ದೃಷ್ಟಿ

ಇತರರ ಯಶಸ್ಸಿನ ಕಡೆಗೆ ನೋಡುವಾಗ ನಮ್ಮ ಮನಸ್ಸಿನ ಕಿಟಕಿಯ ಗಾಜುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳೋಣ.

ಹಳ್ಳಿಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹರೀಶನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ತನ್ನ ಹೆಂಡತಿ ಜೊತೆಗೆ ಪಟ್ಟಣಕ್ಕೆ ಉದ್ಯೋಗಕ್ಕೆಂದು ಬಂದನು. ಪಟ್ಟಣದಲ್ಲಿ ಈ ದಂಪತಿಗಳಿಬ್ಬರು ಬಾಡಿಗೆಯ ಮನೆಯೊಂದರಲ್ಲಿ ವಾಸವಾಗಿದ್ದರು. ಒಂದು ದಿನ ಹರೀಶನ ಹೆಂಡತಿ ಮಂಜುಳಾ ತನ್ನ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬಳು ತನ್ನ ದೈನಂದಿನ ಬಟ್ಟೆಗಳನ್ನು ಒಗೆದು ಒಣಗಲು ಹಾಕಿರುವುದನ್ನು ಕಿಟಕಿಯ ಮೂಲಕ ನೋಡಿದಳು. ಕಿಟಕಿಯ ಮೂಲಕ ಹೊರಗೆ ನೋಡಿದಾಗ ಆಕೆಯು ಒಗೆದು ಒಣಗಲು ಹಾಕಿದ್ದ ಬಟ್ಟೆಗಳು ಸ್ವಚ್ಛವಾಗಿರದೇ, ತೀರಾ ಕೊಳೆಯಾಗಿ ಇರುವುದು ಕಂಡುಬಂತು.

ಬಹುಶಃ ಆಕೆಗೆ ಈಗಷ್ಟೇ ಮದುವೆ ಆಗಿರಬೇಕು, ಹಾಗಾಗಿ ಸ್ವಚ್ಛವಾಗಿ ಬಟ್ಟೆ ಒಗೆಯುವುದನ್ನು ಆಕೆಯಿನ್ನೂ ಕಲಿತಿರಲಿಕ್ಕಿಲ್ಲ, ಅಥವಾ ಬಟ್ಟೆ ಸ್ವಚ್ಛವಾಗಿ ಒಗೆಯಲು ಅಗತ್ಯವಿರುವ ಸಾಬೂನು ಮತ್ತು ಬಟ್ಟೆ ಒಗೆಯುವ ಪುಡಿ ಆಕೆಯಲ್ಲಿ ಇಲ್ಲದಿರಬಹುದು ಎಂದು ವ್ಯಂಗ್ಯವಾಗಿ ಮಂಜುಳಾ ತನ್ನ ಗಂಡನಿಗೆ ಹೇಳಿದಳು. ಪ್ರತಿದಿನವೂ ಆಕೆಯು ಒಗೆದು ಹಾಕುತ್ತಿದ್ದ ಬಟ್ಟೆಗಳು ಕೊಳೆಯಾಗಿ ಇರುವುದನ್ನು ನೋಡುತ್ತಿದ್ದ ಮಂಜುಳಾ ತನ್ನ ಗಂಡ ಹರೀಶನಿಗೆ ಹೇಳುತ್ತಾ ವ್ಯಂಗ್ಯವಾಗಿ ನಗುತ್ತಿದ್ದಳು. ಆದರೆ ಗಂಡನಾದ ಹರೀಶನು ಮಾತ್ರ ಮಂಜುಳಾ ಹೇಳುತ್ತಿದ್ದ ಯಾವ ಮಾತಿಗೂ ಸೊಪ್ಪನ್ನು ಹಾಕದೆ ಸುಮ್ಮನೇ ಇರುತ್ತಿದ್ದನು.

ಹೀಗೆ ಸುಮಾರು ಒಂದು ತಿಂಗಳ ನಂತರ ಪಕ್ಕದ ಮನೆಯಾಕೆಯು ಒಗೆದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕಿಟಕಿಯ ಮೂಲಕ ಮಂಜುಳಾ ನೋಡಿದಾಗ ಶುಭ್ರವಾಗಿ ಬಟ್ಟೆಯನ್ನು ಒಗೆದು ಒಣಗಲು ಹಾಕಿದ್ದನ್ನು ಆಶ್ಚರ್ಯದಿಂದ ನೋಡಿದಳು. ನಂತರ ನೋಡಿ ಸ್ವಾಮಿ, ಪಕ್ಕದ ಮನೆಯಾಕೆ ಇಂದು ಬಟ್ಟೆಯನ್ನು ಅತ್ಯಂತ ಸ್ವಚ್ಛವಾಗಿ ಒಗೆಯುವುದನ್ನು ಕಲಿತಿದ್ದಾಳೆ. ನನಗೆ ನಿಜವಾಗಿಯೂ ಇದನ್ನು ನೋಡಿ ಆಶ್ಚರ್ಯವಾಗುತ್ತಿದೆ, ಅಥವಾ ನಿನ್ನೆ ಯಾರಾದರೂ ಆಕೆಗೆ ಸ್ವಚ್ಛವಾಗಿ ಬಟ್ಟೆ ಒಗೆಯುವುದನ್ನು ಹೇಳಿ ಕೊಟ್ಟಿರಬೇಕು ಎಂದು ಪುನಃ ಅಪಹಾಸ್ಯ ಮಾಡುತ್ತಾ ಗಂಡನಾದ ಹರೀಶನಿಗೆ ಹೇಳಿದಳು. ಆಗ ಹರೀಶನು, ‘ಇವತ್ತು ನೀನು ಬೆಳಗ್ಗೆ ಏಳುವುದಕ್ಕಿಂತ ಮುಂಚೆಯೇ ನಾನು ಎದ್ದು ನಮ್ಮ ಮನೆಯ ಕಿಟಕಿಗಳ ಗಾಜುಗಳನ್ನು ಸ್ವಚ್ಛವಾಗಿ ತೊಳೆದಿದ್ದೇನೆ’ ಎಂದು ಹೇಳಿದ. ಇದನ್ನು ಕೇಳಿದ ಮಂಜುಳಾಳಿಗೆ ತನ್ನ ತಪ್ಪಿನ ಅರಿವಾಯಿತು. ಗಂಡನ ಮಾತಿಗೆ ಪ್ರತ್ಯುತ್ತರವನ್ನು ನೀಡಲು ಮಂಜುಳಾಳ ಬಳಿ ಮಾತೇ ಇರಲಿಲ್ಲ. ಪಕ್ಕದ ಮನೆಯಾಕೆಯ ತಪ್ಪುಗಳನ್ನು ನೋಡಲು ಧೂಳಿನಿಂದ ಕೂಡಿದ ತನ್ನ ಮನೆಯ ಗಾಜಿನ ಕಿಟಕಿಗಳೇ ಪ್ರಮುಖ ಕಾರಣವಾಗಿತ್ತು.

ಇತರರ ಯಶಸ್ಸಿನ ಕಡೆಗೆ ನಾವು ನೋಡುವ ಸಂದರ್ಭಗಳಲ್ಲಿ ನಮ್ಮ ಮನಸ್ಸಿನ ಕಿಟಕಿಗಳು ಅತ್ಯಂತ ಶುಭ್ರವಾಗಿರಬೇಕು. ಒಂದು ವೇಳೆ ಅವುಗಳು ಕೊಳೆಯಾಗಿದ್ದಲ್ಲಿ ಅವುಗಳನ್ನು ಶುಭ್ರಗೊಳಿಸುವ ಅಗತ್ಯವೂ ಇದೆ. ನಮ್ಮ ಮನಸ್ಸಿನ ಕಿಟಕಿಯ ಗಾಜುಗಳು ಧೂಳಿನಿಂದ ಕೂಡಿದ್ದರೆ ನಮ್ಮ ಎದುರಿಗೆ ಇರುವವರು ಎಷ್ಟು ಒಳ್ಳೆಯವರು ಆಗಿದ್ದರೂ ಅವರು ನಮಗೆ ಅತ್ಯಂತ ಕೆಟ್ಟವರಾಗಿಯೇ ಕಾಣಿಸುತ್ತಾರೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post