ನಿಷ್ಠೆ-ಪ್ರತಿಷ್ಠೆ ಮಧ್ಯೆ ಬುದ್ಧ! ರಕ್ತ ಮತ್ತು ಟೊಮೆಟೊ ಪ್ರತಾಪ
‘ದಿ ಕಲರ್ ಆಫ್ ಟೊಮೆಟೊ‘ ಚಿತ್ರದ ಟೀಸರ್ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದೆ. ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಎರಡೂ ಹೊಚ್ಚ ಹೊಸದಾಗಿ ಕಾಣಿಸಿಕೊಂಡಿದೆ.
ಇದರಲ್ಲಿ ಏನೋ ಹೊಸತನ ಗೋಚರಿಸಿದೆ. ತಮಿಳು ಹಾಗೂ ತೆಲುಗುಗಳಲ್ಲಷ್ಟೇ ಕಾಣ ಸಿಗುವಂತಿದ್ದ ರಕ್ತಸಿಕ್ತದ ಚಿತ್ರಗಳಿಗೆ ಸಡ್ಡು ಹೊಡೆಯುವಂತಿದೆ ಈ ಟೀಸರ್ ಎನ್ನುವುದು ಕನ್ನಡ ಚಿತ್ರರಸಿಕರ ಈಗಿನ ಮಾತಾಗಿದೆ. ಕನ್ನಡದ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಕತೆಯ ಸಾರಥ್ಯ ಈ ಚಿತ್ರಕ್ಕಿದೆ. ಈ ಕತೆಯೇ ವಿಭಿನ್ನವಾಗಿದೆ ಎನ್ನುವುದು ಮಾಮೂಲ ಮಾತಲ್ಲ. ಗುಬ್ಬಚ್ಚಿ ಅವರ ಪೋಸ್ಟರ್ ಡಿಸೈನ್ ಗಮನ ಸೆಳೆಯುವಂತಿದೆ. ದ್ರುವ ಸರ್ಜಾ ಅವರು ಟೀಸರ್ ಬಿಡುಗಡೆ ಮಾಡಿದ್ದಾರೆ.
ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ರಂಗಭೂಮಿಯ ನಂಟಲ್ಲಿರುವ ಯುವ ಪ್ರತಿಭೆ ತಾಯಿ ಲೋಕೇಶ್ ಅವರು ಈ ಹೊಸ ಪ್ರಯತ್ನದ ಚಿತ್ರದ ನಿರ್ದೇಶಕರಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ಹೊಸತನ್ನು ಕನ್ನಡಿಗರಿಗೆ ಕೊಡುವ ಭರವಸೆಯನ್ನು ಲೋಕೇಶ್ ಅವರು ಈ ಟೀಸರ್ ಮೂಲಕ ಮೂಡಿಸಿದ್ದಾರೆ.
ರಂಗ ನೇಪಥ್ಯದಲ್ಲಿರುವವರ ಕುಶಲತೆಯಿಂದ ರಂಗದ ಮೇಲೆ ರಾರಾಜಿಸುವವ ನಾಟಕದ ದೃಶ್ಯಗಳನ್ನು ತಮ್ಮ ಕ್ಯಾಮರಾ ಕಣ್ಣಿಂದ ಸೆರೆ ಹಿಡಿಯುತ್ತಾ ಬಂದಿದ್ದಾರೆ. ಕನ್ನಡ ರಂಗಭೂಮಿಯ ಚಟುವಟಿಕೆಯನ್ನು ತಮ್ಮ ಕ್ಯಾಮರಾದಿಂದ ದಾಖಲಿಸುತ್ತಾ ಬಂದಿದ್ದಾರೆ. ನಾಟಕಗಳನ್ನು ನೇರಾನೇರ ಆಡಿಟೋರಿಯಮ್ ನಲ್ಲಿ ಕೂತು ನೋಡಿದವರೂ ಕೂಡ ಆನಂತರದಲ್ಲಿ ತಾಯಿ ಲೋಕೇಶ್ ಅವರ ಫೇಸ್ಬುಕ್ಗೆ ಹೋಗಿ ಆಯಾಯ ನಾಟಕಗಳ ದೃಶ್ಯಕಾವ್ಯವನ್ನು ನೋಡಿದರಷ್ಟೇ ಸಮಾಧಾನ ಎನ್ನುವ ಮಾತು ರಂಗಭೂಮಿಯ ವಲಯದಲ್ಲಿ ಜನಜನಿತ.
ರಂಗದ ಮೇಲಿನ ಸೂಕ್ಷ್ಮಾತಿ ಸೂಕ್ಷ್ಮ ದೃಶ್ಯಗಳನ್ನು ಚಾಣಾಕ್ಷತೆಯಿಂದ ಸೆರೆ ಹಿಡಿಯುವಲ್ಲಿ ಲೋಕೇಶ್ ಗೆದ್ದಿದ್ದಾರೆ. ಎರಡು ವರ್ಷಗಳ ಹಿಂದೆ ಸಿಜಿಕೆ ರಂಗೋತ್ಸವದಲ್ಲಿ ಆಯೋಜಿಸಿದ್ದ ತಾಯಿ ಲೋಕೇಶ್ ಅವರು ಸೆರೆ ಹಿಡಿದಿದ್ದ ರಂಗಭೂಮಿಯ ಆಯ್ದ ಫೋಟೋಗಳ ಪ್ರದರ್ಶನವನ್ನು ನೋಡಿದವರಲ್ಲಿ ಲೋಕೇಶ್ ಅವರ ಸೃಜನಾತ್ಮಕತೆ ಏನೆಂದು ಅರ್ಥವಾಗಿರುತ್ತದೆ.
ತಮ್ಮ ತಾಯಿ ಪ್ರೀತಿಯಿಂದ ಕೊಡಿಸಿ ಕೊಟ್ಟ ಕ್ಯಾಮರಾದ ವಾರಸುದಾರ ಲೋಕೇಶ್ ಅವರು ಅಷ್ಟಕ್ಕೇ ಸೀಮಿತರಾಗದೇ ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇಂತಹ ಲೋಕೇಶ್ ಅವರು ಕನ್ನಡದಲ್ಲಿ ವಿಭಿನ್ನ ಚಿತ್ರವನ್ನು ಮಾಡಬೇಕೆನ್ನುವ ಆಸೆಯಿಂದ ಹಲವಾರು ವರ್ಷಗಳಿಂದ ಪೇಪರ್ ವರ್ಕ್ ಮಾಡಿಕೊಂಡು ಬಂದು ಅದರ ಪ್ರತಿಫಲವಾಗಿ ಈಗ ಈ ‘ದಿ ಕಲರ್ ಆಫ್ ಟೊಮೆಟೊ‘ ಟೀಸರ್ ಅನ್ನು ಕನ್ನಡಿಗರ ಮುಂದೆ ತಂದಿದ್ದಾರೆ.
‘ಬೆಂಕಿಪಟ್ನ‘ ಚಿತ್ರದ ನಾಯಕನಾಗಿದ್ದ ಪ್ರತಾಪ್ ನಾರಾಯಣ್ ಅವರು ಈ ಚಿತ್ರದಲ್ಲಿ ರಗಡ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ರಂಗಭೂಮಿಯ ಪ್ರತಿಭೆ ಹಾಗೂ ಚಿತ್ರ ನಿರ್ದೇಶಕರೂ ಆದ ಬಿ ಸುರೇಶ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಕೋಲಾರದ ಸೊಗಡಿನ ಕತೆಯಾಗಿದೆ. ಈ ಚಿತ್ರದಲ್ಲಿ ಹಿಂಸೆಯಷ್ಟೇ ಅಲ್ಲ ಪ್ರೀತಿ ಸ್ನೇಹಗಳಂತಹ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.
ಸ್ವಾತಿ ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಅರ್ಜುನ್ ರಾಮು ಅವರ ಸಂಗೀತ, ಪ್ರತಾಪ್ ಸಾಗರ್ ಅವರ ಛಾಯಾಗ್ರಹಣವಿದ್ದು ವಲ್ಯ ಕುಲ್ಯಸ್ ಅವರ ಸಂಕಲವಿದೆ.
ಟೊಮೆಟೊ ಕೆಂಪಷ್ಟೇ ಅಲ್ಲಾ ಮೆದುವೂ, ಸವಿಯೂ ಎನ್ನುವ ಸಂದೇಶವನ್ನೂ ಇದು ಹೊತ್ತಂತಿದೆ!
ತುಂಕೂರ್ ಸಂಕೇತ್
1 Comment
All the best