ತಿ. ನರಸೀಪುರದ ಕುಂಭಮೇಳ – 2025

ಪ್ರಯಾಗ್ ರಾಜ್ ಗೆ ಪ್ರಯಾಣ ಬೆಳೆಸಿ ಪುಣ್ಯ ಸ್ನಾನ ಮಾಡುವ ಬಗ್ಗೆ ಇದೀಗ ಎಲ್ಲೆಲ್ಲೂ ಚರ್ಚೆ. ಇದೊಂದು ಸನಾತನ ಧರ್ಮದ ಅತಿ ದೊಡ್ಡ ಸಾಮೂಹಿಕ ತೀರ್ಥಯಾತ್ರೆ ಎಂದರೆ ತಪ್ಪಾಗಲಾರದು. ಇಲ್ಲಿನ ಪುಣ್ಯ ಸ್ನಾನದಿಂದ ಜೀವನದ ಪಾಪ ಕಳೆದು, ಮುಕ್ತಿ ಸಿಗುವುದೆಂದು ಭಕ್ತರ ನಂಬಿಕೆ. ಅದಕ್ಕೆಂದೇ ವಿಶ್ವದಲ್ಲಿನ ಎಲ್ಲಾ ಭಕ್ತರು ಒಂದೆಡೆ ಸೇರುವುದು. ಆದರೆ ಅಲ್ಲಿಗೆ ಹೋಗಲಾರದೇ ನಿರಾಸೆಗೊಂಡಿದ್ದರೆ ನಮ್ಮ ಮೈಸೂರು ಜಿಲ್ಲೆಯ ತಿ. ನರಸೀಪುರ ದಲ್ಲಿ ಫೆಬ್ರುವರಿ 10 ರಿಂದ ಮೂರು ದಿನಗಳ ಕಾಲ ನೆಡೆಯುವ ಕುಂಭಮೇಳಕ್ಕೆ ಹೋಗಬಹುದು.

ಪ್ರಯಾಗ್ ರಾಜ್ ನಲ್ಲಿ ಗಂಗೆ, ಯಮುನೆ, ಸರಸ್ವತಿ ಮೂರೂ ತ್ರಿವೇಣಿ ನದಿಗಳ ಸಂಗಮವಾದರೆ ನಮ್ಮ ತಿ. ನರಸೀಪುರದಲ್ಲಿ ಕಾವೇರಿ, ಕಪಿಲ ನದಿಗಳ ಜೊತೆಗೆ ಸ್ಪಟಿಕ ಸರೋವರಗಳು ಒಟ್ಟಾಗಿ ಹರಿದು ಸಂಗಮವಾಗುತ್ತದೆ. 144 ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳವು ವೈಜ್ಞಾನಿಕವಾಗಿಯೂ ಮಹತ್ವ ಪಡೆದಿದೆ. 12 ವರ್ಷಕ್ಕೊಮ್ಮೆ ಸೂರ್ಯನನ್ನು ಸುತ್ತುವ ಗುರು ಗ್ರಹವು ಸಂಪೂರ್ಣವಾಗಿ 12 ಸಲ ಸುತ್ತಿದಾಗ ಅಂದರೆ 12*12=144. ಆಗ ಅದಕ್ಕೆ ಸಾಕ್ಷಿಯಂತೆ ಮಹಾ ಕುಂಭಮೇಳ ಆಯೋಜಿಸಲಾಗುತ್ತದೆ. ಆಗ ಬಾನಂಗಳದಲ್ಲಿ ಸೂರ್ಯ, ಚಂದ್ರ,ಗುರು ಹಾಗೂ ಶನಿ ಗ್ರಹಗಳು ಒಟ್ಟಾಗಿ ಸರಳ ರೇಖೆಯಲ್ಲಿ ಕಾಣಿಸಿಕೊಳ್ಳುವುದು. ಇದೊಂದು ವಿಸ್ಮಯ. ಅದೇ ಧಾರ್ಮಿಕವಾಗಿ ಕುಂಭ ಮೇಳವಾಗಿ ರೂಪಿತವಾಗಿದೆ.

ತಿ. ನರಸೀಪುರ ದಲ್ಲಿ 1989 ರಿಂದಲೂ ನಿರಂತರವಾಗಿ 3 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತಿರುವುದು ಕರ್ನಾಟಕದ ವಿಶೇಷ. ಕೋವಿಡ್ ಸಮಯದಲ್ಲಿ ಮಧ್ಯೆ ಅಂತರವಾಗಿದ್ದು, 6 ವರ್ಷದ ನಂತರದ ಕುಂಭ ಮೇಳ ಮತ್ತೆ ಈಗ ಮುಂದುವರೆಸಲಾಗಿದೆ. ಅದಕ್ಕಾಗಿಯೇ, ಈ ಸಲ ಅದ್ದೂರಿಯಾಗಿ ನಡೆಸಲು ಈಗಾಗಲೇ ಸಕಲ ಸಿದ್ಧತೆ ನಡೆಸಿವೆ. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವಂತೆ ನಿಶ್ಚಯಿಸಲಾಗಿದೆ. ತಿ ನರಸೀಪುರದಲ್ಲಿ ಈಗ ನಡೆಯುತ್ತಿರುವುದು 13 ನೇ ಕುಂಭ ಮೇಳ ಎನ್ನಲಾಗಿದೆ. ಈಗಾಗಲೇ, ರಾಜ್ಯ ಸರ್ಕಾರದಿಂದ 6 ಕೋಟಿ ಕೂಡ ಬಿಡುಗಡೆಯಾಗಿದ್ದು, ಲಕ್ಷಾಂತರ ಭಕ್ತರ ಆಗಮನದ ನೀರೀಕ್ಷೆ ಇದೆ. ಭಕ್ತರ ಮೂಲಭೂತ ಅವಶ್ಯಕತೆಗಳ ಹೊಣೆ ಕರ್ನಾಟಕ ರಾಜ್ಯ ಸರ್ಕಾರವೇ ಹೊತ್ತಿದೆ.

ಕಾವೇರಿ, ಕಪಿಲ ನದಿಗಳ ಜೊತೆಗೆ ಸ್ಪಟಿಕ ಸರೋವರಗಳು ಒಟ್ಟಾಗಿ ಹರಿದು, ಭಕ್ತಾದಿಗಳ ಪಾವನ ಗೊಳಿಸಿ, ಇಷ್ಟಾರ್ಥ ಪೂರ್ಣಗೊಳಿಸಲು ಕಾಯುತ್ತಿದೆ. ತಿ. ನರಸೀಪುರವನ್ನು ದಕ್ಷಿಣ ಕಾಶಿ ಎಂತಲೂ ಸಹ ಕರೆಯುತ್ತಾರೆ. ಇದೆ ಫೆಬ್ರವರಿ 10 ರಿಂದ ಬೆಳಗ್ಗೆ ಸರಿಯಾಗಿ 9 ಘಂಟೆಗೆ ಅಗಸ್ತ್ಯೇಶ್ವರ ನ ಸನ್ನಿಧಿಯಲ್ಲಿ ಗಣ ಹೋಮ, ಅಭಿಷೇಕ , ನವಗ್ರಹ ಹೋಮ, ಸುದರ್ಶನ ಹೋಮ, ಚಂಡಿ ಹೋಮ, ಮಹಾ ಮಂಗಳಾರತಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಧ್ವಜಾರೋಹಣ ನಡೆಯಲಿದೆ. ಮುಖ್ಯ ಬೀದಿಗಳಲ್ಲಿ ಮೆರವಣಿಗೆಯನ್ನು ಸಹ ಕಣ್ತುಂಬಿ ಕೊಳ್ಳಬಹುದು. ವಾರಣಾಸಿಯಲ್ಲಿ ನಡೆಯುವಂತೆ ಗಂಗಾ ಅರತಿಯು ಸಹ ಆಯೋಜಿಸಲಾಗಿದೆ.

ಬೇರೆ ಬೇರೆ ಸ್ಥಳಗಳಿಂದ ಜನರ ಆಗಮನ ನೀರೀಕ್ಷೆ ಇರುವುದರಿಂದ, ತಾತ್ಕಾಲಿಕ ಆಸ್ಪತ್ರೆ, ಆಂಬುಲೆನ್ಸ್ ಸೇವೆ ಸಹಾಯವಾಣಿಗಳು, ಹಲವು ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಊಟ, ವಸತಿ, ಪ್ರತಿಯೊಂದು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

ಆಸಕ್ತರಿಗೆ ಸಂಗಮದಲ್ಲಿ ಮಿಂದು ತಮ್ಮ ಜೀವನವನ್ನು ಪಾವನ ಗೊಳಿಸುವ ಅಮೂಲ್ಯ ಕ್ಷಣ ಇದಾಗಿರಲಿದೆ.

ಶೈಲಾ
ಬೆಂಗಳೂರು

Related post