ನವಿಲೇನೋ ಕುಣಿಬೇಕು
‘ಮುಗಿಲನು ಮುದ್ದಿಡೆ ನೆಲದ ಬೆಳೆ
ಚಿಗಿವುದು, ಜಿಗಿವುದು ನೆಗೆವುದಿಳೆ;
ಚಿಕ್ಕೆ ಇರುಳು ಕುಣಿದಂತೆ ಕುಣೀ
ಕುಣಿ ಕುಣಿ ನವಿಲೇ ಕುಣೀ ಕುಣೀ’
– ಡಾ|| ದ ರಾ ಬೇಂದ್ರೆ
ಹಿರಿಯ ಕವಿ ಡಾ|| ದ ರಾ ಬೇಂದ್ರೆಯವರು ಹೇಳಿದಂತೆ ಮಳೆಗೆ ಇಳೆ, ಇಳೆಯಿಂದ ಹೊರಬಂದ ಬೆಳೆ ಅಷ್ಟೇ ಅಲ್ಲದೆ ತನ್ನ ಸುಂದರವಾದ ಗರಿ ಬಿಚ್ಚಿ ನಮ್ಮ ರಾಷ್ಟ್ರ ಪಕ್ಷಿ ನವಿಲು ಸಹ ಕುಣಿಯುತ್ತದೆ. ಗಂಡು ನವಿಲು ತನ್ನ ಆಕರ್ಷಕ ರೆಕ್ಕೆಯ ಗರಿಗಳನ್ನು ತೆರೆದು ಕುಣಿಯುವುದು ಮುಖ್ಯವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಿ ಪ್ರಣಯಕ್ಕೆ ಸೆಳೆಯಲು. ಒಮ್ಮೊಮ್ಮೆ ಮಳೆಯ ಮುನ್ಸೂಚನೆಯಾಗಿಯೂ ಸಹ ಇದರ ಗರಿಗಳು ತೆರೆಯುವುದು.
ನವಿಲುಗಳು “ಫಾಸಿಯಾನಿಡೆ” (Phasianidae) ಎಂಬ ಕುಟುಂಬಕ್ಕೆ ಸೇರಿದವು. ಗಂಡು ನವಿಲುಗಳನ್ನು “ಪೀಕಾಕ್” ( Peacock ), ಹೆಣ್ಣು ನವಿಲುಗಳನ್ನು “ಪೀಹೆನ್” ( Peahen ) ಮರಿಗಳನ್ನು “ಪೀಚಿಕ್” ( Peachick ) ಎಂಬ ಹೆಸರುಗಳಿಂದ ಗುರುತಿಸಿದರೂ ಗಂಡು ಮತ್ತು ಹೆಣ್ಣು ನವಿಲುಗಳೆರಡನ್ನೂ “ಪೀಫೌಲ್” (Peafowl) ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಗಂಡು ನವಿಲಿಗೆ ತನ್ನ ಗಾತ್ರದಷ್ಟೇ ಉದ್ದದ್ದ ಗರಿಗಳಿದ್ದು ಅದನ್ನೇ ಹೆಣ್ಣು ನವಿಲನ್ನು ಸೆಳೆಯಲು ಉಪಯೋಗಿಸುತ್ತವೆ. ಗಂಡು ಹಾಗು ಹೆಣ್ಣು ನವಿಲುಗಳೆರಡರ ತಲೆಗಳ ಮೇಲೆ ಕಿರೀಟದಂತಹ ಆಕರ್ಷಕವಾದ ಪುಕ್ಕಗಳಿರುತ್ತವೆ.
ಜಗತ್ತಿನಾದ್ಯಂತ ನವಿಲುಗಳನ್ನು ಮೂರು ಬಗೆಗಳಲ್ಲಿ ಗುರುತಿಸಲಾಗಿದೆ.
ಭಾರತೀಯ ನವಿಲು
ಭಾರತ ಹಾಗು ಶ್ರೀಲಂಕಾದಲ್ಲಿ ಕಾಣಸಿಗುವ ನವಿಲುಗಳನ್ನು ಭಾರತೀಯ ನವಿಲುಗಳು ಎಂದೇ ಕರೆಯಲಾಗುತ್ತದೆ. ಈ ಜಾತಿಯ ನವಿಲುಗಳು ಹೆಚ್ಚಾಗಿ ಭಾರತದಲ್ಲೇ ಇರುವುದರಿಂದ ಈ ಹೆಸರು ಬಂದಿರಬಹುದು! ನಮ್ಮಲ್ಲಿ ಕಾಣಸಿಗುವ ಈ ಜಾತಿಯ ನವಿಲುಗಳ ಮೈ ಗಾಡವಾದ ನೀಲಿ ಬಣ್ಣದಿಂದ ಕೂಡಿದ್ದು ಗರಿಗಳು ಮಾತ್ರ ತೆಳು ಹಸಿರು ಬಣ್ಣದಿಂದ ಕಣ್ಸೆಳೆಯುತ್ತವೆ. ಗಂಡು ಹಾಗು ಹೆಣ್ಣು ಎರಡೂ ಹಕ್ಕಿಗಳ ಗಾತ್ರ ಸುಮಾರು ಐದು ಅಡಿಗಳಷ್ಟು. ತೆರೆದ ತಗ್ಗು ಪ್ರದೇಶದ ಕಾಡುಗಳಲ್ಲಿ ವಾಸಿಸುವ ಇವು ಸಂತಾನವೃದ್ಧಿಯ ಸಮಯದಲ್ಲಿ ಎರಡರಿಂದ ಇದರವರೆಗೂ ಮೊಟ್ಟೆಗಳನಿಟ್ಟು ಮರಿಮಾಡುತ್ತವೆ. ಮೊಟ್ಟೆಗಳಿಂದ ಹೊರಬರುತ್ತಲೇ ಮರಿಗಳಿಗೆ ರೆಕ್ಕೆಗಳನ್ನು ಹೊಂದಿರುತ್ತವೆ ಹಾಗು ಒಂದು ವಾರದ ನಂತರ ಹಾರುವ ಸಾಮರ್ಥ್ಯವನ್ನು ಹೊಂದಿರುತ್ತವೆ. ನವಿಲು ನಮ್ಮ ಭಾರತೀಯ ಆಚಾರ ಪರಂಪರೆಯಲ್ಲಿ ತನ್ನ ಶ್ರೀಮಂತ ಧಾರ್ಮಿಕ ಹಾಗೂ ದಂತಕತೆಗಳಿಂದ ಗುರುತಿಸಿಕೊಂಡಿದ್ದರಿಂದ ‘ಭಾರತದ ರಾಷ್ಟ್ರೀಯ ಪಕ್ಷಿ’ ಎಂದು 1963 ರಲ್ಲಿ ನಮ್ಮ ಘನ ಸರ್ಕಾರ ಘೋಷಿಸಿದೆ.
ಹಸಿರು ನವಿಲು
ಏಷ್ಯಾ ಖಂಡದ ಇತರೆ ಪ್ರದೇಶಗಳಾದ ಚೀನಾ, ಬಾಂಗ್ಲಾದೇಶ, ಥೈಲ್ಯಾಂಡ್, ಬರ್ಮಾ (ಮ್ಯಾನ್ಮಾರ್), ದೇಶಗಳಲ್ಲಿ ಕಾಣಸಿಗುವ ನವಿಲುಗಳೆಂದರೆ “ಹಸಿರು ನವಿಲು”. ಗರಿಗಳನ್ನು ಸೇರಿಸಿ ಇಡೀ ಮೈ ತುಂಬಾ ಹಸಿರು ಬಣ್ಣವನ್ನೇ ಹೊಂದಿದ್ದರು ಕಣ್ಣಿನ ಕೆಳಭಾಗ ಹಾಗು ರೆಕ್ಕೆಗಳ ಮಧ್ಯದಲ್ಲಿ ನೀಲಿ ಬಣ್ಣದ ಚುಕ್ಕಿಗಳಿರುತ್ತವೆ. ಇವು ಗಾತ್ರದಲ್ಲಿ ನಮ್ಮ ಭಾರತೀಯ ನವಿಲುಗಳಿಗಿಂತ ತುಸು ಹೆಚ್ಚು, ನಮ್ಮ ಭಾರತದ ನವಿಲುಗಳಿಗಿಂತ ಗಲಾಟೆಯಲ್ಲಿ ಕಡಿಮೆ. ಇವುಗಳು ಕೂಡ ಭಾರತದ ನವಿಲಿನಂತೆ ನೆಲದಲ್ಲೇ ಗೂಡು ಕಟ್ಟಿ ಮೊಟ್ಟೆಗಳನ್ನು ಇಡುತ್ತವೆ. ಇದು ಬರ್ಮಾ ದೇಶದಲ್ಲಿ ರಾಷ್ಟ್ರ ಪಕ್ಷಿ ಎಂದೇ ಮಾನ್ಯತೆ ಪಡೆದಿದೆ.
ಕಾಂಗೊ ನವಿಲುಗಳು
ಆಕಾರದಲ್ಲಿ ಟರ್ಕಿ ಪಕ್ಷಿಯನ್ನೇ ಬಹುತೇಕ ಹೋಲುವ ಕಾಂಗೊ ನವಿಲುಗಳು ಆಫ್ರಿಕಾ ಖಂಡಗಳಲ್ಲಿ ಮುಖ್ಯವಾಗಿ ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಜೈರ್ ಹಾಗೂ ಕಾಂಗೋ ಜಲಾನಯನದ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇವುಗಳು ಹಸಿರು ನೇರಳೆ ಕಂದು ಸ್ವಲ್ಪ ಕಪ್ಪು ಈ ಎಲ್ಲಾ ಬಣ್ಣಗಳ ಮಿಶ್ರಣವಾಗಿರುತ್ತದೆ. ಆದರೆ ಇದರ ಗಾತ್ರ ಕೇವಲ ಮೂರರಿಂದ ಮೂರುವರೆ ಅಡಿ ಮಾತ್ರ. ಇದು ಕೂಡ ನಮ್ಮ ದೇಶದ ಹಾಗೆ, ಕಾಂಗೊ ದೇಶಕ್ಕೂ ರಾಷ್ಟ್ರ ಪಕ್ಷಿ. ಏಷ್ಯಾದ ನವಿಲುಗಳಸ್ಟು ಇವು ಆಕರ್ಷಕವಲ್ಲ ಮತ್ತು ಇವಕ್ಕೆ ದೊಡ್ಡ ಗಾತ್ರದ ಗರಿಗಳು ಇರುವುದಿಲ್ಲ.
ಈ ಮೂರರ ಹೊರತು ಅತಿ ಅಪರೂಪವಾದ ಬಿಳಿ ನವಿಲುಗಳಿವೆ. ಅವು ಭಾರತದ ನವಿಲುಗಳೇ ಆದರೆ ಅನುವಂಶಿಕ ವ್ಯತ್ಯಾಸದಿಂದ ಹುಟ್ಟಿರುವುದು. ರಾಜಸ್ತಾನದ ಭರತ್ಪುರ್ ವನ್ಯಧಾಮಗಳಲ್ಲಿವ ಇವನ್ನು ನೋಡಬಹುದಾಗಿದೆ.
ನವಿಲುಗಳು ಮಿಶ್ರಾಹಾರಿ ಹಾವು, ಕೀಟಗಳು, ಹಲ್ಲಿಗಳನ್ನು ಭಕ್ಷಿಸುವುದರ ಜೊತೆಗೆ ಗಿಡಮರಗಳಲ್ಲಿನ ಹಣ್ಣುಗಳು ಹಾಗು ಧಾನ್ಯಗಳನ್ನು ಸಹ ತಿನ್ನುತ್ತವೆ. ಧಾನ್ಯಗಳಿಗಾಗಿ ಹೊಲ ಗದ್ದೆಗಳಿಗೆ ದಾಳಿ ಇಡುವುದರಿಂದ ರೈತರ ವೈರಿಯೂ ಹೌದು.
ನಮ್ಮ ಭಾರತದಲ್ಲಿ ನವಿಲುಗಳ ಸಂತತಿ ಹೆಚ್ಚಿದೆ ಆದರೆ ಹಸಿರು ನವಿಲುಗಳು ಹಾಗು ಕಾಂಗೊ ನವಿಲುಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಇಳಿದಿರುವುದರಿಂದ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದವೆಂದು ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟವು (INCU) ತನ್ನ ಕೆಂಪು ಪಟ್ಟಿಯಲ್ಲಿ ಸೇರಿಸಿಕೊಂಡಿದೆ.
ನಮ್ಮ ಭಾರತದಲ್ಲಿ ಮನುಷ್ಯನನ್ನು ಕಂಡರೆ ನವಿಲುಗಳು ಹೆಚ್ಚಾಗಿ ಹೆದರುವುದಿಲ್ಲ”ನವಿಲುಗಳು ಹೆಚ್ಚಾಗಿ ಹೀಗೆ ಕಾಣಿಸಿಕೊಳ್ಳಲು ಮನುಷ್ಯರು ಸೃಷ್ಟಿಸಿಕೊಂಡಿರುವ ವಾತಾವರಣವೇ ಕಾರಣ. ಜೊತೆಗೆ ಕಾನೂನುಗಳು ಕೂಡಾ ಇದಕ್ಕೆ ಪೂರಕವಾಗಿವೆ. ಅದು ರಾಷ್ಟ್ರಪ್ರಾಣಿಯಾಗಿರುವ ಕಾರಣ ಯಾರೂ ಅವುಗಳನ್ನು ಮುಟ್ಟುವಂತಿಲ್ಲ ಬೇಟೆಯಾಡುವಂತಿಲ್ಲ. ಜೊತೆಗೆ ಮನುಷ್ಯನ ಬದುಕಿನ ಶೈಲಿ ಅವುಗಳು ಮನೆಗಳ ಸುತ್ತ ತೋಟಗಳಲ್ಲಿ ನಿರ್ಭಯವಾಗಿ ಇರಲು ಅನುಕೂಲವಾಗಿದೆ. ಆದರೆ ಇದು ತಾತ್ಕಾಲಿಕವಷ್ಟೇ! ಏಕೆಂದರೆ ಮನುಷ್ಯನ ಜೀವನದ ಜತೆ ಜೀವನ ಮಾಡಲು ಬರುವ ಪ್ರಾಣಿ ಪಕ್ಷಿಗಳು ಬಹಳ ಬೇಗ ಅವನತಿಯಾಗಿವೆ. ಇದಕ್ಕೆ ಉದಾಹರಣೆ ‘ಗುಬ್ಬಿಗಳು’ ಇದರ ಜೊತೆಗೆ ಜನರು ಕಾಡುಗಳನ್ನು ಕಡಿದು ಕೃಷಿಭೂಮಿಯನ್ನಾಗಿ ಮಾಡುತ್ತಿರುವುದು. ನವಿಲುಗಳು ಮನುಷ್ಯನಿಗೆ ಹತ್ತಿರವಾಗಲು ಮುಖ್ಯ ಕಾರಣಗಳು” ಎಂದು ವನ್ಯಜೀವಿ ತಜ್ಞ ಕೃಪಾಕರ್ ತಮ್ಮ ಅಭಿಪ್ರಾಯವನ್ನು ಕೊಟ್ಟಿದ್ದಾರೆ.
ಭಾರತದ ಪುರಾಣಗಳ ಪ್ರಕಾರ ನವಿಲು ಸುಬ್ರಮಣ್ಯ ಸ್ವಾಮಿಯ ವಾಹನ. ಶ್ರೀ ರಾಮಚಂದ್ರನು ಸೀತಾಪರಹಣದ ನಂತರ ಬರಿಗಾಲಿನಲ್ಲಿ ಸೀತೆಯನ್ನು ಕಾಡಿನ ತುಂಬಾ ಹುಡುಕುತ್ತಿದ್ದಾಗ ನವಿಲಿನ ರಾಜ ಇದನ್ನು ನೋಡಲಾರದೆ ತನ್ನ ಸಮೂಹಕ್ಕೆ ಕಲ್ಲುಮುಳ್ಳುಗಳನ್ನು ಹೆಕ್ಕಿ ತೆಗೆದು ದಾರಿ ಸುಗುಮವಾಗುವಂತೆ ಆಜ್ಞಾಪಿಸುತ್ತಾನೆ.ಇದರಿಂದ ಸಂತುಷ್ಟನಾದ ಶ್ರೀ ರಾಮನು ಬರುವ ದ್ವಾಪರಯುಗದಲ್ಲಿ ನಿಮ್ಮ ಗರಿಗಳನ್ನು ನಿತ್ಯ ಧರಿಸುತ್ತೇನೆಂದು ವರ ನೀಡುತ್ತಾನೆ. ಮುಂದಿನ ಅವತಾರದಲ್ಲಿ ಶ್ರೀ ಕೃಷ್ಣನು ತನ್ನ ಮುಕುಟದಲ್ಲಿ ನವಿಲು ಗರಿಯನ್ನು ನಿತ್ಯ ಧರಿಸುತ್ತಾನೆ.
ನಮ್ಮ ಮಕ್ಕಳ ಪುಸ್ತಕದಲ್ಲೂ ನವಿಲು ಗರಿಗೆ ಪೂಜ್ಯ ಹಾಗು ಭಾವನಾತ್ಮಕ ಸ್ಥಾನವಿದೆ. ಪುಸ್ತಕದಲ್ಲಿ ನವಿಲು ಗರಿಗಳನ್ನು ಇಟ್ಟರೆ ಸರಸ್ವತಿ ತಾಯಿ ಒಲಿಯುವಳೆಂದು ಹಾಗೂ ನವಿಲು ಗರಿ ಮರಿ ಹಾಕುತ್ತದೆಂದು ಮುಗ್ದ ನಂಬಿಕೆ ಆಗಲು ಇತ್ತು ಈಗ ಕೂಡ ಇರಬಹುದು.
ಚಂದ್ರಶೇಖರ್ ಕುಲಗಾಣ