ತುಂಬು ಮನಸ್ಸಿನ ತುಂಬೆ

ಬಾಲ್ಯದ ನೆನಪುಗಳನ್ನು ನೆನೆದರೆ ಈಗಲೂ ಆ ಮಧುರ ಕ್ಷಣಗಳು ಮರಳಿ ಬಾರದೆ ಎನಿಸುತ್ತದೆ. ನಮ್ಮಂತಹ ಪಟ್ಟಣಗಳಲ್ಲಿ ಬೆಳೆಯುವ ಮಕ್ಕಳಿಗಂತೂ ಬೇಸಿಗೆಯ ರಜೆ ಶುರುವಾಗುವುದನ್ನು ಕಾಯುವುದೇ ದೊಡ್ಡ ಸಾಹಸ. ರಜೆ ಬಂದ ಕೂಡಲೇ ಅಜ್ಜಿಯ ಹಳ್ಳಿಯ ಮನೆ ಕಡೆಗೆ ದಾರಿ ಹಿಡಿದುಬಿಡುತಿದ್ದೆವು. ಅಂತಹ ಬಾಲ್ಯ ಮರುಕಳಿಸದೆ ಇರುವುದು ಕಹಿಯ ಸಂಗತಿ.

ಕಾಂಕ್ರೀಟ್ ಕಾಡಿನಲ್ಲಿ ಬೆಳೆದ ನಮಗೆ ಹಳ್ಳಿಯ ಸೊಬಗು, ಹಸಿರು ಸೌಂದರ್ಯವೆಂದರೆ ಸ್ವರ್ಗವೇ ಸಿಕ್ಕಂತೆ. ಅಜ್ಜಿಯೊಡನೆ ಹೊಲಕ್ಕೆ, ತೋಟಕ್ಕೆ ಅಥವಾ ಹಿತ್ತಲಿಗೆ ಹೋಗಿ ಅಲ್ಲಿಯ ಹಸಿರನ್ನು ಕಣ್ತುಂಬಿಕೊಳ್ಳುವ ಕಾತುರ.

ಸೋಮವಾರದ ಪೂಜೆಯ ವಿಚಾರಕ್ಕೆ ಬಂದರಂತೂ ಶಿವನಿಗೆ ವಿಶೇಷ ಪೂಜೆ ಆದರೆ ಪೂಜೆಗೆ ಹೂವು ತರುವ ಕರ್ತವ್ಯ ನಮ್ಮ ಹೆಗಲಿಗೆ. ಶಿವನಿಗೆ ಪ್ರಿಯವಾದ ಶ್ರೇಷ್ಠ ಪುಷ್ಪಗಳಲ್ಲಿ ತುಂಬೆ ಹೂವು ಕೂಡ ಒಂದು. ಹೊಲದತ್ತ ನೆಡೆದರೆ ಹಸಿರು ಹೊದಿಕೆಯ ಮೇಲೆ ಹಿಮ ಸಿಂಪಡಿಸಿದಂತೆ ಬೆಳೆದು ನಿಂತಿರುತಿದ್ದವು ಬಿಳಿ ತುಂಬೆ ಸಸಿಗಳು. ಹೂ ಬಿಡಿಸುವುದೇ ಒಂದು ದೊಡ್ಡ ಕೆಲಸ, ಪುಟ್ಟ ಪುಷ್ಪ ಬಲು ಸೂಕ್ಷ್ಮ ಅಲ್ಲದೆ ನಮಗೂ ತುಂಬಾ ಪ್ರಿಯವಾದ ಪುಷ್ಪ ಏಕೆ ಗೊತ್ತೇ? ಒಂದೊಂದು ಹೂವನ್ನು ಬಿಡಿಸಿ ಅದರ ಹಿಂಬದಿಯಿಂದ  ಸವಿಯನ್ನು ಹೀರುತ್ತಾ ನಮ್ಮನ್ನು ನಾವೇ ಮರೆತುಬಿಡುತಿದ್ದವು. ನಾವು ಸವಿದು ಉಳಿದ ಪುಷ್ಪಗಳು ಮಾತ್ರ ದೇವರ ಸೇವೆಗೆ. ಸವಿದವರೇ ಬಲ್ಲರು ಆ ಸವಿಯ ಸೊಬಗು. ಧಾರ್ಮಿಕವಾಗಿ ತುಂಬೆ ಹೂವುಗಳನ್ನು ಶಿವನ ಪಾದಕಮಲಗಳಿಗೆ ಹೋಲಿಸುತ್ತಾರೆ. ಬಿಳಿ ತುಂಬೆಯಿಂದ ಪರಶಿವನನ್ನು ಅಲಂಕರಿಸಿದರೆ ಶಿವನು ಸಂತೃಪ್ತಿ ಹೊಂದುವನು ಎಂಬ ನಂಬಿಕೆ.

ತುಂಬೆ ಹೂವು ಯಾಕೆ ಶಿವನಿಗೆ ಪ್ರಿಯ? ಇದರ ಹಿಂದೆ ಒಂದು ಕಥೆ ಇದೆ
ಒಮ್ಮೆ ಒಬ್ಬ ಶಿವಭಕ್ತ ರಾಕ್ಷಸ ಶಿವನ ಕುರಿತು ಘೋರವಾಗಿ ತಪಸ್ಸು ಮಾಡಿದ.ಭಕ್ತ ವತ್ಸಳನಾದ ಶಿವ ಕೂಡಲೇ ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದ. ತನ್ನೆದುರು ಬಂದ ದೇವರನ್ನು ಕಂಡು ಆನಂದಾತಿಶಯಗೊಂಡ ರಾಕ್ಷಸ ತಡಬಡಾಯಿಸಿ ‘ದೇವ ನನ್ನ ಪಾದ ಸದಾ ನಿನ್ನ ಶಿರದ ಮೇಲಿರುವಂತೆ ಕರುಣಿಸು ಎಂದ.ಶಿವ ಕೂಡಲೇ ತತಾಸ್ಥು ಎಂದ.
ನಂತರ ತನ್ನ ತಪ್ಪಿನ ಅರಿವಾದ ರಾಕ್ಷಸ, ‘ದೇವಾ.. ನನ್ನ ಅಪರಾಧವನ್ನು ಮನ್ನಿಸು. ನಿನ್ನ ಪಾದ ನನ್ನ ಶಿರದ ಮೇಲೆ ಸದಾ ಇರಲಿ ಎನ್ನುವುದು. ನನ್ನ ಆಶಯವಾಗಿತ್ತು.. ಹಾಗೆ ವರ ನೀಡು ಎಂದ.ಅದಕ್ಕೆ ಕರುಣಾಳುವಾದ ಶಿವನು ಒಮ್ಮೆ ವರ ನೀಡಿದೆನೆಂದರೆ ಮುಗಿಯಿತು ಬದಲಾಯಿಸಲು ಸಾಧ್ಯವಿಲ್ಲ. ನೀನು ತುಂಬೆ ಗಿಡವಾಗಿ ಹುಟ್ಟು.ನಿನ್ನ ಹೂವಿನ ಆಕಾರ ಪಾದಗಳಂತೆ ಇರುವುದು.. ಆ ಹೂಗಳು ಸದಾ ನನ್ನ ಶಿರದ ಮೇಲೇರಲಿ ಎಂದು ವರ ನೀಡಿದನಂತೆ.

ಲಾಮಿಯಾಸಾಯಿ” ಎಂಬ ಸಸ್ಯ ಜಾತಿಗೆ ಸೇರಿದ ತುಂಬೆ ಸಸಿಗಳು “ಲ್ಯೂಕಾಸ್ ಅಸ್ಪೆರ” ಅಥವಾ “ಲ್ಯೂಕಾಸ್ ಇಂಡಿಕಾ” ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದೆ. ತುಂಬೆ ಸಸಿಯು ಬಹಳ ಸರಳವಾಗಿ ಉಷ್ಣ ತಾಪಮಾನದಲ್ಲಿ ಎಲ್ಲಿ ಬೇಕಾದರೂ ಬೆಳೆಯಬಲ್ಲದು. ಈ ಸಸಿಯ ಬೀಜಗಳು ಸಣ್ಣದಾಗಿದ್ದು ಗಾಳಿಯಲ್ಲಿ ತೂರಿಕೊಂಡು ಎಲ್ಲೆಂದರಲ್ಲಿ ನೆಲೆ ಹುಡುಕಿಕೊಂಡು ಸಿಕ್ಕಲ್ಲಿ ಬೆಳೆಯುತ್ತವೆ. ಈ ಸಸಿಗಳನ್ನು ಬೆಳೆಯಲು ಅತಿ ಆರೈಕೆಯ ಅಗತ್ಯವಿಲ್ಲ. ಕೆಲವೊಮ್ಮೆ ಕಟ್ಟಡಗಳ ಬಿರುಕಿನಲ್ಲಿ ನಾದ ಹೆಂಚಿನ ಸಂದಿನಲ್ಲಿಯೂ ಬೆಳೆಯುತ್ತದೆ. ಮೋಡ ಕವಿದ ವಾತಾವರಣದಲ್ಲಿ ಸೂರ್ಯನ ಬಿಸಿಲು ಬೀಳದಿದ್ದಾಗಿನ ಸಮಯದಲ್ಲಿ ಮಂಕಾಗಿ ಕಾಣುತ್ತವೆಯಾದರು ಹೂ ಬಿಡುವುದೇನು ಕಡಿಮೆಯಿಲ್ಲ.

ಇನ್ನು ತುಂಬೆ ಸಸ್ಯದ ಗುಣ ಲಕ್ಷಣಕ್ಕೆ ಬಂದರೆ ಬಿಳಿ, ಕೆಂಪು ಹಾಗು ಗುಲಾಬಿ ವರ್ಣಗಳ ಪುಷ್ಪಗಳಿಂದ ಕಂಗೊಳಿಸುತ್ತವೆ. ಈ ಸಸಿಯು “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬಂತೆ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಹಳ್ಳಿಗಳಲ್ಲಿ ಈಗಲೂ ಪುಟ್ಟ ಮಕ್ಕಳಿಗೆ ಕೆಮ್ಮು ಕಾಣಿಸಿಕೊಂಡರೆ ಹಿತ್ತಲಲ್ಲಿ ಬೆಳೆದ ತುಂಬೆಯ ಎಲೆಗಳನ್ನು ಅರೆದು ಜೇನು ತುಪ್ಪದ ಜೊತೆ ಜೊತೆ ಬೆರೆಸಿ ಕುಡಿಸುತ್ತಾರೆ. ಅಸ್ತಮಾ ಉಸಿರಾಟದ ತೊಂದರೆ ಉಳ್ಳವರಿಗೆ ಸಹ ಇದು ಸಂಜೀವಿನಿ ಇದ್ದಂತ್ತೆ. ಹಾವು ಚೇಳು ಕಚ್ಚಿದರೆ ವಿಷ ಏರದಂತೆ ತಡೆಯಲು ತುಂಬೆ ಸಸಿಯ ಎಲೆಗಳು ಉಪಯುಕ್ತವಾಗಿದೆ. ಚರ್ಮ ರೋಗ ಗಂಟಲಿನಲ್ಲಿಯ ಹುಣ್ಣು, ಸೈನಸ್, ಮೈಗ್ರೇನ್, ಹೆಣ್ಣು ಮಕ್ಕಳಲ್ಲಿ ಕಾಣಿಸುವ ಮುಟ್ಟಿನ ಸಮಸ್ಯೆಗಳಿಗೂ ಇದು ಸಹಕಾರಿ. ಪಟ್ಟಣಗಳಲ್ಲಿಯಂತೂ ಕೆಲ ಕಡೆ ಈ ಸಸಿಯ ರಸವನ್ನು ಸಹ ಕುಡಿಯಲಿಕ್ಕೆ ಮಾರಾಟ ಮಾಡುತ್ತಾರೆ. ಶ್ವಾನಗಳು, ಬೆಕ್ಕುಗಳು ಅಷ್ಟೇಕೆ ಕಾಡಿನಲ್ಲಿಯ ಹುಲಿಗಳು ಸಹ ತಮಗೆ ಅಜೀರ್ಣವಾದಾಗ ತುಂಬೆ ಎಲೆಗಳನ್ನು ತಿಂದು ತನ್ನ ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತವೆ. ತುಂಬೆ ಸಸಿಯು ತನ್ನ ಅಪಾರ ಗುಣಗಳಿಂದ ಬೀಗದೆ, ಸರಳವಾಗಿ ಬೆಳೆದು ತನ್ನ ತುಂಬು ಮನಸ್ಸಿನಿಂದ ಮಾನವನಿಗೆ ಅಲ್ಲದೆ ಪ್ರಾಣಿಗಳಿಗೂ ಕೂಡ ಸಹಕಾರಿಯಾಗಿದೆ.

ಉತ್ತಮ ಔಷಧೀಯ ಗುಣಗಳನ್ನು ಹೊಂದಿರುವ ಈ ತುಂಬೆ ಸಸಿಗಳನ್ನು ನೋಡಿದಲ್ಲಿ ಅದರ ಉಪಯೋಗ ಪಡೆದುಕೊಳ್ಳಿ ಹಾಗು ನಮಗೂ ಎರಡು ಸಾಲು sahityamaithri@gmail.com ಮೇಲ್ ಐಡಿಗೆ ಬರೆದು ತಿಳಿಸಿ.

ಶಿಲ್ಪ

Related post