ನಾಯಿ ಕಳೆದಿದೆ

ನಾಟಕ

(ರಚನೆ -ನಿರ್ದೇಶನ ರಾಜೇಂದ್ರ ಕಾರಂತ್)

ರಂಗದ ಮೇಲೆ ಕಾರಂತರ ‘ನಾಯಿ ಕಳೆದಿದೆ’!

ಎಲ್ಲೋ ಹುಡುಕಿದೆ ಇಲ್ಲದ  ದೇವರ…’ ಎಂಬ ಹಾಡಿನ ಹಿನ್ನೆಲೆಯಲ್ಲಿ ‘ನಾಯಿ ಕಳೆದಿದೆ’ ಎಂಬ ನಾಟಕ ಆರಂಭವಾಯ್ತು!

ನಗರ ಮಧ್ಯದಲ್ಲಿ ಒಂದು ಮನೆ, ಅಲ್ಲಿ ವಯಸ್ಸಾದ ದಂಪತಿಗಳು. ಮಗ ಹಾಗೂ ಸೊಸೆಗೆ ಐಟಿ ಕಂಪನಿಯಲ್ಲಿ ಕೆಲಸ. ಹಾಗಾಗಿ ಇವರು ಆಫೀಸ್ಗೆ ಹತ್ತಿರವೇ ಮನೆ ಮಾಡಿಕೊಂಡಿರುತ್ತಾರೆ. ಆಗಾಗ ಈ ಮನೆಗೂ ಬರುತ್ತಾರೆ. ಬರುವಾಗ ಸೊಸೆಯ ಮುದ್ದಿನ ನಾಯಿಯೂ ಬರುತ್ತೆ!

ನಾಯಿ ಕಂಡರೆ ಆಗದ ಈ ಹಿರಿಯ ದಂಪತಿಗಳಿಗೆ ಈ ನಾಯಿಯ ಕಿರಿಕಿರಿ ಸಹಿಸಲಾಗದು, ಹಾಗಂತ ಅದನ್ನು ಇವರ ಮುಂದೆ ಹೇಳಲಾಗದು. ಸೊಸೆಗೆ ಮುದ್ದು, ಹಾಗಾಗಿ ಮಗನಿಗೂ ಅದು ಇಷ್ಟ!

ಈ ಮಧ್ಯೆ ಮಗ-ಸೊಸೆ ಇಬ್ಬರಿಗೂ ವಿದೇಶದಲ್ಲಿ ಕೆಲಸ ಸಿಗುತ್ತೆ. ದಿಢೀರ್ ಎಂದು ವಿದೇಶಕ್ಕೆ ಹೋಗಬೇಕಾದ ಪ್ರಸಂಗ‌. ಆಗ ತಮ್ಮ ನೆಚ್ಚಿನ ಮುದ್ದಿನ ನಾಯಿಯನ್ನು ಈ ಹಿರಿಯ ಜೀವಕ್ಕೆ ಒಪ್ಪಿಸುತ್ತಾರೆ. ಅವರು ತಮಗೆ ವಯಸ್ಸಾಯ್ತು ನೋಡಿಕೊಳ್ಳಲು ಸಾಧ್ಯವಿಲ್ಲವೆಂದೂ, ಅದರ ಚಾಕರಿ ಮಾಡಲು ಸಾಧ್ಯವಿಲ್ಲ ಎಂಬ ಅತ್ತೆಯ ಮಾತಿಂದ ಬೇಸತ್ತ ಸೊಸೆಯು ಮನೆಯ ಮಗನಂತಿರುವ ಅಶೋಕನಿಗೆ ತನ್ನ ನಾಯಿಯ ಜವಾಬ್ದಾರಿಯನ್ನು ಒಪ್ಪಿಸಿ ವಿದೇಶಕ್ಕೆ  ಹಾರುತ್ತಾರೆ.

ಈ ನಾಯಿಯ ರಂಪಾಟ ಹೆಚ್ಚಾಗುತ್ತೆ. ಅಲ್ಲದೇ ಆ ಏರಿಯಾದ ಕಾರ್ಪೋರೇಟರ್ ಮುನಿವೆಂಕಟಮ್ಮ ಆಗಾಗ ಬೊಗಳುತ್ತಾ, ಕಚ್ಚುವಂತೆ ಹರಿ ಹಾಯುತ್ತಾ ಇರುತ್ತಾಳೆ. ಅಲ್ಲದೇ ‘ಕಿರಿಕ್’ ಮಾಡುತ್ತಾ, ಒಂದಿಷ್ಟು ದುಡ್ಡನ್ನು ಕೀಳಲು ತನ್ನ ಅಸಿಸ್ಟೆಂಟ್ ಜೊತೆ ದಾಳಿ ಇಡುತ್ತಾ ನಾಯಿಗಿಂತ ಹೆಚ್ಚು ಕಿರಿಕಿರಿ ಉಂಟು ಮಾಡುತ್ತಿರುತ್ತಾಳೆ. ಅಲ್ಲದೇ ನಾಯಿಯನ್ನು ತನ್ನವರಿಗೇ ಮಾರುವಂತೆ ಕೂಡ ತಾಕೀತು ಮಾಡ್ತಾಳೆ.

ಈ ಎಲ್ಲಾ ಕಿರಿಕಿರಿಗಳನ್ನು ಆಶೋಕನೇ ಸರಿಯಾಗಿ ನಿಭಾಯಿಸಿ ಅವರನ್ನು ನಾಯಿಯಂತೆ ಅಟ್ಟಿ, ಹಿರಿಯ ದಂಪತಿಗಳನ್ನು ಕಾಪಾಡುತ್ತಿರುತ್ತಾನೆ.

ಅತ್ತ ವಿದೇಶದಿಂದ ತಮ್ಮ ನಾಯಿಯ ಯೋಗಕ್ಷೇಮದ ಬಗ್ಗೆ ಆಗಾಗ ಫೋನ್ ಮಾಡಿ ವಿಚಾರಿಸುತ್ತಿರುತ್ತಾರೆ. ಅಮ್ಮನ ಬಗ್ಗೆ ಕಾಳಜಿಯಿಲ್ಲ, ಅಪ್ಪನು ಕೆಮ್ಮಿದರೂ ಅದರತ್ತ ಗಮನವೇ ಇಲ್ಲಾ‌. ತಾವಾಯ್ತು ತಮ್ಮ ಮುದ್ದಿನ ನಾಯಾಯ್ತು ಎಂಬಂತಿರುತ್ತಾರೆ. ನಾಯಿಯ ಗಲಾಟೆ ತಪ್ಪಿಸಲು ಅಶೋಕನ್ನಲ್ಲಿ ಬೇಡಿಕೊಳ್ಳುವ ಹಿರಿಯ ಜೀವಗಳಿಗೆ ಅವನು ಸ್ಪಂದಿಸುತ್ತಾನೆ.

ಅಶೋಕನು ಇವರ ಮನೆಯಿಂದ ಆ ನಾಯಿಗೊಂದು ಮುಕ್ತಿ ತೋರಿಸುತ್ತಾನೆ. ಆದರೆ ವಿದೇಶದಿಂದ ಮಗ-ಸೊಸೆ ಫೋನ್ ಮಾಡಿ ತಮ್ಮ ಮುದ್ದಿನ ನಾಯಿಯ ಬಗ್ಗೆ ವಿಚಾರಿಸ್ತಾನೇ ಇರ್ತಾರೆ.

ಇಲ್ಲದ ನಾಯಿಯ ಬದಲಾಗಿ ಅಶೋಕನೇ ನಾಯಿಯಂತೆ ಬೊಗಳಿ, ಮುದ್ದುಗರೆವವರಿಗೆ ನಾಯಿ ಭಾಷೆಯಲ್ಲೇ ಉತ್ತರ ಕೊಡುವಂತೆ ಮುಲುಗಿ ಬ್ಯಾಲೆನ್ಸ್ ಮಾಡುತ್ತಾನೆ.

ಆದರೆ ಈ ನಾಟಕವು ಹೆಚ್ಚು ದಿನ ನಡೆಯೊಲ್ಲಾ. ತಮ್ಮ ಮುದ್ದಿನ ನಾಯಿಗೆ ಏನೋ ತೊಂದರೆಯಾಗಿದೆ ಎಂದು ಮಗ-ಸೊಸೆ ಇಬ್ಬರೂ ದಿಢೀರ್ ಎಂದು ಬಂದೇ ಬಿಡ್ತಾರೆ.

ಆಗಲೇ ನಾಟಕಕ್ಕೊಂದು ಕಳೆಕಟ್ಟುವುದು. ಕಾಣದ ನಾಯಿಯ ಮೇಲಿನ ಪ್ರೀತಿಯಲ್ಲಿ ಮನೆ ಮಂದಿಯ ಹಾಗೂ ಅಶೋಕನ ಮೇಲೂ ಹರಿಹಾಯ್ದು ಹಾರಾಡುವ ಸೊಸೆ, ಅದನ್ನು ಅನುಮೋದಿಸುವ ಮಗನ ಪ್ರಲಾಪಗಳು ತಾರಕಕ್ಕೆ ಏರುತ್ತದೆ.ಅಶೋಕನ ಮೇಲೆ ಆರೋಪ ಹೊರಿಸಿ ಮನೆಯಿಂದ ಹೊರದೂಡುವ ದೃಶ್ಯ ನೋಡುಗರನ್ನು ಗರಬಡಿದವರಂತೆ ಮಾಡುತ್ತೆ.

ಆದರೆ ಅವರ ಮುದ್ದಿನ ನಾಯಿಯನ್ನು ತನ್ನದೇ ಮನೆಯಲ್ಲಿಟ್ಟು ಸಾಕುತ್ತಿದ್ದ ಅಶೋಕನು ಅದನ್ನು ವಾಪಸ್ ತರಿಸಿ ಅವರಿಗೆ ಒಪ್ಪಿಸಿದಾಗ ಸೊಸೆಯ ನಡವಳಿಕೆಯೇ ಬದಲಾಗುತ್ತೆ.

ನಾಯಿಯ ಮೇಲಿನ ಪ್ರೀತಿಯಲ್ಲಿ ಎಳ್ಳಷ್ಟು ತನ್ನ ಅತ್ತೆ-ಮಾವನ ಮೇಲಿರದ ಸೊಸೆಯನ್ನೂ, ತಮ್ಮ ಮಗನ ಸ್ಥಿತಿಯನ್ನು ಅರಿತು. ಮನೆಯ ದಾಖಲೆ-ಪತ್ರಗಳನ್ನು ಮಗನ ಕೈಗಿಟ್ಟು ‘ಅಶೋಕಾ, ನಿನ್ನ ಮನೆಯಲ್ಲಿ ನಾಯಿಗೇ ಜಾಗ ಕೊಟ್ಟಿದ್ದೀಯಾ, ನಮಗೂ ಸ್ವಲ್ಪ ಇರಲು ಜಾಗ ಕೊಡಪ್ಪಾ, ನಾವು  ಬೊಗೊಳಲ್ಲಾ’ ಎಂದು ಅಶೋಕನ ಹಿಂದೆ ನಿಲ್ಲುವ ವೃದ್ಧ ದಂಪತಿಗಳ ಚಿತ್ರ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತದೆ. ಎಲ್ಲರ ಮನೆಯ ಹಿರಿಯ ಜೀವಗಳ ಪಾತ್ರಗಳಂತೆ ಅವರು ಕಾಣುತ್ತಾರೆ. ಅಲ್ಲಿನ ಅಶೋಕನ ಪಾತ್ರಧಾರಿಯಷ್ಟೇ ಅಲ್ಲದೇ ಪ್ರೇಕ್ಷಕರ ಕಣ್ಣಲ್ಲೂ ನೀರು ಹರಿಯುತ್ತೆ.

ಹಾಸ್ಯದ ಎಳೆಯಲ್ಲಿ ಜೀವನಾಭವವನ್ನು ಹಣೆದು ನಾಟಕ ಕಟ್ಟಿದ ರೀತಿ, ಅದನ್ನು ಅಷ್ಟೇ ಸೂಕ್ತವಾಗಿ ದೃಶ್ಶೀಕರಿಸಿದ ಬಗೆ ಮೆಚ್ಚಲರ್ಹ. ಅದೇ ಕಾರಂತರ ಬರಹದ ವೈಶಿಷ್ಟ್ಯವೂ ಹೌದು.

ಹಾಸ್ಯದ ಮೂಲಕ ಮಧ್ಯಮ ವರ್ಗದ ಹಿರಿಯ ಜೋಡಿಜೀವದ ನೋವು-ಸಂಕಟಗಳನ್ನು ಇಲ್ಲಿ ಅಚ್ಚುಕಟ್ಟಾಗಿ ನಾಟಕ ಬರೆಯುವ ಮೂಲಕ ನಾಟಕ ಕಟ್ಟಿಕೊಟ್ಟದ್ದಲ್ಲದೇ ಅದನ್ನು ಅಷ್ಟೇ ಕರಾರುವಕ್ಕಾಗಿ ರಂಗಕ್ಕೂ ತಂದಿದ್ದಾರೆ.

ಕನ್ನಡ ರಂಗಭೂಮಿಯ ಹಿರಿಯ ರಂಗಕರ್ಮಿ ರಾಜೇಂದ್ರ ಕಾರಂತ್ ತಾವೇ ಬರೆದು ನಿರ್ದೇಶಿಸಿದ್ದಾರೆ. ಜತೆಗೆ ನಾಟಕದಲ್ಲಿ ಪ್ರಮುಖ ಪಾತ್ರವಾದ ಹಿರಿಯ ವ್ಯಕ್ತಿಯ ಪಾತ್ರವನ್ನೂ ನಿರ್ವಹಿಸಿದ್ದಾರೆ.

ಇವರ ಪತ್ನಿ ವಿಶಾಲು ಪಾತ್ರದಲ್ಲಿ ರಾಜೇಶ್ವರಿ ಎನ್ ಎ ನಟಿಸಿ ಜೀವಿಸಿದ್ದಾರೆ. ಅವರ ಆಂಗಿಕಾಭಿನಯ, ಮಾತಿನ ಏರಿಳಿತಗಳು ಪಾತ್ರದ ಹಿರಿಮೆಯನ್ನು ಹೆಚ್ಚಿಸಿದೆ.

ಈ ಹಿರಿಯ ಜೀವಿಗಳಿಗೆ ಸಹಾಯ ಹಸ್ತ ನೀಡುತ್ತಾ ಮನೆಯ ಮಗನೇ ಆಗಿರುವ ಅಶೋಕ್ ನ ಪಾತ್ರದಲ್ಲಿ ಸತೀಶ್ ಐತಾಳ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ತೂಗಿಸಿದ್ದಾರೆ. ಹಿರಿಯ ಜೀವಗಳಿಗೆ ಆಸರೆಯಾದಷ್ಟೇ ಅಲ್ಲದೇ ಅವರ ಎಲ್ಲ ಸಮಸ್ಯೆಗಳನ್ನು ತನ್ನದೇ ಸಮಸ್ಯೆ ಎಂದು ಜವಾಬ್ದಾರಿ ಹೊತ್ತು ಅದರ ಪರಿಹಾರನ್ನೂ ಮಾಡುತ್ತಾರೆ. ಹೀಗೆ ಈ ಹಿರಿಯರ ರಕ್ಷಣೆಗೆ ನಿಂತು ಸಂದರ್ಭೋಚಿತವಾಗಿ ಸಿಟ್ಟು-ಸೆಡವುಗಳನ್ನೂ ಪ್ರದರ್ಶಿಸುತ್ತಾ ಕೆಲವೊಮ್ಮೆ ತುಂಬಾ ಭಾವುಕರಾಗುತ್ತಾರೆ. ಭಾವನಾತ್ತಕ ಸನ್ನಿವೇಶಗಳಲ್ಲಿ ಪ್ರೇಕ್ಷಕರ ಮನ ಮುಟ್ಟುತ್ತಾರೆ. ಇವರ ಜೀವನದಲ್ಲೇ ಹಲವು ನೋವುಗಳಿದ್ದರೂ, ಅದರ ನಡುವೆಯೂ ಈ ಹಿರಿಯ ಜೀವಕ್ಕೆ ಕಣ್ಗಾವಲಾಗಿ ನಿಲ್ಲುತ್ತಾರೆ.‌ ಈ ಪಾತ್ರ ಪೋಷಣೆಯೇ ವಿಭಿನ್ನ!

ಮಗ ಶ್ರವಣ್ ಆಗಿ ಮಹೇಶ್ ಹಾಗೂ ಸೊಸೆ ಐಶ್ವರ್ಯಳ ಪಾತ್ರದಲ್ಲಿ ಭುವನ ಜೋಡಿಜೀವದಂತೆ ಪ್ರತಿ ಸೀನ್ಗಳಲ್ಲೂ ಜೊತೆ ಜೊತೆಗೇ ಬಂದು ಜೊತೆ ಜೊತೆಗೇ ಹೋಗುತ್ತಾರೆ. ನಾಯಿ ಪ್ರೀತಿಯ ಗುಂಗಲ್ಲಿ ಅತ್ತೆ-ಮಾವನರನ್ನು ಇಕ್ಕಟ್ಟಲ್ಲಿ ಸಿಕ್ಕಿಸಿ ಪಜೀತಿಗೆ ಗುರಿ ಮಾಡುವ ಪಾತ್ರ ಇದಾಗಿದೆ. ಇಂದಿನ ಸಮಾಜದ ಪಕ್ಕಾ ಸೊಸೆಯಂತಿರುವ ಭುವನ ತನ್ನ ಪಾತ್ರವನ್ನು ಅರಿತು ನಟಿಸಿದ್ದಾರೆ. ಮಗ ಶ್ರವಣನ ಪಾತ್ರಧಾರಿ  ಮಹೇಶ್ ತನ್ನ ಪ್ರೀತಿಯ ಹೆಂಡತಿಯ ಮಾಂತ್ರಿಕ ಶಕ್ತಿಗೆ ಒಳಗಾಗಿ ಅಪ್ಪ-ಅಮ್ಮನ ಕಷ್ಟ-ಕಾರ್ಪಣ್ಯಗಳತ್ತ ಕಿರು ನೋಟವನ್ನೂ ಬೀರದೇ ಹೆಂಡತಿ ಸುತ್ತಾ ಗಿರ್ಕಿ ಹೊಡೆಯುವ ಪಾತ್ರವನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆ.

ಮಾಧು ಪಾತ್ರದಲ್ಲಿ ಶ್ರೀನಾಥ್ ಅವರು ನಟಿಸುವ ಪರಿ ಮೆಚ್ಚುವಂತಹದ್ದು. ಕೆಲವೊಮ್ಮೆ ಇವರ ಅಭಿನಯದ ಛಾಪು ನಮ್ಮ ಕನ್ನಡದ ಚಿತ್ರರಂಗದ ಹಿರಿಯ ಅದ್ಭುತ ಕಲಾವಿದ ಸಂಪತ್ ಅವರನ್ನು ನೆನಪಿಗೆ ತರಿಸುತ್ತದೆ.

ಮುನಿವೆಂಕಟಮ್ಮನ ಪಾತ್ರಧಾರಿಯಾಗಿ ಮಮತ ರಾವ್ ಅವರು ಲವಲಿವಿಕೆಯಿಂದ ನಟಿಸಿದ್ದಷ್ಟೇ ತಮ್ಮ ಡೈಲಾಗ್ ಡೆಲಿವರಿಯ ಸ್ಟೈಲ್ನಲ್ಲಿ  ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತುತ್ತಾರೆ  ‘ಸುವ್ವೀ ಅಂದ್ರೆ ರಾಗ’ ಎಂಬಂತೆ ಅಸಿಸ್ಟೆಂಟ್ ಪಾತ್ರದಲ್ಲಿ ಮಂಜು ಗಮನ ಸೆಳೆಯುತ್ತಾರೆ‌

ರಿಪೋರ್ಟರ್ ಆಗಿ ನವೀನ್, ಸಾಬಿ ಆಗಿ ಅರುಣ ಬಚನ್ ಹರ್ಷನಾಗಿ ಕೆಂಪೇಗೌಡ ಅವರು ಕೆಲವೇ ಸೀನ್ಗಳಲ್ಲಿ ಬಂದರೂ ತಮ್ಮ ಪಾತ್ರಗಳ ಮಹತ್ವವನ್ನು ಪ್ರೇಕ್ಷಕರಿಗೆ ಅರಿಕೆ ಮಾಡಿಸಿ ಹೋಗುತ್ತಾರೆ.

ವಿ ಜಿ ಪಾಂಡವಪುರ ಅವರ ಬೆಳಕು ಹಾಗೂ ಶ್ರೀಹರ್ಷ ಹುಣಸೂರು ಅವರ ಸಂಗೀತ ನಾಟಕದ ಓಘಕ್ಕೆ ಪೂರಕವಾಗಿದೆ.ಹಾಸ್ಯದ ಎಳೆಯಲ್ಲಿ ಹಿರಿಯ ಜೀವಗಳ‌ ನೋವನ್ನು ತೆರೆದಿಟ್ಟಲ್ಲದೇ ಯುವ ಪೀಳಿಗೆಗೆಯ ಜವಾಬ್ದಾರಿಯನ್ನು ಅರಿಕೆ ಮಾಡಿಸಿದ್ದಾರೆ. ಇಂದಿನ ಸಮಾಜದ ಪಾತ್ರಗಳನ್ನೇ ನೇರವಾಗಿ ರಂಗಕ್ಕೆ ತಂದಿದ್ದಾರೆ!

ಕಾರಂತರ ನಾಟಕಗಳಲ್ಲಿ ಅವರದ್ದೇ ಆದ ಒಂದು ಛಾಪು ಮೂಡಿರುತ್ತದೆ ಎನ್ನುವುದೇ ಕಾರಂತರ ವೈಶಿಷ್ಟ್ಯ.

– ತುಂಕೂರ್ ಸಂಕೇತ್!

Related post