ನಂದನವನದ ಪಕ್ಷಿಗಳು – Birds of Paradise
ಪಕ್ಷಿಗಳಿಗೆ ಗರಿಗಳು ಮುಖ್ಯವಾಗಿ ಮೂರು ಉದ್ದೇಶಗಳಿಗೋಸ್ಕರ ಇರುತ್ತವೆ. ಹಾರಾಟ, ರಕ್ಷಣೆ ಮತ್ತು ಆಕರ್ಷಣೆ.
ಪಕ್ಷಿ ಲೋಕದಲ್ಲಿ ಸ್ವರ್ಗಲೋಕದ ಹಕ್ಕಿಗಳು ಅಥವಾ ನಂದನವನದ ಹಕ್ಕಿಗಳೆಂದೇ ಸುಪ್ರಸಿದ್ದವಾಗಿರುವ ಪಪುವಾ ನ್ಯುಗಿನಿಯಾದ “ಪ್ಯಾರಾಡೈಸೀಈಡೇ” ಕುಟುಂಬಕ್ಕೆ ಸೇರಿದ ಈ ಪಕ್ಷಿಗಳು ಪಕ್ಷಿ ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಣೀಯ ರೆಕ್ಕೆ ಗರಿಗಳನ್ನ ಹೊಂದಿವೆ. ಈ ಪಕ್ಷಿಗಳು ವಿಶೇಷವಾಗಿ ಇಂಡೋನೇಷ್ಯಾ , ಆಸ್ಟ್ರೇಲಿಯಾ ಮತ್ತು ಪಪುವಾ ನ್ಯುಗಿನಿಯಾ ದೇಶಗಳ ಅರಣ್ಯಪ್ರದೇಶಗಳಲ್ಲಿ ಕಂಡುಬರುತ್ತವೆ.
4.7 ರಿಂದ 39 ಇಂಚುಗಳವರೆಗೆ ಗಾತ್ರದಲ್ಲಿರುವ ಈ ಪಕ್ಷಿಗಳು ಹಣ್ಣು ಹುಳಹುಪ್ಪಟೆಗಳನ್ನ ತಿಂದು ಬದುಕುತ್ತವೆ. ಇದುವರೆಗೂ ಇವುಗಳಲ್ಲಿ 42 ಕ್ಕಿಂತಲೂ ಹೆಚ್ಚಿನ ಪ್ರಭೇದಗಳನ್ನ ಗುರುತಿಸಲಾಗಿದೆ. ಗಂಡು ಪಕ್ಷಿಯು ಹೆಣ್ಣು ಪಕ್ಷಿಯನ್ನ ಆಕರ್ಷಿಸಲು ವಿದ ವಿದವಾದ ಸಾಹಸ ಮಾಡುತ್ತದೆಯಲ್ಲದೇ ಗೂಡಿನ ಸುತ್ತಲಿನ ಪ್ರದೇಶದಲ್ಲಿ ಬಿದ್ದಿರಬಹುದಾದ ಒಣಗಿದ ಎಲೆ ಇನ್ನಿತರೆ ಕಸಕಡ್ಡಿಗಳನ್ನ ತನ್ನ ಚುಂಚದಿಂದ ತೆಗೆದು ದೂರ ಸಾಗಿಸಿ ಸ್ವಚ್ಚಗೊಳಿಸುತ್ತದೆ. ಸ್ವಚ್ಚ ಗೂಡಿಗೆ ಹೆಣ್ಣು ಪಕ್ಷಿಯ ಮೊದಲ ಆಧ್ಯತೆಯಾಗಿರುತ್ತದೆ. ಹೆಣ್ಣು ಪಕ್ಷಿಯ ಮುಂದೆ ಸುಂದರವಾದ ತನ್ನ ಗರಿಗಳನ್ನ ಪ್ರದರ್ಶಿಸಿ, ಇಂಪಾಗಿ ಕೂಗುತ್ತಾ ನೃತ್ಯಿಸುತ್ತಾ, ಪ್ರಣಯಕ್ಕೆ ಆಹ್ವಾನಿಸುತ್ತದೆ. ಆ ಸುಂದರ ದೃಶ್ಯಕ್ಕೆ ಮನಸೋತ ಹೆಣ್ಣುಪಕ್ಷಿ ಗಂಡು ಪಕ್ಷಿಯೊಂದಿಗೆ ಮಿಲನಗೈದು ತಮ್ಮ ಪ್ರಜಾತಿಯನ್ನ ಮುಂದುವರೆಸುವುದಕ್ಕೆ ಸಹಕರಿಸುತ್ತದೆ.
ಇವುಗಳ ಸೌಂದರ್ಯಕ್ಕೆ ಮಾರುಹೋದ ಪಕ್ಷಿ ತಜ್ಞರು ಈ ಪಕ್ಷಿಗಳನ್ನ ಸ್ವರ್ಗಲೋಕದ ಪಕ್ಷಿಗಳು ಅಥವಾ ನಂದನವನದ ಪಕ್ಷಿಗಳು ಎಂದೆಲ್ಲಾ ಕರೆಯುತ್ತಾರೆ .
ಮೃತ್ಯುಂಜಯ ನ.ರಾ