಿನ್ನಲೇ ಇಹುದು,
ನಿನ್ನೊಳಗ ನೋಡುತ್ತಾ
ಬೇಕಾದುದನು ಪಡಿ!!

**
ನಿನ್ನ ಒಳ ಮನದ
ದನಿ ಸೆಳೆದತ್ತ ನೀ
ನಡೆ, ಅದುವೆ ನಿನ್ನಾ
ಗುರಿಯ ತಂಗುದಾಣ!!
**
ಮನದಾಳಕ್ಕಿಳಿದು
ಮಂಥನ ಮಾಡಿದೊಡೆ,
ಸ್ವಚ್ಛ ಕನ್ನಡಿ ಬಾಳು
ಒಳ ಹೊರಗಿನಲಿ!!
**
ಅಂಟಿಕೊಂಡಿರುವಷ್ಟು
ದಿನವಂಟಿಕೊಂಡಿದ್ದೆ,
ನನ್ನಂತೆಯೇ ನಿನ್ನ
ಬಾಳು ತಿಳಿ ಮನುಜ!!
**
ಕಳಚಿ ಕೊಳ್ಳುವುದು
ಸುಲಭ ಸಾಧ್ಯವಲ್ಲ,
ಸಿದ್ಧತೆಗಳಿದ್ದಲ್ಲಿ
ಭೀತಿ ತಾ ಸುಳಿಯದು!!
**
ಬದುಕೊಂದು ತಪವು
ತಾಪವದು ಏತಕ್ಕೆ,
ಮಣ್ಣಾಗುವಾ ಸಮಯ
ಮನಸು ಹಣ್ಣಾಗಲಿ!
**
ನಿನ್ನೊಳಗಣ ನೋವ
ಹಂಚದೆ ಪ್ರಪಂಚಕೆ,
ಮುಗುಳುನಗೆಯಲಿ
ಗೆಲ್ಲು ಜಂಜಡವನು!!

**
ಕನ್ನಡಿಯ ಚೂರನು
ಸೇರಿಸುತಲಿರುವೆ,
ಪ್ರತಿಬಿಂಬವು ಮಾತ್ರ
ಸೇರದೇ ಒಡೆದಿದೆ!!
**
ಹಾವಿನಲ್ಲಿನ ವಿಷ
ತೆಗೆಯಲೂ ಬಹುದು,
ಕರಗಿಸಲಾಗದು
ಮನುಜನೆದೆ ನಂಜು!
**
ಮಾತುಗಳ ನಡುವೆ
ಅವಿತು ಕುಳಿತಿಹ
ಮೌನದ ಬಿಕ್ಕುಗಳು
ಅಬ್ಬೇಪಾರಿಯಾಗಿದೆ!!

ಶ್ರೀವಲ್ಲಿ ಮಂಜುನಾಥ

Related post