ನಂಕಂಪ್ನಿ – ನಾಟಕ ಪ್ರದರ್ಶನ
ಸುಮಾರು ನೂರು ವರುಷ ಹಳೆಯ ನಾಟಕವಾದರೂ ನಿತ್ಯನೂತನ ಟಿ. ಪಿ. ಕೈಲಾಸಂ ರವರ ಆಹ್ಲಾದಕರ ರಂಗಕೃತಿ “ನಂಕಂಪ್ನಿ” ಸಂಗೀತಮಯ – ಹಾಸ್ಯ– ವಿಡಂಬನಾತ್ಮಕ ನಾಟಕವು ಕನ್ನಡ ರಂಗ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ನಾಟಕದೊಳಗೆ ನಾಟಕ ನಡೆಯುವ ಅಂಶ ಹೊಂದಿರುವ ಕೃತಿ ನಕ್ಕು ನಗಿಸುತ್ತದೆ – ವಿಶಿಷ್ಟ ಹಾಡುಗಳಿಂದ ಮುದಗೊಳಿಸುತ್ತದೆ. ನಾಟಕ ಆರಂಭದಲ್ಲಿ ಸೂತ್ರಧಾರನೊಂದಿಗೆ ನಟಿಯ ಪ್ರವೇಶ. “ನಂಕಂಪ್ನಿ” ತಂಡದಿಂದ “ಶೂರ್ಪನಖ ಕುಲವಿಲಾಸ” ನಾಟಕ ಪ್ರದರ್ಶನ! “ಆ ನಾಟಕ” ನಡೆಯುವಾಗ ಘಟಿಸುವ ತಪ್ಪು-ಒಪ್ಪುಗಳು, ಅವಘಡಗಳು ಹಾಸ್ಯದ ಹೊನಲನ್ನು ಹರಿಸುತ್ತದೆ.
ಸುಮಾರು 30 ಹಾಡುಗಳು – ಕಂದ ಪದ್ಯಗಳು ಕಂಪನಿ ನಾಟಕದ ಶೈಲಿಯಲ್ಲಿ ರಂಗದ ಮೇಲೆ ಹರಿದು ಬಂದು ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ರಾಜ-ರಾಣಿಯ ಕತೆ, ಋಷಿಯ ಕೋಪ-ತಾಪ, ವಿಲಕ್ಷಣ ವಿಪ್ರನ ಹಾಸ್ಯ, ಬಗೆಬಗೆಯ ಸಖಿಯರ ನಾಟ್ಯ-ಸಂಗೀತ, ಕೊನೆಗೆ ಶೂರ್ಪನಖಿಯ ಜಾದೂ! ಈ ಎಲ್ಲ ಅಂಶಗಳಿಂದ ನಾಟಕ ಪೂರ್ಣ ರಂಗ ಅನುಭವ ನೀಡುವ ವಿಶಿಷ್ಟ ಪ್ರಸ್ತುತಿ ಆಗಿದೆ.
ವಿ ಮನೋಹರ್ ಅವರ ಸಂಗೀತವಿದೆ.
ಕಲೆಯ ನಿರ್ವಹಣೆ ಮಾಲತೇಶ್ ಬಡಿಗೆರ್.
ವಸ್ತ್ರ, ಧ್ವನಿ ವಿನ್ಯಾಸ ಮತ್ತು ನಿರ್ಮಾಣ ಜಸ್ಲೀನ್ ಋತ್ವಿಕ್ ಸಿಂಹ
ವಿನ್ಯಾಸ ಮತ್ತು ನಿರ್ದೇಶನ ಋತ್ವಿಕ್ ಸಿಂಹ.
ವೇದಿಕೆ ನಾಟಕಶಾಲೆ, ವೇದಿಕೆ ಫೌಂಡೇಷನ್ ಅಂಗ ಸಂಸ್ಥೆಯ ನಾಟಕ ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳ ಅಭಿನಯ.
ವೇದಿಕೆ ನಾಟಕಶಾಲೆ, ವೇದಿಕೆ ಫೌಂಡೇಷನ್ ಅಂಗ ಸಂಸ್ಥೆ
ಕನ್ನಡ ರಂಗಭೂಮಿಗೆ ಮಹತ್ವದ ಕಾಣಿಕೆಗಳನ್ನು ನೀಡಿದ ಪ್ರಖ್ಯಾತ ಸಂಸ್ಥೆ ವೇದಿಕೆ ಫೌಂಡೇಶನ್.
1983ರಲ್ಲಿ ‘ಟಿಪಿಕಲ್ ಟಿ.ಪಿ.ಕೈಲಾಸಂ’ ನಾಟಕದೊಂದಿಗೆ ಕಾರ್ಯ ಆರಂಭಿಸಿದ ಸಂಸ್ಥೆ ರಾಜ್ಯ – ರಾಷ್ಟ್ರ ಅಂತರರಾಷ್ಟ್ರಿಯ ಮಟ್ಟದಲ್ಲಿ ಪ್ರಸ್ತುತಿಗಳನ್ನ ನೀಡಿ ಗಟ್ಟಿ ನೆಲೆ ಕಂಡುಕೊಂಡಿದೆ.
ಖ್ಯಾತ ರಂಗ ದಂಪತಿಗಳಾದ ಶಾರದಾ – ಸಿ. ಆರ್. ಸಿಂಹ ಅವರು ಆರಂಭಿಸಿದ ವೇದಿಕೆ, ಇಂದು ನೂರಾರು ಕಲಾವಿದರನ್ನ ರೂಪಿಸಿದ ಕೀರ್ತಿಹೊಂದಿದೆ . ಟಿಪಿಕಲ್ ಟಿ.ಪಿ.ಕೈಲಾಸಂ, ಭೈರವಿ, ರಸಋಷಿ ಕುವೆಂಪು,ಅಗ್ನಿ ಮತ್ತು ಮಳೆ, ಮ್ಯಾಕಬೇಥ್, ಡ್ರೀಂ, ಮದುವೆ ಮದುವೆ, ಹಾವು-ಏಣಿ, ಬಹದ್ದೂರ್ ಗಂಡ. ಹೀಗೆ ವೇದಿಕೆಯ ನಾಟಕ ಕೃತಿಗಳ ಪಟ್ಟಿ ಬೆಳೆಯುತ್ತದೆ.
2001ರಲ್ಲಿ ಮಹತ್ವದ ಕಾರ್ಯವನ್ನ ಹಮ್ಮಿಕೋಂಡು, “ವೇದಿಕೆ ರಂಗ ಮಾಲಿಕೆ” ಎಂಬ ವಾರಾಂತ್ಯ ಪ್ರದರ್ಶನ ನೀಡುವ ಯೋಜನೆ ರೂಪಿಸಲಾಯಿತು. ಸತತವಾಗಿ 125 ವಾರ– ವೇದಿಕೆ ನಾಟಕ ಪ್ರದರ್ಶನ ಆಯೋಜಿಸಿ ಆಧುನಿಕ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿತು. ಇದರ ರೂವಾರಿಗಳು ಜಸ್ಲೀನ್ – ಋತ್ವಿಕ್ ಸಿಂಹ.
ಅಲ್ಲಿಂದ ಹಂತಹಂತವಾಗಿ ವಿವಿಧ ಕಾರ್ಯಚಟುವಟಿಕೆಗಳನ್ನ ಆಯೋಜಿಸುತ್ತ ಸಂಸ್ಥೆ ಬೆಳೆದಿದೆ. ವೇದಿಕೆ ಟೆರೆಸ್ ಥಿಯೇಟರ್– ಮನೆ ತಾರಸಿಗಳಲ್ಲಿ ಪ್ರದರ್ಶನ; ವೇದಿಕೆ ಮಾತುಕತೆ–ಖ್ಯಾತ ಕಲಾವಿದರೊಂದಿಗೆ ಆಪ್ತ ಸಮಾಲೋಚನೆ; ವೇದಿಕೆ ಚಿತ್ರ ಕೂಟ– ಚಲನಚಿತ್ರ ವೀಕ್ಷಣೆ; ವೇದಿಕೆ ಶಿಬಿರಗಳು, ಹೇಗೆ ಹಲವಾರು ವಲಯಗಳಲ್ಲಿ ವೇದಿಕೆ ಕಾರ್ಯನಿರ್ವಹಿಸುತ್ತಿದೆ.
ವೇದಿಕೆ ನಾಟಕಶಾಲೆಯು 2020ರ ಸಂಕ್ರಾಂತಿಯಿಂದ ಮೊದಲ ಬ್ಯಾಚ್ ಅನ್ನು ಆರಂಭಿಸಿದೆ. ವಿದ್ಯಾರ್ಥಿಗಳಿಗೆ ರಂಗ ಪಾಠ ನೀಡುವ ಕಾರ್ಯಕ್ರಮ ಆರಂಭವಾಯಿತು. ‘ಡಿಪ್ಲೋಮ ಇನ್ ಥಿಯೇಟರ್ ಆರ್ಟ್ಸ್’– ಎರಡು ವರುಷದ ಡಿಪ್ಲೋಮ ಆರಂಭಿಸಲಾಗಿದೆ.
ಥಿಯರಿ– ರಂಗ ಇತಿಹಾಸ, ಕನ್ನಡ ರಂಗಭೂಮಿ, ಭಾರತಿಯ –ವಿಶ್ವ ರಂಗಭೂಮಿ, ಅಭಿನಯ ಸಿದ್ಧಾಂತ, ನಾಟ್ಯಶಾಸ್ತ್ರ, ನೇಪಥ್ಯ ವಿಭಾಗದ ತರಗತಿಗಳು.
ಪ್ರಾಕ್ಟಿಕಲ್ಸ್– ದೇಹ ಭಾಷೆ, ಧ್ವನಿ, ರಸಾಭಿಜ್ಞ, ಅಭಿನಯ ಅಭ್ಯಾಸ, ನಾಟಕಗಳ ಓದು, ಪಾತ್ರಗಳ ಅಭ್ಯಾಸ
ಇವಲ್ಲದೇ – ಪ್ರತಿ ವರುಷ ಒಬ್ಬ ನಾಟಕಕಾರನನ್ನು ಕೇಂದ್ರೀಕರಿಸಿ ಏಕಾಂಕ ನಾಟಕ ಚಕ್ರ. ಅಭಿನಯ, ನಿರ್ದೇಶನ, ನೇಪಥ್ಯ ಕೆಲಸಗಳ ಪ್ರಾಕ್ಟಿಕಲ್ ಚಟುವಟಿಕೆಗಳ ಜೊತೆಯಲ್ಲಿ ನಾಟಕ ಹಾಗೂ ಚಲನಚಿತ್ರ ವೀಕ್ಷಣೆ, ಪರಿಣತರಿಂದ ಮಾಸ್ಟರ್ ತರಗತಿಗಳು, ಸಂಗೀತ, ನೃತ್ಯ ಅಭ್ಯಾಸ ಮಾಡಿಸಲಾಗುತ್ತೆ.
ಕೊನೆಗೆ ಘಟಿಕೋತ್ಸವ ಪ್ರಸ್ತುತಿ ಮತ್ತು ಘಟಿಕೋತ್ಸವ ಏರ್ಪಡಿಸಲಾಗಿದೆ.
ಮಹತ್ವದ ವಿಚಾರವೆಂದರೆ ಇಡೀ ಡಿಪ್ಲೊಮ ತರಗತಿ ಸಂಪೂರ್ಣ ಉಚಿತ. ಆದರೆ ಇಲ್ಲಿಗೆ ಸೇರುವ ವಿದ್ಯಾರ್ಥಿಗಳು ವೇದಿಕೆ ಸಂಸ್ಥೆಗೆ ನೀಡುವುದು ತಮ್ಮ ಶ್ರದ್ಧೆ, ಏಕಾಗ್ರತೆ ಮಾತ್ರ.
ರಂಗ ವಿದ್ಯಾರ್ಥಿಗಳ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳ ಘಟಿಕೋತ್ಸವದ ಕಾರ್ಯಕ್ರಮ. ಈ ದಿನದಂದು ನಾಟಕ ಕಲೆಯ ಡಿಪ್ಲೋಮ ಪಡೆದು ತಮ್ಮ ರಂಗ ಪಯಣ ಆರಂಭಿಸುತ್ತಿದ್ದಾರೆ ಎನ್ನುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಅದರ ಪ್ರಯುಕ್ತ ಈ “ನಂಕಂಪ್ನಿ” ನಾಟಕ ಪ್ರದರ್ಶನ.
ಟಿ. ಪಿ. ಕೈಲಾಸಂ ಅವರ ರಚನೆಯ ನಾಟಕ “ನಂಕಂಪ್ನಿ”
ದಿನಾಂಕ: 13 ಮತ್ತು 14 [ಶನಿವಾರ – ಭಾನುವಾರ] ಆಗಸ್ಟ್ 2022
ಸಮಯ: ಸಂಜೆ 7ಕ್ಕೆ
ಸ್ಥಳ: ಪ್ರಭಾತ್ ಕೆ ಎಚ್ ಕಲಾಸೌಧ, ಹನುಮಂತನಗರ. ಬೆಂಗಳೂರು.
ಟಿಕೆಟ್ ದರ ರೂ 200. ವಿವರಗಳಿಗೆ 9845805442
ತುಂಕೂರ್ ಸಂಕೇತ್