ನಮ್ ಕಂಪನಿ – ಹಾಸ್ಯ ನಾಟಕ ಅಶ್ವಥ್ ಕಲಾಭವನದಲ್ಲಿ

ನಮ್ ಕಂಪನಿ – ಹಾಸ್ಯ ನಾಟಕ ಅಶ್ವಥ್ ಕಲಾಭವನದಲ್ಲಿ

“ವೇದಿಕೆ ಫೌಂಡೇಷನ್” ಕನ್ನಡ ರಂಗಭೂಮಿಗೆ ಹಲವಾರು ಉತ್ತಮ ನಾಟಕಗಳನ್ನು ಕೊಟ್ಟಿದೆ. ಈಗ ಇದೇ ತಂಡವು ಟಿ ಪಿ ಕೈಲಾಸಂ ಅವರ “ನಮ್ ಕಂಪನಿ” ಎಂಬ ಸಂಗೀತಮಯ ಹಾಸ್ಯ ನಾಟಕವನ್ನು ಅಶ್ವಥ್ ಕಲಾಭವನದಲ್ಲಿ ಇದೇ ಮಾರ್ಚ್ 21 ರ ಶನಿವಾರ ಸಂಜೆ 7ಕ್ಕೆ ಪ್ರದರ್ಶಿಸುತ್ತಿದೆ.

ಟಿ ಪಿ ಕೈಲಾಸಂ ಅವರ ಕಂಪನಿ ಶೈಲಿಯ ಸಂಗೀತಮಯ ಹಾಸ್ಯ ನಾಟಕ ಇದಾಗಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಈ ಸಂಗೀತಮಯ ನಾಟಕಕ್ಕೆ ಸಂಗೀತ ನೀಡಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಋತ್ವಿಕ್ ಸಿಂಹ ಮಾಡಿದ್ದಾರೆ. ಧ್ವನಿ, ವಸ್ತ್ರವಿನ್ಯಾಸ ಹಾಗೂ ನಿರ್ಮಾಣದ ಹೊಣೆಯನ್ನು ಜಸ್ಲೀನ್ ಋತ್ವಿಕ್ ಸಿಂಹ ನಿರ್ವಹಿಸಿದ್ದಾರೆ.

ಇಲ್ಲಿನ ಕಥಹಂದರವೂ ವಿಭಿನ್ನವಾಗಿದ್ದು ಹಾಸ್ಯಕ್ಕೆ ಹೆಚ್ಚಿನ ಅವಕಾಶವಿದೆ. ನಾಟಕ ತಂಡವೊಂದು ಕಂಪನಿ ಶೈಲಿಯ ನಾಟಕ ಅಭಿನಯಿಸುವಾಗ ಘಟಿಸುವ ಆಭಾಸ ಹಾಗೂ ಎಡವಟ್ಟುಗಳಿಂದ ಕೂಡಿದ್ದು ಹಾಸ್ಯದ ಹೊಳೆ ಹರಿಸುತ್ತದೆ. ಇಲ್ಲಿ ರಾಜ, ರಾಣಿ, ಸಖಿಯರು, ಸಭಿಕರು ಎಲ್ಲರೂ ಹಾಡು ನರ್ತನದಲ್ಲಿ ಮುಳುಗಿರುವಾಗ ಸಾಧುವೊಬ್ಬನ ಆಗಮನವಾಗುತ್ತದೆ. ಆಗ ಸಭೆಯೆಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ನಂತರ ರಾಜ ಕಾಡಿನ ಪಾಲಾಗುತ್ತಾನೆ. ಹೀಗೆ ಹಲವು ತಿರುವುಗಳಿವೆ. ಆ ರಾಜನ ಕುಲಮಾತೆ “ಶೂರ್ಪನಖಿ” ಕಾಪಾಡುವಳೆ? ರಾಜ್ಯವು ಮರಳಿ ಸೌಖ್ಯವಾಗಿರುವುದೆ? ಎಂಬೆಲ್ಲಾ ಪ್ರಶ್ನಗಳಿಗೆ ಉತ್ತರವೂ ಸಿಗಲಿದೆ. ಕೈಲಾಸಂ ಅವರ ವೈವಿಧ್ಯಮಯ ಸಂಭಾಷಣೆಗಳು, ಹಾಡು, ಅದಕ್ಕೊಪ್ಪುವ ನರ್ತನಗಳು ಇಲ್ಲಿವೆ. ಕೈಲಾಸಂ ಅವರ ಕೃತಿಯಲ್ಲಿನ ಹಾಸ್ಯವು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸಿ ರಂಜಿಸಲಿದೆ.

ವೇದಿಕೆ ಫೌಂಡೇಷನ್ 1983 ರಲ್ಲಿ ಆರಂಭವಾದ ರಂಗಸಂಸ್ಥೆ. ನಟ ಸಾಮ್ರಾಟ್ ಎನಿಸಿಕೊಂಡಂತಹ ಸಿ ಆರ್ ಸಿಂಹ ಹಾಗೂ ಶಾರದ ಸಿಂಹ ಆರಂಭಿಸಿದ ರಂಗತಂಡ. ಈ 43 ವರುಷಗಳಲ್ಲಿ 35 ಪ್ರಮುಖ ಪ್ರಯೋಗಗಳ 3000 ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಪಾಲ್ಗೊಂಡು ಕನ್ನಡದ ಹಿರಿಮೆಯನ್ನು ಎಲ್ಲೆಲ್ಲೂ ಸಾರಿದೆ.

ಸಿ ಆರ್ ಸಿಂಹ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟ ಟಿಪಿಕಲ್ ಟಿ ಪಿ ಕೈಲಾಸಂ ಮತ್ತು ರಸಋಷಿ ಕುವೆಂಪು ನಾಟಕಗಳನ್ನು ಕನ್ನಡ ರಂಗಭೂಮಿ ಹೇಗೆ ತಾನೇ ಮರೆಯಲು ಸಾಧ್ಯ. ಇವಲ್ಲದೇ ಮ್ಯಾಕ್ ಬೇಥ್, ಡ್ರೀಮ್, 8/15, ಬಹದ್ದೂರ್ ಗಂಡ, ಭೈರವಿ ಹೀಗೆ ಹಲವು ಪ್ರಮುಖ ಪ್ರಯೋಗಗಳು “ವೇದಿಕೆ” ಯಿಂದ ಹೊರಬಂದಿವೆ. 2020 ರಿಂದ “ವೇದಿಕೆ ನಾಟಕ ಶಾಲೆ” ಎಂಬ ಸಂಸ್ಥೆಯ ಮೂಲಕ ಉಚಿತ ರಂಗ ಶಿಕ್ಷಣ ನೀಡುತ್ತಿದೆ ಎಂಬುದು ಕೂಡ “ವೇದಿಕೆ” ಯ ಹೆಗ್ಗುರುತಾಗಿದೆ.

“ನಮ್ ಕಂಪನಿ” ಟಿಪಿ ಕೈಲಾಸಂ ಅವರ “ಕಂಪನಿ ಶೈಲಿಯ ಸಂಗೀತಮಯ ಹಾಸ್ಯ ನಾಟಕ”
ಮಾರ್ಚ್ 21, ಶನಿವಾರ, ಸಂಜೆ 7.00 ಗಂಟೆಗೆ
ಸಿ. ಅಶ್ವತ್ಥ ಕಲಾಭವನ, ಎನ್ ಆರ್ ಕಾಲೋನಿ, ಬೆಂಗಳೂರು.

ವಿನ್ಯಾಸ / ನಿರ್ದೇಶನ – ಋತ್ವಿಕ್ ಸಿಂಹ
ಸಂಗೀತ – ವಿ ಮನೋಹರ್
ಧ್ವನಿ, ವಸ್ತ್ರ ವಿನ್ಯಾಸ ಮತ್ತು ನಿರ್ಮಾಣ – ಜಸ್ಲೀನ್ ಋತ್ವಿಕ್ ಸಿಂಹ.

ತುಂಕೂರ್ ಸಂಕೇತ್

Related post