ತನುಶ್ರೀ ಪಿತ್ರೋಡಿ
ಭಾರತ ದೇಶವು ವಿಶ್ವಕ್ಕೆ ವಿಜ್ಞಾನ, ಗಣಿತ, ವೈದ್ಯಕೀಯ ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದು, ಅವುಗಳ ಪೈಕಿ ಯೋಗಕ್ಕೂ ವಿಭಿನ್ನ ಕೊಡುಗೆ ನೀಡಿದೆ. ಪುರಾತನ ಕಾಲದಲ್ಲಿ ಋಷಿಗಳು ಪರಿಚಯಿಸಿದ ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಧುನಿಕತೆಯ ಧಾವಂತದಲ್ಲಿ ಇಂದಿನ ಪೀಳಿಗೆಯು ಯೋಗದ ಮಹತ್ವವನ್ನು ಮರೆತಿದ್ದು, ಮತ್ತೆ ಪುನರುತ್ಥಾನಗೊಳಿಸುವ ಪ್ರಯತ್ನವು ನಡೆದಿದೆ. ಇಂತಹ ಸಂದರ್ಭದಲ್ಲಿ ಉಡುಪಿಯ ಬಾಲೆೆಯೊಬ್ಬಳು ಯೋಗಕ್ಕೆ ಹೊಸ ಆಯಾಮವನ್ನು ನೀಡುತ್ತಿದ್ದು, ಈಕೆಯೇ ಉಡುಪಿಯ ತನುಶ್ರೀ ಪಿತ್ರೋಡಿ.
ಹನ್ನೊಂದನೇ ವಯಸ್ಸಿಗೆ ಒಂದೇ ದಿನದಲ್ಲಿ ಎರಡು ವಿಶ್ವದಾಖಲೆಯನ್ನು ಬರೆದಿರುವ ಅಸಾಮಾನ್ಯ ಪ್ರತಿಭೆ ತನುಶ್ರೀ ಪಿತ್ರೋಡಿ. ಈಕೆಯ ದೇಹದೊಳಗೆ ಮೂಳೆಗಳಿವೆಯೋ ಇಲ್ಲವೋ ಎಂಬ ಅನುಮಾನ ಬರುವಂತಹ ರೀತಿಯಲ್ಲಿ ಈಕೆ ಸಾವಿರಾರು ಮಂದಿಯ ಮುಂದೆ ಯೋಗ ಪ್ರದರ್ಶನ ನೀಡಿದ್ದಾಳೆ. ವಯಸ್ಕರು ಜೀವಮಾನದಲ್ಲಿ ಸಾಧಿಸಲಾಗದಂತಹ ಅಸಾಮಾನ್ಯವಾದುದನ್ನು ತನ್ನ ಸಣ್ಣ ವಯಸ್ಸಿನಲ್ಲೇ ಈಕೆ ಸಾಧಿಸಿದ್ದಾಳೆ. ಭರತನಾಟ್ಯ ಮತ್ತು ಯಕ್ಷಗಾನ ಕಲೆಗಳಲ್ಲೂ ಪರಿಣತಿ ಪಡೆದಿರುವ ಈಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಯೂಟ್ಯೂಬ್ ನೋಡಿಯೇ ಯೋಗವನ್ನು ಕಲಿತು ವಿಶ್ವದಾಖಲೆಗಳನ್ನು ಬರೆದಿರುವುದು ವಿಶೇಷ.
ಗುರುವಿಲ್ಲದ ವಿಶಿಷ್ಟ ಸಾಧಕಿ
ಮೂಲತಃ ನೃತ್ಯಪಟು ಆಗಿರುವ ಈಕೆ ಹೆಚ್ಚಿನ ಡಾನ್ಸ್ ಸ್ಟೆಪ್ಗಳನ್ನು ಯೂಟ್ಯೂಬ್ ವಿಡಿಯೋ ನೋಡಿಯೇ ಅಭ್ಯಾಸ ಮಾಡುತ್ತಿದ್ದಳು. ನೋಡಿ ಕಲಿಯುವ ಅಸಾಧಾರಣ ಪ್ರತಿಭೆ ಹೊಂದಿರುವ ಈಕೆ ಗುರುಗಳ ಸಹಾಯ ಮತ್ತು ಮಾರ್ಗದರ್ಶನವಿಲ್ಲದೇ ಯೂಟ್ಯೂಬ್ ಮೂಲಕ ವಿವಿಧ ಸಾಧಕರು ಮಾಡಿರುವ ಯೋಗವನ್ನು ಅಧ್ಯಯನ ಮಾಡಿ ಮನೆಯಲ್ಲಿಯೇ ತನ್ನ ತಾಯಿಯ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಾಳೆ. ಈಕೆ ತನ್ನ ನೃತ್ಯ ಪ್ರದರ್ಶನದಲ್ಲಿ ಎದೆಯ ಭಾಗವನ್ನು ಹಾಗೂ ತಲೆಯನ್ನು ನೆಲದಲ್ಲಿ ಸ್ಥಿರವಾಗಿರಿಸಿ ಉಳಿದ ತನ್ನ ದೇಹದ ಭಾಗವನ್ನು ತಿರುಗಿಸುತ್ತಾ ನೃತ್ಯವನ್ನು ಮಾಡುತ್ತಿದ್ದಳು. ಇದನ್ನು ಗಮನಿಸಿದ ಈಕೆಯ ತಂದೆ ತನ್ನ ಮಗಳನ್ನು ಗಿನ್ನೆಸ್ ದಾಖಲೆಮಾಡಿಸುವ ಸಲುವಾಗಿ ಇಂಟರ್ನೆಟ್ ಮೂಲಕ ಅದರ ಭಂಗಿಗಳನ್ನು ಹುಡುಕುತ್ತಿದ್ದಾಗ ಪ್ಯಾಲಿಸ್ತೀನ್ನ ಮೊಹಮ್ಮದ್ ಅಲಿ ಶೇಖ್ ಈ ಸಾಧನೆ ಮಾಡಿರುವ ವಿಚಾರ ತಳಿಯುತ್ತಾರೆ.
ಈ ಹಿಂದೆ ಈಕೆ ಮಾಡಿದ ಗೋಲ್ಡನ್ ದಾಖಲೆಯ ‘ನಿರಾಲಂಬ ಪೂರ್ಣ ಚಕ್ರಾಸನ’ ವನ್ನು ಯೂಟ್ಯೂಬ್ ವಿಡಿಯೋ ಮೂಲಕವೇ ಅಭ್ಯಾಸ ಮಾಡಿದ್ದಳು. ಇದೇ ರೀತಿ ತನುಶ್ರೀ ನಾಲ್ಕು ತಿಂಗಳುಗಳ ಕಾಲ ಯೂಟ್ಯೂಬ್ ಮೂಲಕ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ನಿರಂತರ ಅಭ್ಯಾಸವನ್ನು ಮಾಡುತ್ತಿದ್ದಳು. ಈಕೆ ಎಂದೂ ಎಲ್ಲೂ ಮೈದಾನದಲ್ಲಿ ಅಥವಾ ಜನಸ್ತೋಮದ ಮುಂದೆ ಅಭ್ಯಾಸವನ್ನು ಮಾಡಿರಲೇ ಇಲ್ಲ. ಈಕೆಯ ಸಾಧನೆಯ ಹಿಂದೆ ತಂದೆ ತಾಯಿ ಪ್ರತಿಕ್ಷಣವೂ ಧೈರ್ಯವನ್ನು ತುಂಬಿ ಉತ್ತೇಜನ ನೀಡಿದ್ದಾರೆ. ಅತ್ಯಂತ ಸಣ್ಣ ಮನೆಯಲ್ಲಿ ಈಕೆಯ ಕುಟುಂಬ ವಾಸವಾಗಿದ್ದು, ಈಕೆಯ ಅಭ್ಯಾಸವು ಮನೆಯ ಚಾವಡಿ ಮತ್ತು ಟೆರೇಸ್ ಮೇಲೆಯೇ ನಡೆಯುತ್ತದೆ. ತನ್ನ ಶಾಲೆ ಮೈದಾನದಲ್ಲಿ ಈಕೆ ನಡೆಸಿದ ಪ್ರಥಮ ಪ್ರಯೋಗದಲ್ಲೇ ದಾಖಲೆಯನ್ನು ಮಾಡಿದ್ದು ಹೆತ್ತವರು ಈಕೆಯ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತಿದ್ದಾರೆ.
ಪ್ರಮುಖ ದಾಖಲೆಗಳು
ತನುಶ್ರೀ ಉಡುಪಿಯ ಸೆಂಟ್ ಸಿಸಿಲೀಸ್ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ನಿರಾಲಂಬ ಪೂರ್ಣ ಚಕ್ರಾಸನದಲ್ಲಿ ಎರಡು ದಾಖಲೆಯನ್ನು ಬರೆದಿದ್ದಾಳೆ. ಒಂದು ನಿಮಿಷದಲ್ಲಿ ಈ ಆಸನವನ್ನು ೪೨ ಬಾರಿ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಧನುರಾಸನ ಹಾಕಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ (62) ಉರುಳಿದ್ದು ಒಂದು ದಾಖಲೆಯಾದರೆ, 1 ನಿಮಿಷ, 40 ಸೆಕೆಂಡ್ಳಲ್ಲಿ 100 ಬಾರಿ ಉರುಳಿದ್ದು ಮತ್ತೊಂದು ದಾಖಲೆ. ಎರಡೂ ದಾಖಲೆಗಳು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಟ ಸೇರಿವೆ. ಇದರೊಂದಿಗೆ ತನುಶ್ರೀಯ ವಿಶ್ವದಾಖಲೆಗಳ ಸಂಖ್ಯೆ ನಾಲ್ಕಕ್ಕೇರಿದೆ. 2017 ರ ನವೆಂಬರ್ 11 ರಂದು ‘ನಿರಾಲಂಬ ಪೂರ್ಣ ಚಕ್ರಾಸನ’ ಎಂಬ ಕಠಿಣ ಯೋಗಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ವಿಶ್ವದಾಖಲೆ ಬರೆದಿದ್ದಳು. 2018 ರ ಏಪ್ರಿಲ್ 7 ರಂದು ಪಿತ್ರೋಡಿಯ ವೆಂಕಟರಮಣ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ಸ್ ಸಂಸ್ಥೆ ನೇತೃತ್ವದಲ್ಲಿ ತನ್ನ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ನೆಲಕ್ಕೆ ಇರಿಸಿ ಉಳಿದ ದೇಹದ ಭಾಗವನ್ನು ಒಂದು ನಿಮಿಷಕ್ಕೆ 42 ಬಾರಿ ತಿರುಗಿಸುವ ಮೋಸ್ಟ್ ಫುಲ್ ಬಾಡಿ ರಿವೊಲ್ಯೂಶನ್ ಮೈಂಟೆನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೊಸಿಶನ್ನಲ್ಲಿ ಒಂದು ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನೆಸ್ ವರ್ಲ್ಡ್ರೆಕಾರ್ಡ್ಸ್ಗೆ ಸೇರಿದ್ದಾಳೆ. ಇದಕ್ಕಿಂತ ಮೊದಲು ಜೋರ್ಡಾನ್ನಲ್ಲಿ ಪ್ಯಾಲೆಸ್ತೀನ್ನ 13 ವರ್ಷದ ಮೊಹಮ್ಮದ್ ಅಲ್ ಶೇಖ್ ಎಂಬಾತ ಒಂದು ನಿಮಿಷಕ್ಕೆ 38 ಬಾರಿ ತಿರುಗುವ ಮೂಲಕ ಮಾಡಿದ್ದ. ಈ ಎರಡೂ ದಾಖಲೆಗಳು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿವೆ. ಈಕೆಯ ಒಟ್ಟು ವಿಶ್ವದಾಖಲೆಗಳ ಸಂಖ್ಯೆ ನಾಲ್ಕಕ್ಕೇರಿದೆ. ಈಕೆಯು ತನ್ನೆಲ್ಲ ಸಾಧನೆಗಳನ್ನು ಪುಲ್ವಾಮ ಉಗ್ರದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಅರ್ಪಿಸಿರುವುದು ಈಕೆಯ ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ.
ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಏಷ್ಯಾ ಖಂಡದ ಹೆಡ್ “ಮನೀಶ್ ಬೀಶ್ನೋಯಿ” ಉಡುಪಿಗೆ ಬಂದು ಸಾಧಕಿ ತನುಶ್ರೀಯ ಸಾಧನೆಯನ್ನು ಪ್ರತ್ಯಕ್ಷವಾಗಿ ನೋಡಿ ತಲೆದೂಗಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಅತ್ಯಂತ ಕಠಿಣವಾದ ಯೋಗಾಸಾನ ಕ್ಷೇತ್ರದಲ್ಲಿ ತನುಶ್ರೀ ಸಾಧನೆ ಮಾಡಿದ್ದು, ಧನುರಾಸನದಲ್ಲಿ ಇದುವರೆಗೂ ಯಾರೂ ದಾಖಲೆಯನ್ನು ಮಾಡಿರಲಿಲ್ಲ. ಈಗ ತನುಶ್ರೀಯಿಂದಾಗಿ ಈ ಕ್ಷೇತ್ರದಲ್ಲೂ ದಾಖಲೆ ಸೃಷ್ಟಿಯಾಗಿದೆ ಎಂದು ಮನೀಶ್ ಬಿಶ್ನೋಯಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಈಕೆಯ ವಯಸ್ಸು ಕೇವಲ 11 ಆಗಿದ್ದರೂ ಸಾಧನೆಯಲ್ಲಿ ಈಕೆ ತುಂಬಾ ಪ್ರಬುದ್ಧಳಾಗಿ ಕಾಣಿಸುತ್ತಾಳೆ. ಈಗಾಗಲೇ ಒಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮತ್ತು ಮೂರು ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗಳನ್ನು ಯೋಗದಲ್ಲಿ ಮಾಡಿದ್ದಾಳೆ. ಇದರಲ್ಲಿ ವಿಶೇಷವೆಂದರೆ ಈಕೆ ಯೋಗವನ್ನು ಆರಂಭಿಸಿದ್ದೇ ಕೇವಲ ಮೂರು ವರ್ಷಗಳ ಹಿಂದೆ, ಇಷ್ಟು ಸಣ್ಣ ಅವಧಿಯಲ್ಲೇ ಈ ಮಟ್ಟದ ಸಾಧನೆಯನ್ನು ಮಾಡಿರುವುದೂ ಇನ್ನೊಂದು ದಾಖಲೆ ಆಗಬಹುದೇನೋ? ಯೋಗ ಪ್ರದರ್ಶನ ನೀಡಲು ಈಕೆ ಇಟಲಿ ದೇಶಕ್ಕೂ ಹೋಗಿ ಬಂದಿದ್ದಾಳೆ.
ಉಡುಪಿಯ ಪಿತ್ರೋಡಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿರುವ ಉದಯಕುಮಾರ್ ಹಾಗೂ ಸಂಧ್ಯಾ ದಂಪತಿಗಳ ಪುತ್ರಿಯಾಗಿರುವ ಈಕೆಯ ಸಾಧನೆ ಇಷ್ಟಕ್ಕೆ ಸೀಮಿತವಾಗದೇ ನೃತ್ಯ ಯಕ್ಷಗಾನ ಮತ್ತು ಭರತನಾಟ್ಯ ಕ್ಷೇತ್ರದಲ್ಲೂ ಪ್ರತಿಭೆಯನ್ನು ತೋರಿಸಿದ್ದು ಸುಮಾರು 346 ಕ್ಕೂ ಮಿಕ್ಕಿ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾಳೆ. ಉಡುಪಿಯ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ಇದರ ರಾಮಕೃಷ್ಣ ಕೊಡಂಚ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ಈಕೆಯ ಸಾಧನೆ ಗಮನಿಸಿ 108 ಕ್ಕೂ ಹೆಚ್ಚಿನ ಸನ್ಮಾನಗಳನ್ನು ವಿವಿಧ ಸಂಘ ಸಂಸ್ಥೆಗಳು ಮಾಡಿವೆ. ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಮಜಾ ಟಾಕೀಸ್ನಲ್ಲೂ ಈಕೆ ಅತಿಥಿಯಾಗಿ ಪ್ರದರ್ಶನ ನೀಡಿದ್ದಾಳೆ. ಇಷ್ಟೇ ಅಲ್ಲದೇ ಕರಾವಳಿಯ ಜನಪ್ರಿಯ ಹಬ್ಬಗಳಾದ ಕೃಷ್ಣ ಜನ್ಮಾಷ್ಟಮಿ ಮತ್ತು ನವರಾತ್ರಿಯ ಸಂದರ್ಭಗಳಲ್ಲಿ ಹುಲಿ ವೇಷವನ್ನೂ ಹಾಕಿ ವಿಶಿಷ್ಟವಾಗಿ ಕುಣಿಯುವ ಜನಪದ ಕಲೆಯನ್ನೂ ಇವಳು ಕರಗತ ಮಾಡಿಕೊಂಡಿದ್ದಾಳೆ.
ಇನ್ನೊಂದು ವಿಶ್ವ ದಾಖಲೆಗೆ ಸಿದ್ಧತೆ
ಯೋಗಾಸನದಲ್ಲಿ ಎರಡು ವಿಶ್ವದಾಖಲೆ ಮಾಡಿರುವ ಈಕೆ ಧನುರಾಸನದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆಗೆ ಸಿದ್ಧತೆಯನ್ನು ಮಾಡುತ್ತಿದ್ದಾಳೆ. ಧನುರಾಸನದಲ್ಲಿ ನಂಬರ್ ಆಫ್ ರೋಲ್ಸ್, ನಂಬರ್ ಆಫ್ ಡಿಸ್ಟೆನ್ಸ್, ಸ್ಪೀಡ್ ರೋಲ್ ಹೀಗೆ 3 ವಿಧಗಳಲ್ಲಿ ದಾಖಲೆಗಳನ್ನು ಮಾಡಲು ಅವಕಾಶವಿದ್ದು, ಮುಂದಿನ ದಿನಗಳಲ್ಲಿ ನಂಬರ್ ಆಫ್ ರೋಲ್ಸ್ ಕ್ಷೇತ್ರದಲ್ಲಿ ಈಕೆ ದಾಖಲೆ ಮಾಡಲು ನಿರ್ಧರಿಸಿದ್ದು, ಒಂದು ನಿಮಿಷದಲ್ಲಿ 50 ಬಾರಿ ಮಾಡುವ ತಯಾರಿಯಲ್ಲಿದ್ದಾಳೆ. ಯೋಗ ಕ್ಷೇತ್ರದಲ್ಲಿ ಇಂತಹ ಸಾಧನೆ ಮಾಡಲು ಅವಿರತ ಪ್ರಯತ್ನ, ಕಠೀಣ ಪರಿಶ್ರಮ, ಅಗಾಧವಾದ ತಾಳ್ಮೆ ಅಗತ್ಯವಿದ್ದು, ಅವೆಲ್ಲವನ್ನೂ ರಕ್ತದಲ್ಲೇ ಕರಗತ ಮಾಡಿಕೊಂಡಿರುವ ಈಕೆ ದಾಖಲೆಗಳ ಮೇಲೆ ದಾಖಲೆಯನ್ನು ಮಾಡುವಂತಾಗಲಿ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
1 Comment
super sir