ಧೈರ್ಯಂ ಸರ್ವತ್ರ ಸಾಧನಂ
‘ಜೀವನ ಎನ್ನುವುದು ಯಾರಿಗೂ ಸುಖದ ಸುಪ್ಪತ್ತಿಗೆ ಅಲ್ಲ. ಇಂದು ಕಠಿಣತೆಗೆ ತನ್ನನ್ನು ತಾನು ಒಡ್ಡಿಕೊಂಡವನು ಮತ್ತು ನಾಳೆಯೂ ಕಠಿಣತೆಯನ್ನು ಎದುರಿಸಲು ಸಿದ್ಧವಾಗಿ ಇರುವವನು ನಾಳೆಯೂ ಸುಖದ ಅನ್ನವನ್ನು ಉಣ್ಣಬಲ್ಲ’
ಶ್ರೀ “ಸಂತೋಷ್ ರಾವ್ ಪೆರ್ಮುಡ” ಅವರ ಹೊಸ ಪುಸ್ತಕ “ಧೈರ್ಯಂ ಸರ್ವತ್ರ ಸಾಧನಂ” ನಿಂದ ಆಯ್ದ ಸಾಲು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯವರಾದ ಶ್ರೀ ಸಂತೋಷ್ ರಾವ್ ಪೆರ್ಮುಡ ” ಧಾರವಾಡ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯುವ ಲೇಖಕರು. ತಮ್ಮ ಅನೇಕ ವ್ಯಕ್ತಿತ್ವ ವಿಕಸನ ಲೇಖನಗಳು, ಕಥೆಗಳಿಂದ ಹೆಸರುವಾಸಿ. ತಮ್ಮದೇ ಆದ “ಪರಿವರ್ತನಾ” ಎಂಬ ಜಾಲತಾಣ ಪುಟದಲ್ಲಿ ಹಾಗು ರಾಜ್ಯದ ವಿವಿಧ ದಿನಪತ್ರಿಕೆಗಳು, ನಿಯತಕಾಲಿಕೆಗಳ್ಲಲಿ 450 ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದಾರೆ. ಈ ಎಲ್ಲಾ ಅಂಕಣಗಳು ” ಪರ್ಯಟನೆ, ಪರಿಭ್ರಮಣ, ಅರಿವಿನ ಬೆಳಕು, ಗೆಲುವೇ ಜೀವನ ಸಾಕ್ಷಾತ್ಕಾರ, ಆವಿಷ್ಕಾರ, ಸೋಲುವ ನೆಪವೇಕೆ ಗೆಲ್ಲುವ ಜಪವಿರಲಿ, ಮತ್ತು ಇದೀಗ “ಧೈರ್ಯಂ ಸರ್ವತ್ರ ಸಾಧನಂ” ಎಂಬ ಪುಸ್ತಕಗಳಲ್ಲಿ ಮುದ್ರಿತ ರೂಪದಲ್ಲಿ ಹೊರಬಂದಿವೆ. ಇವರ “ಧಿಕ್ಸೂಚಿ” (ಬದುಕು ಬದಲಿಸುವ ಕಳೆಯ ಹೆಜ್ಜೆಗಳು) ಎಂಬ ಕೃತಿಗೆ 2020 ನೇ ಸಾಲಿನ ಗುರುಕುಲ ಸಾಹಿತ್ಯ ಶರಭ ಪ್ರಶಸ್ತಿ ಲಭಿಸಿದೆ.
ಈ ಪುಸ್ತಕದಲ್ಲಿನ ಅಂಕಣಗಳನ್ನು ಬರೆದ ಬಗೆ ಅವರೇ ಹೇಳುವಂತೆ
“ಜೀವನ ಎನ್ನುವುದು ಯಾರಿಗೂ ಸುಖದ ಸುಪ್ಪತ್ತಿಗೆ ಅಲ್ಲ. ಇಂದು ಕಠಿಣತೆಗೆ ತನ್ನನ್ನು ತಾನು ಒಡ್ಡಿಕೊಂಡವನು ಮತ್ತು ನಾಳೆಯೂ ಕಠಿಣತೆಯನ್ನು ಎದುರಿಸಲು ಸಿದ್ಧವಾಗಿ ಇರುವವನು ನಾಳೆಯೂ ಸುಖದ ಅನ್ನವನ್ನು ಉಣ್ಣಬಲ್ಲ, ಎನ್ನುವ ಮಾತಿನಂತೆ ನನ್ನ ಜೀವನವೂ ಹಲವು ಏರಿಳಿತಗಳ ಗೂಡೇ ಎನ್ನಬಹುದು. ಹೊಸತನಗಳು ಇಲ್ಲದ, ನಾಳೆಯ ಕುರಿತ ಭರವಸೆ ಮತ್ತು ಆಶಾವಾದ ಇಲ್ಲದ ನೀರಸ ಬದುಕಿಗೆ ಹೊಸ ಆಯಾಮ ದೊರೆತದ್ದೇ ನನ್ನ ವೃತ್ತಿ ಎಂದರೆ ತಪ್ಪಾಗದು. ವೃತ್ತಿಯಲ್ಲಿ ನಾನು ಉಪನ್ಯಾಸಕ ಯಾ ತರಬೇತುದಾರ; ಪ್ರವೃತ್ತಿಯಲ್ಲಿ ನಾನೊಬ್ಬ ಅಭಿವೃದ್ಧಿಪರ ಹಾಗೂ ಪ್ರೇರಣಾತ್ಮಕ ವಿಚಾರಗಳ ಬರಹಗಾರ. ಬರವಣಿಗೆಯ ಕ್ಷೇತ್ರಕ್ಕೆ ನನ್ನನ್ನು ಸೆಳೆಯುವಂತೆ ಮಾಡಿದ್ದೂ ನನ್ನ ವೃತ್ತಿಯೇ. ಪ್ರತಿಯೊಂದು ವಿಚಾರಗಳ ಕುರಿತು ಸದಾ ಕುತೂಹಲದಿಂದ ಅರಿಯುವ ಮತ್ತು ತಿಳಿಯುವ ಮನೋಭಾವ ನನ್ನನ್ನು ಮತ್ತಷ್ಟು ಅಧ್ಯಯನಾತ್ಮಕತೆಯ ಕಡೆಗೆ ಸೆಳೆಯಿತು. ಸಮಯ, ಸಂದರ್ಭ ಮತ್ತು ಇತರರಿಂದ ತಿಳಿದುಕೊಂಡ ವಿಚಾರಗಳನ್ನು ಅಭಿವೃದ್ಧಿಪರ ಮತ್ತು ವ್ಯಕ್ತಿತ್ವ ವಿಕಸನಕ್ಕೆ ತಾಳೆ ಮಾಡಿ ಅವುಗಳನ್ನು ವಿಶ್ಲೇಷಿಸುವ ಕಲೆಯೊಂದು ಅರಿವಿಲ್ಲದ ಹಾಗೆಯೇ ನನಗೆ ಸಿದ್ಧಿಸಿತು. ಜೀವನದ ವಿವಿಧ ಸಂದರ್ಭಗಳಲ್ಲಿ ನಾನು ನೋಡಿದ, ಕೇಳಿದ ಮತ್ತು ಅನುಭವಿಸಿದ ಕೆಲವೊಂದು ನೈಜ ಘಟನೆಗಳಿಗೆ ವಿಭಿನ್ನವಾದ ಕಾಲ್ಪನಿಕ ಕಥೆಗಳ ಸ್ಪರ್ಶವನ್ನು ನೀಡಲು ಆರಂಭಿಸಿದೆ. ಇಂತಹ ಕಥೆಗಳನ್ನು ತರಗತಿಗಳು ಮತ್ತು ತರಬೇತಿಗಳಲ್ಲಿ ಶ್ರೋತೃಗಳಿಗೆ ತಿಳಿಸಿದರಷ್ಟೇ ಸಾಲದು ಅವುಗಳು ದಾಖಲೀಕರಣ ಆಗಬೇಕು ಎಂದು ಅವುಗಳಿಗೆ ಬರವಣಿಗೆಯ ರೂಪವನ್ನು ನೀಡಿದ್ದೇನೆ”.
ಈ ಪುಸ್ತಕವು ಅವರೇ ಹೇಳುವಂತೆ
“ನಮ್ಮ ಸುಧಾರಣೆಯು ನಮ್ಮಿಂದಲೇ ಆಗಬೇಕು. ಜಗತ್ತಿನ ಮಹಾನ್ ಸಾಧಕರೆಲ್ಲ ಮೊದಲು ತಮ್ಮನ್ನು ತಾವು ಸುಧಾರಿಸಿಕೊಂಡು ನಂತರ ಮತ್ತೊಬ್ಬರಿಗೆ ಸ್ಫೂರ್ತಿದಾಯಕವಾಗಿ ಬದುಕಿದವರು. ಪ್ರತಿಯೊಬ್ಬ ವ್ಯಕ್ತಿಯು ಆತ ಏನೇ ಆಗಿರಲಿ ತನ್ನಲ್ಲೇ ಅನೇಕ ಸುಧಾರಣೆಗಳನ್ನು ತಂದುಕೊಳ್ಳುವ ಅವಶ್ಯಕತೆ ಹಾಗೂ ಅವಕಾಶ ಇದ್ದೇ ಇರುತ್ತದೆ ಇದು ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ದಾಸರ ವಾಣಿಯಂತೆ ‘ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ’ ಎಂಬ ಮಾತು ಸತ್ಯ. ಮನುಷ್ಯನು ತನಗೆ ಗೊತ್ತಿಲ್ಲದ ವಿಷಯಗಳನ್ನು ಗೊತ್ತಿಲ್ಲವೆಂದೂ, ತನ್ನ ದೌರ್ಬಲ್ಯಗಳನ್ನು ಅರಿತುಕೊಳ್ಳುವುದು ಅವಮಾನ ಎಂದು ಯಾವತ್ತೂ ಭಾವಿಸಬಾರದು. ಹಾಗೇನಾದರೂ ಭಾವಿಸಿಕೊಂಡರೆ ಅದು ನಮಗೆ ಕೇಳು ಬಯಸಿದಂತೆ. ನಮ್ಮ ಕೆಡುಕನ್ನು ಮತ್ತು ನಮ್ಮ ಒಳಿತನ್ನು ನಾವೇ ತಂದುಕೊಂಡ ಹಾಗೆ ಆಗುತ್ತದೆ. ಇದನ್ನೇ ತಿಳಿದವರು, ಇತರರನ್ನು ಅರಿತವನು ‘ಜಾಣ’ ತನ್ನನ್ನು ತಾನೇ ಅರಿತವನು ‘ಜ್ಞಾನಿ’ ಎಂದು ಹೇಳುತ್ತಾರೆ.
“ಒಮ್ಮೆ ದಾರಿಯಲ್ಲಿ ಹೋಗುತ್ತಿದ್ದ ಪ್ರವಾಸಿಗನೊಬ್ಬ ಶಿಲ್ಪಿಯನ್ನು ಕುರಿತು, ಕಲ್ಲಿನಿಂದ ಇಷ್ಟೊಂದು ಸುಂದರ ಮೂರ್ತಿಗಳನ್ನು ನೀನು ಹೇಗೆ ಕೆತ್ತನೆ ಮಾಡುವೆ ಎಂದು ಪ್ರಶ್ನಿಸಿದನು. ಆಗ ಶಿಲ್ಪಿಯು, ನಾನಾಗಿಯೇ ಹೊಸತಾಗಿ ಮೂರ್ತಿಗಳನ್ನೇನು ಕೆತ್ತಲಿಲ್ಲ, ಬದಲಿಗೆ ಆ ಮೂರ್ತಿಯು ಕಲ್ಲಿನಲ್ಲಿ ಮೊದಲೇ ಇತ್ತು. ನಾನು ಈ ಮೂರ್ತಿಯನ್ನು ಆವರಿಸಿಕೊಂಡಿದ್ದ ಬೇಡವಾದ ಮತ್ತು ಅನಗತ್ಯ ಕಲ್ಲುಗಳನ್ನು ಕೆತ್ತಿ ತೆಗೆದು ಹಾಕಿದ್ದೇನೆ. ಅದರಿಂದಾಗಿ ಈ ಸುಂದರವಾದ ಮೂರ್ತಿಯು ಹೊರಬಂದಿದೆ ಎಂದು ಹೇಳಿದನು“.
ನಾಳೆಯ ದಿವಸ ನಮಗೆ ಏನಾಗುವುದು ಎಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬರೂ ನಾಳೆ ನನಗೆ ಒಳಿತಾಗುತ್ತದೆ ಎಂಬ ವಿಶ್ವಾಸದಲ್ಲೇ ಬದುಕುತ್ತಾ ಇರುತ್ತಾರೆ. ಆ ರೀತಿಯ ಒಂದು ವಿಶ್ವಾಸವೇ ಮನುಷ್ಯನ ಅಥವಾ ಚರಾಚರ ಜೀವಿಗಳ ಮುಂದಿನ ಬದುಕಿಗೆ ಜೀವಧಾತು. ಒಳಿತು ಮತ್ತು ಕೆಡುಕುಗಳು ಎರಡೂ ಬಾಳಿನಲ್ಲಿ ಆಗಿಂದಾಗ್ಗೆ ಬಂದೇ ಬರುತ್ತವೆ. ಕಾಳಿದಾಸನ ಮೇಘದೂತದಲ್ಲಿ ಯಕ್ಷನು ಮೋಡದ ಮೂಲಕ ಯಕ್ಷಿಗೆ ಕಳುಹಿಸುವ ಸಂದೇಶದಲ್ಲಿ ‘ಕಸ್ಯಾತ್ಯಂತ ಸುಖಮುಪನತಂ ದುಖಃಮೇಮೇಕಾಂತತೋ ವಾ ನೀಚೈರ್ಗಚ್ಛುತ್ಯುಪರಿ ಚ ದಶಾ ಚಕ್ರನೆಮಿಕ್ರಮೇಣ’ ಎಂಬ ಮಾರ್ಮಿಕವಾದ ಮಾತನ್ನು ಹೇಳುತ್ತಾನೆ. ‘ಯಾರಿಗೆ ತಾನೆ ಕೇವಲ ಅತ್ಯಂತ ಸುಖವಾಗಲಿ ಅಥವಾ ಅತ್ಯಂತ ದುಃಖವಾಗಲಿ ಉಂಟಾಗುತ್ತವೆ? ಪ್ರತೀ ಬಾರಿಯೂ ಅವುಗಳು ಚಕ್ರದಂತೆ ತಿರುಗುತ್ತಲೇ ಇರುತ್ತದೆ. ಒಮ್ಮೆ ದುಃಖ ದೊರೆತರೆ ಇನ್ನೊಮ್ಮೆ ಸುಖ ದೊರೆಯುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸಮಾಧಾನವಾಗಿ ಇರಬೇಕು, ನೋಡುತ್ತಿದ್ದಂತೆ ದುಃಖದ ಕಾಲ ಕಳೆದುಬಿಡುತ್ತದೆ ಎಂಬುವುದು ಅದರ ತಾತ್ಪರ್ಯ’.
ಯಾರು ತಮ್ಮ ಆಪತ್ತಿನ ಸಂದರ್ಭದಲ್ಲಿ ತನ್ನ ಮೂಲ ಸ್ವರೂಪವನ್ನು ಬಿಡುವುದಿಲ್ಲವೋ ಅಂತವನೇ ಧನ್ಯ. ಸೂರ್ಯನ ಕಿರಣಗಳ ಪ್ರಭಾವಕ್ಕೆ ಒಳಗಾಗುವ ಮಂಜುಗಡ್ಡೆಯು ಕರಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳಬಹುದು. ಆದರೆ ಅದು ತನ್ನ ಶೈತ್ಯ ಗುಣವನ್ನು ಬಿಡುವುದಿಲ್ಲ. ಅದೇ ರೀತಿ ಪ್ರತಿಯೊಬ್ಬನೂ ಆಪತ್ತಿನಿಂದ ತಕ್ಕಮಟ್ಟಿಗೆ ವಿಚಲಿತರಾದರೂ, ಆಪತ್ತಿನಿಂದ ಪೂರ್ತಿಯಾಗಿ ಧೈರ್ಯಗುಂದದೆ ಅದರಿಂದ ಪಾರಾಗುವ ಚಿಂತನೆಯನ್ನು ಪ್ರತಿಕ್ಷಣವೂ ನಡೆಸುತ್ತಾ ಇರಬೇಕು. ಇದಕ್ಕೆ ಹಿಂದೂ ಧರ್ಮದ ಮಹಾನ್ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಪ್ರಧಾನ ಘಟನೆಗಳೇ ಉತ್ತಮ ಉದಾಹರಣೆಗಳಾಗಿವೆ. ರಾಮಾಯಣದ ರಾಮನಾಗಲೀ ಮಹಾಭಾರತದ ಪಾಂಡವರು ಆಗಲೀ ತಮಗೆ ಬಂದೊದಗಿದ ಆಪತ್ತನ್ನು ಎದುರಿಸುತ್ತಾ, ವಿನಯ ಮತ್ತು ವಿವೇಕದಿಂದ ಯೋಚಿಸಿ ಕಾರ್ಯಪ್ರವೃತ್ತರಾಗಿ ಆ ಆಪತ್ತುಗಳಿಂದ ಪಾರಾದರು. ಸುಖ ಮತ್ತು ದುಃಖಗಳಿಂದ ಕದಲದಂತಹ ಮನಸ್ಥಿತಿಯಾದ ಇಂತಹ ಧೈರ್ಯವೊಂದೇ ಎಲ್ಲಾ ಒಳಿತಿಗೂ ಸಾಧಕವಾಗುತ್ತದೆ. ವ್ಯಕ್ತಿಯ ಸಕಲ ರೀತಿಯ ಏಳಿಗೆಗೂ ಪ್ರಾಥಮಿಕ ಸಾಧನವಾಗಿ ಬೇಕಾಗಿರುವುದು ‘ಧೈರ್ಯವೇ’. ಆದ್ದರಿಂದ ಇಂತಹ ಹಲವಾರು ವಿಷಯಗಳಿಂದ ನಮ್ಮ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆಂದು ಈ ಪುಸ್ತಕದ ಮೂಲಕ ತಿಳಿಸಲು ಪ್ರಯತ್ನಿಸಿದ್ದೇನೆ”
ಅರವತ್ತಾರು ಲೇಖನವೊಳಗೊಂಡ “ಧೈರ್ಯಂ ಸರ್ವತ್ರ ಸಾಧನಂ” ಪುಸ್ತಕವನ್ನು ಬೆಂಗಳೂರಿನ ಶ್ರೀ ಚಂದ್ರಕೀರ್ತಿ ಅವರ ನಿರಂತರ ಪ್ರಕಾಶನ ರವರು ಹೊರತಂದಿದ್ದಾರೆ. ಮಾಧ್ಯಮ ಸಮಾಲೋಚಕರಾದ ಶ್ರೀಯುತ “ಡಾ. ಗುರುರಾಜ ಪೋಶೆಟ್ಟಿಹಳ್ಳಿ” (ಪ್ರಾಣವ ಮೀಡಿಯಾ ಹೌಸ್) ಅವರ ಮುನ್ನುಡಿ ಹಾಗು ಮಾನವ ಸಂಪನ್ಮೂಲ ತರಬೇತಿ ತಜ್ಞರಾದ ಶ್ರೀಯುತ ಡಾ. ಕೊಳ್ಚಪ್ಪೆ ಗೋವಿಂದ ಭಟ್ ರವರ ಬೆನ್ನುಡಿ ಈ ಪುಸ್ತಕಕ್ಕಿದೆ.
ತಮ್ಮ ವ್ಯಕ್ತಿತ್ವ ವಿಕಸನ ಲೇಖನಗಳಿಂದಾಗಿ ಎಷ್ಟೋ ಹತಾಶ ಜನರಲ್ಲಿ ಧೈರ್ಯ ತುಂಬುತ್ತಿರುವ ಶ್ರೀ ಸಂತೋಷ್ ರಾವ್ ಪೆರ್ಮುಡ ರವರ “ಧೈರ್ಯಂ ಸರ್ವತ್ರ ಸಾಧನಂ” ಪುಸ್ತಕವು ಜನಪ್ರಿಯವಾಗಿ ಹೆಚ್ಛೆಚ್ಚು ಜನರನ್ನು ತಲುಪಲಿ ಎಂದು ಸಾಹಿತ್ಯ ಮೈತ್ರಿ ಆಶಿಸುತ್ತದೆ.
ಈ ಪುಸ್ತಕದ ಬೆಲೆ 400/- ಓದಲು ಆಸಕ್ತಿಯಿರುವವರು 9742884160, 9845154233 ಮೊಬೈಲ್ ಗೆ ಕರೆ ಮಾಡಿ ತರಿಸಿಕೊಳ್ಳಬಹುದು.
ಸಾಹಿತ್ಯಮೈತ್ರಿ ತಂಡ
2 Comments
ಲೇಖನ ಸುಂದರವಾಗಿದೆ 🙏
Super sir