ತಿಂಗಳ ಕೊನೆ ದಿವಸದ ಆಫೀಸ್ ಕೆಲಸದ ಒತ್ತಡ, ಮನೆಯಿಂದ ಡಬ್ಬಿ ಬೇರೆ ತಂದಿರಲಿಲ್ಲ. ಸುಹಾಸ್ ಹಾಗು ಮೇಘನಾಳ ಜೊತೆ ಜೋಳದ ರೊಟ್ಟಿ ಊಟಕ್ಕೆ ಅಂತ ಹೊರಟಿದ್ದೆವು. ಇದ್ದಕಿದ್ದಂತೆ ಸುಹಾಸ್ ನಿಂತಿದ್ದ ಕಾರ್ ಒಂದರ ಬಳಿ ಬಗ್ಗಿ ಏನನ್ನೋ ಎತ್ತಿಕೊಂಡ. ಏನು ಅಂತ ನೋಡಿದರೆ ಪುಟ್ಟ ಹಸಿರು ಬಣ್ಣದ ಹಕ್ಕಿ ಮರಿ. ಸುಹಾಸ್ ಹಕ್ಕಿಯನ್ನು ಪರಿಶೀಲಿಸಿ ಸರ್ ಕಾಲು ಸೊಟ್ಟಗಾಗಿದೆ, ರೆಕ್ಕೆಗೆ ಏನು ಆಗಿಲ್ಲ ಎಂದ. ನಾನು ಸಹ ದಿಟ್ಟಿಸಿ ನೋಡಿದೆ ಹೌದು ಅದರ ಕಾಲು ತಿರಿಚಿಕೊಂಡಿತ್ತು.
ಬಳಿಯಲ್ಲಿದ್ದ ಒಂದು ದೊಡ್ಡ ಮರ ಗೂಡಿನಿಂದ ಬಿದ್ದಿದೆ ಏನೋ ಎಂದು ಕೊಂಬೆಗಳ ಮದ್ಯೆ ಗೂಡನ್ನು ಕಣ್ಣಿನಿಂದ ಹುಡುಕುವ ಪ್ರಯತ್ನ ಮಾಡಿದೆ. ಇಲ್ಲ ಯಾವ ಗೂಡು ಕಣ್ಣಿಗೆ ಬೀಳಲಿಲ್ಲ ಕೊಂಬೆಗಳ ಮೇಲೆ ಕಾಗೆಗಳು ಅತಿಂದಿತ್ತ ಓಡಾಡುತಿದ್ದೆವು. ಎಲ್ಲೋ ಕಾಗೆಗಳ ದಾಳಿಯಿಂದ ಕೆಳಗೆ ಬಿದ್ದಿರಬಹುದೆಂದು ಅಂದಾಜಿಸಿದೆವು. ಮೇಘನಾ ಹಕ್ಕಿ ಮರಿಯನ್ನೇ ನೋಡುತ್ತಾ ಸರ್ ಇದು ಗಿಣಿ ಮರಿಯಾ ಎಂದು ಕೇಳಿದಳು. ಕೆಲವು ವಾರದ ಕೆಳಗೆ ನಮ್ಮ ಪತ್ರಿಕೆಗೆ ಕಲ್ಗುಂಡಿ ನವೀನ್ ಸರ್ ಈ ಹಕ್ಕಿಯ ಬಗ್ಗೆ ಬರೆದುಕೊಟ್ಟಿದ್ದರು ಚಕ್ಕನೆ ನೆನಪಾಗಿ ಇಲ್ಲ ಇದು ಬಾರ್ಬೆಟ್ ಹಕ್ಕಿ ಎಂದು ಉತ್ತರಿಸಿದೆ. ನವೀನ ಸರ್ ವಾಟ್ಸಪ್ ಗೆ ಹಕ್ಕಿಯ ಚಿತ್ರ ಕಳಿಸಿದಾಗ ಇದು W C Barbet ಎಂದು ಉತ್ತರ ಬಂದಿತು ಜೊತೆಗೆ ಹಕ್ಕಿ ಮರಿ ಸುಸ್ತಾದಂತಿದೆ ಸಿರಿಂಜಿನಲ್ಲಿ ಗ್ಲುಕೋಸ್ ನೀರು ಕೊಡಿ ಎಂದು ಮತ್ತು ವೈಲ್ಡ್ ಲೈಫ್ ಬಳಗದ ಸಂಪರ್ಕ ಸಂಖ್ಯೆಯನ್ನು ಸಹ ಕಳಿಸಿದರು.
ಸುಹಾಸ್ ಕೈಯಲ್ಲಿದ್ದ ಹಕ್ಕಿ ಮರಿಯನ್ನು ಮುಟ್ಟಲು ಮೇಘನಾ ಗೆ ಹೇಳಿದಾಗ ಮುಟ್ಟಲು ಭಯಪಟ್ಟಳು.ನಾವು ಊಟದ ಚಿಂತೆಯನ್ನು ಮರೆತು ಪುನಃ ಆಫೀಸಿಗೆ ಹೋಗಿ ಒಂದು ದೊಡ್ಡ ಕಾರ್ಟನ್ ಬಾಕ್ಸಿನಲ್ಲಿ ಅದನ್ನು ಕುಳ್ಳಿರಿಸಿ ಜೊತೆಗೆ ಒಂದು ಬಟ್ಟಲು ನೀರನ್ನು ಇಟ್ಟೆವು. ಅದು ಕುಡಿಯದೆ ಪಿಳಿ ಪಿಳಿ ಎಂದು ಕಣ್ಣು ಬಿಡುತಿತ್ತು. ನವೀನ್ ಸರ್ ಕೊಟ್ಟ ಸಂಖ್ಯೆಗೆ ಕರೆ ಮಾಡಿದಾಗ ಅದು ಚಲಾವಣೆಯಲಿಲ್ಲ ಎಂದು ಉತ್ತರ ಬಂದಿತು. ಏನು ಮಾಡೋದು ಎಂದು ಯೋಚಿಸುತ್ತಿದ್ದಾಗ ವೈಲ್ಡ್ ಲೈಫ್ ಸಂಸ್ಥೆಯವರೇ ಇನ್ನೊಂದು ಸಂಖ್ಯೆಯಿಂದ ಕರೆ ಮಾಡಿದರು. ಅವರಿಗೆ ಹಕ್ಕಿಯ ಚಿತ್ರಗಳನ್ನು ಹಾಗು ನಮ್ಮ ಜಾಗದ ವಿವರಗಳನ್ನು ವಾಟ್ಸಪ್ ಮಾಡಿದಾಗ ನಮಗೆ ನಾಲ್ಕು ಮೊಬೈಲ್ ಸಂಖ್ಯೆಗಳನ್ನು ಕೊಟ್ಟು ಇವರುಗಳು ನಿಮ್ಮ ಜಾಗದ ಸಮೀಪ ಇದ್ದಾರೆ ಕರೆ ಮಾಡಿ ಸಹಾಯ ಮಾಡುತ್ತಾರೆ ಎಂದು ತಿಳಿಸಿದರು. ತಕ್ಷಣ ಆ ಪಟ್ಟಿಯಲ್ಲಿದ್ದ ಒಬ್ಬರಿಗೆ ಕರೆ ಮಾಡಿದಾಗ ಬರಲು ಒಪ್ಪಿದರು. ಅಷ್ಟರಲ್ಲಿ ಆ ಹಕ್ಕಿ ಮರಿಯು ಮಂಕಾಗಿ ಕುಳಿತಿತ್ತು.
ಮುಟ್ಟಲು ಭಯಪಡುತಿದ್ದ ಮೇಘನಾ ಅದನ್ನು ತನ್ನ ಕೈಲಿ ಕುಳ್ಳಿರಿಸಿಕೊಂಡು ನೀರು ಕುಡಿಸಲು ಪ್ರಯತ್ನಿಸುತ್ತಿದ್ದಳು. ಕೊನೆಗೂ ವೈಲ್ಡ್ ಲೈಫ್ ಬಳಗದ ಕಡೆಯಿಂದ ನಾವು ಸಂಪರ್ಕಿಸಿದ ಹುಡುಗ ಒಂದು ಡಬ್ಬದ ಸಮೇತ ಆಫೀಸಿನ ಹತ್ತಿರ ಬಂದು ಕರೆ ಮಾಡಿದರು. ಆ ಪುಟ್ಟ ಮರಿಯನ್ನು ಅವರ ಡಬ್ಬಿಗೆ ಹಸ್ತಾಂತರಿಸಿ ಆ ಹುಡುಗನನ್ನು ಮುಂದಿನ ಕ್ರಮದ ಬಗ್ಗೆ ಕೇಳಿದೆವು. ಆ ಹುಡುಗ ಹಕ್ಕಿ ಮರಿಯನ್ನು ಕೆಂಗೇರಿ ಹತ್ತಿರ ಇರುವ ವೈಲ್ಡ್ ಲೈಫ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಒಂದು ವಾರ ಚಿಕಿತ್ಸೆಯನ್ನು ಕೊಟ್ಟು ಆ ನಂತರ ಅದರ ಆಹಾರ ಲಭ್ಯವಿರುವ ಜಾಗಕ್ಕೆ ಹಾರಲು ಬಿಡುತ್ತೇವೆ ಆ ವೇಳೆಯಲ್ಲಿ ನಿಮಗೆ ಕರೆ ಮಾಡಿ ವಿಷಯ ತಿಳಿಸುತ್ತೇವೆಂದು ಹೇಳಿದ. ನಾಲ್ಕು ವರ್ಷದ ಹಿಂದೆ ಒಂದು ಹದ್ದಿನ ಮರಿ ಸಿಕ್ಕು ಅದನ್ನು ಒಬ್ಬರಿಗೆ ಕೊಟ್ಟಾಗ ಅವರು ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿರುವೆವು ದುಡ್ಡು ಕೊಡಿ ಸರ್ ಎಂದು ಕೇಳಿದ್ದರು. ಆದರೆ ಈ ಹುಡುಗ ದುಡ್ಡೇನು ಕೇಳದೆ ಮುತುವರ್ಜಿಯಿಂದ ಆ ಹಕ್ಕಿ ಮರಿಯನ್ನು ತೆಗೆದುಕೊಂಡು ಹೋದ.
ನಮ್ಮ ಸುತ್ತಾ ಮುತ್ತ ಹೀಗೆ ಅನೇಕ ಪ್ರಾಣಿ ಪಕ್ಷಿಗಳು ತೊಂದರೆಗಳಿಗೆ ಸಿಲುಕಿ ಸಹಾಯವನ್ನು ತಮ್ಮ ಮೂಕ ಭಾಷೆಯಿಂದ ಯಾಚಿಸುತ್ತಿರುತ್ತವೆ ಅದನ್ನು ತಿಳಿಯಲು ಸಹಾಯ ಮಾಡುವ ಮನಸಿದ್ದರೆ ಸಾಕು ಇನ್ಯಾವ ವಿದ್ಯೆಯು ಬೇಡ. ಹಿರಿಯರು ತಲೆ ಬಗ್ಗಿಸಿಕೊಂಡು ನೆಡೆ ಎಂದು ಹೇಳಲು ಇದು ಒಂದು ಕಾರಣವಿರಬಹುದೇ ? ಸಹಾಯಕ್ಕೆ ತಕ್ಷಣ ಸ್ಪಂದಿಸಿದ ವೈಲ್ಡ್ ಲೈಫ್ ಬಳಗಕ್ಕೆ ನಮ್ಮ ಅನಂತ ವಂದನೆಗಳು. ನೀವು ಕೂಡ ಮುಂದೆ ಎಂದಾದರೂ ಪ್ರಾಣಿ ಪಕ್ಷಿಗಳು ತೊಂದರೆಗೆ ಸಿಲುಕಿದ್ದನ್ನು ಕಂಡರೆ ತಕ್ಷಣ ವೈಲ್ಡ್ ಲೈಫ್ ಬಳಗಕ್ಕೆ ತಿಳಿಸಿ ಅವರ ಸಂಪರ್ಕ ಹಾಗು ವಿಳಾಸ ಕೆಳಗೆ ಇದೆ.
PFA Wildlife Rescue & Conservation Centre
Wild Life Hospital
Uttarhalli Main Road,
Next to BGS Hospital,
Kengeri,
Bangalore – 560060
Contact: 91-9980339880 / 9900025370
Website : http://bit.ly/3amPc9v
ಕು ಶಿ ಚಂದ್ರಶೇಖರ್