ದೇವರು ಅರೆಸ್ಟ್ ಆದ – ಕಥಾ ಸಂಕಲನ
ಪುಸ್ತಕ: ದೇವರು ಅರೆಸ್ಟ್ ಆದ
ಲೇಖಕರು : ಶಿವಕುಮಾರ್ ಮಾವಲಿ
ಮುದ್ರಣ : ಮಾವಲಿ ಪಬ್ಲಿಕೇಷನ್ಸ್
ಲೇಖಕರ ಪರಿಚಯ
ಬರಹಗಾರರಾದ ಶಿವಕುಮಾರ್ ಮಾವಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಯವರು. ಸಾಹಿತ್ಯಕ್ಷೇತ್ರದ ಮಜಲುಗಳಾದ ಕಥೆ, ಕವಿತೆ, ನಾಟಕ ಗಳ ರಚನೆಯ ಮೂಲಕ ಪ್ರತಿಭಾವಂತ ಬರಹಗಾರರೆನಿಸಿಕೊಂಡಿದ್ದಾರೆ. ಸುಪಾರಿ ಕೊಲೆ (ನಾಟಕ), ಪ್ರೇಮಪತ್ರದ ಆಫೀಸು ಮತ್ತು ಅವಳು, ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ (ಕಥಾ ಸಂಕಲನಗಳು), ನೋ ಮೋರ್ ಇಂಗ್ಲಿಷ್, ಸಾಮಾನ್ಯ ಇಂಗ್ಲಿಷ್ (ಕೈಪಿಡಿ) ಇವಿಷ್ಟು ಅವರ ಪುಸ್ತಕಗಳು. ಇವರ ಸುಪಾರಿ ಕೊಲೆ ನಾಟಕವು ಸಿನಿಮಾ ಆಗುತ್ತಿದೆ.
‘ದೇವರು ಅರೆಸ್ಟ್ ಆದ’ ಮತ್ತೆ ಬಿಡುಗಡೆಯಾಯ್ತು.
ಮೂರನೇ ಮುದ್ರಣಕ್ಕೆ ದೇವರು ಮತ್ತೆ ಅರೆಸ್ಟ್ ಆದ.
ಶೀರ್ಷಿಕೆಯಲ್ಲೇ ಗಮನ ಸೆಳೆದ ಶಿವಕುಮಾರ್ ಮಾವಲಿ ಅವರ ಮೊದಲ ಕೃತಿ “ದೇವರು ಅರೆಸ್ಟ್ ಆದ”.
ನಾನೀಗ ದೇವರಿಲ್ಲಾ ಎಂಬ ಸ್ಥಿತಿಗೆ ತಲುಪಿದ್ದೇನೆ. ಇಲ್ಲದ ದೇವರನ್ನು ಹೇಗೆ ಅರೆಸ್ಟ್ ಮಾಡಿದ್ರು ಅನ್ನೋದೆ ನನಗೆ ಕುತೂಹಲ ಮೂಡಿಸಿದ್ದು.
ನನ್ನ ಬಾಲ್ಯದಿಂದ ಇಲ್ಲಿಯವರೆಗೂ ದೇವರ ವಿಚಾರದಲ್ಲಿ ಒಂದಷ್ಟು ಮಜಲುಗಳನ್ನು ದಾಟಿ ಬಂದಿದ್ದೇನೆ
-ದೇವರಿದ್ದಾನೆ,
-ದೇವರೆಲ್ಲಿದ್ದಾನೆ?
-ದೇವರ್ಯಾಕಿಲ್ಲ!
-ದೇವರಿಲ್ಲ.
-ದೇವರು ಇದ್ರೆ ಇರಲಿ ಬಿಡಿ
ಇಲ್ಲದ ಮೂಲೆಯಲ್ಲೆಲ್ಲೋ ಇಲ್ಲದ ದಿಕ್ಕಿನಲ್ಲೆಲ್ಲೋ ಅವನ ಪಾಡಿಗೆ ಅವನು ಸುಮ್ಮನೆ ಇರಲಿ ಬಿಡಿ. ಎಂದುಕೊಂಡು ತಿರುಗಾಡುತ್ತಿದ್ದೆ.
ಒಂದು ಮನೆಗೆ ನಾಯಿ ತಂದ್ರಂತೆ ಅದು ಮನೆಯೆಲ್ಲಾ ಓಡಾಡಿ ಗಲೀಜ್ ಮಾಡ್ತಾ ಇತ್ತು. ಅದನ್ನ ಸುಧಾರಿಸೋಕೆ ಆಗದೆ ತಗೊಂಡೋಗಿ ಬೋನಿಗೆ ಹಾಕಿದ್ರು. ಮನುಷ್ಯ ಎಲ್ಲೇ ಹೋದ್ರು ತಪ್ಪು ಮಾಡ್ತಾ ಇದ್ನಂತೆ ಅದನ್ನ ದೇವರು ನೋಡೋನು, ಅದಕ್ಕೆ ಏನ್ ಮಾಡಿದ್ರು, ಅವ್ನಾ ತಗೊಬಂದು ಗುಡಿಗೆ ಗೂಟ ಹೊಡೆದು ಕಟ್ಟಾಕಿದ್ರು. ಹೀಗೆ ದೇವರ ಬಗ್ಗೆ ಕಾಲೇಜಿನಲ್ಲಿದ್ದಾಗ ಹುಚ್ಚುಚ್ಚಾಗಿ ಗೀಚುತ್ತಿದ್ದೆ. ಆದರೆ ದೇವರು ಅರೆಸ್ಟ್ ಆದ ಎಂಬ ಕಥೆಯು, ದೇವರ ಬಗ್ಗೆ ಪೂರ್ವಜರು ನಮಗೆ ನೀಡಿರುವ ಚಿತ್ರಣವನ್ನೇ ಪ್ರಶ್ನಿಸುತ್ತದೆ. ದೇವರು ಅರೆಸ್ಟ್ ಆದ ಅನ್ನೋದಕ್ಕಿಂತ ದೇವರು ನಮ್ಮೊಳಗಿಯೆ ಅರೆಸ್ಟ್ ಆಗಿದ್ದಾನೆ ಎಂಬುದು ಈ ಕಥೆಯ ತಾತ್ಪರ್ಯ ಮತ್ತು ವಿಪರ್ಯಾಸ.
ಮಧ್ಯ ವಯಸ್ಕನ ಮೊನೋಲಾಗ್ ಎರಡನೇ ಕಥೆ. ಈ ಕಥೆ ಶಾರ್ಟ್ ಫಿಲ್ಮ್ ಕೂಡ ಆಗಿದೆ. ಸಂಚಾರಿ ವಿಜಯ್ ಅವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ಹುಡುಗಿಯರೇ ಆಗಲಿ ಹೆಂಗಸರೇ ಆಗಲಿ ಕತೆ ಹೇಳಲಾರಂಭಿಸಿದರೆ ಆಗ ಪೂರ್ತಿ ಕೇಳದೇ ವಿಧಿಯಿಲ್ಲ’. ಇದು ಕಥೆಯಲ್ಲಿನ ಒಂದು ಸಾಲು. ಈ ರೀತಿ ಕೋಟ್ ಮಾಡಬಹುದಾದ ಸಾಲುಗಳು ಈ ಕಥಾಸಂಕಲನದಲ್ಲಿ ಸಾಕಷ್ಟಿವೆ. ಇವರ ಪ್ರತಿ ಕಥೆಗಳು ವಿಡಂಬನೆಗಳ ಉಣಬಡಿಸಿ, ಕುತೂಹಲಕ್ಕೆ ಕಂಕಣ ಕಟ್ಟಿ ಓದಿಸಿಕೊಳ್ಳುತ್ತವೆ. ಈ ಕಥೆಯಲ್ಲಿನ ಒಂದೆರಡು ಅಂಶಗಳು ಪುಸ್ತಕ ಮುಗಿಸಿಟ್ಟ ಮೇಲೂ ಕಾಡುತ್ತವೆ ಮತ್ತು ಇವರು ಬಳಸುವ ಇಂಗ್ಲೀಷ್ ಸಾಲುಗಳು ಮತ್ತಷ್ಟು ಆಕರ್ಷಣೀಯವಾಗಿವೆ.
‘ಕೊನೆಯ ಮನುಷ್ಯ’ ಇದು ಹಾಸ್ಯ ಕಥೆಯಂತು ಅಲ್ಲ ಆದರೂ ನಗಿಸುತ್ತದೆ. ಇದು ವಾಸ್ತವಕ್ಕೆ ತುಂಬಾ ದೂರವಿರೋ ಕಥಾವಸ್ತು ಆದರೂ ವಾಸ್ತವಕ್ಕೆ ಅತ್ಯಾವಶ್ಯಕವೆನಿಸೋ ಸಂದೇಶವೊಂದನ್ನು ಸಾರುತ್ತದೆ. ಇದು ಸಂಪೂರ್ಣವಾಗಿ ಲೇಖಕರ ಕಲ್ಪನೆ. ಮೊದಲ ಸಾಲಿನಲ್ಲೇ ಜಗದ ಅಂತ್ಯಕ್ಕೆ ತಂದು ನಿಲ್ಲಿಸಿರುತ್ತದೆ. ಉಳಿದ ಒಬ್ಬನೇ ಮನುಷ್ಯ ಅವನೇ ನಮ್ಮ ಪಶ್ಚಿಮಜ. ಕೊನೆಯ ಮನುಷ್ಯ. ಫ್ಲ್ಯಾಶ್ ಬ್ಯಾಕ್ ಕಥೆಗಳಿಗೆ ತದ್ವಿರುದ್ಧ, ಒಂದು ರೀತಿ ಫ್ಲ್ಯಾಶ್ ಫ್ಯೂಚರ್ ಕಥೆ. ಈ ಬಾರಿ ಭಾಜಪ ಸೋತು ಕಾಂಗ್ರೆಸ್ ಗೆಲ್ಲಲು ಕಾರಣವೇನು ಅನ್ನೋದು ತಿಳಿಯಬೇಕಿದ್ದರೆ ಈ ಕಥೆ ಓದಲೇಬೇಕು.
‘ಕೇಸ್ ನಂ 420’ ಬಹಳ ಇಂಟ್ರೆಸ್ಟಿಂಗ್ ಕೇಸ್ ಇದು ಓದ್ಲೇಬೇಕು ಕಳೆದುಹೋಗಿರುವ ತನ್ನನ್ನ ತಾನೇ ಹುಡುಕಲು ಪೊಲೀಸ್ ಸ್ಟೇಷನ್ನಿಗೆ ಹೋಗಿ ಕಂಪ್ಲೈಂಟ್ ಕೊಡ್ತಾನೆ ಕೊನೆಗೆ 420 ನಂಬರಿನ ಕೇಸ್ ರಿಮೈನ್ ಆನ್ ಸಾಲ್ವಡ್ .
ಮುಗಿಯದ ಪಯಣ ಎಂದಿಗೂ ಮುಗಿಯುವುದಿಲ್ಲ. ಕಳೆದುಕೊಂಡವರನ್ನ ಹುಡುಕಬಹುದು ಆದರೆ ತಪ್ಪಿಸಿಕೊಂಡವರನ್ನ ಎಷ್ಟೇ ಹುಡುಕಿದರೂ ಸಿಗುವುದಿಲ್ಲ. ಆದರೂ ಅವನ ಪಯಣ ಮುಂದುವರೆಯುತ್ತಲೆ ಇದೆ. ಮುಂದುವರೆಯುತ್ತಲೇ ಇರುತ್ತದೆ.
ವೃದ್ಧಾಶ್ರಮದ ಕಥೆ ಮನಮುಟ್ಟುವಂತಿದೆ.ಇದರಲ್ಲಿ ಬರುವ ಸುದರ್ಶನ್ ರಾವ್ ನಂತಹ ಅನೇಕ ವ್ಯಕ್ತಿಗಳು ಪೊಲಿಟಿಕ್ಸ್ ಅಲ್ಲಿ ಸಿಕ್ತಾರೆ. ನಾಯಿ ಇದೆ ಎಚ್ಚರಿಕೆ ಕಥೆಯು ನಾವು ಕೇಳಿದ್ದ ಅಜ್ಜಿ ಕಥೆಯನ್ನು ನೆನಪಿಸುತ್ತದೆ. ಕಥೆ ಕೊನೆಗೆ ಆ ಬೋರ್ಡಿನಲ್ಲಿ ಬರೆಯಲ್ಪಡುವ ಸಾಲು ನಗು ತರಿಸುತ್ತದೆ.
ಒಂದು ವಿಚಿತ್ರ ಖಾಯಿಲೆ ಕಥೆಯನ್ನ ಓದ್ತಾ ಓದ್ತಾ ಇದೆಂತದಪ್ಪ ಇದು ವಿಚಿತ್ರ ಖಾಯಿಲೆ ಅನಿಸುತ್ತೆ ಕಥೆ ಓದಿ ಮುಗಿಸಿದ ಮೇಲೆ ಹೌದು ಹೌದು ಇದು ವಿಚಿತ್ರ ಖಾಯಿಲೆಯೆ, ಮತ್ತಿದಕ್ಕೆ ಔಷಧಿಯೂ ಇಲ್ಲ ಎಂಬುದನ್ನು ವ್ಯಂಗ್ಯವಾಗಿ ಹೇಳಿದ್ದಾರೆ.
ಮೂರು ನ್ಯಾನೋ ಕಥೆಗಳು ಮತ್ತು ಕಥೆಯೊಂದೇ ಅಂತ್ಯ ಹಲವು ಎಂಬ ಈ ಎರಡು ಕಥೆಗಳು ವಸುಧೇಂದ್ರ ಅವರ ಕಥಾ ಕಮ್ಮಟದಲ್ಲಿನ ಕಾರ್ಯಾಗಾರವನ್ನು ನೆನಪಿಸಿತು.
ಒಂದು ಮೌನದ ದಿನ ಕಥೆಯಲ್ಲಿ ಮಾತಿಲ್ಲದೆ ಒಂದು ದಿನ ಕಳೆಯುವುದು ಕಲಿಯುತ್ತೇವೆ. ಮೌನದ ಮನೆ ಕಥೆಯಲ್ಲಿ ಮಾತಾಡೋಕೆ ಯಾರೂ ಸಿಗದೆ ಇದ್ದರೆ ಬದುಕಿನಲ್ಲಿ ಸ್ವಾರಸ್ಯ ಕಳೆದುಕೊಳ್ಳುತ್ತೇವೆ ಎಂಬುದು ತಿಳಿಯುತ್ತೇವೆ. ಎರಡು ಕಥೆಗಳು ಪರಸ್ಪರ ತದ್ವಿರುದ್ಧ ಅವುಗಳ ನಿರೂಪಣೆಯಲ್ಲಿ ನವೀನತೆ ಇದೆ.
ಕಾಸ್ಟ್ಲಿ ಖೈದಿ ಎಂಬ ಕಥೆಯು ಟಾಲ್ ಸ್ಟಾಯ್ ಅವರ Too dear ಕಥೆಯ ಅನುವಾದ. ಒಟ್ಟಾರೆ ಇದರಲ್ಲಿ 16 ಸಣ್ಣಕಥೆಗಳಿವೆ. ಎಲ್ಲವೂ ವಿನೂತನವಾಗಿವೆ. ನಿರೂಪಣೆಯಲ್ಲಿ ಹೊಸತನವಿದೆ. ಈಗಿನ ಕಾಲದ ಓದುಗರನ್ನು ಉಳಿಸಿಕೊಳ್ಳುವ ತಾಕತ್ತು ಈ ಕಥೆಗಳಿವೆ. ಇಂಟ್ರೆಸ್ಟಿಂಗ್ ಆಗಿಲ್ಲ ಅಂದ್ರೆ ಮೂವತ್ತು ಸೆಕೆಂಡುಗಳ ರೀಲ್ಸ್ ಗಳನ್ನೇ ಸ್ಕ್ರಾಲ್ ಮಾಡಿ ಗಮನಿಸದೆ ಹೋಗುವ ಯುವಕರಿಗೆ ಈ ಪುಸ್ತಕ ಕೈಗಿಟ್ಟು ಓದಲು ಕೂರಿಸಬಹುದು ಮತ್ತು ಈ ಪುಸ್ತಕ ಅವರನ್ನು ಹಿಡಿದಿಟ್ಟು ಕೊಳ್ಳುವುದಂತು ಖಚಿತ. ಸದಾ ಓದುವವರಿಗೆ ಈ ಕಥೆಗಳ ತಾತ್ಪರ್ಯ ಮತ್ತು ವಿಡಂಬನೆ ಇಷ್ಟವಾಗುತ್ತದೆ. ಮತ್ತು ಪ್ರತೀ ಕಥೆಗಳ ವಿಚಾರ, ಕಥೆಗಳ ಉದ್ದೇಶ ಗಮನಾರ್ಹ.
ಈ ಪುಸ್ತಕವು ಮತ್ತಷ್ಟು ಮುದ್ರಣಗಳನ್ನು ಕಾಣಲಿ, ಓದುಗರ ಮನಸ್ಸಿನಲ್ಲಿ ದೇವರು ಅರೆಸ್ಟ್ ಆಗುತ್ತಲೇ ಇರಲಿ ಎಂದು ಆಶಿಸುತ್ತೇನೆ.
ಶಿವಾಗ್