ದೇಹದ ಬೆಲೆ

ದೇಹದ ಬೆಲೆ

ಸಂಗಮಪುರ ರಾಜ್ಯದ ನಿಜಗುಣ ರಾಜನ ಆಸ್ಥಾನದಲ್ಲಿ ಎಂದಿನಂತೆ ರಾಜನ ದರ್ಬಾರ್ ನಡೆಯುತ್ತಿತ್ತು. ಆಗ ಧೂಳಪ್ಪನೆಂಬ ಯುವ ಭಿಕ್ಷುಕನೊಬ್ಬ ರಾಜನ ಆಸ್ಥಾನಕ್ಕೆ ಬಂದು ‘ನಾನು ಒಬ್ಬ ಯಾರೂ ಇಲ್ಲದ ನಿರ್ಗತಿಕ, ಆ ಭಗವಂತ ನನಗೆ ಮನೆ, ಮಠ, ಹಣ ಮತ್ತು ವಿದ್ಯೆ ಏನನ್ನೂ ಕೊಟ್ಟಿಲ್ಲ, ಬದುಕೇ ನನಗೆ ಕಷ್ಟವಾಗಿದೆ. ಮಹಾರಾಜರಾದ ತಾವು ದಯಮಾಡಿ ನನ್ನ ಮೇಲೆ ಕರುಣೆಯನ್ನು ತೋರಬೇಕು’ ಎಂದು ವಿನಮ್ರವಾಗಿ ಭಿನ್ನವಿಸಿಕೊಂಡನು.

ಆತನ ಮಾತನ್ನು ಕೇಳಿದ ಮಹಾರಾಜ ನಿಜಗುಣನು ಧೂಳಪ್ಪನನ್ನು ಮೇಲಿನಿಂದ ಕೆಳಗಿನವರೆಗೂ ನೋಡಿ, ನೋಡು ನಾನು ನಿನಗೆ ಐದು ಚಿನ್ನದ ವರಹಗಳನ್ನು ನೀಡುತ್ತೇನೆ. ಆ ಐದು ಚಿನ್ನದ ವರಹಗಳಿಗೆ ಬದಲಾಗಿ ನೀನು ನಿನ್ನ ಎರಡು ಕಣ್ಣುಗಳನ್ನು ಕಿತ್ತು ನನಗೆ ಕೊಡಬೇಕು ಎಂದ. ಈ ಮಾತನ್ನು ಕೇಳಿದ ಧೂಳಪ್ಪನು ಹೌಹಾರಿ, ಸ್ವಾಮೀ ನಾನು ನನ್ನ ಎರಡು ಕಣ್ಣುಗಳನ್ನು ನಿಮಗೆ ನೀಡಿದರೆ ನಾನು ಹೇಗೆ ಈ ಪ್ರಪಂಚವನ್ನು ನೋಡಲಿ? ಹೇಗೆ ನಾನು ನಡೆಯಲಿ? ಎಂದು ರಾಜನನ್ನು ಮರು ಪ್ರಶ್ನಿಸಿದ.

ಆಗ ಮಹಾರಾಜನು ಹಾಗಿದ್ದರೆ ನಿನ್ನ ಕಣ್ಣುಗಳು ಬೇಡ, ನಾನು ನಿನಗೆ ಹತ್ತು ಚಿನ್ನದ ನಾಣ್ಯಗಳನ್ನು ನೀಡುತ್ತೇನೆ. ಅದಕ್ಕೆ ಪ್ರತಿಯಾಗಿ ನೀನು ನಿನ್ನ ಎರಡು ಕಾಲುಗಳನ್ನು ಕತ್ತರಿಸಿ ನನಗೆ ಕೊಡುವೆಯಾ ಎಂದು ಕೇಳಿದ. ಅದಕ್ಕೆ ಧೂಳಪ್ಪನು ಅದೂ ನನ್ನಿಂದ ಸಾಧ್ಯವಿಲ್ಲ ಎಂದನು. ಹಾಗಾದರೆ ನಾನು ನಿನಗೆ ನೂರು ಚಿನ್ನದ ನಾಣ್ಯಗಳನ್ನು ನೀಡಲು ಸಿದ್ಧನಿದ್ದೇನೆ, ನೀನು ನಿನ್ನ ಎರಡು ಕೈಗಳನ್ನು ನನಗೆ ನೀಡುತ್ತೀಯಾ ಎಂದು ರಾಜನು ಧೂಳಪ್ಪನಲ್ಲಿ ಮತ್ತೊಮ್ಮೆ ಕೇಳಿದ. ರಾಜನು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದುದರಿಂದ ಕೋಪಗೊಂಡ ಧೂಳಪ್ಪನು, ನಿಮ್ಮ ಅರ್ಧ ರಾಜ್ಯವನ್ನೇ ನನಗೆ ದಾನವಾಗಿ ನೀಡಿದರೂ ಸರಿ ನಾನು ನನ್ನ ದೇಹದ ಅಮೂಲ್ಯವಾದ ಯಾವುದೇ ಒಂದು ಅಂಗವನ್ನು ನಿಮಗೆ ನೀಡಲು ಸಾಧ್ಯವಿಲ್ಲ ಎಂದು ಜೋರಾಗಿ ಕಿರುಚಾಡುತ್ತಾ ಹೇಳಿದ.

ಆಗ ನಿಜಗುಣ ರಾಜನು ಜೋರಾಗಿ ನಗುತ್ತಾ ನೋಡು ಧೂಳಪ್ಪಾ, ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲದ ಅಪೂರ್ವವಾದಂತಹ ಹಾಗೂ ಸದೃಢವಾದ ದೇಹವನ್ನು ಭಗವಂತ ನಿನಗೆ ಕೊಡುಗೆಯಾಗಿ ಕೊಟ್ಟಿದ್ದಾನೆ. ಹೀಗಿರುವಾಗ ನೀನು ಹೇಗೆ ಬಡವನಾಗಲು ಸಾಧ್ಯ? ಭಗವಂತ ನಿನಗೆ ಕೊಟ್ಟಿರುವ ಅಮೂಲ್ಯವಾದ ದೇಹವನ್ನು ಚೆನ್ನಾಗಿ ದುಡಿಸಿಕೊಂಡು ಚೆನ್ನಾಗಿ ಕೆಲಸವನ್ನು ಮಾಡಿ ಹಣ, ಆಸ್ತಿ ,ಐಶ್ವರ್ಯವನ್ನು ಸಂಪಾದಿಸು ಎಂದು ರಾಜನು ಆತನಿಗೆ ಹೇಳಿದ. ಜೊತೆಗೆ ಅವನಿಗೆ ತನ್ನ ಅರಮನೆಯ ಒಂದು ವಿಭಾಗದಲ್ಲಿ ಕೆಲಸವನ್ನು ನೀಡುವಂತೆ ತನ್ನ ಮಂತ್ರಿಗೆ ಸೂಚಿಸಿದ. ಮಹಾರಾಜನ ಮಾತಿನಂತೆ ಧೂಳಪ್ಪನು ಅಂದಿನಿಂದ ಶ್ರಮವಹಿಸಿ, ಮೈಮುರಿದು ದುಡಿಯುವ ಮೂಲಕ ಸುಖವಾಗಿ ಜೀವಿಸಲು ಪ್ರಾರಂಭಿಸಿದ. ನಮ್ಮ ಅಮೂಲ್ಯ ದೇಹಕ್ಕಿಂತ ಅಮೂಲ್ಯವಾದ ಆಸ್ತಿ ಬೇರೊಂದಿಲ್ಲ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ:9742884160

Related post