ನವ ಯುಗದ ಆದಿ ಈ ಯುಗಾದಿ..!
ಯುಗಾದಿ ಎಂದರೆ ಮೊದಲು ನೆನಪಾಗುವುದು ಬೇವುಬೆಲ್ಲದ ಮಿಶ್ರಣ, ಜೊತೆಗೆ ವಸಂತಮಾಸದ ಚಿಗುರು. ಯುಗಾದಿ ಹಲವು ಆರಂಭಗಳಿಗೆ ಮುನ್ನುಡಿ. ಚೈತ್ರ ಶುದ್ಧ ಪಾಡ್ಯಮಿಯ ದಿನವೆ ಯುಗಾದಿ. ಋತುಗಳ ರಾಜ ವಸಂತಕಾಲ ಆರಂಭವಾಗುವ ಈ ದಿನದಿಂದ ಸೂರ್ಯ ಕೊಂಚ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವ ಕಾಲ. ಅಧಿಕೃತವಾಗಿ ಬೇಸಿಗೆಕಾಲ ಆರಂಭವಾಗುವ ದಿನ.
ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಪ್ರತೀವರ್ಷದ ಯುಗಾದಿಗೂ ಹಳತರ ಅಂತ್ಯ ಮತ್ತು ಹೊಸ ಸಂವತ್ಸರದ ಆರಂಭವಾಗುತ್ತದೆ. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಋತುಗಳಲ್ಲಿ ‘ವಸಂತಋತು ನಾನು’ ಎಂದು ಹೇಳಿಕೊಂಡಿದ್ದಾನೆ. ಅದಕ್ಕಾಗಿಯೇ ವಿಶೇಷ ಮಹತ್ವವಿದೆ ಈ ಋತುವಿಗೆ.

ಪ್ರಸ್ತುತ 39ನೇ ವಿಶ್ವಾವಸು ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಯುಗಾದಿಯಂದು ಸೂರ್ಯೋದಯದ ಸಮಯದಲ್ಲಿಯೇ ಬ್ರಹ್ಮದೇವ ಸೃಷ್ಟಿಯ ಕಾರ್ಯವನ್ನು ಆರಂಭಿಸಿದರು, ಕಾಲಗಣನೆ ಆರಂಭವಾದ ದಿನ ಮತ್ತು ನಾರಾಯಣನ ಏಳನೇ ಪ್ರಸಿದ್ಧ ಅವತಾರವಾದ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಟ್ಟಿಗೆ 14 ವರ್ಷಗಳ ವನವಾಸ ಮುಗಿಸಿ, ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಪಟ್ಟಾಭಿಷಿಕ್ತನಾದ ದಿನ, ಅಂದರೆ ರಾಮರಾಜ್ಯ ಆರಂಭವಾದ ದಿನವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ. ಯುಗಾದಿಯಾದ ಒಂಬತ್ತನೇ ದಿನ ಶ್ರೀರಾಮನವಮಿಯ ಆಚರಣೆ. ಅಂದರೆ ಶ್ರೀರಾಮ ಅಯೋಧ್ಯೆಯಲ್ಲಿ ಅವತಾರವೆತ್ತಿ ಬಂದ ದಿನದ ಸಂಭ್ರಮ ದೇಶದೆಲ್ಲೆಡೆ ಆಚರಿಸಲಾಗುತ್ತದೆ.

ಈ ಹಬ್ಬವನ್ನು ಕರ್ನಾಟಕದಲ್ಲಿ ಯುಗಾದಿ ಎಂದರೆ, ಉತ್ತರ ಭಾರತದ ಕಡೆ ಭೈಸಾಖಿ ಎಂದೂ ಮತ್ತು ಮಹಾರಾಷ್ಟ್ರದ ಕಡೆ ಗುಡಿಪಾಡ್ವ ಎಂದೂ ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ಹಿಂದೂಗಳು ಆಚರಿಸುವ ಹಬ್ಬಗಳ ಹಿಂದೆ ಹಲವು ವೈಜ್ಞಾನಿಕ ಕಾರಣಗಳೂ ಇರುತ್ತವೆ. ಈ ಹಬ್ಬದಲ್ಲಿ ಹರಳೆಣ್ಣೆಯ ಅಭ್ಯಂಜನ ಮತ್ತು ಪಂಚಾಂಗ ಶ್ರವಣ ಅಥವಾ ಪಠಣಕ್ಕು ಬಹಳ ಮುಖ್ಯವಾದ ಪಾತ್ರವಿದೆ. ಯುಗಾದಿಯಂದು ಅಭ್ಯಂಜನ ಮಾಡಿದರೆ ಅದರ ತಂಪು, ಬೇಸಿಗೆಕಾಲವನ್ನು ಸವೆಸಲು ದೇಹಕ್ಕೆ ಮತ್ತೆ ಚರ್ಮಕ್ಕೆ ಹೊಸ ಉರುಪನ್ನು ತರುತ್ತದೆ. ಬೇವು ಬೆಲ್ಲ ತಿನ್ನುವುದರಿಂದ ದೇಹಕ್ಕೆ ದೃಢತೆ ದೊರೆಯುತ್ತದೆ. ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳೂ ಸೃಷ್ಟಿಯಾದ್ದದ್ದನ್ನು ಪಂಚಾಂಗದಲ್ಲಿ ಪಠಿಸುವುದರಿಂದ ಅಥವಾ ಶ್ರವಣ ಮಾಡುವುದರಿಂದ, ಸೃಷ್ಟಿಯ ವಿಸ್ಮಯದ ಅರಿವು ನಮಗಾಗುತ್ತದೆ. ಜೊತೆಗೆ ಹಬ್ಬದ ಮನೆಗಳಲ್ಲಿ ಹೋಳಿಗೆಯ ಸವಿ ಚೆಂದವೊ ಚೆಂದ.

ಇನ್ನೂ ಈ ವಸಂತಕಾಲದ ಸೊಬಗು ಕಣ್ತುಂಬಿಕೊಳ್ಳುವುದೇ ಚೆಂದ. ಕೋಗಿಲೆಯ ದನಿ ಇಂಪಾಗಲೆಂದೇ ಮಾಮರ ಚಿಗುರಿ ನಿಂತಂತೆ, ಎಲ್ಲ ಗಿಡ ಮರಗಳು ತನ್ನ ಹಳೆತನವನ್ನು ಕಳೆದುಕೊಂಡು ಹೊಸತಾಗಿ ಮೈದುಂಬಿ ಚಿಗುರಿ ನಿಲ್ಲುವ ಕಾಲ. ಎಲ್ಲೆಡೆ ಸಂಭ್ರಮ, ಸೃಷ್ಟಿಯ ಅದ್ಭುತವೆನಿಸುವ ಕುಸುಮಗಳ ಘಮ, ಹೊಸ ಚೈತನ್ಯದೊಂದಿಗೆ ಪ್ರಕೃತಿಯು ಹೊಸ ವರ್ಷವನ್ನು ಸ್ವಾಗತಿಸುವ ಈ ಸುದಿನ ಯುಗದ ಆದಿಯ ದಿನ.
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂಬಂತೆ, ಪ್ರತೀ ವರ್ಷವು ಯುಗಾದಿ ಹೊಸತನವನ್ನು ಹೊತ್ತು ಬರುತ್ತದೆ. ಹೊಸ ಚಿಗುರಿನೊಂದಿಗೆ ಹಳೆ ಬೇರಿನ ಸಂಪ್ರದಾಯದ ಶುಭ ಆಚರಣೆಗಳನ್ನು ಉಳಿಸಿ, ಬೆಳೆಸಿಕೊಳ್ಳೋಣ. ಎಲ್ಲರ ಬಾಳಿನಲ್ಲಿ ಈ ಯುಗಾದಿ ನವೀನತೆಯನ್ನು ಚೆಲ್ಲಲಿ. ಚೈತ್ರದ ಚಿಗುರಂತೆ ಬದುಕು ಸದಾ ಚೈತನ್ಯತೆಯಿಂದ ಕೂಡಿರಲಿ. ಒಳಿತಾಗಲಿ. ಎಲ್ಲರ ಬಾಳು ಬೆಳಕಾಗಲಿ.
ಸರ್ವರಿಗೂ ಯುಗಾದಿಯ ಶುಭಾಶಯಗಳು…

ಪಲ್ಲವಿ ಚೆನ್ನಬಸಪ್ಪ