ಥಾಯ್ ಲ್ಯಾಂಡಿನ ಆನೆ
ಏಶಿಯಾ ಮತ್ತು ಆಪ್ರಿಕಾದ ಆನೆಗಳಲ್ಲಿ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ದಂತಗಳು ಹಾಗು ಕಿವಿಗಳು. ಏಶಿಯಾದ ಗಂಡು ಆನೆಗಳಿಗೆ ಮಾತ್ರವೆ ದಂತಗಳಿದ್ದರೆ ಆಪ್ರಿಕಾದ ಗಂಡು ಮತ್ತು ಹೆಣ್ಣು ಆನೆ ಎರಡಕ್ಕೂ ದಂತಗಳಿರುತ್ತವೆ ಹಾಗು ಕಿವಿಗಳು ಬಹಳ ಅಗಲವಾಗಿರುತ್ತವೆ. ಆಪ್ರಿಕಾದ ಆನೆಗಳ ಚರ್ಮಕ್ಕೆ ಹೋಲಿಸಿದಲ್ಲಿ ಏಶಿಯಾ ಆನೆಗಳ ಚರ್ಮ ಮೃದುವಾಗಿರುತ್ತದೆ .
ಉದ್ದನೆಯ ದಂತ ಆನೆಗಳಿಗೆ ಹೆಚ್ಚು ಬಾರದ ವಸ್ತುಗಳನ್ನ ಎತ್ತಲು, ಆಹಾರ ಸಂಗ್ರಹಿಸಲು, ಮರದಿಂದ ತೊಗಟೆಗಳನ್ನ ಸೀಳಿ ಸುಲಿದು ತೆಗೆಯಲು ಮತ್ತು ಅತಿಮುಖ್ಯವಾಗಿ ಕಾಳಗದಲ್ಲಿ ವೈರಿಗಳಿಂದ ರಕ್ಷಣೆ ಪಡೆದು ಭೀಕರವಾಗಿ ದಾಳಿ ಮಾಡಲು ಸಹಾಯಕವಾಗುತ್ತವೆ. ಬರಗಾಲ ಮತ್ತು ಕ್ಷಾಮದ ಸಮಯದಲ್ಲಿ ಭೂಮಿಯಲ್ಲಿ ರಂದ್ರ ಕೊರೆದು ನೀರು ತೆಗೆದು ಕುಡಿಯಲು ಕೂಡ ಸಹಾಯಕವಾಗುತ್ತದೆ. ದಂತಗಳಿಲ್ಲದೇ ಗಂಡು ಆನೆಗಳು ದೀರ್ಘಕಾಲ ಬದುಕಲಾರವು.
ಥಾಯಲ್ಯಾಂಡಿನ ಆನೆಗಳು ತಮ್ಮ ವಿಶೇಷವಾದ ಉದ್ದವಾದ ದಂತಗಳಿಗೋಸ್ಕರ ಹೆಸರುವಾಸಿಯಾಗಿವೆ. ಇವುಗಳ ಸುಂದರ ದಂತಗಳಿಗೋಸ್ಕರ ದಂತಚೋರರು ಇವುಗಳನ್ನ ಆವ್ಯಾಹತವಾಗಿ ಭೇಟೆಯಾಡುತ್ತಾರೆ.
ಆನೆಯ ದಂತಗಳಂತೆಯೇ ಘೇಂಡಾಮೃಗದ ಕೋರೆಗಳಿಗೂ ಬಾರಿ ಬೇಡಿಕೆ ಇದೆಯಾದ್ದರಿಂದ ಘೇಂಡಾಮೃಗಗಳನ್ನೂ ಸಹ ಭೇಟೆಯಾಡುತ್ತಾರೆ. ಘೇಂಡಾಮೃಗದ ಕೋರೆಗಳಿಂದ ಕಾಮೋತ್ತೇಜಕ ಔಷದಿ ತಯಾರಾಗುತ್ತದೆ ಎನ್ನುವ ಮೂಡನಂಬಿಕೆ ಇದೆ. ವಾಸ್ತವ್ಯವಾಗಿ ಘೇಂಡಾಮೃಗದ ಕೋರೆ ಕಾಮೋತ್ತೇಜಕವಾಗಿ ಕೆಲಸ ಮಾಡುವುದಿಲ್ಲ. ಘೇಂಡಾಮೃಗದ ಕೋರೆ ಕೆರೋಟಿನ್ ಎನ್ನುವ ಉಗುರು ಮತ್ತು ಕೂದಲು ಬೆಳೆಯುವ ವಸ್ತುವಿನಿಂದ ಮಾಡಲ್ಪಟ್ಟಿರುತ್ತದೆ. ಕೆರೋಟಿನ್ ಕಾಮೋತ್ತೇಜಕವಾಗಿ ಕೆಲಸ ಮಾಡುವುದಿಲ್ಲ.
ಘೇಂಡಾಮೃಗದ ಕೋರೆ ಕತ್ತರಿಸಿದರೆ ಅದು ಉಗುರು ಮತ್ತು ಕೂದಲಿನಂತೆ ಮತ್ತೆ ಬೆಳೆಯುತ್ತದೆ ಆದ್ದರಿಂದ ಆಪ್ರಿಕಾದ ಕೆಲವು ದೇಶಗಳಲ್ಲಿ ಭೇಟೆಗಾರರಿಂದ ರಕ್ಷಿಸುವ ಸಲುವಾಗಿ ಘೇಂಡಾಮೃಗದ ಕೋರೆಯನ್ನ ವಿಶೇಷವಾದ ದಾರದಿಂದ ಕತ್ತರಿಸಿ ತೆಗೆಯತ್ತಾರೆ. ಭಾರತದ ಅಸ್ಸಾಂನಲ್ಲಿಯೂ ಈ ರೀತಿಯಾಗಿ ಘೇಂಡಾಮೃಗದ ಕೋರೆಗಳನ್ನ ಕತ್ತರಿಸಿ ತೆಗೆಯವ ಪ್ರಸ್ತಾವನೆ ಇತ್ತಾದರೂ ಅದು ಕಾರ್ಯಗತವಾಗಿದ್ದು ತಿಳಿದಿಲ್ಲ. ಆನೆಯ ದಂತ ಬಾಯಿಯಿಂದ ಹೊರಬಂದ ಹಲ್ಲು ಆದ್ದರಿಂದ ಆನೆದಂತವನ್ನ ಘೇಂಡಾಮೃಗದದಂತೆ ತೆಗೆಯಲು ಬರುವುದಿಲ್ಲ ಅವುಗಳನ್ನು ಸಾಯಿಸಿಯೇ ತೆಗೆಯುತ್ತಾರೆ.
ಆನೆ ಥಾಯಲ್ಯಾಂಡನಲ್ಲಿ ಶಕ್ತಿ, ಸಮೃದ್ದತೆ ಮತ್ತು ಅದೃಷ್ಟದ ಸಂಕೇತ, ಅಲ್ಲಿನ ಸರಕಾರ ಆನೆಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಿ ಅವುಗಳನ್ನ ಸಂರಕ್ಷಿಸುತ್ತಿದ್ದಾರೆ. ಥಾಯ್ ಲ್ಯಾಂಡ್ ಬೌದ್ದ ರಾಷ್ಟ್ರವಾದರೂ ಆನೆಗೆ ಅಲ್ಲಿ ಪೂಜ್ಯನೀಯ ಸ್ಥಾನಮಾನವಿದೆ. ಪ್ರತಿ ವರ್ಷ ಥಾಯ್ ಲ್ಯಾಂಡ್ ನಲ್ಲಿ ಆನೆ ಉತ್ಸವ ನಡೆಸಲಾಗುತ್ತದೆ. ಆನೆ ಥಾಯಲ್ಯಾಂಡಿನ ರಾಷ್ಟ್ರೀಯ ಪ್ರಾಣಿ. ಭಾರತದಲ್ಲಿಯಂತೆಯೇ ಥಾಯ್ ಲ್ಯಾಂಡ್ ನ ಇತಿಹಾಸದ ಉದ್ದಕೂ ಆನೆಗಳು ಪ್ರಮುಖ ಪಾತ್ರ ವಹಿಸಿವೆ.
ಥಾಯ್ ಲ್ಯಾಂಡ್ ಗೆ ಗಡಿ ಹೊಂದಿರುವ ದೇಶಗಳು ಮತ್ತು ಹತ್ತಿರದ ದೇಶಗಳಾದ ಮ್ಯಾನ್ಮಾರ್(ಬರ್ಮಾ), ಲಾವೋಸ್, ಕಾಂಬೋಡಿಯಾ, ಮಲೇಷಿಯಾ, ವಿಯಟ್ನಾಂ, ಇಂಡೋನೇಷ್ಯಾ ಗಳಲ್ಲಿಯೂ ಸುಂದರವಾದ ಆನೆಗಳಿವೆ.
ಮೃತ್ಯುಂಜಯ ನ. ರಾ