ಕಳೆದ ಶತಮಾನದ ಮಹಾಯುದ್ಧದಲ್ಲಿ ತಮ್ಮ ಕ್ರೂರತೆಯಿಂದ ಮೆರೆದು ಲಕ್ಷಾಂತರ ಜನಸಾಮಾನ್ಯರ ಮಾರಣಹೋಮಕ್ಕೆ ಕಾರಣರಾದ ನಾಝಿ ನಾಯಕರ (ಹಿಟ್ಲರ್ ಸಹಿತ) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಇವರುಗಳ ಮದ್ಯೆ ಈ ಕ್ರೂರ ನಾಯಕರ ಇಬ್ಬರು ಸಹೋದರರ ಮಾನವತೆಯ ಬಗ್ಗೆ ತಿಳಿಯಲೇಬೇಕು.
ಆಲ್ಬರ್ಟ್ ಗೋರಿಂಗ್: ಆಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿನ ಒಂದು ಸಂಜೆ, ಯಹೂದಿಗಳ ಗುಂಪೊಂದು ನಾಝಿಗಳ ಆದೇಶದ ಮೇರೆಗೆ ನಗರದ ರಸ್ತೆಗಳ್ಳನ್ನು ಸ್ವಚ್ಛಗೊಳಿಸುತಿತ್ತು. ಅವರುಗಳ ಮೇಲ್ವಿಚಾರಣೆ ಹೊತ್ತಿದ್ದ ಎಸ್ ಎಸ್ ಆಫೀಸರ್ ಒಬ್ಬ ಗುಂಪಲ್ಲಿ ಕೆಲಸ ಮಾಡುತಿದ್ದ ಯುವಕನೊಬ್ಬನ ದಾಖಲೆಗಳನ್ನು ಕಸಿದು ಪರಿಶೀಲಿಸಿ ಬೆಚ್ಚಿ ಬಿದ್ದ. ಯಾಕೆಂದರೆ ಆ ದಾಖಲೆಯಲ್ಲಿನ ಹೆಸರು “ಆಲ್ಬರ್ಟ್ ಗೋರಿಂಗ್” ಎಂದು. ಆತ ಪ್ರಸಿದ್ಧ ನಾಝಿ ನಾಯಕ “ಹರ್ಮನ್ ಗೋರಿಂಗ್” ನ ತಮ್ಮನಾಗಿದ್ದ. ಈ “ಹರ್ಮನ್ ಗೋರಿಂಗ್” ಕ್ರೂರಿ ಅಡಾಲ್ಫ್ ಹಿಟ್ಲರ್ ನ ಅತಿ ನಂಬುಗೆಯ ಬಲಗೈ ಬಂಟ, ಉತ್ತರಾಧಿಕಾರಿ ಹಾಗೂ ಜರ್ಮನ್ ವಾಯು ದಳದ ಮುಖ್ಯಸ್ಥನಾಗಿದ್ದ. ದಾಖಲೆಯನ್ನು ನೋಡುತ್ತಲ್ಲೇ ಬೆಚ್ಚಿಬಿದ್ದ ಎಸ್ ಎಸ್ ಆಫೀಸರ್ ಮರು ಮಾತನಾಡದೆ ಸುಮ್ಮನೆ ಹೋಗಿ ಬಿಟ್ಟ.
ಈ ಹರ್ಮನ್ ಸ್ವಭಾವತಃ ಕ್ರೂರಿ ಹಾಗೂ ಹಿಟ್ಲರ್ ನ ಆದೇಶದ ಮೇರೆಗೆ ಲಕ್ಷಾಂತರ ಯಹೂದಿಗಳನ್ನು ಹಾಲೋಕಾಸ್ಟ್ (ಹತ್ಯಾಕಾಂಡ) ಕ್ಯಾಂಪ್ಗಳಲ್ಲಿ ತಳ್ಳಿ ಮಾರಣಹೋಮಕ್ಕೆ ಕಾರಣನಾಗಿದ್ದ. ಆದರೆ ಅವನ ತಮ್ಮ ಆಲ್ಬರ್ಟ್ ಸ್ವಭಾವದಲ್ಲಿ ತದ್ವಿರುದ್ದ, ನಾಝಿ ಸಿದ್ಧಾಂತಗಳನ್ನೂ ದಿಕ್ಕರಿಸಿ ಎಲ್ಲಾ ಜನರನ್ನು ಪ್ರೀತಿಸುತ್ತ ಸದಾ ಏಕಾಂತದಲ್ಲಿದ್ದು ಯಾವುದಾದರೂ ಪುಸ್ತಕಕ್ಕೆ ಜೋತು ಬಿದ್ದಿರುತಿದ್ದ.
ಆಲ್ಬರ್ಟ್ ಎರಡನೇ ಮಹಾಯುದ್ದಕ್ಕೂ ಮುಂಚೆ ಆಸ್ಟ್ರಿಯಾದ ಖ್ಯಾತ ಚಿತ್ರೋದ್ಯಮಿ ಆಸ್ಕರ್ ಪಿಲ್ಜರ್ ಬಳಿ ಕೆಲಸ ಮಾಡಿದ್ದ. ಯುದ್ಧದ ಸಂದರ್ಭದಲ್ಲಿ ನಾಝಿಗಳು ಆಸ್ಕರ್ ಪಿಲ್ಜರ್ ನನ್ನು ಸೆರೆ ಹಿಡಿದಾಗ ಆಲ್ಬರ್ಟ್ ತನ್ನ ಅಣ್ಣ ಹರ್ಮನ್ ಪ್ರಭಾವ ಬಳಸಿ ಅವನನ್ನು ಬಿಡುಗಡೆಗೊಳಿಸಿ ಅವನ ಕುಟುಂಬದ ಸಮೇತ ಪ್ಯಾರಿಸ್ ನಗರಕ್ಕೆ ಹೋಗಿ ಸುರಕ್ಷಿತವಾಗಿರುವಂತೆ ಮಾಡಿದ. ಮುಂದೆ ಜರ್ಮನಿಯು ಆಸ್ಟ್ರಿಯಾವನ್ನು ಕೂಡಿಸಿಕೊಂಡ ಸಂಭ್ರಮದಲ್ಲಿದ್ದ ಹರ್ಮನ್ ತನ್ನ ಕುಟುಂಬದ ಸದಸ್ಯರೆಲ್ಲರಿಗೂ ಒಂದೊಂದು ಕೋರಿಕೆಯನ್ನು ಕೇಳಲು ಹೇಳಿದಾಗ ಆಲ್ಬರ್ಟ್ ಡಕಾವ್ ಶಿಬಿರದಲ್ಲಿದ್ದ ಆಸ್ಟ್ರಿಯಾದ ಸೈನ್ಯಾಧಿಕಾರಿ “ಜೋಸೆಫ್ ಫರ್ಡಿನ್ಯಾಂಡ್” ನನ್ನ ಬಿಡುಗಡೆಗೊಳಿಸಲು ಕೋರಿದಾಗ ಹರ್ಮನ್ ಆಶ್ಚರ್ಯಚಕಿತನಾದರೂ ತಮ್ಮನ ಕೋರಿಕೆಯ ಮೇರೆಗೆ ಅವನನ್ನು ಬಿಡುಗಡೆಗೊಳಿಸಿದ.
ಆ ಸಮಯದಲ್ಲೇ ಆಲ್ಬರ್ಟ್ ಗೆ ಜೆಕ್ ಗಣರಾಜ್ಯದ ಸಂಘಟಿತ ಕಂಪನಿಯೊಂದರಲ್ಲಿ ರಪ್ತು ನಿರ್ದೇಶಕನಾಗಿ ಕೆಲಸ ಸಿಕ್ಕಿತ್ತು. ತನಗೆ ಸಿಕ್ಕ ಹೊಸ ಹುದ್ದೆಯ ಪ್ರಭಾವದಿಂದ ಯುದ್ಧಕ್ಕಾಗಿ ತಯಾರಾಗುತ್ತಿದ್ದ ನೂರಾರು ಉತ್ಪನ್ನಗಳ ತಯಾರಿಕೆಯನ್ನು ನಿಧಾನಿಸಿ ಅವು ಯುದ್ಧಕ್ಕೆ ಸರಬರಾಜು ಆಗದಂತೆ ನೋಡಿಕೊಂಡ. ಹಾಗೂ ಅವನ ಬೆಂಬಲ ಜೆಕ್ ಪ್ರತಿರೋಧ ಸಂಘಟನೆಗೆ ಇತ್ತು. ಹಾಗೆ ತನ್ನ ಕಂಪನಿಯ ಮನವೊಲಿಸಿ ತನಗೆ ಹೆಚ್ಚೆಚು ಕೆಲಸಗಾರರನ್ನು ಕಾನ್ಸನ್ಟ್ರೇಟ್ ಶಿಬಿರದಿಂದ ಕರೆಸಿ ಮಾರ್ಗ ಮದ್ಯದಲ್ಲಿ ಸಾವಿರಾರು ಬಲಿ ಪಶುಗಳು ತಪ್ಪಿಸಿಕೊಂಡು ಹೋಗುವಂತೆ ಮಾಡುತ್ತಿದ್ದ. ಜೊತೆಗೆ ತನ್ನ ಅಣ್ಣ ಹರ್ಮನ್ ಸಹಿಯನ್ನು ನಕಲು ಮಾಡುತ್ತಾ ಎಷ್ಟೋ ಸಾವಿರಾರು ಯಹೂದಿಯರು ಬಿಡುಗಡೆಗೊಳ್ಳುವಂತೆ ಮಾಡಿದ.
ಆಲ್ಬರ್ಟ್ ನ ಈ ಕೆಲಸ ನಾಝಿಗಳಿಗೆ ತಿಳಿದು ನಾಲ್ಕು ಬಾರಿ ವಾರೆಂಟ್ ಜಾರಿಗೊಳಿಸಿದರೂ ಅಣ್ಣ ಹರ್ಮನ್ ಆ ಸಮಯದಲ್ಲಿ ತಮ್ಮನನ್ನು ತನ್ನ ಪ್ರಭಾವದಿಂದ ರಕ್ಷಿಸಿದ. ಮಹಾಯುದ್ಧದ ಕೊನೆಯಲ್ಲಿ ಆಲ್ಬರ್ಟ್ ಗೆ ನಾಝಿಗಳು ಕಂಡಲ್ಲಿ ಶೂಟ್ ಮಾಡಿ ಸಾಯಿಸಲು ಆದೇಶ ಹೊರಡಿಸಿದರು. ಆಗಲು ಅಣ್ಣ ಹರ್ಮನ್ ಇನ್ನೊಬ್ಬ ನಾಝಿ ಪ್ರಭಾವಿ “ಹೆನ್ರಿಕ್ ಹಿಮ್ಲರ್” ಸಹಾಯದಿಂದ ತಮ್ಮನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಮಾಡಿದ.
ಹರ್ಮನ್ ಇನ್ನು ತಮ್ಮನಿಗೆ ಸಹಾಯ ಮಾಡುವುದಕ್ಕೆ ಆಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಮುಂದೆ ಜರ್ಮನಿ ಮಿತ್ರ ರಾಷ್ಟ್ರಗಳಿಗೆ ಶರಣಾದಾಗ ಆಲ್ಬರ್ಟ್ ಗೆ ಎರಡು ವರ್ಷ ಕಾರಾಗೃಹ ಶಿಕ್ಷೆಯಾಯಿತು.
ಎರಡು ವರ್ಷಗಳ ನಂತರ ಮಿತ್ರಪಡೆಗೆ ಆಲ್ಬರ್ಟ್ ನ ಹಿಂದಿನ ಸಾಹಸದ ನೆರವುಗಳನ್ನು ತಿಳಿದು 1947 ರಲ್ಲಿ ಬಿಡುಗಡೆಗೊಳಿಸಿತು.
ಆಲ್ಬರ್ಟ್ ಬಿಡುಗಡೆಯೇನೋ ಆದ ಆದರೆ ತನ್ನ ನೆಲದಲ್ಲೇ ತನ್ನ ಜನಗಳಿಂದ ತನ್ನ ನಾಝಿ ಉಪನಾಮದಿಂದ ಬಹಿಷ್ಕಾರಗೊಂಡ. ಆಗ ಅವನು ರಕ್ಷಿಸಿದ ನಾಝಿಗಳೇ ಅವನಿಗೆ ನೆರವಾದರು. ಆದರೂ ಎಲ್ಲೂ ಕೆಲಸ ಸಿಗದೇ ಖಿನ್ನತೆಗೆ ಬಿದ್ದು ವಿಪರೀತ ಕುಡಿದು ಕುಡಿದು 1966 ರಲ್ಲಿ ಕೊನೆಯ ಉಸಿರನೆಳೆದ.
ಕೊನೆಗೂ 1990 ರಲ್ಲಿ ಇತಿಹಾಸಕಾರ ಅನ್ವೇಷಣೆಯಿಂದ ಆಲ್ಬರ್ಟ್ ಬಗ್ಗೆ ಒಳ್ಳೆ ಅಭಿಪ್ರಾಯ ಹೊರಬಂದಿತು.
ಸ್ವತಃ ನಾಝಿಯಾಗಿದ್ದರೂ ನಾಝಿಗಳ ಕ್ರೂರತೆಗೆ ಜೊತೆಯಾಗದೆ ಮಾನವತೆಯಿಂದ ಎಷ್ಟೋ ಸಾವಿರಾರು ಅಮಾಯಕ ಯಹೂದಿಯರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಆಲ್ಬರ್ಟ್ ಕೊನೆಗಾಲವು ಈ ರೀತಿಯಾದದ್ದು ನಿಜಕ್ಕೂ ಖೇದನೀಯ. ಈಗಲೂ ಎಷ್ಟೋ ಯಹೂದಿಯರು ಆಲ್ಬರ್ಟ್ ನ ನೆರವನ್ನು ನೆನೆಯುತ್ತಾರೆ.
ಮಾಹಿತಿ ಕೃಪೆ :https://historyofyesterday.com/ ಹಾಗು https://www.timesofisrael.com/
ಚಿತ್ರ ಕೃಪೆ : https://www.haaretz.com/ ಹಾಗು https://encyclopedia.ushmm.org/
ಕು ಶಿ ಚಂದ್ರಶೇಖರ್