ನನ್ನ ಅಪ್ಪ – ಕೆ ಎಸ್ ನ

ನನ್ನ ಅಪ್ಪ – ಕೆ ಎಸ್

ಕೃತಿ : ನನ್ನ ಅಪ್ಪ – ಕೆ ಎಸ್ ನ
ಲೇಖಕರು:ಕೆ ಎನ್ ಮಹಾಬಲ
ಪ್ರಕಾಶಕರು:ಬಹುರೂಪಿ
ಬೆಲೆ: 200/-

ಕವಿಯ ಮನ ತಿಳಿಯಲು ಆತ್ಮಚರಿತ್ರೆಯನ್ನೋ ಅಥವಾ ಕುರಿತಾದ ಕೃತಿಗಳನ್ನೋ ಓದಬೇಕು. ಆದರೂ ಸಂಪೂರ್ಣವಾದ ವಿವರಗಳನ್ನು ತಿಳಿಯಬೇಕೆಂದರೆ ಕವಿಯ ಅತ್ಯಂತ ಹತ್ತಿರದವರು ಅದನ್ನು ಬರೆದಿರಬೇಕು.

ಪ್ರಸ್ತುತ ಪುಸ್ತಕ “ನನ್ನ ಅಪ್ಪ -ಕೆ ಎಸ್ ನ” ಅಂತಹ ಪುಸ್ತಕಗಳಲ್ಲಿ ಒಂದು. ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹಸ್ವಾಮಿಯವರ ಬಗ್ಗೆ ಗೊತ್ತಿಲ್ಲದ ಕನ್ನಡಿಗರು ಕಡಿಮೆ ಎಂದೇ ಹೇಳಬೇಕು.

ಕವಿ ಕೆ ಎಸ್ ನರಸಿಂಹಸ್ವಾಮಿಯವರ ಅವರ ಪುತ್ರ ಕೆ ಎನ್ ಮಹಾಬಲ ಅವರು ನಿವೃತ್ತ ಬ್ಯಾಂಕ್ ಅಧಿಕಾರಿ. ಸಾಹಿತಿಗಳೂ ಆದ ಶ್ರೀಯುತರು, ತಮ್ಮ ತಂದೆಯವರ ಒಡನಾಟ, ನೆನಪುಗಳನ್ನು ಅತ್ಯಂತ ಸೊಗಸಾಗಿ ಈ ಕೃತಿಯಲ್ಲಿ ನೀಡಿದ್ದಾರೆ.

ಒಬ್ಬ ಕವಿಯ ಬದುಕಿನ ಏರಿಳಿತಗಳು, ಸಂತಸ ಸಂಭ್ರಮ; ನೋವು ನಲಿವುಗಳನ್ನು ತಮ್ಮದೇ ಆದ ಶೈಲಿಯಲ್ಲಿ ದಾಖಲಿಸಿದ್ದಾರೆ ಶ್ರೀಯುತ ಕೆ ಎನ್ ಮಹಾಬಲ. ಓದುಗರಿಗೆ ಗೊತ್ತಿಲ್ಲದ ಕೆ ಎಸ್ ನರಸಿಂಹಸ್ವಾಮಿಯವರ ಹಲವಾರು ಸಂಗತಿಗಳು ಇಲ್ಲಿ ದಾಖಲಾಗಿವೆ. ಕೃತಿಯನ್ನು ಓದುತ್ತಾ ಹೋದಂತೆಲ್ಲಾ, ಆತ್ಮೀಯರೊಬ್ಬರು ನಮ್ಮೊಡನೆ ಆಪ್ತತೆಯಿಂದ ಮಾತನಾಡುತ್ತಿರುವಂತೆ ಭಾಸವಾಗುತ್ತದೆ.

ಇದೊಂದು ಸ್ವಾನುಭವದ ಲೇಖನಗಳ ಗುಚ್ಛ. ಇರುವುದನ್ನು ಇದ್ದ ಹಾಗೆಯೇ ಹೇಳುವ ನೂರಾರು ಸಂಗತಿಗಳ ನೆನಪಿನ ಪಯಣ. ನಾವೂ ಲೇಖಕರ ಜೊತೆಗೆ ಕಾಲಯಾನ ಮಾಡುತ್ತಿದ್ದೇವೆ ಎಂದು ಅನಿಸುವ, ನಾವೂ ಈ ಕಾಲಘಟ್ಟದಲ್ಲಿ ಇದ್ದವರೆಂದು ಅನುಭೂತಿಸುವ ಓದಿಗೆ ನಾವು ಸಾಕ್ಷೀಭೂತರಾಗುತ್ತೇವೆ. ಓದುಗನಿಗೆ ಬೇಸರವಾಗದ ಆತ್ಮೀಯತೆ, ವಿಷಯಗಳ ಸರಳತೆ, ಲೇಖಕರ ವಿನಮ್ರತೆ ಇಲ್ಲಿ ನಮಗೆ ಯಥೇಚ್ಛವಾಗಿ ಸಿಗುತ್ತದೆ.

ಕೆ ಎಸ್ ನರಸಿಂಹಸ್ವಾಮಿಯವರ ಬದುಕಿನ ಅನುಭವಗಳು, ಅವರ ವಿಚಾರಧಾರೆ, ಅವರನ್ನು ಪ್ರೋತ್ಸಾಹಿಸಿದ ಮೇರು ವ್ಯಕ್ತಿಗಳು ಎಲ್ಲವನ್ನೂ ಹೇಳುತ್ತಾ ಹೋಗುವ ಲೇಖಕರು, ತಾವು ಕಂಡ ತಮ್ಮ ತಂದೆಯವರ ಬದುಕಿನ ವಿವಿಧ ಮಜಲುಗಳನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ಅಡಿಗರು, ಪು ತಿ ನ, ನಿಸಾರ್ ಅಹಮದ್ ಜೊತೆಗಿನ ಒಡನಾಟ; ಪ್ರೊ. ಜಿ ವೆಂಕಟಸುಬ್ಬಯ್ಯನವರು ಎರಡನೆಯ ಕವನ ಸಂಕಲನ ತರಲು ಪ್ರೋತ್ಸಾಹ ನೀಡಿದ್ದು, ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ನಿವೇಶನ ಪಡೆದುಕೊಳ್ಳಲು ಸಹಕರಿಸಿದ್ದು ಎಲ್ಲವನ್ನೂ ಹೇಳುವಾಗ ಬದುಕಿನ ವಿಸ್ತಾರದ ಅರಿವಾಗುತ್ತದೆ.

ಪ್ರಬುದ್ಧ ಕರ್ನಾಟಕದಂತಹ ಪತ್ರಿಕೆಗಳು ಕೆ ಎಸ್ ನರಸಿಂಹಸ್ವಾಮಿಯವರ ಕವನಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದರೆ, ತೀನಂಶ್ರೀ, ವಿ.ಸೀ, ಕುವೆಂಪು, ವೆಂಕಣ್ಣಯ್ಯನವರ ಮಾರ್ಗದರ್ಶನದಲ್ಲಿ ಅವರ ಕಾವ್ಯ ಬೆಳೆಯುತ್ತದೆ.

ಇಷ್ಟೆಲ್ಲಾ ಹೇಳುವಾಗ ಲೇಖಕರು ತಮ್ಮ ತಂದೆಯವರ ಕವನಗಳನ್ನು ಅಕ್ಷರ ರೂಪಕ್ಕೆ ಇಳಿಸಿದ ಶ್ರೀ ಎಂ.ವಿ ವೆಂಕಟೇಶಮೂರ್ತಿ ಅವರನ್ನು ಮರೆಯದೇ ನೆನೆಯುತ್ತಾರೆ.

ಮಲ್ಲಿಗೆಯ ಕವಿಯ ಕುರಿತಾದ ಕುತೂಹಲಕರ ಓದಿಗೆ ತೆರೆದ ಬಾಗಿಲು ಈ ಕೃತಿ “ನನ್ನ ಅಪ್ಪ ಕೆ ಎಸ್ ನ”. ಇಂತಹ ಅಪರೂಪದ ಕೃತಿಯನ್ನು ನಮಗೆ ನೀಡಿದ ಲೇಖಕ ಶ್ರೀ ಕೆ ಎನ್ ಮಹಾಬಲ ಅವರಿಗೆ ನಮ್ಮ ನಮನಗಳು.

ಸುನೀಲ್ ಹಳೆಯೂರು

Related post