ನಮ್ಮಮ್ಮ ಕಾವೇರಿ
ಕಾವೇರಿ !! ಅಂದರೆ ಅವಳು ಬರೀ ನೀರಿನ ಹನಿಯಲ್ಲ ಸಿಹಿಯಾದ ಜೇನು. ಕನ್ನಡಿಗರ ಹೆಮ್ಮೆಯ ಮನೆ ಮಗಳು. ಇನ್ನೂ ಕೆಲ ಕವಿಗಳು ಅವಳಿಗೆ ಪೂಜ್ಯ ಸ್ಥಾನ ಕೊಟ್ಟು ತೀರ್ಥವೆಂದೆನ್ನುತ್ತಾರೆ. ಅವಳ ವರ್ಣನೆ ಮಾಡದ ಕವಿಗಳಿಲ್ಲ. ಅವಳಿಗೂ ಕವಿಗಳಿಗೂ ಅಗಾಧ ಅನುಬಂಧವಾದರೂ, ಅವಳ ಅಂದ ವರ್ಣನೆಗೂ ಮೀರಿದ್ದು. ಅವಳಿಂದಲೇ ಭೂತಾಯಿ ಮಡಿಲು ಹಚ್ಚ ಹಸಿರು, ಈ ಇಳೆಗೆ ಬೆಳೆ, ಕಳೆ ಎಲ್ಲವೂ. ನಿತ್ಯವೂ ನೋಡುಗರಿಗೆ ನೂತನ, ಚೇತನ ಮನೋಹರವಾಗಿದ್ದಾಳೆ ಈ ಕಾವೇರಿ.
ವಿಷ್ಣುವರ್ಧನ್ ಅಭಿನಯದ ‘ಜೀವನದಿ’ ಚಿತ್ರದಲ್ಲಿ ಆರ್.ಎನ್. ಜಯಗೋಪಾಲ್ ಬರೆದಿರುವ ”ಕನ್ನಡ ನಾಡಿನ ಜೀವನದಿ” ಈ ಗೀತೆ ಪ್ರತೀ ಸಲ ಕೇಳಿದಾಗ ಕನ್ನಡಿಗರ ಮನ ಹೆಮ್ಮೆಯಿಂದ ಬೀಗುವುದು. ಇಂತಹ ಎಷ್ಟೋ ಗೀತೆಯನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು. ಶರಪಂಜರ ಚಿತ್ರದಲ್ಲಿ ‘ಕೊಡಗಿನ ಕಾವೇರಿ’ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ರಚನೆಯಲ್ಲಿ, ನಾಯಕ ನಾಯಕಿಯರ ಪ್ರೀತಿಯ ಸಂಕೇತದ ಸಾಕ್ಷಿಯಾಗಿ ಗೀತೆಯ ತುಂಬೆಲ್ಲಾ ಮೈದುಂಬಿ ಹರಿದಿದ್ದಾಳೆ ನಮ್ಮ ಕಾವೇರಿ.
ಕಾವೇರಿ ಹೆಸರು ಕೇಳಿದೊಡನೆ ಮೊದಲು ಕಲ್ಪಿಸಿಕೊಳ್ಳುವುದು, ಒಂದು ಹೆಣ್ಣಿನ ಚಿತ್ರಣವನ್ನು, ರೇಷಿಮೆ ಸೀರೆಯುಟ್ಟು, ಮಲ್ಲಿಗೆ ಹೂ ಮುಡಿದು, ಕಾಸಗಲ ಕುಂಕುಮ ಇಟ್ಟ, ಅಪ್ಪಟ ಭಾರತೀಯ ಹೆಣ್ಣು. ಮನೆ ಮನೆಯ ದೀಪ ಬೆಳಗುವ ಅಚ್ಚ ಕನ್ನಡತಿ. ಅದಕ್ಕೇ ಇರಬೇಕು!! ಅನೇಕ ನದಿಗಳ ಹೆಸರು ಹೆಣ್ಣಿನದ್ದೇ ಆಗಿದೆ. ಹೆಣ್ಣಿಲ್ಲದೆ ಬದುಕಿಲ್ಲ. ಹಸಿವಾದಾಗ ಅನ್ನವಿಕ್ಕಲು, ಬಾಯಾರಿಕೆಯಾದಾಗ ನೀರು ಕೂಡಲು, ಅಷ್ಟೇ ಏಕೆ ಜೀವನದಲ್ಲಿ ಸೋತಾಗ ಧೈರ್ಯ ತುಂಬಿ ಮುನ್ನಡೆಸಲು, ತಾನು ತನ್ನನ್ನೇ ಸಮರ್ಪಿಸಿ ಕೊಳ್ಳುವವಳು ಹೆಣ್ಣು. ಅವಳು ಕರುಣೆ, ತಾಳ್ಮೆ, ಹಾಗೂ ಪ್ರೀತಿಯ ಸಂಕೇತ. ಹುಟ್ಟುವ ಮನೆ ಒಂದಾದರೆ, ಬಾಳುವ ಮನೆ ಇನ್ನೊಂದೆಡೆ, ಪರರ ಸಂತೋಷದಲ್ಲೇ ತೃಪ್ತಿ ಕಾಣುವ ಜೀವ, ಅವಳು ಎಂದರೆ ಸರ್ವಸ್ವ. ಅವಳಂತೆಯೇ ಪ್ರೀತಿ ಸ್ನೇಹದ ಜೀವನಾಡಿಯಾದ ನಮ್ಮೆಲ್ಲರ ಕಾವೇರಿ ಅನೇಕಾನೇಕ ಜೀವ ಸಂಕುಲಗಳಿಗೆ ಜೀವ ಕೊಟ್ಟಿದ್ದಾಳೆ.
ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದ ಬ್ರಹ್ಮಗಿರಿ ಬೆಟ್ಟದಲ್ಲಿ ತಲಕಾವೇರಿ ಎಂಬ ಸ್ಥಳದಲ್ಲಿ, ಹುಟ್ಟಿ ಅಲ್ಲಿಂದ ಪೂರ್ವಭಿಮುಖವಾಗಿ ಬಂಗಾಳಕೊಲ್ಲಿ ಸೇರುವಳು. ತಲಕಾವೇರಿಯು ಸಮುದ್ರ ಮಟ್ಟದಿಂದ ಸುಮಾರು 1276 ಮೀಟರ್ ಎತ್ತರದಲ್ಲಿದೆ. ಕಾವೇರಿಯ ಉಗಮ ಸ್ಥಾನದಲ್ಲಿ ದೇವಾಲಯವಿದ್ದು, ಕಾವೇರಮ್ಮ ಹಾಗೂ ಅಗಸ್ತ್ಯೇಶ್ವರನ ಪೂಜೆಗಳು ನಿರಂತರ ನಡೆಯುತ್ತಿರುತ್ತದೆ. ಅಕ್ಟೋಬರ್ ಸಮಯದಲ್ಲಿ ಉಕ್ಕುವ ನೀರಿನ ಬುಗ್ಗೆಯನ್ನು ನೋಡಲು ವರ್ಷ ವರ್ಷವೂ ಸಾವಿರಾರು ಭಕ್ತರು ಸಾಲು ಸಾಲು ಬರುವರು. ಬಹುಭಕ್ತರ ಆಕರ್ಷಣೆಯ ಕೇಂದ್ರಬಿಂದು ನಮ್ಮ ಕರುನಾಡ ಕುವರಿ ಕಾವೇರಿ.
ಅಲ್ಲಿಂದ ಹುಟ್ಟಿ ಮುಂದೆ ಸಣ್ಣ ಸಣ್ಣ ಝರಿಗಳ ಜೊತೆಗೂಡಿ ನದಿಯಾಗಿ ಹರಿಯುವಳು. ಮುಂದೆ ಮಂಡ್ಯ, ಮೈಸೂರಿನ ಕೃಷ್ಣರಾಜ ಸಾಗರದ ಮೂಲಕ ಉಪ ನದಿಗಳಾದ ಹೇಮಾವತಿ, ಕಪಿಲ, ಲಕ್ಷ್ಮಣ ತೀರ್ಥ, ಅರ್ಕಾವತಿ, ಹಾಗೂ ಹಾರಂಗಿಯ ಜೊತೆಗೂಡಿ, ತಮಿಳುನಾಡಿನತ್ತ ಹರಿಯುವಳು. ಕರ್ನಾಟಕ ಹಾಗೂ ತಮಿಳುನಾಡಿನಾಧ್ಯಾಂತ 765 ಕಿಲೋ ಮೀಟರ್ ಉದ್ದದ ಹರಿವು ಹೊಂದಿದ್ದಾಳೆ. ಇಷ್ಟಕ್ಕೂ ಕಾವೇರಿಗೆ ಏಕೆ ಅಷ್ಟು ಪ್ರಾಮುಖ್ಯತೆ ಮತ್ತು ಬೇಡಿಕೆ ಎಂದರೆ, ಕರ್ನಾಟಕದಲ್ಲಿ ಎಷ್ಟೋ ನದಿಗಳಿದ್ದರೂ, ಕುಡಿಯಲು ಯೋಗ್ಯವಾದದ್ದು ಮಾತ್ರ ಕಾವೇರಿಯೆ. ಅನೇಕ ಕಲುಷಿತ ನದಿಗಳ ಮಧ್ಯೆಯೂ ಅವಳು ಅಂದಿನಿಂದ ಇಂದಿನವರೆಗೂ ಶುದ್ಧವಾಗಿ ಹರಿಯುತ್ತಿದ್ದಾಳೆ. ಅದರಲ್ಲೂ ಮಳೆಗಾಲದಲ್ಲಿ ಅವಳ ಸೌಂದರ್ಯಕ್ಕೆ ಅವಳೇ ಸಾಟಿ. ಧುಮ್ಮಿಕ್ಕಿದಾಗೊಮ್ಮೆಎದೆ ಝಲ್ ಎನ್ನದೆ ಇರದು. ತನ್ನ ಒಡಲಲ್ಲಿ ಆನೆಯ ಕೌತುಕ ವಿಸ್ಮಯಗಳನ್ನು ಅಡಗಿಸಿದ್ದಾಳೆ.
ನೀರಿನ ಹಂಚಿಕೆ ವಿಷಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಿವಾದವೂ ಶತಶತಮಾನದಿಂದಲೂ ಬಗೆಹರೆಯದ ಘರ್ಷಣೆಯಾಗೆಯೇ ಉಳಿದಿದೆ. ಮುಂಗಾರು ಮುನ್ನ ಅನುಭವಿಸುವ ನೀರಿನ ಗಂಭೀರ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ. ಇದಕ್ಕೆ ಪರಿಹಾರವೇನು,,? ಕಾದು ನೋಡಬೇಕಿದೆ. ಮುಂದಿನ ಪೀಳಿಗೆಗೂ ಜೀವ ಜಲವನ್ನು ರಕ್ಷಿಸುವ ಶಿಕ್ಷಣ ಕೊಡುವುದು ಅನಿವಾರ್ಯವಾಗಿದೆ. ನೀರನ್ನು ಕಾಪಾಡುವ ಹೊಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಷ್ಟು ಮಾಡಿದಲ್ಲಿ ಸ್ವಲ್ಪ ಮಟ್ಟಿಗೆ ಮುಂದಾಗುವ ಅನಾನುಕೂಲತೆಯನ್ನು ತಡೆಯಬಹುದು.
ಶೈಲಾ
ಬೆಂಗಳೂರು