ನಾರ್ವಲ್ ಎಂಬ ಸಮುದ್ರ ಸುಂದರಿ
ಕೆನಡಾ, ಗ್ರೀನ್ಲ್ಯಾಂಡ್, ನಾರ್ವೆ ಮತ್ತು ರಶಿಯಾದ ಆರ್ಕಟಿಕ್ ಸಮುದ್ರದಲ್ಲಿ ಕಂಡುಬರುವ “ನಾರ್ವಲ್ ತಿಮಿಂಗಿಲುಗಳು” ತಿಮಿಂಗಿಲ ಪ್ರಭೇದಗಳಲ್ಲಿಯೇ ಅತ್ಯಂತ ವಿಶಿಷ್ಟ, ವಿಶೇಷ ಪ್ರಭೇದದ ತಿಮಿಂಗಿಲ ಎಂದು ಪರಿಗಣಿಸಲಾಗಿದೆ.
ಇವುಗಳ ತಲೆಯಿಂದ ಬೆತ್ತದ ಬೊಂಬಿನಂತೆ ಉದ್ದನೆಯ ಸುರುಳಿಯಾಕಾರದ ದಂತ ಹೊರಹೊಮ್ಮಿರುತ್ತದೆ. ಉದ್ದವಾಗಿ ಈಟಿಯ ರೀತಿಯಲ್ಲಿ ಸುಮಾರು ಹತ್ತು ಪೀಟ್ ವರೆಗೂ ಬೆಳೆಯವ ಇವುಗಳ ದಂತಗಳು 10 ಮಿಲಿಯನ್ ಸೂಕ್ಷ್ಮಸಂವೇದಿ ನರಗಳನ್ನ ಹೊಂದಿರುತ್ತವೆ.
ಅತ್ಯಂತ ಸೂಕ್ಷ್ಮ ಹಾಗೂ ಸಂವೇಧನಾಶೀಲಯುಕ್ತ ನರಗಳಿಂದ ಕೂಡಿದ ಈ ಉದ್ದನೆಯ ದಂತಗಳನ್ನ ನಾರ್ವಲ್ ಗಳು “ಸಮುದ್ರದಲ್ಲಿ ದೂರದಿಂದಲೇ ಭೇಟೆ ಪ್ರಾಣಿಗಳನ್ನ ಗುರುತಿಸಲು, ಹಿಮಗಡ್ಡೆಗಳ ನಡುವೆ ಪ್ರಯಾಣಿಸುವ ಮಾರ್ಗ ಗುರುತಿಸಲು, ತಮ್ಮ ಗುಂಪಿನೊಂದಿಗೆ ಸಂಪರ್ಕಿಸಲು, ಸಂಗಾತಿಯನ್ನ ಸೆಳೆಯಲು ರಡಾರ್ ನಂತೆ ಉಪಯೋಗಿಸಿದರೇ ಆಯುದದಂತೆ ಭೇಟೆ ಪ್ರಾಣಿಗಳನ್ನ ತಿವಿಯಲು ಸಹ ಉಪಯೋಗಿಸುತ್ತವೆ”.
ಸಾಮಾನ್ಯವಾಗಿ ಗಂಡು ನಾರ್ವಲ್ ಗಳು ದಂತ ಹೊಂದಿದ್ದರೂ ಕೆಲ ಸರ್ತಿ ಹೆಣ್ಣು ನಾರ್ವಲ್ ಗಳು ಸಹ ಸುರುಳಿ ಸುತ್ತಿದ ದಂತಗಳನ್ನ ಹೊಂದಿರುವುದು ಅಲ್ಲಿಲ್ಲಿ ಕಂಡುಬರುತ್ತದೆ . ಒಂದು ದಂತ ಇನ್ನೊಂದರ ಸುತ್ತ ಸುರುಳಿ ಸುತ್ತುತ್ತಾ ಉದ್ದವಾಗಿ 10 ಪೀಟ್ ಅಂದರೆ 3 ಮೀಟರ್ ಉದ್ದದ ವರೆಗೂ ಬೆಳೆಯತ್ತವೆ.ಈ ದಂತಗಳು ಕೆಲವು ಸರ್ತಿ 5 ಮೀಟರ್ ವರೆಗೂ ಬೆಳೆದಿರುವುದು ಕಂಡುಬರುತ್ತದೆ.
ಸಣ್ಣ ಗುಂಪುಗಳಲ್ಲಿ ವಾಸಿಸುವ “ನಾರ್ವಲ್ ತಿಮಿಂಗಿಲುಗಳು” ಬೇರೆಯ ತಿಮಿಂಗಿಲುಗಳಂತೆ ವಲಸೆ ಹೋಗುವುದಿಲ್ಲ. ಇವು ಆರ್ಕಟಿಕ್ ಸಮುದ್ರದ ಹೆಪ್ಪುಗಟ್ಟಿದ ಮಂಜುಗಡ್ಡೆಯ ನೀರಿನ ಕೆಳಗಡೆ ಐದು ತಿಂಗಳುಗಳ ಕಾಲ ಕಳೆಯುತ್ತವೆ. ಇವು ಸಾಮಾನ್ಯ ತಿಮಿಂಗಿಲುಗಳಂತೆಯೇ ಉಸಿರಾಡುವ ಸಸ್ತಿನಿಗಳಾದ್ದರಿಂದ ಚಳಿಗಾಲದಲ್ಲಿ ಉಸಿರಾಡಲು ಆರ್ಕಟಿಕ್ ನಲ್ಲಿ ಅಲ್ಲಲ್ಲಿ ಇರುವ ರಂಧ್ರಗಳ ಮೂಲಕ ಇಣುಕಿ ಉಸಿರಾಡಿ ಮರಳಿ ಸಮುದ್ರದಾಳಕ್ಕೆ ಹಿಂತಿರುಗುತ್ತವೆ. ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಇವು ಉಸಿರಾಟ ಮಾಡಬೇಕಾಗುತ್ತದೆ. ಬೇಸಿಗೆ ಆರಂಭವಾಗಿ ಹಿಮಗಡ್ಡೆಗಳು ಕರಗುತ್ತಿದ್ದಂತೆಯೇ ಮಂಜುಗಡ್ಡೆಗಳ ಮಧ್ಯೆ ಬಿಡುವ ಬಿರುಕುಗಳ ಮೂಲಕ ಹೊರಗೆ ಇಣುಕಿದೀರ್ಘವಾಗಿ ಉಸಿರು ತೆಗೆದುಕೊಂಡು ಮತ್ತೇ ಸಮುದ್ರದ ಆಳಕ್ಕೆ ನುಸುಳುತ್ತವೆ. ಈ ಬಿರುಕುಗಳ ಮುಖಾಂತರವೇ ತಮ್ಮ ಸೀಮಿತ ವಲಯದಲ್ಲಿ ಸಂಚರಿಸುತ್ತ ಭೇಟೆಯಾಡುತ್ತ ಸಂತಾನೋತ್ಪತ್ತಿ ನಡೆಸುತ್ತವೆ. ಮೀನು, ಸ್ಕ್ವೀಡ್, ಸೀಗಡಿಗಳು ಇವುಗಳ ಪ್ರಮುಖ ಆಹಾರ.
ಇವುಗಳ ಉದ್ದನೆಯ ಆಕರ್ಷಕ ದಂತ, ಮಾಂಸ ಮತ್ತು ಚರ್ಮಕ್ಕೋಸ್ಕರ ಇವುಗಳನ್ನ ಅವ್ಯಾಹತವಾಗಿ ಭೇಟೆಯಾಡಲಾಗುತ್ತಿತ್ತು. ಹೀಗಾಗಿ ಇವುಗಳ ಸಂಖ್ಯೆ ತೀರಾ ಕ್ಷೀಣಿಸಿತ್ತು.1986 ರಲ್ಲಿ ತಿಮಿಂಗಿಲಗಳ ಭೇಟೆಯನ್ನ ನಿಷೇಧಿಸಿದ ನಂತರ ಇವು ಇಂದು ಸಮಾಧಾನಕರವಾಗಿ ಪುನಃಶ್ಚೇತನಗೊಂಡಿವೆ.
ಮೃತ್ಯುಂಜಯ ನ. ರಾ