ನನ್ನಪ್ಪ

ನನ್ನಪ್ಪ

ಹರಿವ ನದಿಯಂತೆ
ಓಡುತ್ತಾ ಕಡಲ ಸೇರಿದ ನನ್ನಪ್ಪ
ಅಲೆಯ ರೂಪದಲಿ
ತೀರಕ್ಕೆ ಬಂದು
ಮತ್ತೆ ಕಡಲೊಡಲ ಸೇರುವ ಅಪ್ಪ
ಇಂದಿಗೂ ನಗುತ್ತಲೇ ಇದ್ದಾನೆ

ತಂಗಾಳಿ ಹೊತ್ತು ತರುವ
ಹಸಿರು ತುಂಬಿ ಉಸಿರು ಕೊಡುವ
ಬೆಟ್ಟದಂತ ಮರ ಉಯ್ಯಾಲೆ ಆಡುವಂತೆ
ಹೆಗಲ ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡು
ಮಹಾರಾಜನಂತೆ ಮಹಾನಗರ ಸುತ್ತಿಸಿದ್ದ ನನ್ನಪ್ಪ
ಇಂದಿಗೂ ನನ್ನ ಮಹಾನಾಯಕ

ಭಾರವಾಗದ ಮೋಡದಲ್ಲಿ
ಬಹುದೊಡ್ಡ ಬಂಡೆಯಂತೆ ತೇಲುವ
ನೀಲಾಕಾಶದ ನೀಲಿ ಕಡಲಲ್ಲಿ ನೆರಳಿಲ್ಲದೆ
ನೆತ್ತಿಯ ಮೇಲಿನ ಸುಡು ಬಿಸಿಲಿಗೆ
ತಂಪೆರೆಯಲು ಮಳೆಯಾಗಿ
ಮುಗಿಲಿಂದ ಇಳಿದು ಬರುವ ನನ್ನಪ್ಪ
ಇಂದಿಗೂ ಮೋಡದಲ್ಲಿಯೇ ಕುಳಿತು
ನನ್ನೆಡೆಗೆ ನೋಡುವ ದೂರ ದೃಷ್ಟಿಯ ಕನಸುಗಾರ

ಕಬ್ಬಿನಂತೆ ಗಟ್ಟಿಯಾಗಿ
ಕಚ್ಚಿದರೆ ನೋಯದೆ,ನೋಯಿಸದೆ
ನಮ್ಮನ್ನೆಲ್ಲ ಸಿಹಿ ಸಾಗರದಲ್ಲಿ ಮುಳುಗಿಸಿ
ತೇಲಿಸಿ ಕೈ ಹಿಡಿದೆತ್ತಿ
ಸಿಹಿ ಹಂಚಿದ ಬೆಲ್ಲದ ಪಾಕದಂತೆ
ಸಿಹಿಯ ಸಮುದ್ರ ನನ್ನಪ್ಪ

ಅಕ್ಕ ಹಾಕುವ
ಮನೆಯ ಬಾಗಿಲ ಮುಂದಿನ ರಂಗೋಲಿಯ
ರಂಗಿನಲ್ಲಿ ನಿತ್ಯವೂ ನಮಗಾಗಿ
ಹೊಸ ಬೆಳಗು ತಂದು
ಬಾಗಿಲಿಗೆ ನಿಲ್ಲಿಸಿ
ನವೋದಯದ ನಾವಿಕ ನನ್ನಪ್ಪ

ಹನಮಂತ ಸೋಮನಕಟ್ಟಿ

Related post